Site icon Vistara News

ಗಾಜಾ ಆಸ್ಪತ್ರೆಯಲ್ಲಿ ಮತ್ತೊಂದು ಸುರಂಗ ಪತ್ತೆ ಹಚ್ಚಿದ ಇಸ್ರೇಲ್;‌ ಹಮಾಸ್‌ ಕರಾಳ ಮುಖ ಬಯಲು

Hamas Tunnel At Al Shifa Hospital

Israel forces find 55-meter-long terrorist tunnel underneath Shifa Hospital

ಗಾಜಾ ನಗರ: ಅಕ್ಟೋಬರ್‌ 7ರಂದು ಇಸ್ರೇಲ್‌ ಮೇಲೆ ಹಮಾಸ್‌ ಉಗ್ರರು ನಡೆಸಿದ ದಾಳಿಗೆ ಪ್ರತಿದಾಳಿ ಮಾಡುತ್ತಿರುವ ಇಸ್ರೇಲ್‌ ಸೇನೆಯು (Israel Palestine War0 ಗಾಜಾ ನಗರದಲ್ಲಿ ಹಮಾಸ್‌ ಕೈಗೊಳ್ಳುತ್ತಿರುವ ಉಗ್ರ ಚಟುವಟಿಕೆಗಳನ್ನೂ ಬಯಲು ಮಾಡುತ್ತಿದೆ. ಅಲ್‌ ಶಿಫಾ ಆಸ್ಪತ್ರೆ (Al Shifa Hospital) ಕೆಳಗೆ ಹಮಾಸ್‌ ಉಗ್ರರು (Hamas Terrorists) ಹೊಂದಿರುವ ಮತ್ತೊಂದು ಸುರಂಗವನ್ನು ಇಸ್ರೇಲ್‌ ಸೇನೆಯು ಪತ್ತೆ ಹಚ್ಚಿದೆ. ಅಲ್ಲದೆ, ವಿಡಿಯೊ ಸಾಕ್ಷ್ಯದ ಜತೆಗೆ ಎಕ್ಸ್‌ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಹಂಚಿಕೊಂಡಿದೆ.

“ಗುಪ್ತಚರ ಇಲಾಖೆ ಮಾಹಿತಿ ಮೇರೆಗೆ ಇಸ್ರೇಲ್‌ ರಕ್ಷಣಾ ಪಡೆಯು ಗಾಜಾ ನಗರದಲ್ಲಿರುವ ಅಲ್‌ ಶಿಫಾ ಆಸ್ಪತ್ರೆಯಲ್ಲಿ ಕಾರ್ಯಾಚರಣೆ ಕೈಗೊಂಡಿದೆ. ಅಲ್‌ ಶಿಫಾ ಆಸ್ಪತ್ರೆ ಕಾಂಪ್ಲೆಕ್ಸ್‌ನಲ್ಲಿ 10 ಮೀಟರ್‌ ಆಳದಲ್ಲಿ 55 ಮೀಟರ್‌ ಉದ್ದದ ಸುರಂಗವನ್ನು ಕಾರ್ಯಾಚರಣೆ ವೇಳೆ ಪತ್ತೆಹಚ್ಚಲಾಗಿದೆ. ಸ್ಫೋಟವಾದರೂ ಏನೂ ಆಗದಂತಹ ಬ್ಲಾಸ್ಟ್‌ಪ್ರೂಫ್‌ ಬಾಗಿಲು ಸೇರಿ ಹಲವು ರಕ್ಷಣಾ ಸೌಕರ್ಯಗಳು ಸುರಂಗಕ್ಕಿವೆ” ಎಂದು ಇಸ್ರೇಲ್‌ ಸೇನೆ ಪೋಸ್ಟ್‌ ಮಾಡಿದೆ.

ಇದನ್ನೂ ಓದಿ: ಪ್ರತಿದಾಳಿಗೆ ಮಣಿದು ಒತ್ತೆಯಾಳುಗಳ ಬಿಡುಗಡೆಗೆ ಹಮಾಸ್‌ ಒಪ್ಪಿಗೆ? ಇಸ್ರೇಲ್‌ ಹೇಳುವುದಿಷ್ಟು…

ಆಸ್ಪತ್ರೆಯಲ್ಲಿ ಒತ್ತೆಯಾಳುಗಳು

ಇಸ್ರೇಲ್‌ನಿಂದ ಹಮಾಸ್‌ ಉಗ್ರರು ಅಪಹರಿಸಿದ ಒತ್ತೆಯಾಳುಗಳನ್ನು ಕೂಡ ಅಲ್‌ ಶಿಫಾ ಆಸ್ಪತ್ರೆಯಲ್ಲಿಯೇ ಇರಿಸಲಾಗಿದೆ. ಈ ಕುರಿತು ಕೂಡ ಇಸ್ರೇಲ್‌ ವಿಡಿಯೊ ಸಮೇತ ಜಾಲತಾಣಗಳಲ್ಲಿ ಪೋಸ್ಟ್‌ ಹಂಚಿಕೊಂಡಿದೆ. ಆ ಮೂಲಕ ಅಲ್‌ ಶಿಫಾ ಆಸ್ಪತ್ರೆಯನ್ನು ಹಮಾಸ್‌ ಹೇಗೆ ಬಳಸಿಕೊಳ್ಳುತ್ತಿದೆ ಎಂಬುದನ್ನು ಜಗತ್ತಿನ ಮುಂದಿಟ್ಟಿದೆ.

“ಹಮಾಸ್‌ ಉಗ್ರರ ಮತ್ತೊಂದು ಮುಖ ಬಯಲಾಗಿದೆ. ಅಕ್ಟೋಬರ್‌ 7ರಂದು ಇಸ್ರೇಲ್‌ ಮೇಲೆ ದಾಳಿ ಮಾಡಿದ ಹಮಾಸ್‌ ಉಗ್ರರು, ನೇಪಾಳ, ಥಾಯ್ಲೆಂಡ್‌ ನಾಗರಿಕರನ್ನು ಒತ್ತೆಯಾಳುಗಳನ್ನಾಗಿ ಮಾಡಿಕೊಂಡಿದೆ. ಆ ಒತ್ತೆಯಾಳುಗಳನ್ನು ಅಲ್‌ ಶಿಫಾ ಆಸ್ಪತ್ರೆಯಲ್ಲಿಯೇ ಇರಿಸಿದೆ. ಇಸ್ರೇಲ್‌ನಲ್ಲಿದ್ದ ಇವರನ್ನು ಹಮಾಸ್‌ ಉಗ್ರರು ಅಪಹರಣ ಮಾಡಿ, ಅವರ ಮೇಲೆ ಹಲ್ಲೆ ನಡೆಸಿ, ಗಾಜಾ ಆಸ್ಪತ್ರೆಯಲ್ಲಿ ಇರಿಸಿದೆ” ಎಂದು ಇಸ್ರೇಲ್‌ ಸೇನೆ ತಿಳಿಸಿದೆ.

ಇಸ್ರೇಲ್‌ ಹಾಗೂ ಹಮಾಸ್‌ ಉಗ್ರರ ನಡುವಿನ ಸಮರದಲ್ಲಿ ಮೃತಪಟ್ಟವರ ಸಂಖ್ಯೆ 12 ಸಾವಿರ ದಾಟಿದೆ. ಅದರಲ್ಲೂ, ಹಮಾಸ್‌ ಉಗ್ರರ ತಾಣವಾದ ಗಾಜಾ ನಗರದ ಮೇಲೆ ಇಸ್ರೇಲ್‌ ನಿರಂತರವಾಗಿ ದಾಳಿ ನಡೆಸುತ್ತಿದ್ದು, ನಗರದಲ್ಲಿ ಇದುವರೆಗೆ 11 ಸಾವಿರಕ್ಕೂ ಜನ ಮೃತಪಟ್ಟಿದ್ದಾರೆ ಎಂದು ಗಾಜಾ ಆರೋಗ್ಯ ಸಚಿವಾಲಯವೇ ಮಾಹಿತಿ ನೀಡಿದೆ. ಹಮಾಸ್‌ ಉಗ್ರರ ದಾಳಿಗೆ ಇಸ್ರೇಲ್‌ನಲ್ಲಿ 1,400 ಜನ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version