ಟೆಲ್‌ಅವಿವ್: ಅಫಘಾನಿಸ್ತಾನದಲ್ಲಿ ಉಗ್ರರ ಆಡಳಿತ, ಉಕ್ರೇನ್ ಮೇಲೆ ರಷ್ಯಾ ಆಕ್ರಮಣ, ಹಮಾಸ್ ಉಗ್ರರು ಹಾಗೂ ಇಸ್ರೇಲ್ ನಡುವಿನ ಸಮರವು ಜಾಗತಿಕ ಅಸ್ಥಿರತೆ ಉಂಟಾಗಿರುವ ಬೆನ್ನಲ್ಲೇ ಇಸ್ರೇಲ್ ಮೇಲೆ ಇರಾನ್ ದಾಳಿ ಮಾಡಿದೆ. ಇಸ್ರೇಲ್‌ನ ಟೆಲ್‌ಅವಿವ್ (Tel Aviv) ಮೇಲೆ ಇರಾನ್ 200ಕ್ಕೂ ಅಧಿಕ ಡ್ರೋನ್ ಹಾಗೂ ಕ್ಷಿಪಣಿಗಳ ಮೂಲಕ ದಾಳಿ (Israel Iran War) ಮಾಡಿದೆ ಎಂಬುದಾಗಿ ಇಸ್ರೇಲ್ ತಿಳಿಸಿದೆ. ಹಾಗಾಗಿ, ಇದು ಮೂರನೇ ಮಹಾಯುದ್ಧಕ್ಕೆ ಮುನ್ನುಡಿ ಬರೆಯಲಿದೆ ಎಂದು ಹೇಳಲಾಗುತ್ತಿದೆ. ಇರಾನ್ ದಾಳಿ ಬೆನ್ನಲ್ಲೇ, ವಿಶ್ವಸಂಸ್ಥೆ ಭದ್ರತಾ ಮಂಡಳಿಯಲ್ಲಿ ತುರ್ತು ಸಭೆ ನಡೆಸಲಾಗುತ್ತಿದ್ದು, ಇರಾನ್ ಮೇಲೆ ಒತ್ತಡ ಹೇರಲಾಗುತ್ತದೆ ಎಂದು ತಿಳಿದುಬಂದಿದೆ.
ಸುತ್ತಲೂ ಇಸ್ಲಾಮಿಕ್ ದೇಶಗಳನ್ನೇ ಒಳಗೊಂಡಿರುವ, ಶತ್ರುರಾಷ್ಟ್ರಗಳ ಭೀತಿ ಇದ್ದರೂ ಪ್ರತಿದಾಳಿ ಮೂಲಕ ಸೆಟೆದು ನಿಲ್ಲುವ ಇಸ್ರೇಲ್ ಈಗ ಇರಾನ್ ದಾಳಿಯಿಂದ ತತ್ತರಿಸಿದೆ. “ಇಸ್ರೇಲ್ ಮೇಲೆ ಇರಾನ್ 200ಕ್ಕೂ ಅಧಿಕ ಕ್ಷಿಪಣಿಗಳು, ಡ್ರೋನ್‌ಗಳ ಮೂಲಕ ಭೀಕರ ದಾಳಿ ನಡೆಸಿದೆ” ಎಂಬುದಾಗಿ ಇಸ್ರೇಲ್ ತಿಳಿಸಿದ್ದು, ಪ್ರತಿದಾಳಿಗೂ ಸಿದ್ಧತೆ ನಡೆಸುತ್ತಿದೆ ಎಂದು ಹೇಳಲಾಗುತ್ತಿದೆ. ಇನ್ನು, ಡ್ರೋನ್ ಹಾಗೂ ಕ್ಷಿಪಣಿಗಳ ದಾಳಿಗೆ ಇಸ್ರೇಲ್‌ನಲ್ಲಿ ಭಾರಿ ಪ್ರಮಾಣದಲ್ಲಿ ಸಾವು-ನೋವು ಸಂಭವಿಸಿದೆ ಎಂದು ಹೇಳಲಾಗುತ್ತಿದೆಯಾದರೂ, ನಿಖರ ಮಾಹಿತಿ ಲಭ್ಯವಾಗಿಲ್ಲ.
🇮🇷Iran Launches Drone and Missile Attack on #iranisraelwar
— Areeba🇵🇸 (@Areeba_sys) April 14, 2024
Israel🇮🇱 #Iran #IranAttack
Iran fired 200 missiles and drones. pic.twitter.com/7EGCaEyzPL
ಅಮೆರಿಕಕ್ಕೆ ಇರಾನ್ ಎಚ್ಚರಿಕೆ
ಇಸ್ರೇಲ್ ಮೇಲೆ ಇರಾನ್ ದಾಳಿ ಮಾಡಿದರೆ, ನಾವು ಇಸ್ರೇಲ್ ಪರ ನಿಲ್ಲುತ್ತೇವೆ ಎಂದು ಅಮೆರಿಕ ತಿಳಿಸಿದ ಬೆನ್ನಲ್ಲೇ ಅಮೆರಿಕಕ್ಕೆ ಇರಾನ್ ಎಚ್ಚರಿಕೆ ನೀಡಿದೆ. “ಡಮಾಸ್ಕಸ್‌ನಲ್ಲಿರುವ ನಮ್ಮ ರಾಜತಾಂತ್ರಿಕ ಕಚೇರಿಗಳ ಮೇಲೆ ಯಹೂದಿಗಳು (ಇಸ್ರೇಲ್) ಆಕ್ರಮಣಕಾರಿ ನೀತಿ ಅನುಸರಿಸುತ್ತಿರುವ ಕಾರಣ ಪ್ರತಿಕ್ರಿಯೆ ರೂಪದಲ್ಲಿ ಇರಾನ್ ಮಿಲಿಟರಿ ಪಡೆಗಳು ದಾಳಿ ನಡೆಸುತ್ತಿವೆ. ಇದಕ್ಕೆ ಇಸ್ರೇಲ್ ಕೂಡ ಪ್ರತಿದಾಳಿ ಮಾಡಬಹುದು. ಹಾಗಾಗಿ, ಮುಂದಿನ ದಿನಗಳಲ್ಲಿ ಪರಿಣಾಮಗಳು ಭೀಕರವಾಗಿರಲಿವೆ. ಇದು ಇಸ್ರೇಲ್ ಹಾಗೂ ಇರಾನ್ ನಡುವಿನ ಸಮರವಾಗಿದೆ. ಹಾಗಾಗಿ, ಇದರಿಂದ ಅಮೆರಿಕ ದೂರ ಉಳಿಯಲೇಬೇಕು” ಎಂದು ಇರಾನ್ ಎಚ್ಚರಿಸಿದೆ.
ಬೈಡೆನ್ ಜತೆ ನೆತನ್ಯಾಹು ಮಾತುಕತೆ
ಇರಾನ್ ದಾಳಿಯ ಬೆನ್ನಲ್ಲೇ ಅಮೆರಿಕ ಅಧ್ಯಕ್ಷ ಜೋ ಬೈಡೆನ್ ಜತೆ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರು ದೂರವಾಣಿ ಮೂಲಕ ಮಾತುಕತೆ ನಡೆಸಿದ್ದಾರೆ. ಇರಾನ್ ದಾಳಿಯ ಹಿನ್ನೆಲೆಯಲ್ಲಿ ನೆತನ್ಯಾಹು ಅವರು ಅಮೆರಿಕದ ಬೆಂಬಲ ಕೋರಿದ್ದಾರೆ ಎಂದು ತಿಳಿದುಬಂದಿದೆ. ನಿರೀಕ್ಷೆಯಂತೆಯೇ, ಅಮೆರಿಕವು ಇಸ್ರೇಲ್‌ಗೆ ಬೆಂಬಲ ನೀಡಲಿದೆ ಎಂದು ಹೇಳಲಾಗುತ್ತಿದೆ. ಇದರ ಬೆನ್ನಲ್ಲೇ, ಇರಾನ್‌ಗೆ ಪ್ರತ್ಯುತ್ತರ ನೀಡುವ ದಿಸೆಯಲ್ಲಿ ಇಸ್ರೇಲ್ ಚಿಂತನೆ ನಡೆಸಿದ್ದು, ಸಾಲು ಸಾಲು ಸಭೆಗಳನ್ನು ನಡೆಸುತ್ತಿದೆ ಎಂದು ಮೂಲಗಳು ತಿಳಿಸಿವೆ.
ಅಮೆರಿಕ ಅಧ್ಯಕ್ಷ ಜೋ ಬೈಡೆನ್ ಅವರು ಇರಾನ್ ದಾಳಿ ಕುರಿತು ಎಚ್ಚರಿಕೆ ನೀಡಿದ್ದರು. ಶ್ವೇತಭವನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತ, ಇರಾನ್ ಇಸ್ರೇಲ್ ಮೇಲೆ ದಾಳಿ ಮಾಡಲಿದೆ ಎಂದು ನಿರೀಕ್ಷಿಸಿದ್ದರು. “ನಾವು ಇಸ್ರೇಲ್ ರಕ್ಷಣೆಗೆ ಬದ್ಧರಾಗಿದ್ದೇವೆ. ನಾವು ಇಸ್ರೇಲ್ ಅನ್ನು ಬೆಂಬಲಿಸುತ್ತೇವೆ. ನಾವು ಇಸ್ರೇಲ್ ಅನ್ನು ರಕ್ಷಿಸಲು ಸಹಾಯ ಮಾಡುತ್ತೇವೆ. ಇರಾನ್ ಯಶಸ್ವಿಯಾಗುವುದಿಲ್ಲ. ಯುಎಸ್ ಹೆಚ್ಚುವರಿ ರಕ್ಷಣಾ ಸಾಧನಗಳನ್ನು ಪಶ್ಚಿಮ ಏಷ್ಯಾಕ್ಕೆ ಸ್ಥಳಾಂತರಿಸಿದ್ದು, ಇಸ್ರೇಲ್ ರಕ್ಷಣೆಗೆ ಮೀಸಲಿಟ್ಟಿದೆ,” ಎಂದು ಬೈಡೆನ್ ಹೇಳಿದ್ದರು.
ಇದನ್ನೂ ಓದಿ: Israel Airstrike: ಇಸ್ರೇಲ್ ವಾಯುದಾಳಿಗೆ ಹಮಾಸ್ ಮುಖ್ಯಸ್ಥನ 3 ಮಕ್ಕಳು, 4 ಮೊಮ್ಮಕ್ಕಳು ಬಲಿ