Site icon Vistara News

Israel Iran War: ಇರಾನ್‌ಗೆ ಪಾಠ ಕಲಿಸದೆ ಬಿಡಲ್ಲ; ದಾಳಿಯ ಬೆನ್ನಲ್ಲೇ ಇಸ್ರೇಲ್‌ ಖಡಕ್ ಎಚ್ಚರಿಕೆ

Israel Iran War

Israel Iran War: Whoever harms us, we will harm them: Israel Warns Iran After Attack

ಟೆಲ್‌ಅವಿವ್:‌ ರಷ್ಯಾ-ಉಕ್ರೇನ್‌ ಯುದ್ಧ (Russia Ukraine War), ಹಮಾಸ್‌ ಉಗ್ರರು ಹಾಗೂ ಇಸ್ರೇಲ್‌ ನಡುವಿನ ಕಾಳಗದ ಬೆನ್ನಲ್ಲೇ ಜಗತ್ತು ಈಗ ಮತ್ತೊಂದು ಯುದ್ಧಕ್ಕೆ ಸಾಕ್ಷಿಯಾಗುತ್ತಿದೆ. ಇಸ್ರೇಲ್‌ ಮೇಲೆ ಇರಾನ್‌ (Israel Iran War) ಶನಿವಾರ ರಾತ್ರೋರಾತ್ರಿ ದಾಳಿ ಆರಂಭಿಸಿದ್ದು, ಜಾಗತಿಕ ಅಸ್ಥಿರತೆಯ ಆತಂಕ ಸೃಷ್ಟಿಸಿದೆ. ಇನ್ನು, ಇರಾನ್‌ ದಾಳಿಯ ಬೆನ್ನಲ್ಲೇ ಇಸ್ರೇಲ್‌ ಪ್ರತಿದಾಳಿಗೆ ಸಿದ್ಧವಾಗಿದ್ದು, “ನಮಗೆ ನೋವು ಕೊಟ್ಟವರಿಗೆ ನಾವು ತಿರುಗೇಟು ನೀಡದೆ ಬಿಡುವುದಿಲ್ಲ” ಎಂಬುದಾಗಿ ಎಚ್ಚರಿಕೆ ನೀಡಿದೆ. ಹಾಗಾಗಿ, ಶೀಘ್ರದಲ್ಲೇ ಇರಾನ್‌ ಮೇಲೆ ಇಸ್ರೇಲ್‌ ದಾಳಿ ಪ್ರತಿದಾಳಿ ನಡೆಸಲಿದೆ ಎಂದು ತಿಳಿದುಬಂದಿದೆ.

“ಕಳೆದ ಕೆಲವು ದಿನಗಳಿಂದ ಇರಾನ್‌ ನಮ್ಮ ಮೇಲೆ ದಾಳಿ ಮಾಡುತ್ತದೆ ಎಂಬ ಸುಳಿವು ಸಿಕ್ಕಿತ್ತು. ಅದಕ್ಕಾಗಿ ಇಸ್ರೇಲ್‌ ಕೂಡ ಪ್ರತಿದಾಳಿಗೆ ಸಿದ್ಧವಾಗಿದೆ. ಇಸ್ರೇಲ್‌ ಬಲಿಷ್ಠವಾಗಿದೆ. ಇಲ್ಲಿನ ರಕ್ಷಣಾ ವ್ಯವಸ್ಥೆಯು ಸಮರ್ಥವಾಗಿದೆ. ಈಗ ಇರಾನ್‌ ನಮ್ಮ ಮೇಲೆ ದಾಳಿ ಮಾಡಿದ್ದು, ನಾವೇನೂ ಕೈಕಟ್ಟಿ ಕೂರುವವರಲ್ಲ. ನಮ್ಮ ಜತೆ ಅಮೆರಿಕ ನಿಂತಿದೆ. ಬ್ರಿಟನ್‌ ಕೂಡ ನಮಗೆ ಬೆಂಬಲ ಸೂಚಿಸಿದೆ. ಹಾಗಾಗಿ, ಇರಾನ್‌ಗೆ ತಕ್ಕ ಪಾಠ ಕಲಿಸದೆ ಬಿಡುವುದಿಲ್ಲ” ಇಸ್ರೇಲ್‌ ಪ್ರಧಾನಿ ಬೆಂಜಮಿನ್‌ ನೆತನ್ಯಾಹು ಹೇಳಿದ್ದಾರೆ. ‌

ಅಮೆರಿಕಕ್ಕೆ ಇರಾನ್‌ ಎಚ್ಚರಿಕೆ

ಇಸ್ರೇಲ್‌ ಮೇಲೆ ಇರಾನ್‌ ದಾಳಿ ಮಾಡಿದರೆ, ನಾವು ಇಸ್ರೇಲ್‌ ಪರ ನಿಲ್ಲುತ್ತೇವೆ ಎಂದು ಅಮೆರಿಕ ತಿಳಿಸಿದ ಬೆನ್ನಲ್ಲೇ ಅಮೆರಿಕಕ್ಕೆ ಇರಾನ್‌ ಎಚ್ಚರಿಕೆ ನೀಡಿದೆ. “ಡಮಾಸ್ಕಸ್‌ನಲ್ಲಿರುವ ನಮ್ಮ ರಾಜತಾಂತ್ರಿಕ ಕಚೇರಿಗಳ ಮೇಲೆ ಯಹೂದಿಗಳು (ಇಸ್ರೇಲ್)‌ ಆಕ್ರಮಣಕಾರಿ ನೀತಿ ಅನುಸರಿಸುತ್ತಿರುವ ಕಾರಣ ಪ್ರತಿಕ್ರಿಯೆ ರೂಪದಲ್ಲಿ ಇರಾನ್‌ ಮಿಲಿಟರಿ ಪಡೆಗಳು ದಾಳಿ ನಡೆಸುತ್ತಿವೆ. ಇದಕ್ಕೆ ಇಸ್ರೇಲ್‌ ಕೂಡ ಪ್ರತಿದಾಳಿ ಮಾಡಬಹುದು. ಹಾಗಾಗಿ, ಮುಂದಿನ ದಿನಗಳಲ್ಲಿ ಪರಿಣಾಮಗಳು ಭೀಕರವಾಗಿರಲಿವೆ. ಇದು ಇಸ್ರೇಲ್‌ ಹಾಗೂ ಇರಾನ್‌ ನಡುವಿನ ಸಮರವಾಗಿದೆ. ಹಾಗಾಗಿ, ಇದರಿಂದ ಅಮೆರಿಕ ದೂರ ಉಳಿಯಲೇಬೇಕು” ಎಂದು ಇರಾನ್‌ ಎಚ್ಚರಿಸಿದೆ.

ಬೈಡೆನ್‌ ಜತೆ ನೆತನ್ಯಾಹು ಮಾತುಕತೆ

ಇರಾನ್‌ ದಾಳಿಯ ಬೆನ್ನಲ್ಲೇ ಅಮೆರಿಕ ಅಧ್ಯಕ್ಷ ಜೋ ಬೈಡೆನ್‌ ಜತೆ ಇಸ್ರೇಲ್‌ ಪ್ರಧಾನಿ ಬೆಂಜಮಿನ್‌ ನೆತನ್ಯಾಹು ಅವರು ದೂರವಾಣಿ ಮೂಲಕ ಮಾತುಕತೆ ನಡೆಸಿದ್ದಾರೆ. ಇರಾನ್‌ ದಾಳಿಯ ಹಿನ್ನೆಲೆಯಲ್ಲಿ ನೆತನ್ಯಾಹು ಅವರು ಅಮೆರಿಕದ ಬೆಂಬಲ ಕೋರಿದ್ದಾರೆ ಎಂದು ತಿಳಿದುಬಂದಿದೆ. ನಿರೀಕ್ಷೆಯಂತೆಯೇ, ಅಮೆರಿಕವು ಇಸ್ರೇಲ್‌ಗೆ ಬೆಂಬಲ ನೀಡಲಿದೆ ಎಂದು ಹೇಳಲಾಗುತ್ತಿದೆ. ಇದರ ಬೆನ್ನಲ್ಲೇ, ಇರಾನ್‌ಗೆ ಪ್ರತ್ಯುತ್ತರ ನೀಡುವ ದಿಸೆಯಲ್ಲಿ ಇಸ್ರೇಲ್‌ ಚಿಂತನೆ ನಡೆಸಿದ್ದು, ಸಾಲು ಸಾಲು ಸಭೆಗಳನ್ನು ನಡೆಸುತ್ತಿದೆ ಎಂದು ಮೂಲಗಳು ತಿಳಿಸಿವೆ.

ಇದನ್ನೂ ಓದಿ: Israel Iran War: ಇಸ್ರೇಲ್‌ ಮೇಲೆ ಇರಾನ್‌ ಡ್ರೋನ್‌, ಕ್ಷಿಪಣಿ ದಾಳಿ; 3ನೇ ಮಹಾಯುದ್ಧ ಶುರು?

Exit mobile version