Site icon Vistara News

ಉಗ್ರರ ನಿರ್ನಾಮದ ಹೊರತು ಕದನ ವಿರಾಮ ಇಲ್ಲ ಎಂದ ಇಸ್ರೇಲ್;‌ 2ನೇ ಹಂತದ ದಾಳಿ ಶುರು

Benjamin Netanyhu

International Criminal Court Seeks Arrest Warrants Against Israel PM Benjamin Netanyahu, Three Hamas Leaders

ಜೆರುಸಲೇಂ: ಇಸ್ರೇಲ್‌ ಹಾಗೂ ಹಮಾಸ್‌ ಉಗ್ರರ ನಡುವಿನ ಸಂಘರ್ಷವು (Israel Palestine War) ಯುದ್ಧವಾಗಿ ಮಾರ್ಪಾಡಾಗಿದೆ. ಇಸ್ರೇಲ್‌ ಅಂತೂ ಹಮಾಸ್‌ ಉಗ್ರರ (Hamas Terrorists) ಮೇಲೆ ಸಮರವನ್ನೇ ಸಾರಿದೆ. ಗಾಜಾ ನಗರದೊಳಗೆ ಯುದ್ಧ ಟ್ಯಾಂಕರ್‌ಗಳನ್ನು ನುಗ್ಗಿಸಿರುವ ಇಸ್ರೇಲ್‌ (Israel) ಸೇನೆಯು, ಉಗ್ರರನ್ನು ಸದೆಬಡಿಯುವ ಪಣ ತೊಟ್ಟಿದೆ. ಇದರ ಬೆನ್ನಲ್ಲೇ, ಕದನ ವಿರಾಮ ಘೋಷಣೆ ಕುರಿತು ನಿರ್ಣಯ ತೆಗೆದುಕೊಳ್ಳಲಾಗಿದೆ. ಆದರೆ, ಇದಾವುದಕ್ಕೂ ಲಕ್ಷ್ಯ ಕೊಡದ ಇಸ್ರೇಲ್‌, ಹಮಾಸ್‌ ಉಗ್ರರ ವಿರುದ್ಧ ಎರಡನೇ ಹಂತದ ಸಮರ ಸಾರಿದೆ.

ಕದನ ವಿರಾಮದ ಮಾತೇ ಇಲ್ಲ ಎಂದು ಟಿವಿ ಸಂದರ್ಶನದ ವೇಳೆ ಇಸ್ರೇಲ್‌ ಪ್ರಧಾನಿ ಬೆಂಜಮಿನ್‌ ನೆತನ್ಯಾಹು ಹೇಳಿದ್ದಾರೆ. “ಹಮಾಸ್‌ ಉಗ್ರರನ್ನು ನಿರ್ನಾಮ ಮಾಡದ ಹೊರತು ನಾವು ವಿಶ್ರಮಿಸುವುದಿಲ್ಲ. ಈಗಾಗಲೇ ಇಸ್ರೇಲ್‌ ಸೈನಿಕರು ಹಮಾಸ್‌ ಉಗ್ರರ ವಿರುದ್ಧ ಎರಡನೇ ಹಂತದ ಸಮರ ಶುರು ಮಾಡಿದ್ದಾರೆ. ಸೈನಿಕರು ಗಾಜಾ ನಗರದ ಮೇಲೆ ದಾಳಿ ನಡೆಸುತ್ತಿದ್ದಾರೆ. ನಮ್ಮ ದೇಶದ ಒತ್ತೆಯಾಳುಗಳನ್ನು ಬಿಡಿಸಿಕೊಂಡು ಬರುವ ಜತೆಗೆ ಹಮಾಸ್‌ ಉಗ್ರರನ್ನು ಸದೆಬಡಿಯಲಾಗುತ್ತದೆ. ಅಲ್ಲಿಯವರೆಗೆ ಕದನ ವಿರಾಮ ಇಲ್ಲ” ಎಂದು ಹೇಳಿದ್ದಾರೆ.

ಗಾಜಾ ನಗರದಲ್ಲಿ ಮಾನವೀಯತೆ ಆಧಾರದ ಮೇಲೆ ಕದನ ವಿರಾಮ ಘೋಷಣೆಯಾಗಬೇಕು ಎಂದು ವಿಶ್ವಸಂಸ್ಥೆ ಸಾಮಾನ್ಯ ಸಭೆಯಲ್ಲಿ ನಿರ್ಣಯ ಅಂಗೀಕರಿಸಲಾಗಿದೆ. 120 ರಾಷ್ಟ್ರಗಳು ನಿರ್ಣಯದ ಪರವಾಗಿ, 14 ವಿರುದ್ಧವಾಗಿ ಮತ ಚಲಾಯಿಸಿವೆ. ಆದರೆ, ಭಾರತ, ಆಸ್ಟ್ರೇಲಿಯಾ, ಕೆನಡಾ, ಜರ್ಮನಿ, ಜಪಾನ್, ಉಕ್ರೇನ್, ಬ್ರಿಟನ್ ಸೇರಿ 45 ದೇಶಗಳು ಮತದಾನದಿಂದ ದೂರ ಉಳಿದವು. ನಿರ್ಣಯದಲ್ಲಿ ಹಮಾಸ್‌ ಉಗ್ರರ ದಾಳಿಯ ಪ್ರಸ್ತಾಪ ಇರದ ಕಾರಣ ಭಾರತವು ಮತದಾನದಿಂದ ಹಿಂದೆ ಸರಿದಿದೆ.

ಇದನ್ನೂ ಓದಿ: Israel Palestine War: ಇಟ್ಟ ಗುರಿ ತಪ್ಪದ ಇಸ್ರೇಲ್;‌ ಹಮಾಸ್‌ನ 3 ಪ್ರಮುಖ ಉಗ್ರರ ಮಟಾಷ್!

ಗಾಜಾದಲ್ಲಿಯೇ 7,700 ಜನರ ಸಾವು

ಹಮಾಸ್‌ ಉಗ್ರರು ಮೊದಲು ಇಸ್ರೇಲ್‌ ಮೇಲೆ ದಾಳಿ ಶುರು ಮಾಡಿದ ಬಳಿಕ ಇಸ್ರೇಲ್‌ ತಿರುಗೇಟು ನೀಡುತ್ತಿದೆ. ಅದರಲ್ಲೂ, ಹಮಾಸ್‌ ಉಗ್ರರ ತಾಣವಾದ ಗಾಜಾ ನಗರದ ಮೇಲೆ ಇಸ್ರೇಲ್‌ ನಿರಂತರವಾಗಿ ದಾಳಿ ನಡೆಸುತ್ತಿದ್ದು, ನಗರದಲ್ಲಿ ಇದುವರೆಗೆ 7,700 ಜನ ಮೃತಪಟ್ಟಿದ್ದಾರೆ ಎಂದು ಗಾಜಾ ಆರೋಗ್ಯ ಸಚಿವಾಲಯವೇ ಮಾಹಿತಿ ನೀಡಿದೆ. ಇನ್ನೂ 1,700 ಜನ ಕಟ್ಟಡದ ಅವಶೇಷಗಳಲ್ಲಿ ಸಿಲುಕಿದ್ದು, ಅವರ ರಕ್ಷಣೆಗೆ ಕಾರ್ಯಾಚರಣೆ ನಡೆಯುತ್ತಿದೆ ಎಂಬುದಾಗಿ ಮಾಹಿತಿ ನೀಡಿದೆ. ಇನ್ನು ಹಮಾಸ್‌ ಉಗ್ರರ ದಾಳಿಗೆ ಇಸ್ರೇಲ್‌ನಲ್ಲಿ 1,400 ಜನ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.

Exit mobile version