Site icon Vistara News

Israel Palestine War: ಗಾಜಾ ಆಸ್ಪತ್ರೆ ಮೇಲೆ ರಾಕೆಟ್‌ ದಾಳಿಗೆ 500 ಜನ ಬಲಿ; ಉಗ್ರರೇ ಕೊಂದರೇ?

Gaza Hopital Attack

ಗಾಜಾ: ಇಸ್ರೇಲ್‌ ಹಾಗೂ ಹಮಾಸ್‌ ಉಗ್ರರ ನಡುವಿನ ಸಮರವು (Israel Palestine War) ತಾರಕಕ್ಕೇರಿದೆ. ಅಕ್ಟೋಬರ್‌ 7ರಂದು ಹಮಾಸ್‌ ಉಗ್ರರು (Hamas Terrorists) ಇಸ್ರೇಲ್‌ ಮೇಲೆ ದಾಳಿ ಆರಂಭಿಸಿದ ಬಳಿಕ ಇದುವರೆಗೆ ದಾಳಿ-ಪ್ರತಿದಾಳಿಯಲ್ಲಿ ಎರಡೂ ದೇಶಗಳ ಸಾವಿರಾರು ಮಂದಿ ಮೃತಪಟ್ಟಿದ್ದಾರೆ. ಇಷ್ಟಾದರೂ ಇಸ್ರೇಲ್‌ ಮೇಲೆ ಹಮಾಸ್‌ ಉಗ್ರರು, ಗಾಜಾ ಮೇಲೆ ಇಸ್ರೇಲ್‌ ಸೇನೆ ದಾಳಿ ನಡೆಸುತ್ತಿದೆ. ಇದರ ಬೆನ್ನಲ್ಲೇ, ಗಾಜಾದಲ್ಲಿರುವ ಆಸ್ಪತ್ರೆ (Gaza Hospital) ಮೇಲೆ ರಾಕೆಟ್‌ ದಾಳಿ ಮಾಡಲಾಗಿದ್ದು, ಸುಮಾರು 500 ಜನ ಮೃತಪಟ್ಟಿದ್ದಾರೆ.

ಇಸ್ರೇಲ್‌ ಹಾಗೂ ಉಗ್ರರು ದಾಳಿ ಆರಂಭಿಸಿದ ಬಳಿಕ ನಡೆದ ಭೀಕರ ದಾಳಿ ಇದಾಗಿದೆ ಎಂದೇ ಹೇಳಲಾಗುತ್ತಿದೆ. ರಾತ್ರೋರಾತ್ರಿ ನಡೆದ ವಾಯುದಾಳಿಯಲ್ಲಿ ಮಹಿಳೆಯರು, ಮಕ್ಕಳು, ಹಿರಿಯರು ಸೇರಿ 500 ಜನ ಮೃತಪಟ್ಟಿದ್ದಾರೆ. ಹಾಗೆಯೇ, ಆಸ್ಪತ್ರೆಯಲ್ಲಿದ್ದ ನೂರಾರು ಜನ ಗಾಯಗೊಂಡಿದ್ದಾರೆ. ಇಡೀ ಆಸ್ಪತ್ರೆ ಈಗ ಮಸಣದಂತಾಗಿದ್ದು, ಗಾಯಗೊಂಡವರು, ಸಂಬಂಧಿಕರನ್ನು ಕಳೆದುಕೊಂಡವರ ಆಕ್ರಂದನ ಮುಗಿಲುಮುಟ್ಟಿದೆ ಎಂದು ತಿಳಿದುಬಂದಿದೆ.

ದಾಳಿ ಮಾಡಿದ್ದು ಯಾರು?

ಗಾಜಾ ಸರ್ಕಾರಿ ಆಸ್ಪತ್ರೆ ಮೇಲೆ ದಾಳಿ ಮಾಡಿದ್ದು ಯಾರು ಎಂಬ ಪ್ರಶ್ನೆ ಈಗ ಎಲ್ಲರನ್ನೂ ಕಾಡುತ್ತಿದೆ. ಗಾಜಾ ನಗರದಲ್ಲಿರುವ ನಾಗರಿಕರನ್ನು ಗುರಿಯಾಗಿಸಿ ಇಸ್ರೇಲ್‌ ದಾಳಿ ಮಾಡುತ್ತಿದೆ. ನಾಗರಿಕರನ್ನೂ ನಿರ್ನಾಮ ಮಾಡುವುದು ಇಸ್ರೇಲ್‌ ಗುರಿಯಾಗಿದೆ ಎಂದು ಗಾಜಾ ಸಿವಿಲ್‌ ಡಿಫೆನ್ಸ್‌ ಚೀಫ್‌ ಆರೋಪ ಮಾಡಿದ್ದಾರೆ. ಆದರೆ, ಇಸ್ರೇಲ್‌ ಈ ಆರೋಪವನ್ನು ತಳ್ಳಿಹಾಕಿದೆ. “ಹಮಾಸ್‌ ಉಗ್ರರು ರಾಕೆಟ್‌ ದಾಳಿ ಮಾಡುವಾಗ ಎಸಗಿದ ತಪ್ಪಿನಿಂದಾಗಿ ಪ್ಯಾಲೆಸ್ತೀನ್‌ನಲ್ಲಿಯೇ ಅದು ಆಸ್ಪತ್ರೆ ಮೇಲೆ ಬಿದ್ದಿದೆ” ಎಂದು ಹೇಳಿದೆ.

ಇಸ್ರೇಲ್‌ ಹಾಗೂ ಹಮಾಸ್‌ ಉಗ್ರರ ಸಮರವು ತಾರಕಕ್ಕೇರಿದೆ. ಇಸ್ರೇಲ್‌ನಲ್ಲಿ ಮನೆ ಮನೆಗೆ ನುಗ್ಗಿ ಹಮಾಸ್‌ ಉಗ್ರರು ಜನರನ್ನು ಕೊಲೆ ಮಾಡುತ್ತಿದ್ದಾರೆ. ಇತ್ತ ಇಸ್ರೇಲ್‌ ಕೂಡ ಗಾಜಾಪಟ್ಟಿ ಮೇಲೆ ಪ್ರತಿದಾಳಿ ನಡೆಸುತ್ತಿದೆ. ಲಕ್ಷಾಂತರ ಜನರಿಗೆ ಗಾಜಾ ನಗರ ತೊರೆಯುವಂತೆ ಸೂಚಿಸಿದೆ. ಇಷ್ಟಾದರೂ ಗಾಜಾ ನಗರದಿಂದ ಜನ ಬೇರೆಡೆ ಹೋಗದ ಕಾರಣ ಇಸ್ರೇಲ್‌ ಸೇನೆಯೇ ಆಸ್ಪತ್ರೆ ಮೇಲೆ ದಾಳಿ ನಡೆಸಿದೆ ಎಂದು ಹೇಳಲಾಗುತ್ತಿದೆ. ಒಟ್ಟಿನಲ್ಲಿ ಇಸ್ರೇಲ್‌ ಹಾಗೂ ಹಮಾಸ್‌ ಉಗ್ರರ ನಡುವಿನ ಸಮರದಲ್ಲಿ ಜನ ಮಾತ್ರ ಬಲಿಯಾಗುತ್ತಿದ್ದಾರೆ.

Exit mobile version