ನವದೆಹಲಿ: ಐಸಿಸ್ ಉಗ್ರ ಸಂಘಟನೆಯ ಮುಖಂಡ ಅಬು ಹಸನ್ ಅಲ್-ಹಶಿಮಿ ಅಲ್-ಖುರೇಷಿಯು ಯುದ್ಧವೊಂದರಲ್ಲಿ ಹತ್ಯೆಗೀಡಾಗಿದ್ದಾನೆ (ISIS Leader Killed) ಎಂದು ಸಂಘಟನೆ ತಿಳಿಸಿದೆ. ಹಾಗೆಯೇ, ಅಬು ಅಲ್-ಹುಸೇನ್ ಅಲ್-ಹುಸೇನಿ ಅಲ್ ಖುರೇಷಿಯನ್ನು ನೂತನ ಮುಖಂಡನನ್ನಾಗಿ ಘೋಷಿಸಲಾಗಿದೆ.
ಐಸಿಸ್ ಜಿಹಾದಿ ಸಂಘಟನೆ ವಕ್ತಾರ ಅಬು ಅಲ್-ಮುಜಾಹಿರ್‌ನು, “ಅಲ್ಲಾನ ಶತ್ರುಗಳ ವಿರುದ್ಧ ಹೋರಾಡುವಾಗ ಅಬು ಹಸನ್ ಅಲ್-ಹಶಿಮಿ ಅಲ್-ಖುರೇಷಿಯ ಹತ್ಯೆಯಾಗಿದೆ” ಟೆಲಿಗ್ರಾಂ ಆಡಿಯೊ ಮೂಲಕ ದೃಢಪಡಿಸಿದ್ದಾನೆ. ಯಾರ ಜತೆಗೆ ಕಾಳಗ ನಡೆಯುತ್ತಿತ್ತು? ಯಾವ ದೇಶದಲ್ಲಿ ನಡೆಯುತ್ತಿತ್ತು? ಯಾರ ದಾಳಿಗೆ ಐಸಿಸ್ ಮುಖಂಡ ಬಲಿಯಾದ ಎಂಬ ಕುರಿತು ಮುಜಾಹಿರ್ ಮಾಹಿತಿ ನೀಡಿಲ್ಲ.
ಅಬು ಹಸನ್ ಅಲ್-ಹಶಿಮಿ ಅಲ್-ಖುರೇಷಿಗೂ ಮೊದಲು ಅಬು ಇಬ್ರಾಹಿಮ್ ಅಲ್-ಖುರೇಷಿಯು ಐಸಿಸ್ ಮುಖಂಡನಾಗಿದ್ದ. ಈತನನ್ನು ಕಳೆದ ಫೆಬ್ರವರಿಯಲ್ಲಿ ಸಿರಿಯಾದಲ್ಲಿ ಅಮೆರಿಕವು ಹತ್ಯೆಗೈದಿತ್ತು. ಇದಾದ ಬಳಿಕ ಅಬು ಹಸನ್ ಅಲ್-ಹಶಿಮಿ ಅಲ್-ಖುರೇಷಿಯನ್ನು ಮುಖಂಡನನ್ನಾಗಿ ನೇಮಿಸಲಾಗಿತ್ತು. ಅಬು ಇಬ್ರಾಹಿಮ್ ಅಲ್-ಖುರೇಷಿಗೂ ಮೊದಲು ಅಬು ಬಕ್ರ್ ಅಲ್-ಬಗ್ದಾದಿಯು ಮುಖಂಡನಾಗಿದ್ದ. ಈತನನ್ನು 2019ರಲ್ಲಿ ಹತ್ಯೆಗೈಯಲಾಗಿತ್ತು.
ಇದನ್ನೂ ಓದಿ | ಮಂಗಳೂರು ಸ್ಫೋಟ | ಶಾರಿಕ್ ಕುಕ್ಕರ್ ಬಾಂಬ್ ಹಿಡಿದು ಫೋಟೊ ತೆಗೆಸಿಕೊಂಡಿದ್ದೇಕೆ? ಅವನ ಟಾರ್ಗೆಟ್ ಐಸಿಸ್!