ಗಾಜಾ: ಇಸ್ರೇಲ್ ಹಾಗೂ ಪ್ಯಾಲೆಸ್ತೀನ್ (Israel-Palestine tension) ನಡುವೆ ಇರುವ ಗಾಜಾ ಪಟ್ಟಿಯಲ್ಲಿ (Gaza strip) ಯುದ್ಧ ಸನ್ನಿವೇಶ ಮತ್ತೆ ಸೃಷ್ಟಿಯಾಗಿದೆ. ಪ್ಯಾಲೆಸ್ತೀನಿಯನ್ನರು ನೂರಾರು ರಾಕೆಟ್‌ಗಳನ್ನು ಇಸ್ರೇಲ್ ಕಡೆಗೆ ಹಾರಿಬಿಟ್ಟಿದ್ದು, ʼಯುದ್ಧದ ಸನ್ನಿವೇಶʼವನ್ನು ಇಸ್ರೇಲ್ ಘೋಷಿಸಿದೆ. ಹಮಾಸ್ ಉಗ್ರರು ಅನೇಕ ಇಸ್ರೇಲಿಗಳನ್ನು ಒತ್ತೆಯಾಳುಗಳನ್ನಾಗಿಸಿದ್ದಾರೆ ಎಂದು ತಿಳಿದುಬಂದಿದೆ.
ಗಾಜಾ ಪಟ್ಟಿಯಲ್ಲಿರುವ ಪ್ಯಾಲೆಸ್ತೀನ್ ಉಗ್ರಗಾಮಿಗಳು ದಕ್ಷಿಣ ಇಸ್ರೇಲ್‌ಗೆ ಭಾರಿ ಒಳನುಸುಳುವಿಕೆ ನಡೆಸಿದ್ದಾರೆ. ಇದನ್ನು ಇಸ್ರೇಲಿ ಮಿಲಿಟರಿ ಖಚಿತಪಡಿಸಿದೆ. ಗಾಜಾಗೆ ಸಮೀಪದ ಇಸ್ರೇಲಿ ಪ್ರಜೆಗಳನ್ನು ಮನೆಯೊಳಗೇ ಇರುವಂತೆ ಆದೇಶಿಸಿದೆ. ಇದರ ಹಿಂದೆಯೇ ಉಗ್ರಗಾಮಿಗಳು ಗಾಜಾದಿಂದ ಇಸ್ರೇಲ್‌ನತ್ತ ನೂರಾರು ರಾಕೆಟ್‌ಗಳನ್ನು ಹಾರಿಸಿದ್ದಾರೆ. ಇಸ್ರೇಲ್ ದೇಶಾದ್ಯಂತ ವೈಮಾನಿಕ ದಾಳಿಯ ಸೈರನ್‌ಗಳನ್ನು (Israel-Palestine Tension) ಕೂಗಿಸಲಾಗಿದೆ.
ಈ ನಡುವೆ ಹಲವಾರು ಇಸ್ರೇಲಿಗಳನ್ನು ಹಮಾಸ್ ಉಗ್ರರು ವಶಪಡಿಸಿಕೊಂಡಿದ್ದಾರೆ ಎಂದು ಪ್ಯಾಲೆಸ್ತೀನ್ ಮಾಧ್ಯಮ ವರದಿಗಳು ಹೇಳಿವೆ. ಇಸ್ರೇಲ್ ಸೈನ್ಯ ಹೆಚ್ಚಿನ ವಿವರಗಳನ್ನು ನೀಡದಿದ್ದರೂ, ಇಸ್ರೇಲಿ ಗಡಿ ಪಟ್ಟಣವಾದ ಸ್ಡೆರೋಟ್‌ನಲ್ಲಿ ಹಮಾಸ್‌ನ ಸಮವಸ್ತ್ರಧಾರಿ ಬಂದೂಕುಧಾರಿಗಳು ಕಾಣಿಸಿಕೊಂಡಿದ್ದಾರೆ ಎಂದು ಸೋಶಿಯಲ್ ಮೀಡಿಯಾದಲ್ಲಿ ಕಂಡುಬಂದ ವೀಡಿಯೊಗಳು ತೋರಿಸಿವೆ. ವೀಡಿಯೋಗಳಲ್ಲಿ ಗುಂಡಿನ ಸದ್ದು ಕೇಳಿಬರುತ್ತಿದ್ದು, ಅದರ ಸತ್ಯಾಸತ್ಯತೆಯನ್ನು ಪರಿಶೀಲಿಸಬೇಕಿದೆ. ದಕ್ಷಿಣ ಇಸ್ರೇಲ್‌ನಲ್ಲಿ ಒಂದು ರಾಕೆಟ್ ಕಟ್ಟಡಕ್ಕೆ ಅಪ್ಪಳಿಸಿ ಇಬ್ಬರು ನಾಗರಿಕರು ಗಾಯಗೊಂಡಿದ್ದಾರೆ.
ಈ ವರ್ಷ ಇಸ್ರೇಲಿ ಸೇನಾ ದಾಳಿಯಲ್ಲಿ ಸುಮಾರು 200 ಪ್ಯಾಲೆಸ್ಟೀನಿಯನ್ನರು ವೆಸ್ಟ್ ಬ್ಯಾಂಕ್‌ನಲ್ಲಿ ಸಾವನ್ನಪ್ಪಿದ್ದಾರೆ. ಇಲ್ಲಿ ಮತ್ತೆ ಇಸ್ರೇಲಿ ಸೈನ್ಯ ರಾಕೆಟ್‌ಗಳನ್ನು ಉಡಾಯಿಸಿದೆ. ದಾಳಿಗಳು ಉಗ್ರಗಾಮಿಗಳನ್ನು ಗುರಿಯಾಗಿಸಿಕೊಂಡಿವೆ ಎಂದು ಇಸ್ರೇಲ್ ಹೇಳಿದೆ. ಕಲ್ಲು ತೂರಾಟದ ಪ್ರತಿಭಟನಾಕಾರರು ಮತ್ತು ಹಿಂಸಾಚಾರದಲ್ಲಿ ಭಾಗಿಯಾಗದ ಜನ ಸಹ ರಾಕೆಟ್ ದಾಳಿಯಲ್ಲಿ ಸತ್ತಿದ್ದಾರೆ. ಇಸ್ರೇಲಿಗಳ ಮೇಲೆ ನಡೆಸಲಾದ ಪ್ಯಾಲೇಸ್ತೀನಿಯನ್ ದಾಳಿಗಳಲ್ಲಿ 30ಕ್ಕೂ ಹೆಚ್ಚು ಜನ ಸತ್ತಿದ್ದಾರೆ. ಇತ್ತೀಚೆಗೆ ಇಸ್ರೇಲಿ ಗಡಿಯಲ್ಲಿ ಹಮಾಸ್ ಕಾರ್ಯಕರ್ತರು ಹಿಂಸಾತ್ಮಕ ಪ್ರದರ್ಶನಗಳನ್ನು ನಡೆಸಿದ್ದಾರೆ. ಹಿಂಸಾಚಾರದ ಬಗ್ಗೆ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ವಿವರ ಪಡೆದಿದ್ದು, ಭದ್ರತಾ ಮುಖ್ಯಸ್ಥರ ಜತೆಗೆ ಮಾತನಾಡಿದ್ದಾರೆ.
2007ರಲ್ಲಿ ಪ್ಯಾಲೆಸ್ತೀನಿನಲ್ಲಿ ಹಮಾಸ್ ಅಧಿಕಾರಕ್ಕೆ ಬಂದ ಬಳಿಕ ಗಾಜಾ ಪಟ್ಟಿಯ ಮೇಲೆ ಹಲವು ದಿಗ್ಬಂಧನಗಳನ್ನು ವಿಧಿಸಿದೆ. ಪ್ಯಾಲೇಸ್ಟಿನಿ ಉಗ್ರರು ಮತ್ತು ಇಸ್ರೇಲ್ ಹಲವಾರು ವಿನಾಶಕಾರಿ ಯುದ್ಧಗಳನ್ನು ನಡೆಸಿವೆ. ಮೇ ತಿಂಗಳಲ್ಲಿ, ಇಸ್ರೇಲಿ ವಾಯುದಾಳಿ ಮತ್ತು ಗಾಜಾದ ರಾಕೆಟ್ ದಾಳಿಯಲ್ಲಿ 34 ಪ್ಯಾಲೆಸ್ಟೀನಿಯನ್ನರು ಮತ್ತು ಒಬ್ಬ ಇಸ್ರೇಲಿ ಸಾವನ್ನಪ್ಪಿದರು. ಈ ವರ್ಷ ಇಲ್ಲಿಯವರೆಗೆ ಕನಿಷ್ಠ 247 ಪ್ಯಾಲೆಸ್ಟೀನಿಯನ್ನರು, 32 ಇಸ್ರೇಲಿಗಳು ಮತ್ತು ಇಬ್ಬರು ವಿದೇಶಿಯರು ಸಂಘರ್ಷದಲ್ಲಿ ಸಾವನ್ನಪ್ಪಿದ್ದಾರೆ.
ಇದನ್ನೂ ಓದಿ: ವಿಸ್ತಾರ Explainer : ಆಯಿಲ್ ಇಲ್ಲದಿದ್ರೂ ಇಸ್ರೇಲ್, ಶ್ರೀಮಂತ ದೇಶವಾಗಿದ್ದು ಹೇಗೆ?