ಟೆಹ್ರಾನ್: ಇರಾನ್ ರಾಜಧಾನಿ ಟೆಹ್ರಾನ್‌ನಲ್ಲಿ ಹಮಾಸ್ ರಾಜಕೀಯ ವಿಭಾಗದ ಮುಖ್ಯಸ್ಥ ಇಸ್ಮಾಯಿಲ್ ಹನಿಯೆಹ್‌ನನ್ನು (Ismail Haniyeh) ವಾಯುದಾಳಿ ನಡೆಸಿ ಹತ್ಯೆ ನಡೆದಿರುವ ಬೆನ್ನಲ್ಲೇ ಇಸ್ರೇಲ್ ಮೇಲೆ ನೇರ ವೈಮಾನಿಕ ದಾಳಿ ನಡೆಸಿ ಹೊಡೆದುರುಳಿಸುವಂತೆ ಇರಾನ್‌ನ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ(Ayatollah Ali Khamenei) ಆದೇಶ ನೀಡಿದ್ದಾರೆ. ಹನಿಯೆಹ್ ಹತ್ಯೆಗೆ ಪ್ರತೀಕಾರ ತೆಗೆದುಕೊಳ್ಳಲು ನಪಣ ತೊಟ್ಟಿರುವ ಇರಾನ್ ಶೀಘ್ರದಲ್ಲಿ ಇಸ್ರೇಲ್ ಮೇಲೆ ಪ್ರತಿದಾಳಿ ನಡೆಸಲಿದೆ ಎಂಬ ಬಗ್ಗೆ ಅಲ್ಲಿನ ಮಾಧ್ಯಮಗಳು ವರದಿ ಮಾಡಿವೆ.
ಬುಧವಾರ ಬೆಳಗ್ಗೆ ಅಯತೊಲ್ಲಾ ಅಲಿ ಖಮೇನಿ ಇರಾನ್‌ನ ಸುಪ್ರೀಂ ನ್ಯಾಶನಲ್ ಸೆಕ್ಯುರಿಟಿ ಕೌನ್ಸಿಲ್‌ನ ತುರ್ತು ಸಭೆಯಲ್ಲಿ ಖಮೇನಿ ಈ ಆದೇಶವನ್ನು ನೀಡಿದರು. ಇನ್ನು ಹನಿಯೆಹ್ ಹತ್ಯೆಗೆ ಇರಾನ್ ಮತ್ತು ಹಮಾಸ್ ನೇರವಾಗಿ ಇಸ್ರೇಲ್ ಅನ್ನು ಹೊಣೆಯಾಗಿಸಿದೆ. ಆದರೆ ಈ ದಾಳಿಯ ಹೊಣೆಯನ್ನು ಇದುವರೆಗೆ ಇಸ್ರೇಲ್ ಒಪ್ಪಿಕೊಂಡಿಲ್ಲ. ಅಲ್ಲದೇ ನಿರಕಾರಿಸಿಯೂ ಇಲ್ಲ.
ಇರಾನ್ ಅಧ್ಯಕ್ಷರಾಗಿ ಆಯ್ಕೆಯಾದ ಮಸೌದ್ ಪೆಜೆಸ್ಕಿಯಾನ್ ಅವರ ಪದಗ್ರಹಣ ಕಾರ್ಯಕ್ರಮದಲ್ಲಿ ಮಂಗಳವಾರ (ಜುಲೈ 30) ಇಸ್ಮಾಯಿಲ್ ಹನಿಯೆಹ್ ಕೂಡ ಭಾಗವಹಿಸಿದ್ದ. ಹಮಾಸ್ ಉಗ್ರರಿಗೆ ಇರಾನ್‌ನಲ್ಲಿ ತರಬೇತಿ, ಹಣಕಾಸು ನೆರವು ಸೇರಿ ಹಲವು ರೀತಿಯಲ್ಲಿ ಸಹಕಾರ ಸಿಗುತ್ತಿರುವ ಕಾರಣ ಇಸ್ಮಾಯಿಲ್ ಹನಿಯೆಹ್ ಇರಾನ್‌ಗೆ ತೆರಳಿದ್ದ. ಇದರ ಮಧ್ಯೆಯೇ ಆತ ಮಂಗಳವಾರ (ಜುಲೈ 30) ಸುದ್ದಿಗಾರರೊಂದಿಗೆ ಮಾತನಾಡಿದ್ದ. ಇಸ್ರೇಲ್ ದಾಳಿ, ಇರಾನ್ ಜತೆಗಿನ ಒಪ್ಪಂದ ಸೇರಿ ಹಲವು ವಿಷಯಗಳ ಕುರಿತು ಪತ್ರಕರ್ತರೊಂದಿಗೆ ಮಾತನಾಡಿದ್ದ.
2023ರ ಅಕ್ಟೋಬರ್ 7ರಂದು ಇಸ್ರೇಲ್ ಮೇಲೆ ಹಮಾಸ್ ಉಗ್ರರು ನಡೆಸಿದ ದಾಳಿಯಲ್ಲಿ ಒಂದು ಸಾವಿರಕ್ಕೂ ಅಧಿಕ ನಾಗರಿಕರು ಮೃತಪಟ್ಟಿದ್ದಾರೆ. ಹಮಾಸ್ ಉಗ್ರರ ದಾಳಿಗೆ ಇಸ್ರೇಲ್ ಪ್ರತಿದಾಳಿ ಆರಂಭಿಸಿದ್ದು, ಗಾಜಾದಲ್ಲಿ ಇದುವರೆಗೆ ಇಸ್ರೇಲ್ ದಾಳಿಗೆ 39,400 ಮಂದಿ ಮೃತಪಟ್ಟಿದ್ದಾರೆ. ಸುಮಾರು 90 ಸಾವಿರ ಜನ ಗಾಯಗೊಂಡಿದ್ದಾರೆ. ಲಕ್ಷಾಂತರ ಜನ ನಿರಾಶ್ರಿತರಾಗಿದ್ದಾರೆ ಎಂದು ತಿಳಿದುಬಂದಿದೆ. ಹಮಾಸ್ ಉಗ್ರರ ಜತೆಗೆ ಹಮಾಸ್ ಉಗ್ರ ಸಂಘಟನೆಯ ಪ್ರಮುಖ ನಾಯಕರನ್ನು ಇಸ್ರೇಲ್ ಯೋಧರು ಹುಡುಕಿ ಹುಡುಕಿ ಕೊಲ್ಲುತ್ತಿದ್ದಾರೆ.
ಕಾರ್ಯಾಚರಣೆ ನಡೆದಿದ್ದು ಹೇಗೆ?
ಇರಾನ್ ಅಧ್ಯಕ್ಷರಾಗಿ ಆಯ್ಕೆಯಾದ ಮಸೌದ್ ಪೆಜೆಸ್ಕಿಯಾನ್ ಅವರ ಪದಗ್ರಹಣ ಕಾರ್ಯಕ್ರಮದಲ್ಲಿ ಮಂಗಳವಾರ (ಜುಲೈ 30) ಇಸ್ಮಾಯಿಲ್ ಹನಿಯೆಹ್ ಕೂಡ ಭಾಗವಹಿಸಿದ್ದ. ಇದಾದ ನಂತರ ಆತನು ತನ್ನ ನಿವಾಸದತ್ತ ತೆರಳಿದ. ಇಸ್ಮಾಯಿಲ್ ಹನಿಯೆಹ್ ಇರುವ ಕುರಿತು ನಿಖರ ಮಾಹಿತಿ ಪಡೆದ ಇಸ್ರೇಲ್ ವಾಯುಪಡೆಯ ಸಿಬ್ಬಂದಿಯು ವಾಯುದಾಳಿಯ ಮೂಲಕ ಇಸ್ಮಾಯಿಲ್ ಹನಿಯೆಹ್ ಸೇರಿ ಆತನ ಅಂಗರಕ್ಷಕನನ್ನು ಹತ್ಯೆ ಮಾಡಿದ್ದಾರೆ ಎಂದು ತಿಳಿದುಬಂದಿದೆ. ಗುಪ್ತಚರ ಇಲಾಖೆ ನಿಖರ ಮಾಹಿತಿ, ಅತ್ಯಾಧುನಿಕ ಕ್ಷಿಪಣಿ, ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ತಂತ್ರಜ್ಞಾನವನ್ನು ಬಳಸಿ ಹತ್ಯೆಗೈಯಲಾಗಿದೆ ಎಂದು ತಿಳಿದು ಬಂದಿದೆ.
ಇದನ್ನೂ ಓದಿ: Ismail Haniyeh: ಇಸ್ರೇಲ್ ದಾಳಿಗೆ ಹತನಾಗುವ ಮುನ್ನ ಹಮಾಸ್ ಉಗ್ರ ಇಸ್ಮಾಯಿಲ್ ಏನು ಮಾಡುತ್ತಿದ್ದ? ಇಲ್ಲಿದೆ ವರದಿ