ಜೆರುಸಲೇಂ: ಇಸ್ರೇಲ್ ಹಾಗೂ ಹಮಾಸ್ ಉಗ್ರರ ನಡುವಿನ ಸಮರವು (Israel Palestine War) ದಿನೇದಿನೆ ಕಾವೇರುತ್ತಿದೆ. ಅದರಲ್ಲೂ, ಹಮಾಸ್ ಉಗ್ರರ (Hamas Terrorists) ದಾಳಿಗೆ ಪ್ರತಿಯಾಗಿ ಇಸ್ರೇಲ್ ನಡೆಸುತ್ತಿರುವ ಪ್ರತಿದಾಳಿಯು ತೀವ್ರಗೊಂಡಿದ್ದು, ಇಡೀ ಗಾಜಾ ನಗರದ (Gaza City) ಮೇಲೆ ಇಸ್ರೇಲ್ ಬಿಗಿಹಿಡಿತ ಸಾಧಿಸುತ್ತಿದೆ. ಇದಕ್ಕೆ ನಿದರ್ಶನ ಎಂಬಂತೆ, ಅಕ್ಟೋಬರ್ 7ರಂದು ಹಮಾಸ್ ಉಗ್ರರು ಅಪಹರಿಸಿದ್ದ ಮಹಿಳಾ ಯೋಧರೊಬ್ಬರನ್ನು ಇಸ್ರೇಲ್ ಸೇನೆಯು ಉಗ್ರರಿಂದ ರಕ್ಷಣೆ ಮಾಡಿದೆ.
“ಇಸ್ರೇಲ್ ರಕ್ಷಣಾ ಪಡೆಯು ಗಾಜಾ ನಗರದಲ್ಲಿ ರಾತ್ರೋರಾತ್ರಿ ನಡೆಸಿದ ಕಾರ್ಯಾಚರಣೆಯಲ್ಲಿ ಪಿವಿಟಿ ಒರಿ ಮೆಗಿದಿಶ್ ಎಂಬ ಮಹಿಳಾ ಯೋಧರನ್ನು ರಕ್ಷಿಸಿದೆ. ಹಮಾಸ್ ಉಗ್ರರು ಪಿವಿಟಿ ಒರಿ ಮೆಗಿದಿಶ್ ಅವರನ್ನು ಹಮಾಸ್ ಉಗ್ರರು ಅಕ್ಟೋಬರ್ 7ರಂದು ನಡೆಸಿದ ದಾಳಿಯ ವೇಳೆ ಅಪಹರಣ ಮಾಡಿದ್ದರು. ಆದರೆ, ಇಸ್ರೇಲ್ ಸೇನೆಯ ಯೋಧರು ಯೋಧೆಯನ್ನು ರಕ್ಷಿಸಿದ್ದಾರೆ. ಯೋಧೆಯ ಆರೋಗ್ಯ ತಪಾಸಣೆ ಮಾಡಿದ್ದು, ಅವರಿಗೆ ಯಾವುದೇ ತೊಂದರೆಯಾಗಿಲ್ಲ. ಅಲ್ಲದೆ, ಯೋಧೆಯು ಕುಟುಂಬಸ್ಥರನ್ನು ಭೇಟಿಯಾಗಿದ್ದಾರೆ” ಎಂದು ಇಸ್ರೇಲ್ ಫೋಟೊ ಸಮೇತ ಪೋಸ್ಟ್ ಮಾಡಿದೆ.
*Joint IDF and ISA announcement:*
— Israel ישראל 🇮🇱 (@Israel) October 30, 2023
Overnight, the soldier PVT Ori Megidish was released during IDF ground operations. PVT Megidish was kidnapped by the Hamas terrorist organization on October 7th.
The soldier was medically checked, is doing well, and has met with her family.… pic.twitter.com/5owNO4yxjy
ಗಾಜಾ ನಗರದ ಸರ್ವನಾಶ?
ಗಾಜಾ ನಗರದ ಮೇಲೆ ಪೂರ್ಣ ಪ್ರಮಾಣದ ದಾಳಿ ಮಾಡುವ ದಿಸೆಯಲ್ಲಿ ಇಸ್ರೇಲ್ ಯುದ್ಧ ಟ್ಯಾಂಕರ್‌ಗಳನ್ನು ನಿಯೋಜಿಸಿದೆ ಎಂದು ತಿಳಿದುಬಂದಿದೆ. ಯುದ್ಧ ಟ್ಯಾಂಕರ್‌ಗಳು, ಬಂಕರ್‌ಗಳು ಗಾಜಾ ನಗರದ ಗಡಿ ಸಮೀಪಿಸಿದ್ದು, ಶೀಘ್ರವೇ ಇಡೀ ನಗರವನ್ನು, ಹಮಾಸ್ ಉಗ್ರರನ್ನು ಸರ್ವನಾಶ ಮಾಡಲಾಗುತ್ತದೆ ಎಂದು ಹೇಳಲಾಗುತ್ತಿದೆ.
ಇದನ್ನೂ ಓದಿ: Israel Palestine War: ಇಸ್ರೇಲ್-ಪ್ಯಾಲೆಸ್ತೀನ್ ಬಿಕ್ಕಟ್ಟು; ಈಜಿಪ್ಟ್ ಅಧ್ಯಕ್ಷರ ಜತೆ ಮೋದಿ ಚರ್ಚೆ
ಗಾಜಾ ಗಡಿಯ ಬಳಿ ಇಸ್ರೇಲ್ ಟ್ಯಾಂಕರ್‌ಗಳ ನಿಯೋಜನೆಯು ಜನರನ್ನು ಆತಂಕಕ್ಕೀಡು ಮಾಡಿದೆ. ಗಾಜಾದ ಜಾಯ್‌ಟುನ್ ಜಿಲ್ಲೆಯ ಗಡಿ ಬಳಿ ಇಸ್ರೇಲ್ ಟ್ಯಾಂಕರ್ ಇರುವುದು, ಅಲ್ಲಿ ದಾಳಿ ನಡೆಸಿರುವುದರ ಕುರಿತು ಸ್ಥಳೀಯರು ಆತಂಕ ವ್ಯಕ್ತಪಡಿಸಿದ್ದಾರೆ. ಇದರ ಬೆನನ್ಲ್ಲೇ, “ಕಳೆದ 24 ಗಂಟೆಯಲ್ಲಿ ನಾವು 600 ಗುರಿಗಳನ್ನು ಹೊಡೆದುರುಳಿಸಿದ್ದೇವೆ. ದಿನೇದಿನೆ ದಾಳಿ ಜಾಸ್ತಿಯಾಗುತ್ತಿದೆ” ಎಂದು ಇಸ್ರೇಲ್ ಸೇನೆ ತಿಳಿಸಿದ್ದು, ದಾಳಿಯ ತೀವ್ರತೆಯನ್ನು ಅಂದಾಜಿಸಬಹುದಾಗಿದೆ. ಗಡಿಯ ಬಳಿ ಸೋಮವಾರ ಇಸ್ರೇಲ್ ಸೈನಿಕರು ಹಾಗೂ ಉಗ್ರರ ಮಧ್ಯೆ ಸಂಘರ್ಷ ಉಂಟಾಗಿದೆ ಎಂದು ತಿಳಿದುಬಂದಿದೆ.
ಹಮಾಸ್ ಉಗ್ರರು ಮೊದಲು ಇಸ್ರೇಲ್ ಮೇಲೆ ದಾಳಿ ಶುರು ಮಾಡಿದ ಬಳಿಕ ಇಸ್ರೇಲ್ ತಿರುಗೇಟು ನೀಡುತ್ತಿದೆ. ಅದರಲ್ಲೂ, ಹಮಾಸ್ ಉಗ್ರರ ತಾಣವಾದ ಗಾಜಾ ನಗರದ ಮೇಲೆ ಇಸ್ರೇಲ್ ನಿರಂತರವಾಗಿ ದಾಳಿ ನಡೆಸುತ್ತಿದ್ದು, ನಗರದಲ್ಲಿ ಇದುವರೆಗೆ 7,700 ಜನ ಮೃತಪಟ್ಟಿದ್ದಾರೆ ಎಂದು ಗಾಜಾ ಆರೋಗ್ಯ ಸಚಿವಾಲಯವೇ ಮಾಹಿತಿ ನೀಡಿದೆ. ಇನ್ನೂ 1,700 ಜನ ಕಟ್ಟಡದ ಅವಶೇಷಗಳಲ್ಲಿ ಸಿಲುಕಿದ್ದು, ಅವರ ರಕ್ಷಣೆಗೆ ಕಾರ್ಯಾಚರಣೆ ನಡೆಯುತ್ತಿದೆ ಎಂಬುದಾಗಿ ಮಾಹಿತಿ ನೀಡಿದೆ. ಇನ್ನು ಹಮಾಸ್ ಉಗ್ರರ ದಾಳಿಗೆ ಇಸ್ರೇಲ್‌ನಲ್ಲಿ 1,400 ಜನ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.