ಇಬ್ಬರು ದೊಡ್ಡ ಶತ್ರುಗಳನ್ನು ಇಸ್ರೇಲ್ (Israel Attack) ಕೇವಲ ಹನ್ನೆರಡು ಗಂಟೆಗಳ ಅವಧಿಯಲ್ಲಿ ಕೊಂದು ಹಾಕಿದೆ. ಇರಾನ್‌ನ ರಾಜಧಾನಿ ಟೆಹ್ರಾನ್‌ನಲ್ಲಿ ಹಮಾಸ್‌ನ ಉನ್ನತ ನಾಯಕ ಇಸ್ಮಾಯಿಲ್ ಹನಿಯೆಹ್ (Ismail Haniyeh) ಮತ್ತು ಲೆಬನಾನ್ ರಾಜಧಾನಿ ಬೈರುತ್‌ನಲ್ಲಿ ಹಿಜ್ಬುಲ್ಲಾ ಕಮಾಂಡರ್ ಫುವಾಡ್ ಶುಕರ್ (Fuad Shukar) ಮೇಲೆ ವೈಮಾನಿಕ ದಾಳಿ ನಡೆಸಿ ಕೊಂದು ಹಾಕಲಾಗಿದೆ. ಈ ಎರಡೂ ಘಟನೆಗಳ ಹಿಂದೆ ಇಸ್ರೇಲ್‌ನ ಗುಪ್ತಚರ ಸಂಸ್ಥೆ ಮೊಸಾದ್ (Israel’s intelligence agency Mossad) ಕೈವಾಡ ಇರುವುದು ಅತ್ಯಂತ ಸ್ಪಷ್ಟವಾಗಿದೆ.
ಇಸ್ರೇಲ್ ತನ್ನ ಶತ್ರುವನ್ನು ಎಲ್ಲಿ ಬೇಕಾದರೂ ಕೊಲ್ಲಬಹುದು ಎಂಬುದನ್ನು ಮತ್ತೊಮ್ಮೆ ತೋರಿಸಿಕೊಟ್ಟಿದೆ. 1978ರಲ್ಲೂ ಇಂಥದ್ದೇ ಒಂದು ಘಟನೆ ನಡೆದಿತ್ತು. ಸಣ್ಣ ಸುಳಿವನ್ನೂ ಬಿಟ್ಟು ಕೊಡದ ಹಾಗೆ ʼಮೊಸಾದ್ʼ ಪ್ಯಾಲೇಸ್ಟಿನಿಯನ್ ಕಮಾಂಡರ್ ವಾಡಿ ಹಡ್ಡಾಡ್‌ನನ್ನು (Wadie Haddad) ಟೂತ್‌ಪೇಸ್ಟ್‌ನಲ್ಲಿ ವಿಷ ಬೆರೆಸಿ ಕೊಂದು ಹಾಕಿತ್ತು!
ಪ್ಯಾಲೆಸ್ತೀನ್ ವಿಮೋಚನೆಗಾಗಿ ಪಾಪ್ಯುಲರ್ ಫ್ರಂಟ್ ಎಂಬ ಪ್ಯಾಲೆಸ್ತೀನ್ ಸಂಘಟನೆಯ ಮುಖ್ಯಸ್ಥನಾಗಿದ್ದ ವಾಡಿ ಹಡ್ಡಾಡ್‌ನನ್ನು 1978ರಲ್ಲಿ ಕೊಲ್ಲಲಾಯಿತು. ಬಾಗ್ದಾದ್‌ನಲ್ಲಿ ಊಟ ಸೇವಿಸಿದ ಬಳಿಕ ಆತ ತೀವ್ರವಾದ ಹೊಟ್ಟೆ ನೋವನ್ನು ಅನುಭವಿಸಿದ್ದ. ಅನಂತರ ಅವನಿಗೆ ಹಸಿವು ಕಡಿಮೆಯಾಗಿತ್ತು. ಸುಮಾರು 25 ಪೌಂಡ್‌ಗಳಿಗಿಂತ ಹೆಚ್ಚು ತೂಕವನ್ನು ಕಳೆದುಕೊಂಡ. ಆತನ ಸ್ಥಿತಿ ಗಂಭೀರವಾದಾಗ ಇರಾನಿನ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ಯಲಾಯಿತು.
ವೈದ್ಯರು ಹೆಪಟೈಟಿಸ್ ಅನ್ನು ಶಂಕಿಸಿದರು. ಶಕ್ತಿಯುತವಾದ ಪ್ರತಿಜೀವಕಗಳನ್ನು ನೀಡಲಾಯಿತು. ಅತ್ಯುತ್ತಮ ವೈದ್ಯರು ಆತನಿಗೆ ಚಿಕಿತ್ಸೆ ನೀಡಿದರು. ಆದರೆ ಹಡ್ದಾಡ್‌ನ ಸ್ಥಿತಿ ಸುಧಾರಿಸಲಿಲ್ಲ. ಕೂದಲು ಉದುರಲಾರಂಭಿಸಿತು. ಜ್ವರ ಕಡಿಮೆಯಾಗಲೇ ಇಲ್ಲ. ವಿಷ ಉಣಿಸಿರುವ ಶಂಕೆ ವ್ಯಕ್ತವಾದರೂ ಅದು ಯಾವುದು, ಹೇಗೆ ಅದನ್ನು ನೀಡಲಾಯಿತು ಎಂಬುದನ್ನು ವೈದ್ಯರಿಗೆ ಪತ್ತೆ ಹಚ್ಚಲು ಸಾಧ್ಯವಾಗಲೇ ಇಲ್ಲ.
ಪ್ಯಾಲೆಸ್ತೀನ್ ಲಿಬರೇಶನ್ ಆರ್ಗನೈಸೇಶನ್‌ನ ನಾಯಕ ಯಾಸರ್ ಅರಾಫತ್, ಪೂರ್ವ ಜರ್ಮನಿಯ ರಹಸ್ಯ ದಳವಾದ ʼಸ್ಟಾಸಿʼಯಿಂದ ಸಹಾಯ ಪಡೆಯಲು ಸಹಾಯಕರನ್ನು ಕೇಳಿದರು. ಇದು ಸೋವಿಯತ್ ರಷ್ಯಾ ಪ್ಯಾಲೆಸ್ತೀನ್ ಹೋರಾಟಗಾರರಿಗೆ ಸಹಾಯ ಮಾಡಿದ ಸಮಯವಾಗಿತ್ತು. ಅವರಿಗೆ ಪಾಸ್‌ಪೋರ್ಟ್, ಆಶ್ರಯ, ಶಸ್ತ್ರಾಸ್ತ್ರಗಳು ಮತ್ತು ಗುಪ್ತಚರವನ್ನು ಒದಗಿಸಿತು.
ಅರಾಫತ್‌ನ ಸಹಾಯಕನು ಪೂರ್ವ ಜರ್ಮನ್ ರಹಸ್ಯ ಸೇವೆ ಅಥವಾ ಸ್ಟಾಸಿಯನ್ನು ತಲುಪಿದಾಗ ಹಡ್ಡಾಡ್‌ನನ್ನು 1978ರ ಮಾರ್ಚ್ 19ರಂದು ಇರಾಕ್ ರಾಜಧಾನಿ ಬಾಗ್ದಾದ್‌ನಿಂದ ಪೂರ್ವ ಬರ್ಲಿನ್‌ಗೆ ಸ್ಥಳಾಂತರಿಸಲಾಯಿತು. ಅಲ್ಲಿ ಅವರು ಗುಪ್ತಚರ ಮತ್ತು ರಹಸ್ಯ ಸೇವೆಯ ಸಮುದಾಯದ ಸದಸ್ಯರು ಚಿಕಿತ್ಸೆ ನೀಡಿದರು. ಅದಾಗಲೇ ಎರಡು ತಿಂಗಳ ನೋವಿನಿಂದ ಒದ್ದಾಡಿದ್ದ ಹಡ್ಡಾಡ್‌ಗೆ ಏನಾಗಿದೆ ಎಂಬುದನ್ನು ಪತ್ತೆ ಹಚ್ಚಲು ಅಲ್ಲೂ ಸಾಧ್ಯವಾಗಲಿಲ್ಲ.
ಆದರೆ ಬಾಗ್ದಾದ್‌ನಿಂದ ಏರ್‌ಲಿಫ್ಟ್ ಆಗುತ್ತಿರುವಾಗ ಹಡ್ಡಾಡ್‌ನ ಅಗತ್ಯ ವಸ್ತುಗಳನ್ನು ಪ್ಯಾಕ್ ಮಾಡಿದಾಗ ಅದರಲ್ಲಿ ಟೂತ್‌ಪೇಸ್ಟ್‌ನ ಟ್ಯೂಬ್ ಒಂದು ಪತ್ತೆಯಾಯಿತು. ನಲವತ್ತೊಂದು ವರ್ಷದ ಹಡ್ಡಾಡ್‌ನನ್ನು ಪೂರ್ವ ಬರ್ಲಿನ್ ಆಸ್ಪತ್ರೆಯಲ್ಲಿ ದಾಖಲಿಸಲಾಯಿತು. ಅದಾಗಲೇ ಆತನ ದೇಹದ ವಿವಿಧ ಭಾಗಗಳಲ್ಲಿ ರಕ್ತಸ್ರಾವವಾಗುತ್ತಿತ್ತು. ಹೃದಯದ ಸುತ್ತ ಇರುವ ಪೆರಿಕಾರ್ಡಿಯಂ, ನಾಲಿಗೆ, ಪ್ಲೆರಲ್ ಪೊರೆಗಳು, ಟಾನ್ಸಿಲ್, ಮೂತ್ರ, ಮಲದಲ್ಲೂ ರಕ್ತ ಸೋರಿಕೆಯಾಗಿದ್ದು ಮಾತ್ರವಲ್ಲ ಪ್ಲೇಟ್ಲೆಟ್ ಸಂಖ್ಯೆ ಅಪಾಯಕಾರಿಯಾಗಿ ಕುಸಿಯಿತು.
ವೈದ್ಯರು ಆತನಿಗೆ ಸಾಧ್ಯವಿರುವ ಎಲ್ಲಾ ಪರೀಕ್ಷೆಗಳನ್ನು ನಡೆಸಿದರು. ಆದರೆ ಏನೂ ಫಲಿತಾಂಶ ಹೊರಬರಲಿಲ್ಲ. ಆತನಿಗೆ ಇಲಿ ವಿಷ ಅಥವಾ ಥಾಲಿಯಮ್ ನೀಡಲಾಗಿದೆ ಎಂದು ಊಹಿಸಲಾಯಿತು. ಆದರೆ ಇದಕ್ಕೂ ಸ್ಪಷ್ಟತೆ ಸಿಗಲಿಲ್ಲ. ಅಲ್ಲಿ ಆತ ತೀವ್ರವಾಗಿ ನೋವಿನಿಂದ ಒದ್ದಾಡುತ್ತಿದ್ದ. ಆತನ ಕಿರುಚಾಟ, ನರಳಾಟ ಆಸ್ಪತ್ರೆಯ ತುಂಬೆಲ್ಲ ಕೇಳುತ್ತಿತ್ತು. ವೈದ್ಯರು ಹಗಲು ರಾತ್ರಿ ಆತನನ್ನು ಪ್ರಜ್ಞಾಹೀನ ಸ್ಥಿತಿಯಲ್ಲಿ ಇಡಬೇಕಾಯಿತು.
ಅಲ್ಲಿ ಹತ್ತು ದಿನಗಳ ಕಾಲ ತೀವ್ರ ಸಂಕಟ ಅನುಭವಿಸಿ ಮಾರ್ಚ್ 29ರಂದು ಹಡ್ಡಾಡ್ ಸತ್ತೇ ಹೋದ. ಅನಂತರ ಸಂಪೂರ್ಣ ಶವಪರೀಕ್ಷೆ ನಡೆಸಲಾಯಿತು. ಗುಪ್ತಚರ ಸಂಸ್ಥೆ ʼಸ್ಟಾಸಿʼಯ ಫೋರೆನ್ಸಿಕ್ ತಜ್ಞ ಪ್ರೊಫೆಸರ್ ಒಟ್ಟೊ ಪ್ರೊಕೊಪ್ ಅವರು ಈ ಕುರಿತು ಮಾಹಿತಿ ನೀಡಿ, ಹಡ್ಡಾಡ್ ಮೆದುಳಿನ ರಕ್ತಸ್ರಾವ ಮತ್ತು ನ್ಯುಮೋನಿಯಾದಿಂದ ಸಾವನ್ನಪ್ಪಿದ್ದಾನೆ. ಆತನನ್ನು ಹತ್ಯೆ ಮಾಡಿರುವ ಅನುಮಾನವಿದೆ ಎಂದು ಹೇಳಿದರು.
ಇದನ್ನೂ ಓದಿ: Ismail Haniyeh Killing: ಹಮಾಸ್‌ನ ಹೊಸ ಮುಖ್ಯಸ್ಥನಾಗಿ ಖಲೀದ್ ಮೆಶಾಕ್? ಈತನ ಹಿನ್ನೆಲೆ ಏನು?
ಟೂತ್ ಪೇಸ್ಟ್‌ನಲ್ಲಿತ್ತು ವಿಷ!
ಹಡ್ಡಾಡ್‌ನ ಸಾವು ಸಹಜ ಎಂದು ಕಾಣುವಂತೆ ಮಾಡಲು ಆತ ಬಳಸುತ್ತಿದ್ದ ಟೂತ್ ಪೇಸ್ಟ್ ಅನ್ನೇ ಅಸ್ರ್ರವಾಗಿ ಬಳಸಲಾಗಿತ್ತು. ಹಡ್ಡಾಡ್ ನಿತ್ಯ ಬಳಸುವ ಟೂತ್ ಪೇಸ್ಟ್ ಅನ್ನು ವಿಷಕಾರಿ ಟೂತ್ ಪೇಸ್ಟ್ ನೊಂದಿಗೆ ಬದಲಾಯಿಸಲಾಗಿತ್ತು! ಆತನ ಮರಣದ ಬಳಿಕ ಪರೀಕ್ಷೆ ಮಾಡಿದ ಟೂತ್ ಪೇಸ್ಟ್ ಟ್ಯೂಬ್‌ನಲ್ಲಿ ವಿಷ ಕಂಡು ಬಂದಿತ್ತು. ಟೆಲ್ ಅವೀವ್‌ನ ಆಗ್ನೇಯ ಭಾಗದಲ್ಲಿರುವ ನೆಸ್ ಜಿಯೋನಾದಲ್ಲಿರುವ ಇಸ್ರೇಲ್ ಇನ್‌ಸ್ಟಿಟ್ಯೂಟ್ ಫಾರ್ ಬಯೋಲಾಜಿಕಲ್ ರಿಸರ್ಚ್‌ನಲ್ಲಿ ಈ ವಿಷವನ್ನು ಅಭಿವೃದ್ಧಿಪಡಿಸಲಾಗಿತ್ತು. ಹಡ್ಡಾಡ್ ಹಲ್ಲುಜ್ಜುತ್ತಿದ್ದಾಗ ಈ ವಿಷವು ಅವನ ದೇಹವನ್ನು ಪ್ರವೇಶಿಸುತ್ತಿತ್ತು. ಇದು ನಿಧಾನವಾಗಿ ನಿರ್ಣಾಯಕ ಮಟ್ಟ ತಲುಪಿದಾಗ ಆತನ ಜೀವಕ್ಕೆ ಮಾರಕವಾಯಿತು. ಹೀಗೆ ಅತ್ಯಂತ ಚಾಣಾಕ್ಷತನದಿಂದ ಇಸ್ರೇಲ್ ಗುಪ್ತಚರ ದಳವು ತನ್ನ ವೈರಿ ʼಉಗ್ರ ನಾಯಕʼನನ್ನು ಕೊಂದು ಹಾಕಿತ್ತು!