ನವದೆಹಲಿ: ಇಸ್ರೇಲ್ ಮೇಲೆ ಭೀಕರ ದಾಳಿ ನಡೆಸಿದ ಗಾಜಾ ಪಟ್ಟಿಯಲ್ಲೀಗ (Gaza Strip) ಕತ್ತೆ ಆವರಿಸಿದೆ. ಇಂಧನ ಕೊರತೆಯಿಂದಾಗಿ ಇಲ್ಲಿನ ಏಕೈಕ ಪವರ್ ಸ್ಟೇಷನ್ (Power Station) ಬುಧವಾರ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಿದೆ. ಇದರೊಂದಿಗೆ ಪ್ಯಾಲೆಸ್ತೀನಿಯರ ಏಕೈಕ ವಿದ್ಯುತ್ ಮೂಲ ಕೂಡ ಇಲ್ಲದಂತಾಗಿದ್ದು, ಭಾರೀ ತೊಂದರೆಯನ್ನು ಎದುರಿಸುತ್ತಿದ್ದಾರೆ. ಈ ಮಧ್ಯೆ, ಕಾಳಗದಲ್ಲಿ ಮೃತಪಟ್ಟವರ ಸಂಖ್ಯೆ 2,200ಕ್ಕೆ ಏರಿಕೆಯಾಗಿದೆ(Israel Palestine War).
ಇಸ್ರೇಲಿ ಬಾಂಬ್ ದಾಳಿ ಮತ್ತು ಮುತ್ತಿಗೆಗೆ ಒಳಗಾದ ಗಾಜಾ ಪಟ್ಟಿಯಲ್ಲಿರುವ ಏಕೈಕ ವಿದ್ಯುತ್ ಸ್ಥಾವರವು ಇಂಧನ ಖಾಲಿಯಾದ ನಂತರ ಬುಧವಾರ ಕಾರ್ಯವನ್ನು ನಿಲ್ಲಿಸಿದೆ ಎಂದು ಪ್ಯಾಲೇಸ್ಟಿನಿಯನ್ ಎನ್‌ಕ್ಲೇವ್ ವಿದ್ಯುತ್ ಪ್ರಾಧಿಕಾರ ಅಧಿಕೃತವಾಗಿ ತಿಳಿಸಿದೆ. ಗಾಜಾ ಪಟ್ಟಿಯಲ್ಲಿರುವ ಏಕೈಕ ವಿದ್ಯುತ್ ಸ್ಥಾವರವು ಮಧ್ಯಾಹ್ನ 2:00 ಗಂಟೆಗೆ ಕಾರ್ಯನಿರ್ವಹಿಸುವುದನ್ನು ನಿಲ್ಲಿಸಿತು” ಎಂದು ಪ್ರಾಧಿಕಾರದ ಮುಖ್ಯಸ್ಥ ಜಲಾಲ್ ಇಸ್ಮಾಯಿಲ್ ಹೇಳಿಕೆಯಲ್ಲಿ ತಿಳಿಸಿದ್ದಾರೆ. ವಿದ್ಯುತ್ ಸ್ಥಾವರಕ್ಕೆ ಇಂಧನದ ಕೊರತೆಯಿದೆ ಎಂದು ಪ್ರಾಧಿಕಾರವು ಈ ಮೊದಲೇ ಎಚ್ಚರಿಸಿತ್ತು.
ವಿದ್ಯುತ್ ಸ್ಥಾವರವು ಕೇವಲ 12 ಗಂಟೆಗಳ ಕಾಲ ಮಾತ್ರವೇ ಕಾರ್ಯಾಚರಣೆ ಮಾಡಬಲ್ಲದು, ಅಷ್ಟಕ್ಕೆ ಮಾತ್ರವೇ ಇಂಧನ ಲಭ್ಯವಿದೆ ಎಂದು ಅಧಿಕಾರಿಗಳು ಈ ಮೊದಲೇ ಎಚ್ಚರಿಸಿದ್ದರು. ಗಾಜಾಕ್ಕೆ ವಿದ್ಯುತ್ ಪೂರೈಕೆಯನ್ನು ಕಡಿತಗೊಳಿಸುವುದಾಗಿ ಇಸ್ರೇಲ್ ಸೋಮವಾರ ಘೋಷಿಸಿದ ನಂತರ ವಿದ್ಯುತ್ ಸ್ಥಗಿತಗೊಂಡಿದೆ. ಹಮಾಸ್ ದಾಳಿಗೆ ಪ್ರತಿಕ್ರಿಯೆಯಾಗಿ ಅದರ “ಸಂಪೂರ್ಣ ಮುತ್ತಿಗೆ” ಭಾಗವಾಗಿ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ.
ವಿದ್ಯುತ್ ಪೂರೈಕೆ ಸ್ಥಗಿತಗೊಂಡ ಬೆನ್ನಲ್ಲೇ ಗಾಜಾ ಪಟ್ಟಿಯಲ್ಲಿನ ಕೆಲವರು ಜನರೇಟರ್‌ಗಳನ್ನು ಬಳಸಿದರು. ಆದರೂ, ಇಂಧನ ಕೊರತೆಯಿಂದ ಈ ಬ್ಯಾಕ್‌ಅಪ್ ಬಹಳ ಗಂಟೆಗಳ ಕಾಲ ಬಾಳಿಕೆ ಬರಲಿಲ್ಲ. ವಿದ್ಯುತ್ ಸಂಪೂರ್ಣ ಸ್ಥಗಿತಗೊಂಡಿದ್ದರಿಂದ ಗಾಜಾದಲ್ಲಿ ವಾಸಿಸುವ ಜನರ ಸಮಸ್ಯೆಗಳು ಹೆಚ್ಚಾಗಿವೆ. ಯುದ್ಧದ ಆರಂಭದಿಂದಲೂ, ಗಾಜಾ ಪಟ್ಟಿಯಲ್ಲಿರುವ ಜನರು ಅಗತ್ಯ ವಸ್ತುಗಳ ಕೊರತೆಯನ್ನು ಎದುರಿಸುತ್ತಿದ್ದಾರೆ. ವಿದ್ಯುತ್ ಕೊರತೆಯಿಂದಾಗಿ ಗಾಜಾ ಪಟ್ಟಿಯಲ್ಲಿರುವ ಗಾಯಾಳುಗಳಿಗೆ ಚಿಕಿತ್ಸೆ ನೀಡಲು ಆಸ್ಪತ್ರೆಗಳಿಗೂ ಕೂಡ ತೊಂದರೆಯಾಗಿದೆ.
ಈ ಸುದ್ದಿಯನ್ನೂ ಓದಿ: Israel Palestine War: ಭಾರತದ ಬೆನ್ನಲ್ಲೇ ಬ್ರಿಟನ್ ಬೆಂಬಲ; ಸಂಸತ್ ಮೇಲೆ ಇಸ್ರೇಲ್ ಧ್ವಜ!
2,200 ಜನರ ಸಾವು
ಹಮಾಸ್ ಮತ್ತು ಇಸ್ರೇಲ್ ನಡುವಿನ ಈ ಯುದ್ಧದಲ್ಲಿ ಈ ವರೆಗೆ ಎರಡೂ ಕಡೆಗಳಿಂದ 2,200 ಜನರು ಮೃತಪಟ್ಟಿದ್ದಾರೆ. ಮೃತರ ಸಂಖ್ಯೆ ಇನ್ನೂ ಹೆಚ್ಚಾಗುವ ಸಾಧ್ಯತೆಗಳಿವೆ. ಹಮಾಸ್‌ನ ವಾರಾಂತ್ಯದ ದಾಳಿಯು ಇಸ್ರೇಲಿ ಆಕ್ರಮಣದ ಅಡಿಯಲ್ಲಿ ಪ್ಯಾಲೆಸ್ಟೀನಿಯಾದ ಹದಗೆಟ್ಟ ಪರಿಸ್ಥಿತಿಗಳಿಗೆ ಪ್ರತೀಕಾರವಾಗಿದೆ ಎಂದು ಉಗ್ರಗಾಮಿ ಗುಂಪು ಹೇಳಿಕೊಂಡಿದೆ. ದಾಳಿಯು ಏನೂ ಒಳ್ಳೆಯದನ್ನು ಮಾಡಲಿಲ್ಲ ಆದರೆ ಗಾಜಾದಲ್ಲಿ ಗುಂಪಿನ ಹಿಡಿತವನ್ನು ಹತ್ತಿಕ್ಕುವ ಇಸ್ರೇಲ್‌ನ ನಿರ್ಣಯವನ್ನು ಕೆರಳಿಸಿದೆ ಎಂದು ಹೇಳಬಹುದಷ್ಟೇ.
ಶನಿವಾರದ ದಾಳಿಯಿಂದ ಇಸ್ರೇಲ್‌ನಲ್ಲಿ 155 ಸೈನಿಕರು ಸೇರಿದಂತೆ 1,200 ಕ್ಕೂ ಹೆಚ್ಚು ಜನರು ಮೃತಪಟ್ಟಿದ್ದಾರೆ. ಗಾಜಾದಲ್ಲಿ, 1,050ಕ್ಕೂ ಹೆಚ್ಚು ಜನರು ಮೃತಪಟ್ಟಿದ್ದಾರೆ ಮತ್ತು 5,100 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ ಎಂದು ಆರೋಗ್ಯ ಸಚಿವಾಲಯ ಹೇಳಿದೆ. ವಿಶ್ವಸಂಸ್ಥೆಯ ಪ್ಯಾಲೇಸ್ಟಿನಿಯನ್ ನಿರಾಶ್ರಿತರ ಸಂಸ್ಥೆ ಗಾಜಾದಲ್ಲಿ 250,000 ಜನರನ್ನು ಸ್ಥಳಾಂತರಿಸಲಾಗಿದೆ ಎಂದು ಹೇಳಿದೆ.