ಟೆಹ್ರಾನ್: ಹಮಾಸ್ ನಾಯಕ ಇಸ್ಮಾಯಿಲ್ ಹನಿಯೆಹ್ (Ismail Haniyeh Killing) ಹತ್ಯೆ ಸುದ್ದಿ ಪ್ರಪಂಚದಾದ್ಯಂತ ಸಂಚಲನ ಉಂಟು ಮಾಡಿರುವ ಬೆನ್ನಲ್ಲೇ ಹಮಾಸ್‌ನ ಮುಂದಿನ ನಾಯಕ ಯಾರು ಎಂಬ ಪ್ರಶ್ನೆ ಭುಗಿಲೆದ್ದಿದೆ. ಹನಿಯೆನ್ ಸ್ಥಾನವನ್ನು ಹಮಾಸ್‌ನ ಯಾವ ನಾಯಕ ವಹಿಸಿಕೊಳ್ಳಲಿದ್ದಾನೆ ಎಂಬ ಬಗ್ಗೆ ಇಡೀ ಪ್ರಪಂಚದ ಕಣ್ಣು ನೆಟ್ಟಿದೆ. ಹೀಗಿರುವಾಗ ಹಮಾಸ್‌ನ ಹಿರಿಯ ನಾಯಕ ಖಲೀದ್ ಮೆಶಾಕ್(Khaled Meshaal) ಹಮಾಸ್ ಮುಖ್ಯಸ್ಥನಾಗಿ ಅಧಿಕಾರ ಸ್ವೀಕರಿಸಲಿದ್ದಾನೆ ಎಂಬುದು ಬಹುತೇಕ ಖಚಿತವಾಗಿದೆ.
ಹಮಾಸ್‌ನ ಸಂಸ್ಥಾಪಕರಲ್ಲಿ ಒಬ್ಬನಾಗಿರುವ ಮಶಾಲ್, 1956ರಲ್ಲಿ ವೆಸ್ಟ್ ಬ್ಯಾಂಕ್‌ನ ಸಿಲ್ವಾಡ್‌ನಲ್ಲಿ ಜನಿಸಿದ. ಬಳಿಕ ಆತನ ಕುಟುಂಬ ಕುವೈತ್‌ಗೆ ಸ್ಥಳಾಂತರಗೊಂಡಿತು. ಮಶಾಲ್ ಪದವಿ ಪಡೆದ ಬಳಿಕ ಕುವೈತ್‌ನಲ್ಲಿಯೇ ಇದ್ದ. ಅಲ್ಲಿ ಆತ ಗಾಜಾ ಮತ್ತು ವೆಸ್ಟ್ ಬ್ಯಾಂಕ್‌ನಲ್ಲಿ ಸಾಮಾಜಿಕ ಸೇವೆಗಳನ್ನು ಆಯೋಜಿಸಲು ಹಣವನ್ನು ಸಂಗ್ರಹಿಸಿದ.
1996ರಲ್ಲಿ ಹಮಾಸ್ ರಾಜಕೀಯ ಬ್ಯೂರೋ ಮುಖ್ಯಸ್ಥನಾಗಿ ಆಯ್ಕೆಯಾದ ಮಶಾಲ್, ಹಮಾಸ್‌ನ ಆತ್ಮಹತ್ಯಾ ಬಾಂಬ್ ದಾಳಿಗೆ ಪ್ರತೀಕಾರವಾಗಿ ಪ್ರಧಾನಿ ಬೆಂಜಮಿನ್ ನೆತನ್ಯಾಹು 1997ರಲ್ಲಿ ಮಶಾಲ್‌ನ ಹತ್ಯೆ ಮಾಡಲು ಅನುಮೋದನೆ ನೀಡಿದರು. ಮಶಾಲ್ 2017ರವರೆಗೂ ಹಮಾಸ್‌ನ ಮುಖ್ಯಸ್ಥನಾಗಿದ್ದ. ಹಮಾಸ್‌ನ ಪ್ರಮುಖ ಒತ್ತೆಯಾಳು ಸಂಧಾನಕಾರರಲ್ಲಿ ಒಬ್ಬನಾಗಿರುವ ಮಶಾಲ್ ಪ್ರಸ್ತುತ ಕತಾರ್‌ನಲ್ಲಿ ವಾಸಿಸುತ್ತಿದ್ದಾನೆ.
15 ನೇ ವಯಸ್ಸಿನಲ್ಲಿ, ಅವರು ಈಜಿಪ್ಟ್ ಮೂಲದ ಸುನ್ನಿ ಇಸ್ಲಾಮಿಸ್ಟ್ ಸಂಘಟನೆಯಾದ ಮುಸ್ಲಿಂ ಬ್ರದರ್‌ಹುಡ್‌ಗೆ ಸೇರಿದ್ದ. ಈ ಸಂಘಟನರ 1987 ರ ಹಮಾಸ್ ಸ್ಥಾಪನೆಯಲ್ಲಿ ಪ್ರಮುಖ ಪಾತ್ರ ವಹಿಸಿತು. 1992 ರಲ್ಲಿ ಉಗ್ರಗಾಮಿ ಗುಂಪಿನ ಪಾಲಿಟ್‌ಬ್ಯೂರೋದ ಸ್ಥಾಪಕ ಸದಸ್ಯರನಾಗಿದ್ದ. 2017ರಲ್ಲಿ ಅಧಿಕಾರದಿಂದ ಕೆಳಗಿಳಿದರು ಮತ್ತು ಹನಿಯೆಹ್ ಅವರು ಉತ್ತರಾಧಿಕಾರಿಯಾದ.
ಇರಾನ್ ಅಧ್ಯಕ್ಷರಾಗಿ ಆಯ್ಕೆಯಾದ ಮಸೌದ್ ಪೆಜೆಸ್ಕಿಯಾನ್ ಅವರ ಪದಗ್ರಹಣ ಕಾರ್ಯಕ್ರಮದಲ್ಲಿ ಮಂಗಳವಾರ (ಜುಲೈ 30) ಇಸ್ಮಾಯಿಲ್ ಹನಿಯೆಹ್ ಕೂಡ ಭಾಗವಹಿಸಿದ್ದ. ಹಮಾಸ್ ಉಗ್ರರಿಗೆ ಇರಾನ್‌ನಲ್ಲಿ ತರಬೇತಿ, ಹಣಕಾಸು ನೆರವು ಸೇರಿ ಹಲವು ರೀತಿಯಲ್ಲಿ ಸಹಕಾರ ಸಿಗುತ್ತಿರುವ ಕಾರಣ ಇಸ್ಮಾಯಿಲ್ ಹನಿಯೆಹ್ ಇರಾನ್‌ಗೆ ತೆರಳಿದ್ದ. ಇದರ ಮಧ್ಯೆಯೇ ಆತ ಮಂಗಳವಾರ (ಜುಲೈ 30) ಸುದ್ದಿಗಾರರೊಂದಿಗೆ ಮಾತನಾಡಿದ್ದ. ಇಸ್ರೇಲ್ ದಾಳಿ, ಇರಾನ್ ಜತೆಗಿನ ಒಪ್ಪಂದ ಸೇರಿ ಹಲವು ವಿಷಯಗಳ ಕುರಿತು ಪತ್ರಕರ್ತರೊಂದಿಗೆ ಮಾತನಾಡಿದ್ದ.
2023ರ ಅಕ್ಟೋಬರ್ 7ರಂದು ಇಸ್ರೇಲ್ ಮೇಲೆ ಹಮಾಸ್ ಉಗ್ರರು ನಡೆಸಿದ ದಾಳಿಯಲ್ಲಿ ಒಂದು ಸಾವಿರಕ್ಕೂ ಅಧಿಕ ನಾಗರಿಕರು ಮೃತಪಟ್ಟಿದ್ದಾರೆ. ಹಮಾಸ್ ಉಗ್ರರ ದಾಳಿಗೆ ಇಸ್ರೇಲ್ ಪ್ರತಿದಾಳಿ ಆರಂಭಿಸಿದ್ದು, ಗಾಜಾದಲ್ಲಿ ಇದುವರೆಗೆ ಇಸ್ರೇಲ್ ದಾಳಿಗೆ 39,400 ಮಂದಿ ಮೃತಪಟ್ಟಿದ್ದಾರೆ. ಸುಮಾರು 90 ಸಾವಿರ ಜನ ಗಾಯಗೊಂಡಿದ್ದಾರೆ. ಲಕ್ಷಾಂತರ ಜನ ನಿರಾಶ್ರಿತರಾಗಿದ್ದಾರೆ ಎಂದು ತಿಳಿದುಬಂದಿದೆ. ಹಮಾಸ್ ಉಗ್ರರ ಜತೆಗೆ ಹಮಾಸ್ ಉಗ್ರ ಸಂಘಟನೆಯ ಪ್ರಮುಖ ನಾಯಕರನ್ನು ಇಸ್ರೇಲ್ ಯೋಧರು ಹುಡುಕಿ ಹುಡುಕಿ ಕೊಲ್ಲುತ್ತಿದ್ದಾರೆ.
ಕಾರ್ಯಾಚರಣೆ ನಡೆದಿದ್ದು ಹೇಗೆ?
ಇರಾನ್ ಅಧ್ಯಕ್ಷರಾಗಿ ಆಯ್ಕೆಯಾದ ಮಸೌದ್ ಪೆಜೆಸ್ಕಿಯಾನ್ ಅವರ ಪದಗ್ರಹಣ ಕಾರ್ಯಕ್ರಮದಲ್ಲಿ ಮಂಗಳವಾರ (ಜುಲೈ 30) ಇಸ್ಮಾಯಿಲ್ ಹನಿಯೆಹ್ ಕೂಡ ಭಾಗವಹಿಸಿದ್ದ. ಇದಾದ ನಂತರ ಆತನು ತನ್ನ ನಿವಾಸದತ್ತ ತೆರಳಿದ. ಇಸ್ಮಾಯಿಲ್ ಹನಿಯೆಹ್ ಇರುವ ಕುರಿತು ನಿಖರ ಮಾಹಿತಿ ಪಡೆದ ಇಸ್ರೇಲ್ ವಾಯುಪಡೆಯ ಸಿಬ್ಬಂದಿಯು ವಾಯುದಾಳಿಯ ಮೂಲಕ ಇಸ್ಮಾಯಿಲ್ ಹನಿಯೆಹ್ ಸೇರಿ ಆತನ ಅಂಗರಕ್ಷಕನನ್ನು ಹತ್ಯೆ ಮಾಡಿದ್ದಾರೆ ಎಂದು ತಿಳಿದುಬಂದಿದೆ. ಗುಪ್ತಚರ ಇಲಾಖೆ ನಿಖರ ಮಾಹಿತಿ, ಅತ್ಯಾಧುನಿಕ ಕ್ಷಿಪಣಿ, ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ತಂತ್ರಜ್ಞಾನವನ್ನು ಬಳಸಿ ಹತ್ಯೆಗೈಯಲಾಗಿದೆ ಎಂದು ತಿಳಿದು ಬಂದಿದೆ.