Site icon Vistara News

Israel Palestine War: ಇಸ್ರೇಲ್‌ ಮೇಲೆ ದಾಳಿಗೆ ಆದೇಶಿಸಿದ್ದ ಹಮಾಸ್ ಉಗ್ರನ ಹತ್ಯೆ

Hamas Commander Killed

Israel Palestine War: Hamas commander who directed October 7 attacks killed, says Israel

ಜೆರುಸಲೇಂ: ಹಮಾಸ್‌ ಉಗ್ರರನ್ನು ನಿರ್ನಾಮಗೊಳಿಸುವ ಶಪಥ ಮಾಡಿರುವ ಇಸ್ರೇಲ್‌ ಸೇನೆಯು ಗಾಜಾ ನಗರದ ಮೇಲಿನ ದಾಳಿಯನ್ನು (Israel Palestine War) ತೀವ್ರಗೊಳಿಸಿದೆ. ನೂರಾರು ಯುದ್ಧ ಟ್ಯಾಂಕರ್‌ಗಳನ್ನು ಗಾಜಾ ಗಡಿಯಲ್ಲಿ (Gaza City) ನಿಯೋಜಿಸುವ ಮೂಲಕ ಪೂರ್ಣ ಪ್ರಮಾಣದ ದಾಳಿಗೆ ಇಸ್ರೇಲ್‌ ಸಿದ್ಧವಾಗಿದೆ. ಇದರ ಬೆನ್ನಲ್ಲೇ, ಉಗ್ರರ ನಿರ್ನಾಮದಲ್ಲಿ ಇಸ್ರೇಲ್‌ ಸೇನೆಗೆ ಭಾರಿ ಮುನ್ನಡೆ ದೊರೆತಿದೆ. ಅಕ್ಟೋಬರ್‌ 7ರಂದು ಇಸ್ರೇಲ್‌ ಮೇಲೆ ದಾಳಿಗೆ ಆದೇಶಿಸಿದ್ದ ಹಮಾಸ್‌ ಉಗ್ರ ಸಂಘಟನೆಯ ಕಮಾಂಡರ್‌ನನ್ನು ಇಸ್ರೇಲ್‌ ಸೈನಿಕರು ಹತ್ಯೆಗೈದಿದ್ದಾರೆ.

ಹಮಾಸ್‌ ಉಗ್ರ ಸಂಘಟನೆಯ ಬೇಟ್‌ ಲಾಹಿಯಾ ಬೆಟಾಲಿಯನ್‌ ಕಮಾಂಡರ್‌ ಆಗಿರುವ ನಿಸಾಮ್‌ ಅಬು ಅಜಿನಾ ಎಂಬುವನನ್ನು ಇಸ್ರೇಲ್‌ ಸೇನೆಯು ಹೊಡೆದುರುಳಿಸಿದೆ ಎಂದು ಇಸ್ರೇಲ್‌ ಡಿಫೆನ್ಸ್‌ ಫೋರ್ಸ್‌ ತಿಳಿಸಿದೆ. ಇಸ್ರೇಲ್‌ ಮೇಲೆ ಸುಮಾರು 7 ಸಾವಿರಕ್ಕೂ ಅಧಿಕ ರಾಕೆಟ್‌ಗಳ ಮೂಲಕ ದಾಳಿ ಮಾಡಲು ಈತನೇ ಆದೇಶಿಸಿದ್ದ ಎಂದು ಇಸ್ರೇಲ್‌ ಸೇನೆ ತಿಳಿಸಿದೆ. ಇದರೊಂದಿಗೆ, ಉಗ್ರರ ವಿರುದ್ಧ ಸಮರ ಸಾರಿರುವ ಸೇನೆಗೆ ಭಾರಿ ಮುನ್ನಡೆ ದೊರೆತಂತೆ ಎಂದೇ ಹೇಳಲಾಗುತ್ತಿದೆ.

10 ಸಾವಿರದತ್ತ ಸಾವಿನ ಸಂಖ್ಯೆ

ಇಸ್ರೇಲ್‌ ಹಾಗೂ ಹಮಾಸ್‌ ಉಗ್ರರ ನಡುವಿನ ಸಮರದಲ್ಲಿ ಮೃತಪಟ್ಟವರ ಸಂಖ್ಯೆ 10 ಸಾವಿರ ಸಮೀಪಿಸಿದೆ. ಅದರಲ್ಲೂ, ಹಮಾಸ್‌ ಉಗ್ರರ ತಾಣವಾದ ಗಾಜಾ ನಗರದ ಮೇಲೆ ಇಸ್ರೇಲ್‌ ನಿರಂತರವಾಗಿ ದಾಳಿ ನಡೆಸುತ್ತಿದ್ದು, ನಗರದಲ್ಲಿ ಇದುವರೆಗೆ 8,525 ಜನ ಮೃತಪಟ್ಟಿದ್ದಾರೆ ಎಂದು ಗಾಜಾ ಆರೋಗ್ಯ ಸಚಿವಾಲಯವೇ ಮಾಹಿತಿ ನೀಡಿದೆ. ಇನ್ನೂ 2 ಸಾವಿರಕ್ಕೂ ಅಧಿಕ ಜನ ಕಟ್ಟಡದ ಅವಶೇಷಗಳಲ್ಲಿ ಸಿಲುಕಿದ್ದು, ಅವರ ರಕ್ಷಣೆಗೆ ಕಾರ್ಯಾಚರಣೆ ನಡೆಯುತ್ತಿದೆ ಎಂಬುದಾಗಿ ಮಾಹಿತಿ ನೀಡಿದೆ. ಇನ್ನು ಹಮಾಸ್‌ ಉಗ್ರರ ದಾಳಿಗೆ ಇಸ್ರೇಲ್‌ನಲ್ಲಿ 1,400 ಜನ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.

ಗಾಜಾ ನಗರ ಸರ್ವನಾಶ?

ಗಾಜಾ ನಗರದ ಮೇಲೆ ಪೂರ್ಣ ಪ್ರಮಾಣದ ದಾಳಿ ಮಾಡುವ ದಿಸೆಯಲ್ಲಿ ಇಸ್ರೇಲ್‌ ಯುದ್ಧ ಟ್ಯಾಂಕರ್‌ಗಳನ್ನು ನಿಯೋಜಿಸಿದೆ ಎಂದು ತಿಳಿದುಬಂದಿದೆ. ಯುದ್ಧ ಟ್ಯಾಂಕರ್‌ಗಳು, ಬಂಕರ್‌ಗಳು ಗಾಜಾ ನಗರದ ಗಡಿ ಸಮೀಪಿಸಿದ್ದು, ಶೀಘ್ರವೇ ಇಡೀ ನಗರವನ್ನು, ಹಮಾಸ್‌ ಉಗ್ರರನ್ನು ಸರ್ವನಾಶ ಮಾಡಲಾಗುತ್ತದೆ ಎಂದು ಹೇಳಲಾಗುತ್ತಿದೆ.

ಇದನ್ನೂ ಓದಿ: Israel Palestine War: ಇಸ್ರೇಲ್‌-ಪ್ಯಾಲೆಸ್ತೀನ್‌ ಬಿಕ್ಕಟ್ಟು; ಈಜಿಪ್ಟ್‌ ಅಧ್ಯಕ್ಷರ ಜತೆ ಮೋದಿ ಚರ್ಚೆ

ಗಾಜಾ ಗಡಿಯ ಬಳಿ ಇಸ್ರೇಲ್‌ ಟ್ಯಾಂಕರ್‌ಗಳ ನಿಯೋಜನೆಯು ಜನರನ್ನು ಆತಂಕಕ್ಕೀಡು ಮಾಡಿದೆ. ಗಾಜಾದ ಜಾಯ್‌ಟುನ್‌ ಜಿಲ್ಲೆಯ ಗಡಿ ಬಳಿ ಇಸ್ರೇಲ್‌ ಟ್ಯಾಂಕರ್‌ ಇರುವುದು, ಅಲ್ಲಿ ದಾಳಿ ನಡೆಸಿರುವುದರ ಕುರಿತು ಸ್ಥಳೀಯರು ಆತಂಕ ವ್ಯಕ್ತಪಡಿಸಿದ್ದಾರೆ. ಇದರ ಬೆನನ್ಲ್ಲೇ, “ಕಳೆದ 24 ಗಂಟೆಯಲ್ಲಿ ನಾವು 600 ಗುರಿಗಳನ್ನು ಹೊಡೆದುರುಳಿಸಿದ್ದೇವೆ. ದಿನೇದಿನೆ ದಾಳಿ ಜಾಸ್ತಿಯಾಗುತ್ತಿದೆ” ಎಂದು ಇಸ್ರೇಲ್‌ ಸೇನೆ ತಿಳಿಸಿದ್ದು, ದಾಳಿಯ ತೀವ್ರತೆಯನ್ನು ಅಂದಾಜಿಸಬಹುದಾಗಿದೆ. ಗಡಿಯ ಬಳಿ ಸೋಮವಾರ ಇಸ್ರೇಲ್‌ ಸೈನಿಕರು ಹಾಗೂ ಉಗ್ರರ ಮಧ್ಯೆ ಸಂಘರ್ಷ ಉಂಟಾಗಿದೆ ಎಂದು ತಿಳಿದುಬಂದಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version