ಗಾಜಾ: ಯುದ್ಧಪೀಡಿತ (Israel Palestine War) ಗಾಜಾದಲ್ಲಿ (Gaza Strip) ಸಂತ್ರಸ್ತರಿಗಾಗಿ ವಿಮಾನದಿಂದ ಎಸೆಯಲಾದ ಏರ್‌ಡ್ರಾಪ್ (Air Drop), ಕೆಳಗಿದ್ದ 5 ಜನರನ್ನು ಕೊಂದಿದೆ. ಏರ್‌ಡ್ರಾಪ್ ಅನ್ನು ಹೊಂದಿದ್ದ ಪ್ಯಾರಾಚೂಟ್ (Parachute) ತೆರೆಯಲು ವಿಫಲವಾದ ಕಾರಣ ನೆಲಕ್ಕಪ್ಪಳಿಸಿ ಅಲ್ಲಿಂದ 5 ಮಂದಿ ಸತ್ತು, 10 ಮಂದಿ ಗಾಯಗೊಂಡರು.
ಶುಕ್ರವಾರ ಪ್ಯಾಲೇಸ್ಟಿನಿಯನ್ ಪ್ರದೇಶದ ಉತ್ತರದಲ್ಲಿ ಮಾನವೀಯ ನೆರವಾಗಿ ಎಸೆಯಲಾದ ಏರ್‌ಡ್ರಾಪ್ ಐದು ಜನರನ್ನು ಕೊಂದು 10 ಮಂದಿಯನ್ನು ಗಾಯಗೊಳಿಸಿತು. ಗಾಯಾಳುಗಳನ್ನು ಗಾಜಾ ನಗರದ ಅಲ್-ಶಿಫಾ ಆಸ್ಪತ್ರೆಗೆ ಕರೆದೊಯ್ಯಲಾಗಿದೆ ಎಂದು ತುರ್ತು ಚಿಕಿತ್ಸಾ ವಿಭಾಗದ ಮುಖ್ಯ ನರ್ಸ್ ಮೊಹಮ್ಮದ್ ಅಲ್-ಶೇಖ್ ತಿಳಿಸಿದ್ದಾರೆ.
ಕರಾವಳಿಯ ಅಲ್-ಶಾತಿ ನಿರಾಶ್ರಿತರ ಶಿಬಿರದ ಉತ್ತರದಲ್ಲಿ ಈ ಮಾರಣಾಂತಿಕ ಏರ್‌ಡ್ರಾಪ್ ಸಂಭವಿಸಿದೆ. ಶಿಬಿರದ ಪ್ರತ್ಯಕ್ಷಸಾಕ್ಷಿಯೊಬ್ಬರ ಪ್ರಕಾರ, ಅವರು ಮತ್ತು ಅವರ ಸಹೋದರ ಆಹಾರದ ಚೀಲ ಪಡೆಯುವ ಭರವಸೆಯಲ್ಲಿ, ಇಳಿಯುತ್ತಿದ್ದ ಪ್ಯಾರಾಚೂಟ್ ಅನ್ನು ಅನುಸರಿಸಿದ್ದರು. ಆದರೆ ನಿರೀಕ್ಷಿಸಿದಂತೆ ಪ್ಯಾರಾಚೂಟ್ ತೆರೆಯಲಿಲ್ಲ. ಮನೆಯೊಂದರ ಛಾವಣಿಯ ಮೇಲೆ ರಾಕೆಟ್‌ನಂತೆ ಬಂದು ಬಿದ್ದಿತು. ಸಹಾಯದ ಪ್ಯಾಕೇಜ್‌ಗಳು ಬಿದ್ದ ಮನೆಯ ಛಾವಣಿಯ ಮೇಲೆ ತಂಗಿದ್ದ ಐವರು ಸತ್ತು ಹಲವಾರು ಮಂದಿ ಗಾಯಗೊಂಡರು.
ಉತ್ತರ ಗಾಜಾದಲ್ಲಿ ಏರ್‌ಡ್ರಾಪ್‌ಗಳನ್ನು ಯುನೈಟೆಡ್ ಸ್ಟೇಟ್ಸ್ ಮತ್ತು ಜೋರ್ಡಾನ್ ಹಾಕುತ್ತಿವೆ. ಅಲ್ಲಿ ಸಾವಿರಾರು ಜನರು ಐದು ತಿಂಗಳಿಗಿಂತಲೂ ಹೆಚ್ಚು ಕಾಲದಿಂದ ಯುದ್ಧದ ನಂತರದ ಭೀಕರ ಪರಿಸ್ಥಿತಿಗಳನ್ನು ಎದುರಿಸುತ್ತಿದ್ದಾರೆ.
ಶುಕ್ರವಾರದ ಈ ಮಾರಣಾಂತಿಕ ಆಹಾರ ಎಸೆತ ಜೋರ್ಡಾನ್‌ನದ್ದಲ್ಲ ಎಂದು ಅಲ್ಲಿನ ಮಿಲಿಟರಿ ಮೂಲವೊಂದು ತಿಳಿಸಿದೆ. “ಶುಕ್ರವಾರ ಗಾಜಾದಲ್ಲಿ ಪ್ಯಾರಾಚೂಟ್ ತೆರೆಯದೆ ಪ್ಯಾಕ್ ನೆಲಕ್ಕೆ ಬೀಳಲು ಕಾರಣವಾದ ತಾಂತ್ರಿಕ ದೋಷ ಜೋರ್ಡಾನ್ ವಿಮಾನದಿಂದಲ್ಲ” ಎಂದು ಮೂಲಗಳು ತಿಳಿಸಿವೆ.
“ಇಂಥ ಏರ್‌ಡ್ರಾಪ್‌ಗಳು ನಿಷ್ಫಲ ಮತ್ತು ಅಪಾಯಕಾರಿ” ಎಂದು ಹಮಾಸ್ ನಡೆಸುತ್ತಿರುವ ಗಾಜಾದಲ್ಲಿನ ಮಾಧ್ಯಮ ಹೇಳಿದೆ. ಭೂಮಿ ಮೂಲಕ ಒದಗಿಸುವ ನೆರವಿಗೆ ಏರ್‌ಡ್ರಾಪ್ ಪರ್ಯಾಯ ಆಗಲಾರದು ಎಂದು ವಿಶ್ವಸಂಸ್ಥೆಯೂ ಹೇಳಿತ್ತು. ಗಾಜಾವನ್ನು ತಲುಪಲು ಹೆಚ್ಚಿನ ಟ್ರಕ್‌ಗಳಿಗೆ ಅನುಮತಿ ನೀಡಬೇಕೆಂದು ಅದು ಒತ್ತಾಯಿಸಿದೆ.
ಇದನ್ನೂ ಓದಿ: Missile Attack: ಇಸ್ರೇಲ್ ಮೇಲೆ ಕ್ಷಿಪಣಿ ದಾಳಿ; ಕೇರಳ ಮೂಲದ ವ್ಯಕ್ತಿ ಸಾವು