Site icon Vistara News

Israel Palestine War: ಇಸ್ರೇಲ್‌ ಆರಂಭ ಅಷ್ಟೇ, ಇಡೀ ಭೂಮಿಯೇ ನಮ್ಮ ಗುರಿ: ಎಚ್ಚರಿಕೆ ನೀಡಿದ ಹಮಾಸ್‌ ಕಮಾಂಡರ್‌

Hamas Commander Mahmoud al-Zahar

ಟೆಲ್‌ ಅವಿವ್:‌ ಇಸ್ರೇಲ್‌ ಆರಂಭ ಅಷ್ಟೇ. ಮುಂದೊಂದು ದಿನ ಇಡೀ ಭೂಮಂಡಲವೇ ನಮ್ಮ ಕಾನೂನಿನ ಅಡಿ ಬರಲಿದೆ ಎಂದು ಹಮಾಸ್‌ (Hamas terrorists) ಕಮಾಂಡರ್ ಮಹಮೂದ್ ಅಲ್- ಜಹರ್ (Hamas Commander Mahmoud Al-Zahar) ಎಚ್ಚರಿಸಿದ್ದಾನೆ. ಇಸ್ರೇಲ್- ಹಮಾಸ್‌ ಸಂಘರ್ಷದ (Israel Palestine War) ನಡುವೆ ಈ ಹಮಾಸ್ ಕಮಾಂಡರ್‌ನ ಸಂದೇಶ ಹೊರಬಿದ್ದಿದೆ.

ಹಮಾಸ್‌ನ ಪ್ರಮುಖನಾದ ಈತ ಒಂದು ನಿಮಿಷಕ್ಕೂ ಹೆಚ್ಚು ಅವಧಿಯ ವೀಡಿಯೊ ತುಣುಕನ್ನು ಅಂತರ್ಜಾಲದಲ್ಲಿ ಹರಿಬಿಟ್ಟಿದ್ದಾನೆ. ಇದು ಒಂದು ವರ್ಷ ಹಳೆಯ ವಿಡಿಯೋ ಆಗಿದೆ. ಆದರೆ ಇಸ್ರೇಲ್‌ ಮೇಲಿನ ಮಾರಕ ದಾಳಿಯ ಬಳಿಕ ಮತ್ತೆ ಮೇಲೆದ್ದು ಬಂದಿದ್ದು, ವೈರಲ್‌ (viral video) ಆಗುತ್ತಿದೆ.

“ಇಸ್ರೇಲ್ ಮೊದಲ ಗುರಿ ಮಾತ್ರ. ಇಡೀ ಗ್ರಹವು ನಮ್ಮ ಕಾನೂನಿನ ಅಡಿಯಲ್ಲಿರುತ್ತದೆ. ಭೂಗ್ರಹದ ಸಂಪೂರ್ಣ 51 ಕೋಟಿ ಚದರ ಕಿಲೋಮೀಟರ್‌ಗಳು ನಮ್ಮ ಆಡಳಿತದಡಿಯಲ್ಲಿ ಬರಲಿವೆ. ಈ ಆಡಳಿತದಡಿಯಲ್ಲಿ ಪ್ಯಾಲೆಸ್ತೀನ್‌, ಲೆಬನಾನ್, ಸಿರಿಯಾದಂಥ ಅರಬ್ ದೇಶಗಳಲ್ಲಿ ನಡೆದಂತಹ ಅನ್ಯಾಯ, ಹತ್ಯೆಗಳು, ಅಪರಾಧಗಳು, ದಬ್ಬಾಳಿಕೆ ನಡೆಯದಂಥ ವ್ಯವಸ್ಥೆ ಅದಾಗಿರುತ್ತದೆʼʼ ಎಂದಿದ್ದಾನೆ ಜಹರ್.‌ ಡಿಸೆಂಬರ್ 2022ರಲ್ಲಿ MEMRI ಟಿವಿಯಲ್ಲಿ ಈತನ ಸಂದರ್ಶನದ ತುಣುಕು ಪ್ರಸಾರವಾಗಿದೆ.

ವೀಡಿಯೊ ಕಾಣಿಸಿಕೊಂಡ ಕೆಲವೇ ಗಂಟೆಗಳ ನಂತರ, ಇಸ್ರೇಲಿ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರು ಹಮಾಸ್ ಉಗ್ರರ ವಿರುದ್ಧ ಹೋರಾಟವನ್ನು ಮುಂದುವರಿಸುವ ಶಪಥವನ್ನು ಪುನರುಚ್ಚರಿಸಿದ್ದಾರೆ. ʼʼಹಮಾಸ್‌ ಗುಂಪಿನ ಪ್ರತಿಯೊಬ್ಬ ಸದಸ್ಯನೂ ಸತ್ತ ವ್ಯಕ್ತಿ” ಎಂದು ಅವರು ಕಿಡಿಕಾರಿದ್ದಾರೆ.

“ಹಮಾಸ್, ದಾಯೆಶ್ (ಇಸ್ಲಾಮಿಕ್ ಸ್ಟೇಟ್ ಗುಂಪು) ಆಗಿದೆ. ಇಡೀ ಪ್ರಪಂಚ ಒಟ್ಟಾಗಿ ದಾಯೆಶ್ ಅನ್ನು ನಾಶಪಡಿಸಿದಂತೆ ನಾವು ಅವರನ್ನು ಪುಡಿಮಾಡಿ ನಾಶಪಡಿಸುತ್ತೇವೆ” ಎಂದು ಅವರು ಟಿವಿಗೆ ನೀಡಿದ ಹೇಳಿಕೆಯಲ್ಲಿ ಹೇಳಿದ್ದಾರೆ.

ಏತನ್ಮಧ್ಯೆ, ಇಸ್ರೇಲಿ ಸೈನಿಕರು ಮತ್ತು ನಾಗರಿಕರನ್ನು ಒತ್ತೆಯಾಳಾಗಿ ಹಿಡಿದಿರುವ ಹಮಾಸ್ ಕಾರ್ಯಕರ್ತರು ಇಸ್ರೇಲ್ನಿಂದ ಯಾವುದೇ ಎಚ್ಚರಿಕೆಯಿಲ್ಲದೆ ಗಾಜಾದ ಪ್ರತಿ ಮನೆಗೆ ಬಂಧಿತನನ್ನು ಗಲ್ಲಿಗೇರಿಸುವುದಾಗಿ ಬೆದರಿಕೆ ಹಾಕಿದ್ದಾರೆ. ಹಮಾಸ್ ತನ್ನ ಬೆದರಿಕೆಯನ್ನು ನಡೆಸಿದ ಯಾವುದೇ ಸೂಚನೆಯಿಲ್ಲ.

ಇಸ್ರೇಲ್ ತುರ್ತುಸ್ಥಿತಿ ಸರ್ಕಾರವನ್ನು ರಚಿಸಿದೆ. ಪ್ರಧಾನಿ ಬೆಂಜಮಿನ್ ನೆತನ್ಯಾಹು (Israeli Prime Minister Benjamin Netanyahu) ಮಾಜಿ ರಕ್ಷಣಾ ಸಚಿವ ಬೆನ್ನಿ ಗ್ಯಾಂಟ್ಜ್ ಅವರೊಂದಿಗೆ ಯುದ್ಧ ಕ್ಯಾಬಿನೆಟ್‌ನಲ್ಲಿ ಕುಳಿತಿದ್ದಾರೆ. ಪ್ಯಾಲೆಸ್ತೀನ್‌ ಕರಾವಳಿ ಪ್ರದೇಶದಲ್ಲಿ ಹಮಾಸ್ ಅನ್ನು ಬೇರುಸಹಿತ ಕಿತ್ತೊಗೆಯಲು ಇಸ್ರೇಲಿ ಮಿಲಿಟರಿ ಗಾಜಾವನ್ನು ವಾಯುದಾಳಿಗಳ ಮೂಲಕ ಧ್ವಂಸ ಮಾಡುತ್ತಿದೆ.

ಹಮಾಸ್ ISISಗಿಂತ ಕೆಟ್ಟದಾಗಿದೆ ಎಂದು ಕರೆದಿರುವ ನೆತನ್ಯಾಹು, ಜನರನ್ನು ಜೀವಂತವಾಗಿ ಸುಡುವುದು, ತಲೆ ಕತ್ತರಿಸುವುದು ಸೇರಿದಂತೆ ಹಮಾಸ್‌ ಸದಸ್ಯರು ಮಾಡಿದ ಹಲವು ದೌರ್ಜನ್ಯಗಳನ್ನು ಪಟ್ಟಿ ಮಾಡಿದ್ದಾರೆ. ಇಸ್ರೇಲ್‌ನ ಪ್ರತಿಯೊಂದು ಕುಟುಂಬವೂ ದಾಳಿಯ ಸಂತ್ರಸ್ತರೊಂದಿಗೆ ಒಂದಲ್ಲ ಒಂದು ರೀತಿಯಲ್ಲಿ ಸಂಪರ್ಕ ಹೊಂದಿದೆ ಎಂದಿದ್ದಾರೆ.

ʼʼಇಸ್ರೇಲ್‌ ನಮ್ಮ ಮನೆ. ನಮ್ಮ ಮನೆಗಾಗಿ ನಾವೆಲ್ಲರೂ ಒಟ್ಟಾಗಿ ಹೋರಾಡುತ್ತೇವೆ. ಇಡೀ ಇಸ್ರೇಲ್ ತನ್ನ ಯೋಧರ ಬೆನ್ನಿಗೆ ನಿಂತಿದೆ. ಇಸ್ರೇಲ್ ಗೆಲ್ಲುತ್ತದೆ ಎಂದಿದ್ದಾರೆ ನೆತನ್ಯಾಹು. “ನಾವೆಲ್ಲರೂ ಒಂದೇ; ನಾವೆಲ್ಲರೂ ಹೋರಾಟದಲ್ಲಿ ಸೇರಿಕೊಂಡಿದ್ದೇವೆ” ಎಂದು ಬೆನ್ನಿ ಗ್ಯಾಂಟ್ಜ್ ಘೋಷಿಸಿದ್ದಾರೆ.

ಇಸ್ರೇಲ್‌ ಗಾಜಾ ಪಟ್ಟಿಯಿಂದ (Gaza strip) ಹೊರ ಹೋಗಬಹುದಾದ ಎಲ್ಲ ಸಾಧ್ಯತೆಗಳನ್ನು ಬಂದ್‌ ಮಾಡಿದೆ. ಅಲ್ಲಿರುವ 23 ಲಕ್ಷ ಜನರಲ್ಲಿ ಹೆಚ್ಚಿನವರಿಗೆ ಈಗ ವಿದ್ಯುತ್ ಮತ್ತು ನೀರು ಬಂದಾಗಿದೆ. ಎರಡು ಕಡೆ ಇಸ್ರೇಲ್‌ನಿಂದ ಹಾಗೂ ಇನ್ನೊಂದು ಕಡೆ ಮೆಡಿಟರೇನಿಯನ್‌ ಸಮುದ್ರದಿಂದ ಸುತ್ತುವರಿದಿರುವ ಗಾಜಾ ಪಟ್ಟಿಯ ನಾಲ್ಕನೇ ಬದಿಯ ಗಡಿಯನ್ನು ಕೂಡ ಈಜಿಪ್ಟ್‌ ದೇಶ ಮುಚ್ಚಿದೆ.

ಇದನ್ನೂ ಓದಿ: Israel Palestine War: ಪ್ರತಿ ಉಗ್ರನ ಹೆಣ ಬೀಳುವುದು ನಿಶ್ಚಿತ ಎಂದ ಇಸ್ರೇಲ್;‌ 3,700 ಸಾವು

Exit mobile version