ಜೆರುಸಲೇಂ: ಪ್ಯಾಲೆಸ್ತೀನ್‌ನ ಹಮಾಸ್ ಉಗ್ರರು ಅಕ್ಟೋಬರ್ 7ರಂದು ಇಸ್ರೇಲ್ ಮೇಲೆ ರಾಕೆಟ್ ದಾಳಿ (Israel Palestine War) ಆರಂಭಿಸಿದ ಬಳಿಕ ಇಸ್ರೇಲ್ ನೀಡುತ್ತಿರುವ ತಿರುಗೇಟಿಗೆ ಹಮಾಸ್ ಉಗ್ರರು (Israel Palestine War) ಹಾಗೂ ಗಾಜಾ ನಗರದ ಜನ ತತ್ತರಿಸಿಹೋಗಿದ್ದಾರೆ. ಗಾಜಾ ನಗರವನ್ನು (Gaza City) ಇಸ್ರೇಲ್ ಸೈನಿಕರು ಪ್ರವೇಶಿಸಿದ್ದು, ದಾಳಿ ಮುಂದುವರಿಸಿದ್ದಾರೆ. ಹಾಗಾಗಿ, ಗಾಜಾ ನಗರದಲ್ಲಿ ಇಸ್ರೇಲ್ ಕದನ ವಿರಾಮ ಘೋಷಿಸಬೇಕು ಎಂದು ವಿಶ್ವಸಂಸ್ಥೆಯಲ್ಲಿ ನಿರ್ಣಯ ಕೈಗೊಳ್ಳಲಾಗಿದೆ. ಅಮೆರಿಕ ಕೂಡ ಗಾಜಾ ನಗರವನ್ನು ಇಸ್ರೇಲ್ ವಶಪಡಿಸಿಕೊಳ್ಳುವುದು ಸರಿಯಲ್ಲ ಎಂದಿದೆ. ಇದರ ಬೆನ್ನಲ್ಲೇ, “ಪ್ರತಿದಿನ ನಾಲ್ಕು ಗಂಟೆ ಯುದ್ಧ ನಿಲ್ಲಿಸಲಾಗುವುದು” ಎಂದು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಘೋಷಿಸಿದ್ದಾರೆ.
ಸುದ್ದಿಸಂಸ್ಥೆಯೊಂದರ ಜತೆ ಮಾತನಾಡಿದ ಬೆಂಜಮಿನ್ ನೆತನ್ಯಾಹು, “ನಾವು ಪ್ಯಾಲೆಸ್ತೀನ್ ನಾಗರಿಕರನ್ನು ಬೇರೆ ಸ್ಥಳಾಂತರಗೊಳಿಸಲು, ಅವರನ್ನು ನಿರಾಶ್ರಿತರನ್ನಾಗಿ ಮಾಡಲು ಬಯಸುವುದಿಲ್ಲ. ಉತ್ತರ ಗಾಜಾದಲ್ಲಿ ಪ್ರತಿ ದಿನ ನಾವು ನಾಲ್ಕು ಗಂಟೆ ಯುದ್ಧ ನಿಲ್ಲಿಸುತ್ತೇವೆ. ಗಾಜಾ ನಾಗರಿಕರಿಗೆ ಮಾನವೀಯ ನೆರವು ಒದಗಿಸಲು, ಅವರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲು ಅನುಕೂಲವಾಗಲಿವೆ ಎಂದು ಪ್ರತಿ ದಿನ ನಾಲ್ಕು ಗಂಟೆ ದಾಳಿಯನ್ನು ನಿಲ್ಲಿಸುತ್ತೇವೆ” ಎಂದು ತಿಳಿಸಿದ್ದಾರೆ. ಹಾಗೆಯೇ, ಐದು ದಿನ ದಾಳಿ ನಿಲ್ಲಿಸಲು ಅವರು ನಿರಾಕರಿಸಿದ್ದಾರೆ. ಇಸ್ರೇಲ್ ಒತ್ತೆಯಾಳುಗಳನ್ನು ಬಿಡುಗಡೆ ಮಾಡದ ಹೊರತು ಹಿಂದಡಿ ಇಡುವುದಿಲ್ಲ ಎಂದಿದ್ದಾರೆ. ಇದರ ಬೆನ್ನಲ್ಲೇ, ಗಾಜಾ ನಗರದ ಆಸ್ಪತ್ರೆ ಮೇಲೆ ಇಸ್ರೇಲ್ ದಾಳಿ ನಡೆಸುತ್ತಿದೆ ಎಂದು ಗಾಜಾ ನಗರದ ಅಧಿಕಾರಿಗಳು ಆರೋಪಿಸಿದ್ದಾರೆ.
#Israel's military is performing "exceptionally well" in its offensive against Hamas in the #Gaza Strip, PM #BenjaminNetanyahu said Thursday, stressing Israel does not plan to reoccupy the Palestinian territory. @netanyahu pic.twitter.com/OthSvVBadS
— TRENDS (@mena_trends) November 10, 2023
ಯುದ್ಧ ನಿಲ್ಲುವುದಿಲ್ಲ ಎಂದ ನೆತನ್ಯಾಹು
ಗಾಜಾ ನಗರದಲ್ಲಿರುವ ಹಮಾಸ್ ಉಗ್ರರನ್ನು ಸದೆಬಡಿಯದ ಹೊರತು ದಾಳಿ ನಿಲ್ಲುವುದಿಲ್ಲ ಎಂದು ಬೆಂಜಮಿನ್ ನೆತನ್ಯಾಹು ಘೋಷಣೆ ಮಾಡಿದ್ದಾರೆ. “ಇಸ್ರೇಲ್ ದಾಳಿಯಿಂದ ಸಾಮಾನ್ಯ ಜನರಿಗೆ ತೊಂದರೆಯಾಗಬಾರದು ಎಂದು ಪ್ರತಿದಿನ ನಾಲ್ಕು ಗಂಟೆಯಷ್ಟೇ ದಾಳಿ ನಿಲ್ಲಿಸುತ್ತಿದ್ದೇವೆ. ಹಾಗಂತ ಹಮಾಸ್ ಉಗ್ರರ ವಿರುದ್ಧ ನಡೆಯುತ್ತಿರುವ ದಾಳಿಯನ್ನು ನಿಲ್ಲಿಸುವುದಿಲ್ಲ. ನಾವು ಗಾಜಾ ನಗರವನ್ನು ವಶಪಡಿಸಿಕೊಳ್ಳಲು, ಇಡೀ ನಗರದ ಮೇಲೆ ಪ್ರಾಬಲ್ಯ ಸಾಧಿಸಲು ಬಯಸುತ್ತಿಲ್ಲ. ಆದರೆ, ಉಗ್ರರನ್ನು ಮಾತ್ರ ಸುಮ್ಮನೆ ಬಿಡುವುದಿಲ್ಲ” ಎಂದಿದ್ದಾರೆ.
ಇದನ್ನೂ ಓದಿ: Israel- Palestine War: 1 ಲಕ್ಷ ಪ್ಯಾಲೆಸ್ತೀನ್ ಕಾರ್ಮಿಕರ ಬದಲಿಗೆ ಭಾರತೀಯರ ನೇಮಕ: ಇಸ್ರೇಲ್
ಗಾಜಾ ನಗರದಲ್ಲಿ 10 ಸಾವಿರ ಜನರ ಸಾವು
ಇಸ್ರೇಲ್ ಹಾಗೂ ಹಮಾಸ್ ಉಗ್ರರ ನಡುವಿನ ಸಮರದಲ್ಲಿ ಮೃತಪಟ್ಟವರ ಸಂಖ್ಯೆ 11 ಸಾವಿರ ದಾಟಿದೆ. ಅದರಲ್ಲೂ, ಹಮಾಸ್ ಉಗ್ರರ ತಾಣವಾದ ಗಾಜಾ ನಗರದ ಮೇಲೆ ಇಸ್ರೇಲ್ ನಿರಂತರವಾಗಿ ದಾಳಿ ನಡೆಸುತ್ತಿದ್ದು, ನಗರದಲ್ಲಿ ಇದುವರೆಗೆ 10 ಸಾವಿರಕ್ಕೂ ಜನ ಮೃತಪಟ್ಟಿದ್ದಾರೆ ಎಂದು ಗಾಜಾ ಆರೋಗ್ಯ ಸಚಿವಾಲಯವೇ ಮಾಹಿತಿ ನೀಡಿದೆ. ಇನ್ನೂ 3 ಸಾವಿರಕ್ಕೂ ಅಧಿಕ ಜನ ಕಟ್ಟಡದ ಅವಶೇಷಗಳಲ್ಲಿ ಸಿಲುಕಿದ್ದು, ಅವರ ರಕ್ಷಣೆಗೆ ಕಾರ್ಯಾಚರಣೆ ನಡೆಯುತ್ತಿದೆ ಎಂಬುದಾಗಿ ಮಾಹಿತಿ ನೀಡಿದೆ. ಇನ್ನು ಹಮಾಸ್ ಉಗ್ರರ ದಾಳಿಗೆ ಇಸ್ರೇಲ್‌ನಲ್ಲಿ 1,400 ಜನ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ. ಇದರ ಮಧ್ಯೆಯೇ ಅಮೆರಿಕ ಹಾಗೂ ಇರಾನ್ ಸಂಘರ್ಷವು ಆತಂಕ ಮೂಡಿಸಿದೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ