ಗಾಜಾ: 2023ರ ಅಕ್ಟೋಬರ್ 7ರಂದು ಹಮಾಸ್ ಉಗ್ರರು ನಡೆಸಿದ ದಾಳಿಗೆ ತೀವ್ರ ಪ್ರಮಾಣದಲ್ಲಿ ಪ್ರತಿದಾಳಿ (Israel-Hamas Conflict) ನಡೆಸುತ್ತಿರುವ ಇಸ್ರೇಲ್ ಸೈನಿಕರು ಇಂದಿಗೂ ಕದನ ವಿರಾಮ ಘೋಷಿಸಿಲ್ಲ. ಹಮಾಸ್ ಉಗ್ರರ ಅಡಗು ತಾಣವಾಗಿರುವ ಗಾಜಾ ನಗರದ ಮೇಲೆ ಇಸ್ರೇಲ್ ಸತತವಾಗಿ ದಾಳಿ ನಡೆಸಿ, ಉಗ್ರರನ್ನು ಸದೆಬಡಿಯುತ್ತಿದೆ. ಈ ಮಧ್ಯೆ ಗಾಜಾದಲ್ಲಿ ಕೆಲಸ ಮಾಡುತ್ತಿದ್ದ ವಿಶ್ವಸಂಸ್ಥೆಯ ಭಾರತೀಯ ಸಿಬ್ಬಂದಿಯೊಬ್ಬರು ರಫಾದಲ್ಲಿ ನಡೆದ ಅಪಘಾತದಲ್ಲಿ ಮೃತಪಟ್ಟಿದ್ದಾರೆ.
ಮೃತ ಸಿಬ್ಬಂದಿ ವಿಶ್ವಸಂಸ್ಥೆಯ ಸುರಕ್ಷತೆ ಮತ್ತು ಭದ್ರತಾ ಇಲಾಖೆಯ (DSS) ಸದಸ್ಯರಾಗಿದ್ದರು. ಮೃತರ ಗುರುತು ಇನ್ನೂ ಬಹಿರಂಗಪಡಿಸಲಾಗಿಲ್ಲವಾದರೂ ಅವರು ಭಾರತದಿಂದ ಮೂಲದವರು ಮತ್ತು ಭಾರತೀಯ ಮಾಜಿ ಸೇನಾ ಸಿಬ್ಬಂದಿ ಎಂದು ಮೂಲಗಳು ತಿಳಿಸಿವೆ.
Today a @UN vehicle was struck in Gaza, killing one of our colleagues & injuring another.
— António Guterres (@antonioguterres) May 13, 2024
More than 190 UN staff have been killed in Gaza.
Humanitarian workers must be protected.
I condemn all attacks on UN personnel and reiterate my urgent appeal for an immediate humanitarian…
ʼʼಇಸ್ರೇಲ್-ಹಮಾಸ್ ಸಂಘರ್ಷ ಪ್ರಾರಂಭವಾದ ಬಳಿಕ ಗಾಜಾದಲ್ಲಿ ಮೊದಲ ಬಾರಿ ವಿಶ್ವಸಂಸ್ಥೆಯ ಸಿಬ್ಬಂದಿಯೊಬ್ಬರು ಮೃತಪಟ್ಟಿದ್ದಾರೆ. ರಫಾದ ಯುರೋಪಿಯನ್ ಆಸ್ಪತ್ರೆಗೆ ಪ್ರಯಾಣಿಸುತ್ತಿದ್ದಾಗ ಅವರಿದ್ದ ವಾಹನ ಅಪಘಾತಕ್ಕೆ ಈಡಾಗಿ ಮೃತಪಟ್ಟಿದ್ದಾರೆ. ಅವರ ಜತೆಗಿದ್ದ ಮತ್ತೊಬ್ಬ ಡಿಎಸ್ಎಸ್ ಸಿಬ್ಬಂದಿ ಗಾಯಗೊಂಡಿದ್ದಾರೆʼʼ ಎಂದು ವರದಿಯೊಂದು ತಿಳಿಸಿದೆ.
ಸಂತಾಪ
ಘಟನೆಯ ಬಗ್ಗೆ ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಆಂಟೋನಿಯೊ ಗುಟೆರೆಸ್ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ, ʼʼವಿಶ್ವಸಂಸ್ಥೆಯ ಸುರಕ್ಷತಾ ಮತ್ತು ಭದ್ರತಾ ಇಲಾಖೆಯ ಸಿಬ್ಬಂದಿಯೊಬ್ಬರು ಸೋಮವಾರ ಬೆಳಿಗ್ಗೆ ರಾಫಾದ ಯುರೋಪಿಯನ್ ಆಸ್ಪತ್ರೆಗೆ ಪ್ರಯಾಣಿಸುತ್ತಿದ್ದಾಗ ಮೃತಪಟ್ಟಿದ್ದಾರೆ ಎನ್ನುವ ವಿಚಾರ ತಿಳಿದು ತೀವ್ರ ದುಃಖವಾಗಿದೆʼʼ ಎಂದು ಬರೆದುಕೊಂಡು ಆಘಾತ ವ್ಯಕ್ತಪಡಿಸಿದ್ದಾರೆ. ಜತೆಗೆ ವಿಶ್ವಸಂಸ್ಥೆಯ ಸಿಬ್ಬಂದಿಯ ಮೇಲಿನ ಎಲ್ಲ ದಾಳಿಗಳನ್ನು ಗುಟೆರೆಸ್ ಖಂಡಿಸಿದ್ದಾರೆ ಮತ್ತು ಸಂಪೂರ್ಣ ತನಿಖೆಗೆ ಕರೆ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಗಾಜಾದಲ್ಲಿನ ಸಂಘರ್ಷವು ನಾಗರಿಕರ ಮೇಲೆ ಮಾತ್ರವಲ್ಲದೆ ಮಾನವೀಯ ಕಾರ್ಯಕರ್ತರ ಮೇಲೂ ಭಾರಿ ಹಾನಿಯನ್ನುಂಟು ಮಾಡುತ್ತಿರುವುದು ಖಂಡನೀಯ. ಮಾನವೀಯ ಕದನ ವಿರಾಮಕ್ಕಾಗಿ ಮತ್ತು ಎಲ್ಲ ಒತ್ತೆಯಾಳುಗಳ ಬಿಡುಗಡೆಗಾಗಿ ಆಗ್ರಹಿಸುತ್ತಿದ್ದೇವೆ ಎಂದು ವಿಶ್ವಸಂಸ್ಥೆ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.
2023ರ ಅಕ್ಟೋಬರ್ 7ರಂದು ಆರಂಭವಾದ ಸಂಘರ್ಷದಲ್ಲಿ ಇದುವರೆಗೆ ಇಸ್ರೇಲ್‌ನಲ್ಲಿ 33 ಮಕ್ಕಳು ಸೇರಿದಂತೆ 1,200ಕ್ಕೂ ಹೆಚ್ಚು ಇಸ್ರೇಲಿಗಳು ಮತ್ತು ವಿದೇಶಿ ಪ್ರಜೆಗಳು ಸಾವನ್ನಪ್ಪಿದ್ದಾರೆ. ಜತೆಗೆ ಗಾಜಾದಲ್ಲಿ ಕನಿಷ್ಠ 35,091 ಪ್ಯಾಲೆಸ್ತೀನ್ ನಾಗರಿಕರು ಸಾವನ್ನಪ್ಪಿದ್ದಾರೆ ಮತ್ತು 78,827 ಜನರು ಗಾಯಗೊಂಡಿದ್ದಾರೆ ಎಂದು ವಿಶ್ವಸಂಸ್ಥೆಯ ಮಾನವೀಯ ವ್ಯವಹಾರಗಳ ಸಮನ್ವಯ ಕಚೇರಿ (Coordination of Humanitarian Affairs) ತಿಳಿಸಿದೆ. 2023ರ ಅಕ್ಟೋಬರ್ 7ರಂದು ಹಮಾಸ್ ಉಗ್ರರು ಇಸ್ರೇಲ್‌ಗೆ ನುಗ್ಗಿದಾಗ ಗಾಜಾದಲ್ಲಿ ಯುದ್ಧ ಪ್ರಾರಂಭವಾಗಿತ್ತು. ಹಮಾಸ್ ಉಗ್ರರು 1,200 ಜನರನ್ನು ಕೊಂದು 253 ಒತ್ತೆಯಾಳುಗಳನ್ನು ವಶಪಡಿಸಿಕೊಂಡಿದೆ ಎಂದು ಇಸ್ರೇಲ್ ಹೇಳಿದೆ.
ಇದನ್ನೂ ಓದಿ: Israel Palestine War: ಗಾಜಾದಲ್ಲಿ ರಕ್ತದೋಕುಳಿ; ಆಹಾರಕ್ಕಾಗಿ ಬಂದವರ ಮೇಲೆ ದಾಳಿ; ಕನಿಷ್ಠ 104 ಮಂದಿ ಸಾವು
ಅಪೌಷ್ಟಿಕತೆ
ಗಾಜಾ ಪಟ್ಟಿಯಾದ್ಯಂತ ಜನಸಂಖ್ಯೆಯ ಕಾಲು ಭಾಗದಷ್ಟು ಜನರು- ವಿನಾಶಕಾರಿ ಮಟ್ಟದ ಆಹಾರ ಅಭದ್ರತೆಯನ್ನು ಎದುರಿಸುತ್ತಿದ್ದಾರೆ ಮತ್ತು ಕ್ಷಾಮದ ಅಪಾಯದಲ್ಲಿದ್ದಾರೆ. ಎರಡು ವರ್ಷಕ್ಕಿಂತ ಕಡಿಮೆ ವಯಸ್ಸಿನ ಆರು ಮಕ್ಕಳಲ್ಲಿ ಒಬ್ಬರು ತೀವ್ರ ಅಪೌಷ್ಟಿಕತೆಯಿಂದ ಬಳಲುತ್ತಿದ್ದಾರೆ ಎಂದು ಎಂದು ವಿಶ್ವಸಂಸ್ಥೆಯ ಹಿರಿಯ ನೆರವು ಅಧಿಕಾರಿಯೊಬ್ಬರು ಈ ಹಿಂದೆ ಎಚ್ಚರಿಸಿದ್ದರು.