Site icon Vistara News

Israel Palestine War: ಹಮಾಸ್‌ ಉಗ್ರರನ್ನು ನಿರ್ನಾಮ ಮಾಡದೆ ಬಿಡಲ್ಲ; ಇಸ್ರೇಲ್‌ ಶಪಥ

Israel Palestine War

ಜೆರುಸಲೇಂ: ಇಸ್ರೇಲ್‌ ಹಾಗೂ ಹಮಾಸ್‌ ಉಗ್ರರ ನಡುವಿನ ಸಮರ (Israel Palestine War) ಮುಂದುವರಿದಿದೆ. ಅದರಲ್ಲೂ, ಅಕ್ಟೋಬರ್‌ 7ರಂದು ಹಮಾಸ್‌ ಉಗ್ರರು ಇಸ್ರೇಲ್‌ ಮೇಲೆ ನಡೆಸಿದ ದಾಳಿಗೆ ಪ್ರತಿಯಾಗಿ ಇಸ್ರೇಲ್‌ ಸೇನೆಯು ಗಾಜಾ ನಗರದ (Gaza City) ಮೇಲೆ ನಡೆಸುತ್ತಿರುವ ಪ್ರತಿದಾಳಿಗೆ ಇಡೀ ನಗರವೇ ಮಸಣದಂತಾಗಿದೆ. ಗಾಜಾ ನಗರದಲ್ಲಿ ನಾಗರಿಕರ ಸಾವು, ಗಾಯಾಳುಗಳ ಸಂಖ್ಯೆ ಹೆಚ್ಚಳವಾಗುತ್ತಿರುವುದರಿಂದ ವಿಶ್ವಸಂಸ್ಥೆಯು ಕಳವಳ ವ್ಯಕ್ತಪಡಿಸಿದೆ. ಇದರ ಬೆನ್ನಲ್ಲೇ, “ನಾವು ಹಮಾಸ್‌ ಉಗ್ರರನ್ನು (Hamas Terrorists) ನಿರ್ನಾಮ ಮಾಡದೆ ಬಿಡುವುದಿಲ್ಲ” ಎಂದು ಇಸ್ರೇಲ್‌ ಸೇನೆ ತಿಳಿಸಿದೆ.

ಇಸ್ರೇಲ್‌ ಪ್ರಧಾನಿ ಬೆಂಜಮಿನ್‌ ನೆತನ್ಯಾಹು ಜತೆ ಜಂಟಿಯಾಗಿ ಸುದ್ದಿಗೋಷ್ಠಿ ನಡೆಸುವ ವೇಳೆ ಇಸ್ರೇಲ್‌ ರಕ್ಷಣೆ ಪಡೆಗಳ ಮುಖ್ಯಸ್ಥ ಹೆರ್ಜಿ ಹಲೇವಿ ಈ ಹೇಳಿಕೆ ನೀಡಿದ್ದಾರೆ. “ಹಮಾಸ್‌ ಉಗ್ರರನ್ನು ನಾವು ನಿರ್ನಾಮ ಮಾಡುತ್ತೇವೆ. ಹಮಾಸ್‌ ಮಿಲಿಟರಿ ಪಡೆಯ ಎಲ್ಲ ಮುಖಂಡರನ್ನು ಹತ್ಯೆಗೈಯುತ್ತೇವೆ. ಇದೇ ಕಾರಣಕ್ಕಾಗಿ ಹಿರಿಯ ಉಗ್ರರನ್ನು ಗುರಿಯಾಗಿಸಿ ದಾಳಿ ನಡೆಸುತ್ತಿದ್ದೇವೆ. ಹಮಾಸ್‌ ಹಿರಿಯ ಉಗ್ರರು, ಹಮಾಸ್‌ ಮೂಲಸೌಕರ್ಯ, ನೆಲೆಗಳು ಹಾಗೂ ಕಟ್ಟಡಗಳನ್ನು ಧ್ವಂಸಗೊಳಿಸುವ ಮೂಲಕ ಅವರನ್ನು ಸಂಪೂರ್ಣವಾಗಿ ಸದೆಬಡಿಯುತ್ತೇವೆ” ಎಂದು ಹೇಳಿದ್ದಾರೆ.

6,400 ದಾಟಿದ ಸಾವಿನ ಸಂಖ್ಯೆ

ಇಸ್ರೇಲ್‌ ಮೇಲೆ ಹಮಾಸ್‌ ಉಗ್ರರು ಹಾಗೂ ಗಾಜಾ ನಗರದ ಮೇಲೆ ಇಸ್ರೇಲ್‌ ಸೇನೆ ಮಾಡುತ್ತಿರುವ ಸತತ ದಾಳಿಯಿಂದಾಗಿ ಇದುವರೆಗೆ 6,400 ಜನ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ. ಇಸ್ರೇಲ್‌ ಮೇಲೆ ಹಮಾಸ್‌ ಮಾಡಿದ ದಾಳಿಯಿಂದ ಇದುವರೆಗೆ 1,400 ಮಂದಿ ಮೃತಪಟ್ಟಿದ್ದಾರೆ. ಮತ್ತೊಂದೆಡೆ, ಗಾಜಾ ನಗರದಲ್ಲಿ ಇಸ್ರೇಲ್‌ ಸತತ ದಾಳಿಗೆ 5,000ಕ್ಕೂ ಅಧಿಕ ಮಂದಿ ಬಲಿಯಾಗಿದ್ದಾರೆ ಎಂದು ತಿಳಿದುಬಂದಿದೆ. ಗಾಜಾ ನಗರದಲ್ಲಂತೂ ಸಾವಿರಾರು ಜನ ಗಾಯಗೊಂಡಿದ್ದು, ಲಕ್ಷಾಂತರ ನಾಗರಿಕರು ನಿರಾಶ್ರಿತರಾಗಿದ್ದಾರೆ.

ಇದನ್ನೂ ಓದಿ: Israel Palestine War: ಇಸ್ರೇಲ್‌ಗೆ ಹೆದರಿ ಮತ್ತಿಬ್ಬರು ಒತ್ತೆಯಾಳುಗಳನ್ನು ಬಿಟ್ಟ ಹಮಾಸ್!‌

ಗಾಜಾ ಗಡಿಯಲ್ಲಿ ಸಾವಿರಾರು ಸೈನಿಕರು, ನೂರಾರು ಯುದ್ಧ ಟ್ಯಾಂಕರ್‌ಗಳನ್ನು ನಿಯೋಜಿಸಿ ಪೂರ್ಣ ಪ್ರಮಾಣದ ದಾಳಿ ನಡೆಸಲು ಇಸ್ರೇಲ್‌ ಸಜ್ಜಾಗಿದೆ. ಯಾವುದೇ ಕ್ಷಣದಲ್ಲಿ ಬೇಕಾದರೂ ಇಸ್ರೇಲ್‌ ಸೈನಿಕರು ಗಾಜಾ ನಗರದ ಮೇಲೆ ಪೂರ್ಣ ಪ್ರಮಾಣದ ದಾಳಿ ಮಾಡಬಹುದು. ಇದರ ಭೀತಿಯಿಂದಾಗಿಯೇ ಹಮಾಸ್‌ ಉಗ್ರರು ಇಸ್ರೇಲ್‌ನ ಇಬ್ಬರು ಒತ್ತೆಯಾಳುಗಳನ್ನು ಸೋಮವಾರ ಬಿಡುಗಡೆ ಮಾಡಿದೆ ಎಂದು ತಿಳಿದುಬಂದಿದೆ. ಕೆಲ ದಿನಗಳ ಹಿಂದಷ್ಟೇ, ಅಮೆರಿಕ ಅಧ್ಯಕ್ಷ ಜೋ ಬೈಡೆನ್‌ ಹಾಗೂ ಬ್ರಿಟನ್‌ ಪ್ರಧಾನಿ ರಿಷಿ ಸುನಕ್‌ ಅವರು ಇಸ್ರೇಲ್‌ಗೆ ಭೇಟಿ ನೀಡಿದ್ದರು. ಇದಾದ ಬಳಿಕ ಇಸ್ರೇಲ್‌ ದಾಳಿ ಮತ್ತಷ್ಟು ತೀವ್ರಗೊಂಡಿದೆ.

Exit mobile version