Site icon Vistara News

Israel Palestine War: ಉಗ್ರರ ವಿರುದ್ಧ ಇಸ್ರೇಲ್‌ ಸಮರ; ಗಾಜಾ ಚರ್ಚ್‌ ಉಡೀಸ್‌, 21 ಸಾವು

Israel Attack On Gaza

ಜೆರುಸಲೇಂ: ಇಸ್ರೇಲ್‌ ಹಾಗೂ ಹಮಾಸ್‌ ಉಗ್ರರ ನಡುವಿನ ಸಂಘರ್ಷವು (Israel Palestine War) ಎರಡೂ ದೇಶಗಳ ನಾಗರಿಕರನ್ನು ಬಲಿ ಪಡೆಯುತ್ತಿದೆ. ಅದರಲ್ಲೂ, ಮೊದಲು ರಾಕೆಟ್‌ ದಾಳಿ ಮಾಡಿದ ಹಮಾಸ್‌ ಉಗ್ರರನ್ನು ನಿರ್ನಾಮ ಮಾಡಲು ಹೊರಟಿರುವ ಇಸ್ರೇಲ್‌ ಸೇನೆಯು ಗಾಜಾ ನಗರದ (Gaza City) ಮೇಲೆ ಸಂಪೂರ್ಣವಾಗಿ ಹತೋಟಿ ಸಾಧಿಸಿದೆ. ಇದರ ಬೆನ್ನಲ್ಲೇ, ಗಾಜಾ ಮೇಲೆ ಇಸ್ರೇಲ್‌ ಸೈನಿಕರು ಬಾಂಬ್‌ ದಾಳಿ ನಡೆಸಿದ್ದು, ಒಂದು ಚರ್ಚ್‌ಅನ್ನು (Gaza Church) ಉಡಾಯಿಸಿದ್ದಾರೆ. ಇಸ್ರೇಲ್‌ ದಾಳಿಗೆ ಗಾಜಾದಲ್ಲಿ 21 ಮಂದಿ ಮೃತಪಟ್ಟಿದ್ದಾರೆ.

ಗಾಜಾ ನಗರದಲ್ಲಿರುವ ಗ್ರೀಕ್‌ ಆರ್ಥಡಾಕ್ಸ್‌ ಚರ್ಚ್‌ ಮೇಲೆ ಇಸ್ರೇಲ್‌ ರಾಕೆಟ್‌ ದಾಳಿ ನಡೆಸಿದೆ. ಇದರಿಂದಾಗಿ 12ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ. ಅಷ್ಟೇ ಅಲ್ಲ, ಇಡೀ ಗಾಜಾ ನಗರವನ್ನು ಇಸ್ರೇಲ್‌ ಸೈನಿಕರು ಸುತ್ತುವರಿದಿದ್ದು, ಗುರುವಾರ (ಅಕ್ಟೋಬರ್‌ 19) ನಡೆದ ದಾಳಿಯಲ್ಲಿ 21ಕ್ಕೂ ಅಧಿಕ ಮಂದಿ ಮೃತಪಟ್ಟಿದ್ದಾರೆ. ಹಾಗೆಯೇ, ನೂರಾರು ಜನ ಗಾಯಗೊಂಡಿದ್ದಾರೆ. ಇದರಿಂದಾಗಿ, ಗಾಜಾ ನಗರದಲ್ಲಿ ದಾಳಿಯಿಂದ ಸಂತ್ರಸ್ತರಾದವರಿಗೆ ಸಂಘ-ಸಂಸ್ಥೆಗಳು, ಸರ್ಕಾರ ಯಾವುದೇ ನೆರವು ನೀಡಲು ಆಗುತ್ತಿಲ್ಲ ಎಂದು ತಿಳಿದುಬಂದಿದೆ.

5 ಸಾವಿರ ದಾಟಿದ ಸಾವಿನ ಸಂಖ್ಯೆ

ಇಸ್ರೇಲ್‌ ಹಾಗೂ ಹಮಾಸ್‌ ಉಗ್ರರ ಸಮರದಿಂದ ಇದುವರೆಗೆ ಎರಡೂ ದೇಶಗಳಲ್ಲಿ ಮೃತಪಟ್ಟವರ ಸಂಖ್ಯೆ 5 ಸಾವಿರ ದಾಟಿದೆ. ಇಸ್ರೇಲ್‌ ದಾಳಿಗೆ ಗಾಜಾ ನಗರ ಅಕ್ಷರಶಃ ತತ್ತರಿಸಿಹೋಗಿದ್ದು, ಇದುವರೆಗೆ 3,800 ಜನ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ. ಇನ್ನು ಹಮಾಸ್‌ ಉಗ್ರರ ದಾಳಿಗೆ ಇಸ್ರೇಲ್‌ನಲ್ಲಿ 1,400 ಮಂದಿ ಬಲಿಯಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ. ಗಾಜಾ ನಗರವನ್ನು ಸಂಪೂರ್ಣವಾಗಿ ನಾಶಪಡಿಸಲು ಉದ್ದೇಶಿಸಿರುವ ಇಸ್ರೇಲ್‌, ಯಾವಾಗ ಬೇಕಾದರೂ ಪೂರ್ಣ ಪ್ರಮಾಣದ ದಾಳಿ ಶುರು ಮಾಡಬಹುದು ಎನ್ನಲಾಗುತ್ತಿದೆ.

ಇದನ್ನೂ ಓದಿ: Israel Palestine War: ಪ್ಯಾಲೆಸ್ತೀನ್‌ಗೆ ಭಾರತದಿಂದ ಮಾನವೀಯ ನೆರವು; ಪ್ರಧಾನಿ ಮೋದಿ ಭರವಸೆ

ಮಸೀದಿ ಉರುಳಿಸಿದ ಇಸ್ರೇಲ್

ಕೆಲ ದಿನಗಳ ಹಿಂದಷ್ಟೇ ಗಾಜಾದಲ್ಲಿರುವ ಮಸೀದಿಯೊಂದನ್ನು ಇಸ್ರೇಲ್‌ ಉಡೀಸ್‌ ಮಾಡಿತ್ತು. ಅಲ್‌ ಮೊಹಮ್ಮದ್‌ ಅಮಿನ್‌ ಮಸೀದಿಯನ್ನು ನೆಲಸಮಗೊಳಿಸಿತ್ತು. ಗಾಜಾದಲ್ಲಿ 2013ರಲ್ಲಿ ಮಲೇಷ್ಯಾದ ಮುಸ್ಲಿಂ ಕೇರ್‌ ಮಲೇಷ್ಯಾ ಸೊಸೈಟಿಯು ಸಾರ್ವಜನಿಕರಿಂದ ಹಣ ಸಂಗ್ರಹಿಸಿ ಮಸೀದಿಯನ್ನು ನಿರ್ಮಿಸಿತ್ತು. “ಇಸ್ರೇಲ್‌ ಬಾಂಬ್‌ ದಾಳಿಯಲ್ಲಿ ಮಲೇಷ್ಯಾ ಜನರಿಂದ ಹಣ ಸಂಗ್ರಹಿಸಿದ ನಿರ್ಮಿಸಿದ ಮಸೀದಿಯು ಧ್ವಂಸಗೊಂಡಿದೆ. ಇದರಿಂದ ನಮಗೆ ಅತೀವ ದುಃಖವಾಗಿದೆ. ದಾಳಿಯನ್ನು ನಾವು ಖಂಡಿಸುತ್ತೇವೆ” ಎಂದು ಮುಸ್ಲಿಂ ಕೇರ್‌ ಮಲೇಷ್ಯಾ ಸೊಸೈಟಿಯ ಖಂಡಿಸಿತ್ತು.

Exit mobile version