Site icon Vistara News

Israel Palestine War: ಇಸ್ರೇಲ್‌ ಡೆಡ್‌ಲೈನ್‌ಗೆ ಮಣಿದ ಹಮಾಸ್‌; 17 ಒತ್ತೆಯಾಳುಗಳ ಬಿಡುಗಡೆ

Israel Hostages

ಜೆರುಸಲೇಂ: ಇಸ್ರೇಲ್‌ ಮೇಲೆ ಹಮಾಸ್‌ ಉಗ್ರರು ನಡೆಸಿದ ದಾಳಿಗೆ ಇಸ್ರೇಲ್‌ ನಡೆಸಿದ ಪ್ರತಿದಾಳಿಗೆ (Israel Palestine War) ನಲುಗಿದ ಹಮಾಸ್‌ ಉಗ್ರರು ಇಸ್ರೇಲ್‌ ಜತೆ ಕದನವಿರಾಮ ಮಾಡಿಕೊಂಡಿದ್ದಾರೆ. ಅದರಂತೆ, ಹಮಾಸ್‌ ಉಗ್ರರು (Hamas Terrorists) ಎರಡನೇ ಹಂತದಲ್ಲಿ 17 ಒತ್ತೆಯಾಳುಗಳನ್ನು (Israel Hostages) ಬಿಡುಗಡೆ ಮಾಡಿದ್ದಾರೆ. ಹಮಾಸ್‌ ಉಗ್ರರು 17 ಒತ್ತೆಯಾಳುಗಳನ್ನು ರೆಡ್‌ ಕ್ರಾಸ್‌ ಸಮಿತಿಗೆ ಹಸ್ತಾಂತರ ಮಾಡಿದ್ದಾರೆ. 13 ಇಸ್ರೇಲ್‌ ನಾಗರಿಕರು ಹಾಗೂ ನಾಲ್ವರು ಥಾಯ್ಲೆಂಡ್‌ ನಾಗರಿಕರು ಸೇರಿ ಒಟ್ಟು 17 ಒತ್ತೆಯಾಳುಗಳನ್ನು ಹಮಾಸ್‌ ಬಿಡುಗಡೆ ಮಾಡಿದೆ.

ಇಸ್ರೇಲ್‌ ಸೇನೆಯು ಕದನ ವಿರಾಮ ನಿಯಮಗಳನ್ನು ಉಲ್ಲಂಘನೆ ಮಾಡಿದೆ ಎಂದು ಹಮಾಸ್‌ ಉಗ್ರರು ಆರೋಪಿಸಿದ್ದರು. ಅಲ್ಲದೆ, ಒತ್ತೆಯಾಳುಗಳನ್ನು ಬಿಡುಗಡೆ ಮಾಡಲು ವಿಳಂಬ ಮಾಡಿದ್ದರು. ಇದರಿಂದ ಕೆರಳಿದ್ದ ಇಸ್ರೇಲ್‌ ಸೇನೆಯು, ಹಮಾಸ್‌ ಉಗ್ರರಿಗೆ ಶನಿವಾರ (ನವೆಂಬರ್‌ 25) ಮಧ್ಯರಾತ್ರಿ ಒಳಗೆ ಒತ್ತೆಯಾಳುಗಳನ್ನು ಬಿಡುಗಡೆ ಮಾಡಬೇಕು ಎಂದು ಗಡುವು ನೀಡಿತ್ತು. ಇಸ್ರೇಲ್‌ ಡೆಡ್‌ಲೈನ್‌ಗೆ ಮಣಿದ ಹಮಾಸ್‌ ಉಗ್ರರು ತಡರಾತ್ರಿ ಒತ್ತೆಯಾಳುಗಳನ್ನು ಬಿಡುಗಡೆ ಮಾಡಿದೆ. ಬಿಡುಗಡೆಯಾದ ಒತ್ತೆಯಾಳುಗಳಲ್ಲಿ ಒಂಬತ್ತು ವರ್ಷದ ಬಾಲಕಿಯೂ ಇದ್ದಾಳೆ.

ಹಮಾಸ್ ಮತ್ತು ಇಸ್ರೇಲ್‌ ನಡುವಿನ ತಾತ್ಕಾಲಿಕ ಕದನ ವಿರಾಮದ ಒಪ್ಪಂದದ ಪ್ರಕಾರ, ಹಮಾಸ್ ಉಗ್ರರು ನವೆಂಬರ್‌ 24ರಂದು ಮೊದಲ ಹಂತದಲ್ಲಿ 13 ಇಸ್ರೇಲಿ ಪ್ರಜೆಗಳು ಸೇರಿ 25 ಒತ್ತೆಯಾಳುಗಳನ್ನು ಬಿಡುಗಡೆ ಮಾಡಿದ್ದರು. ಇಸ್ರೇಲಿ ಒತ್ತೆಯಾಳುಗಳನ್ನು ಹಮಾಸ್ ಉಗ್ರರು ರೆಡ್ ಕ್ರಾಸ್‌ಗೆ ಹಸ್ತಾಂತರಿಸಿದ್ದರು. ಬಿಡುಗಡೆಯಾದ ಒತ್ತೆಯಾಳುಗಳ ಪೈಕಿ 12 ಥಾಯ್ ಪ್ರಜೆಗಳಿದ್ದರು.

ಹಮಾಸ್‌ ಉಗ್ರರ ದಾಳಿಗೆ ಪ್ರತಿದಾಳಿ ಆರಂಭಿಸಿದ ಇಸ್ರೇಲ್‌ ಸೇನೆಯು ಗಾಜಾ ನಗರದ ಮೇಲೆ ಭಾಗಶಃ ಹಿಡಿತ ಸಾಧಿಸಿದ್ದರು. ನಿರಂತರ ದಾಳಿ ಮೂಲಕ ಸಾವಿರಾರು ಜನರನ್ನು ಹತ್ಯೆಗೈದಿದ್ದರು. ಹಾಗಾಗಿ, ಕತಾರ್‌ ಮಧ್ಯಪ್ರವೇಶಿಸಿ ಕದನವಿರಾಮಕ್ಕೆ ಕರೆ ನೀಡಿದೆ. ಇಸ್ರೇಲ್‌ ಒತ್ತೆಯಾಳುಗಳನ್ನು ಬಿಡುಗಡೆ ಮಾಡಲು ಹಮಾಸ್‌ ಕೊನೆಗೆ ಒಪ್ಪಿದೆ. ಅದರಂತೆ, ಈಜಿಪ್ತ್‌ ಮೂಲಕ 17 ಒತ್ತೆಯಾಳುಗಳನ್ನು ಇಸ್ರೇಲ್‌ಗೆ ಹಸ್ತಾಂತರ ಮಾಡಲಾಗಿದೆ.

ಇದನ್ನೂ ಓದಿ: 13 ಇಸ್ರೇಲ್ ಪ್ರಜೆಗಳು ಸೇರಿ 25 ಒತ್ತೆಯಾಳುಗಳನ್ನು ರಿಲೀಸ್ ಮಾಡಿದ ಹಮಾಸ್

ಇಸ್ರೇಲ್‌ ಹಾಗೂ ಹಮಾಸ್‌ ಉಗ್ರರ ನಡುವಿನ ಸಮರದಲ್ಲಿ ಮೃತಪಟ್ಟವರ ಸಂಖ್ಯೆ 12 ಸಾವಿರ ದಾಟಿದೆ. ಅದರಲ್ಲೂ, ಹಮಾಸ್‌ ಉಗ್ರರ ತಾಣವಾದ ಗಾಜಾ ನಗರದ ಮೇಲೆ ಇಸ್ರೇಲ್‌ ನಿರಂತರವಾಗಿ ದಾಳಿ ನಡೆಸುತ್ತಿದ್ದು, ನಗರದಲ್ಲಿ ಇದುವರೆಗೆ 11 ಸಾವಿರಕ್ಕೂ ಜನ ಮೃತಪಟ್ಟಿದ್ದಾರೆ ಎಂದು ಗಾಜಾ ಆರೋಗ್ಯ ಸಚಿವಾಲಯವೇ ಮಾಹಿತಿ ನೀಡಿದೆ. ಹಮಾಸ್‌ ಉಗ್ರರ ದಾಳಿಗೆ ಇಸ್ರೇಲ್‌ನಲ್ಲಿ 1,400 ಜನ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.

Exit mobile version