ಜೆರುಸಲೇಂ: ಗಾಜಾಪಟ್ಟಿಯಲ್ಲಿ ಬೀಡು ಬಿಟ್ಟಿರುವ ಹಮಾಸ್ ಉಗ್ರರನ್ನು ನಿರ್ನಾಮ ಮಾಡದೆ ಬಿಡುವುದಿಲ್ಲ ಎಂದು ಎಚ್ಚರಿಕೆ ನೀಡಿದ ಬೆನ್ನಲ್ಲೇ ಇಸ್ರೇಲ್ ಆಕ್ರಮಣಕಾರಿ (Israel Palestine War) ನೀತಿ ಅನುರಿಸಿದೆ. ಗಾಜಾಪಟ್ಟಿಯಲ್ಲಿರುವ ನಾಗರಿಕರು ಬೇರೆಡೆ ಸ್ಥಳಾಂತರಗೊಳ್ಳಬೇಕು ಎಂಬುದಾಗಿ ಡೆಡ್‌ಲೈನ್ ನೀಡಿದ ಕೆಲವೇ ಗಂಟೆಯಲ್ಲಿ ಇಸ್ರೇಲ್‌ನ ಶಸ್ತ್ರಸಜ್ಜಿತ ವಾಹನಗಳು (Armoured Vehicles ), ಬಂಕರ್‌ಗಳು ಗಾಜಾ ಗಡಿಯತ್ತ ಮುನ್ನುಗ್ಗುತ್ತಿದ್ದು, ಕೆಲವೇ ಗಂಟೆಯಲ್ಲಿ ಗಾಜಾಪಟ್ಟಿ ಮೇಲೆ ಪೂರ್ಣ ಪ್ರಮಾಣದ ದಾಳಿ ಆರಂಭಿಸಲಿದೆ ಎಂದು ತಿಳಿದುಬಂದಿದೆ.
ಗಾಜಾ ನಗರದಲ್ಲಿ ಹಮಾಸ್ ಉಗ್ರರು ಜನರ ಮನೆಗಳಲ್ಲಿ, ಗುಹೆಗಳಲ್ಲಿ, ದೊಡ್ಡ ದೊಡ್ಡ ಕಟ್ಟಡಗಳಲ್ಲಿ ಅಡಗಿ ಕುಳಿತಿದ್ದಾರೆ ಎಂಬ ಮಾಹಿತಿ ಇಸ್ರೇಲ್‌ಗೆ ಲಭ್ಯವಾಗಿದೆ. ಅಪಾರ ಪ್ರಮಾಣದ ಶಸ್ತ್ರಾಸ್ತ್ರಗಳು, ರಾಕೆಟ್‌ಗಳನ್ನು ಇಟ್ಟುಕೊಂಡಿರುವ ಹಮಾಸ್ ಉಗ್ರರು ಎಂದಿಗೂ ತಲೆನೋವು ಎಂಬುದು ಇಸ್ರೇಲ್‌ಗೆ ಗೊತ್ತಿದೆ. ಅದರಲ್ಲೂ, ಇಸ್ರೇಲ್ ಮೇಲೆ ದಾಳಿ ಮಾಡುವ ಮೂಲಕ ಹಮಾಸ್ ಉಗ್ರರು ಸಾವಿರಾರು ಜನರನ್ನು ಕೊಂದಿದ್ದಾರೆ. ಹಾಗಾಗಿ, ಗಾಜಾ ನಗರದ ಮೇಲೆ ಪೂರ್ಣಪ್ರಮಾಣದ ದಾಳಿ ಮಾಡುವ ಮೂಲಕ ಇಡೀ ನಗರವನ್ನು, ಹಮಾಸ್ ಉಗ್ರರನ್ನು ನಾಶಗೊಳಿಸಬೇಕು ಎಂಬುದು ಇಸ್ರೇಲ್ ಉದ್ದೇಶವಾಗಿದೆ. ಹಾಗಾಗಿಯೇ, ನೂರಾರು ಬಂಕರ್‌ಗಳನ್ನು, ವಾಹನಗಳನ್ನು ಗಾಜಾ ನಗರದತ್ತ ಸಾಗಿಸುತ್ತಿದೆ ಎಂದು ತಿಳಿದುಬಂದಿದೆ.
Gaza is about to be overrun by 150k IDF, hundreds of tanks and armored vehicles, and continued parking lotting air strikes….
— Chili Dog (@RobertJMolnar) October 13, 2023
Clearly Israel is going to go totally gloves off, daring anybody to stop them…much like the US after 911
ಜನರ ಸ್ಥಳಾಂತರಕ್ಕೆ ಆದೇಶಿಸಿದ್ದ ಇಸ್ರೇಲ್
ಗಾಜಾದಲ್ಲಿರುವ ಸುಮಾರು 10 ಲಕ್ಷ ಜನ ಸ್ಥಳಾಂತರಗೊಳ್ಳಬೇಕು ಎಂದು ಇಸ್ರೇಲ್ ಇದಕ್ಕೂ ಮೊದಲು ಆದೇಶಿಸಿತ್ತು. ಅಲ್ಲದೆ, 24 ಗಂಟೆಗಳ ಗಡುವು ನೀಡಿತ್ತು. “ಗಾಜಾದಲ್ಲಿರುವ ಸುಮಾರು 10.1 ಲಕ್ಷ ಜನರನ್ನು 24 ಗಂಟೆಯಲ್ಲಿ ಸ್ಥಳಾಂತರಗೊಳಿಸಬೇಕು ಎಂಬುದಾಗಿ ಇಸ್ರೇಲ್ ಸೇನೆಯು ಸೂಚಿಸಿದೆ. ಆದರೆ, ಇಷ್ಟು ಸಣ್ಣ ಅವಧಿಯಲ್ಲಿ 10 ಲಕ್ಷ ಜನರನ್ನು ಬೇರೆಡೆ ಸ್ಥಳಾಂತರಗೊಳಿಸುವುದು ಎಂದರೆ ಜನರಿಗೆ ಭಾರಿ ಪ್ರಮಾಣದಲ್ಲಿ ತೊಂದರೆಯಾಗುತ್ತದೆ. ಈಗಾಗಲೇ ಗಾಜಾದಲ್ಲಿ ಜನ ಸಂಕಷ್ಟಕ್ಕೆ ಸಿಲುಕಿದ್ದಾರೆ. ಇದರ ಮಧ್ಯೆಯೇ ಇಂತಹದ್ದೊಂದು ಸ್ಥಳಾಂತರ ಕಷ್ಟಸಾಧ್ಯವಾಗುತ್ತದೆ. ಈ ಕುರಿತು ಇಸ್ರೇಲ್ ಸೇನೆಯು ಮತ್ತೊಮ್ಮೆ ಯೋಚಿಸುವುದು ಒಳಿತು” ಎಂದು ವಿಶ್ವಸಂಸ್ಥೆ ವಕ್ತಾರ ಸ್ಫೀಫೇನ್ ಡುಜಾರಿಕ್ (Stephane Dujarric) ಹೇಳಿದ್ದರು.
ಹಮಾಸ್ ಉಗ್ರರನ್ನು ನಾವು ಸರ್ವನಾಶ ಮಾಡುವುದು ನಿಶ್ಚಿತ ಎಂದು ಈಗಾಗಲೇ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಹೇಳಿರುವುದು ಕೂಡ ಇಸ್ರೇಲ್ ದಾಳಿಯ ಸಾಧ್ಯತೆಯನ್ನು ತೆರೆದಿಟ್ಟಿದೆ. “ಹಮಾಸ್ ಉಗ್ರರನ್ನು ನಾವು ನಿರ್ನಾಮ ಮಾಡುತ್ತೇವೆ. ಹಮಾಸ್‌ನ ಒಬ್ಬ ಉಗ್ರನೂ ಬದುಕುಳಿಯುವುದಿಲ್ಲ. ಎಲ್ಲರನ್ನೂ ಹತ್ಯೆಗೈಯುತ್ತೇವೆ” ಎಂದು ಬೆಂಜಮಿನ್ ನೆತನ್ಯಾಹು ಶಪಥ ಮಾಡಿದ್ದಾರೆ. ಹಾಗಾಗಿ, ಯಾವ ಕ್ಷಣದಲ್ಲಿ ಬೇಕಾದರೂ ಇಸ್ರೇಲ್ ವಾಯುಪಡೆಯು ಗಾಜಾ ಮೇಲೆ ದಾಳಿ ನಡೆಸಬಹುದು ಎನ್ನಲಾಗಿದೆ.
ಇದನ್ನೂ ಓದಿ: Israel Palestine War: ಅಮೆರಿಕ ಬೆನ್ನಲ್ಲೇ ಬ್ರಿಟನ್ ಯುದ್ಧವಿಮಾನ ನೆರವು; ಇಸ್ರೇಲ್‌ಗೆ ಭೀಮಬಲ!
ವಾರ್ ರೂಮ್‌ಗಳು, ಮಿಲಿಟರಿ ನೆಲೆಗಳು, ಶಸ್ತ್ರಾಸ್ತ್ರಗಳನ್ನು ತಯಾರಿಸುವ ಕಟ್ಟಡಗಳು ಮತ್ತು ಭಯೋತ್ಪಾದಕ ಗುಂಪಿನೊಂದಿಗೆ ಸಂಪರ್ಕ ಹೊಂದಿದ ಸ್ಥಳಗಳು ಸೇರಿದಂತೆ ಗಾಜಾ ಪಟ್ಟಿಯಾದ್ಯಂತ ಹಮಾಸ್‌ನ ಎಲ್ಲ ಸಂಪನ್ಮೂಲಗಳ ಮೇಲೆ ದಾಳಿ ನಡೆಸುತ್ತಿದೆ ಎಂದು ಮಿಲಿಟರಿ ಹೇಳಿಕೊಂಡಿದೆ. ಹಮಾಸ್ ದಾಳಿಯ ನಂತರ ಇಸ್ರೇಲ್‌ನಲ್ಲಿ ಸಾವಿನ ಸಂಖ್ಯೆ 1,200 ಕ್ಕೆ ಏರಿದೆ ಮತ್ತು ಸುಮಾರು 3,300 ಮಂದಿ ಗಾಯಗೊಂಡಿದ್ದಾರೆ. ಏತನ್ಮಧ್ಯೆ, ಇಸ್ರೇಲ್ ದಾಳಿಗೆ ಗಾಜಾ ಪಟ್ಟಿಯಲ್ಲಿ 1,350 ಕ್ಕೂ ಹೆಚ್ಚು ಪ್ಯಾಲೆಸ್ತೀನಿಯರು ಮೃತಪಟ್ಟಿದ್ದಾರೆ.