Site icon Vistara News

Israel palestine war: ಹಮಾಸ್‌ನಿಂದ ಮೊದಲ ಒತ್ತೆಯಾಳು ವಿಡಿಯೋ ರಿಲೀಸ್‌, ಪಾರ್ಟಿಯಿಂದ ಅಪಹರಣಕ್ಕೊಳಗಾದ ಇಸ್ರೇಲಿ ಮಹಿಳೆ

mia israel hostage

ಟೆಲ್‌ ಅವಿವ್‌: ಇಸ್ರೇಲ್‌ ಮೇಲೆ ಹಮಾಸ್‌ (Hamas terrorists) ಉಗ್ರ ಸಂಘಟನೆ ಅಕ್ಟೋಬರ್ 7ರಂದು ದಾಳಿ ನಡೆಸಿದ ಸಂದರ್ಭ (Israel palestine war) ಒತ್ತೆಯಾಳಾಗಿ ಅಪಹರಿಸಲಾದ ಇಸ್ರೇಲಿ ಮಹಿಳೆಯೊಬ್ಬಳ ವೀಡಿಯೊವನ್ನು ಹಮಾಸ್ ಬಿಡುಗಡೆ ಮಾಡಿದೆ.

ಗಾಜಾದ ಬಳಿ ನಡೆದ ದಾಳಿಯಲ್ಲಿ 1,300ಕ್ಕೂ ಹೆಚ್ಚು ಜನರನ್ನು ಹಮಾಸ್‌ ಬಲಿತೆಗೆದುಕೊಂಡಿತ್ತು. ದಾಳಿಯ ಸಮಯದಲ್ಲಿ ಸುಮಾರು 200 ಜನರನ್ನು ಒತ್ತೆಯಾಳಾಗಿ ಒಯ್ಯಲಾಗಿದೆ. ಹಲವು ಮಹಿಳೆಯರನ್ನು, ಮಕ್ಕಳನ್ನು ಒತ್ತೆಯಾಳುಗಳಾಗಿ ಇಟ್ಟುಕೊಳ್ಳಲಾಗಿದೆ. ಅವರಲ್ಲಿ, 21 ವರ್ಷದ ಮಿಯಾ ಸ್ಕೆಮ್ ಎಂಬ ಮಹಿಳೆಯ ವೀಡಿಯೊವನ್ನು ಹಮಾಸ್‌ ಬಿಡುಗಡೆ ಮಾಡಿದೆ.

ಈಕೆಯನ್ನು ಮರುಭೂಮಿಯಲ್ಲಿ ನಡೆಯುತ್ತಿದ್ದ ರೇವ್‌ ಪಾರ್ಟಿಯ ವೇಳೆ ಅಪಹರಿಸಲಾಗಿತ್ತು. ಹಮಾಸ್‌ನ ಮಿಲಿಟರಿ ವಿಂಗ್ ಇಜ್ ಅದ್-ದಿನ್ ಅಲ್-ಕಸ್ಸಾಮ್ ಬ್ರಿಗೇಡ್ಸ್ ಈ ವೀಡಿಯೊ ಬಿಡುಗಡೆ ಮಾಡಿದೆ. ಇದರಲ್ಲಿ ಮಹಿಳೆಯ ತೋಳಿಗೆ ಬ್ಯಾಂಡೇಜ್‌ ಸುತ್ತಲಾಗಿದೆ.

ವೀಡಿಯೊದಲ್ಲಿ ಆಕೆ ಗಾಜಾ ಗಡಿಯ ಸಮೀಪವಿರುವ ಸಣ್ಣ ನಗರವಾದ ಸ್ಡೆರೋಟ್‌ನಿಂದ ಬಂದವಳು ಎಂದು ಹೇಳಿದ್ದಾಳೆ. ದಾಳಿಯ ದಿನದಂದು ಕಿಬ್ಬುಟ್ಜ್ ರೀಮ್‌ನಲ್ಲಿ ನಡೆದ ಸೂಪರ್‌ನೋವಾ ಸುಕ್ಕೋಟ್ ಸಂಗೀತ ಉತ್ಸವದಲ್ಲಿ ಭಾಗವಹಿಸುತ್ತಿದ್ದಾಗ ಹಮಾಸ್ ಕಾರ್ಯಕರ್ತರು ಸಭೆಯ ಮೇಲೆ ದಾಳಿ ಮಾಡಿದ್ದರು. ಸಂಗೀತ ಉತ್ಸವದಲ್ಲಿ ಕನಿಷ್ಠ 260 ಜನರು ಕೊಲ್ಲಲ್ಪಟ್ಟರು. ಮಿಯಾ ಸೇರಿದಂತೆ ಇತರರನ್ನು ಒತ್ತೆಯಾಳಾಗಿ ಒಯ್ಯಲಾಗಿತ್ತು.

ಕೇವಲ ಒಂದು ನಿಮಿಷದ ದೀರ್ಘಾವಧಿಯ ವೀಡಿಯೊದಲ್ಲಿ, ಮಿಯಾಳ ಗಾಯಕ್ಕೆ ಹಮಾಸ್‌ ಉಗ್ರರು ಆರೈಕೆ ಮಾಡುತ್ತಿರುವುದು ಕಾಣುತ್ತಿದೆ. ತನ್ನ ಗಾಯಕ್ಕೆ ಮೂರು ಗಂಟೆಗಳ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದೇನೆ ಎಂದು ಮಿಯಾ ಹೇಳಿದ್ದಾಳೆ.

“ಇವರು ನನ್ನನ್ನು ನೋಡಿಕೊಳ್ಳುತ್ತಿದ್ದಾರೆ. ನನಗೆ ಚಿಕಿತ್ಸೆ ನೀಡುತ್ತಿದ್ದಾರೆ. ನನಗೆ ಔಷಧಿಗಳನ್ನು ನೀಡುತ್ತಿದ್ದಾರೆ. ಎಲ್ಲವೂ ಸರಿಯಾಗಿದೆ” ಎಂದಿರುವ ಮಿಯಾ, “ನನ್ನ ಕುಟುಂಬಕ್ಕೆ, ನನ್ನ ಹೆತ್ತವರ ಬಳಿ, ನನ್ನ ಒಡಹುಟ್ಟಿದವರ ಬಳಿ ಆದಷ್ಟು ಬೇಗ ಮನೆಗೆ ಹಿಂತಿರುಗಬೇಕೆಂದು ನನ್ನ ಬಯಕೆ. ದಯವಿಟ್ಟು ನಮ್ಮನ್ನು ಇಲ್ಲಿಂದ ಆದಷ್ಟು ಬೇಗ ಕಾಪಾಡಿ” ಎಂದು ಆಕೆ ಮನವಿ ಮಾಡಿದ್ದಾಳೆ.

ಈ ವಿಡಿಯೋ ಹಮಾಸ್‌ ಉಗ್ರರೆಂದು ಇಸ್ರೇಲಿ ಮಿಲಿಟರಿ ಖಚಿತಪಡಿಸಿದೆ. “ಹಮಾಸ್ ಪ್ರಕಟಿಸಿದ ವೀಡಿಯೊದಲ್ಲಿ, ಅವರು ತಮ್ಮನ್ನು ಮಾನವೀಯ ವ್ಯಕ್ತಿಗಳು ಎಂದು ಬಿಂಬಿಸಲು ಪ್ರಯತ್ನಿಸಿದ್ದಾರೆ. ಆದರೆ ಅವರು ಶಿಶುಗಳು, ಮಕ್ಕಳು, ಪುರುಷರು, ಮಹಿಳೆಯರು ಮತ್ತು ವೃದ್ಧರ ಹತ್ಯೆ ಮಾಡಿದ್ದಾರೆ ಮತ್ತು ಅಪಹರಣ ಮಾಡಿದ್ದಾರೆʼʼ ಎಂದು ಇಸ್ರೇಲ್‌ ಮಿಲಿಟರಿ ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿದೆ.

ಇದಕ್ಕೂ ಎರಡು ದಿನ ಮುನ್ನ ಹಮಾಸ್‌ ಉಗ್ರರು ಇಸ್ರೇಲಿ ಮಕ್ಕಳ ಆರೈಕೆ ಮಾಡುತ್ತಿರುವ ವಿಡಿಯೋವನ್ನು ಕೂಡ ಹಮಾಸ್‌ ಪೋಸ್ಟ್‌ ಮಾಡಿತ್ತು.

ಇದನ್ನೂ ಓದಿ: Israel Palestine War: ನಮ್ಮ ಕೈ ಟ್ರಿಗರ್ ಮೇಲಿದೆ! ಇಸ್ರೇಲ್‌ಗೆ ನೇರ ಎಚ್ಚರಿಕೆ ನೀಡಿದ ಇರಾನ್

Exit mobile version