ಜೆರುಸಲೇಂ: ಗಾಜಾಪಟ್ಟಿಯ ಹಮಾಸ್ ಉಗ್ರರ ದಾಳಿಯನ್ನು ಹಿಮ್ಮೆಟ್ಟಿಸಿ, ಗಾಜಾ ಪಟ್ಟಿಯ ಮೇಲೆ ರಾಕೆಟ್ ದಾಳಿ ಮೂಲಕ ಪ್ರತಿರೋಧ ಒಡ್ಡುತ್ತಿರುವ ಇಸ್ರೇಲ್‌ಗೆ (Israel Palestine War) ಮತ್ತೊಂದು ಸಂಕಷ್ಟ ಎದುರಾಗಿದೆ. ಲೆಬನಾನ್ ಮೂಲದ, ಇರಾನ್ ಬೆಂಬಲಿತ ಹೆಜ್ಬುಲ್ಲಾ ಬಂಡುಕೋರರು ಕೂಡ ಇಸ್ರೇಲ್ ಮೇಲೆ ದಾಳಿ ನಡೆಸುತ್ತಿದ್ದಾರೆ. ಇದರಿಂದಾಗಿ ಇಸ್ರೇಲ್ ಈಗ ಹಮಾಸ್ ಉಗ್ರರ ಜತೆಗೆ ಹೆಜ್ಬುಲ್ಲಾ (Hezbollah) ಬಂಡುಕೋರರನ್ನೂ ಹಿಮ್ಮೆಟ್ಟಿಸುವ ಸವಾಲು ಎದುರಿಸುತ್ತಿದೆ.
ಇಸ್ರೇಲ್ ನಿಯಂತ್ರಣದಲ್ಲಿರುವ, ವಿವಾದಿತ ಭೂಪ್ರದೇಶ ಎನಿಸಿರುವ ಶೀಬಾ ಫಾರ್ಮ್ಸ್ ಪ್ರದೇಶದಲ್ಲಿ ಇಸ್ರೇಲ್ ನಿರ್ಮಿಸಿರುವ ಮೌಲ ಸೌಕರ್ಯಗಳ ಮೇಲೆ ಲೆಬನಾನ್ ಗಡಿಯಿಂದ ಹೆಜ್ಬುಲ್ಲಾ ಬಂಡುಕೋರರು ಮೋರ್ಟರ್‌ಗಳ ಮೂಲಕ ದಾಳಿ ನಡೆಸಿದ್ದಾರೆ. ಹತ್ತಾರು ಮೋರ್ಟರ್ ಶೆಲ್‌ಗಳ ಮೂಲಕ ಹೆಜ್ಬುಲ್ಲಾ ಬಂಡುಕೋರರು ದಾಳಿ ನಡೆಸಿದ ವಿಡಿಯೊ ಲಭ್ಯವಾಗಿದೆ. ಇದರ ಬೆನ್ನಲ್ಲೇ, ಮೋರ್ಟರ್ ಶೆಲ್‌ಗಳ ದಾಳಿಯನ್ನು ಹೆಜ್ಬುಲ್ಲಾ ಸಂಘಟನೆಯು ಹೊತ್ತುಕೊಂಡಿದೆ.
#BREAKING: Mortars were reportedly launched from #Lebanon into the Chebaa Farms and Kfar Chouba areas, hitting a military post. Soon after #Israel responded with its own bombs along the edges of the area. #لبنان #إسرائيل pic.twitter.com/SJYHic4mcm
— Nicholas Frakes | نيكولاس فريكس (@nicfrakesjourno) October 8, 2023
ಹೆಜ್ಬುಲ್ಲಾ ಬಂಡುಕೋರರಿಗೂ ಇಸ್ರೇಲ್ ತಿರುಗೇಟು
ಗಾಜಾಪಟ್ಟಿಯ ಹಮಾಸ್ ಉಗ್ರರಿಗೆ ತಿರುಗೇಟು ನೀಡಿದಂತೆ ಹೆಜ್ಬುಲ್ಲಾ ಉಗ್ರರಿಗೂ ಇಸ್ರೇಲ್ ಸೈನಿಕರು ತಿರುಗೇಟು ನೀಡಿದ್ದಾರೆ. ಚೆಬಾ ಫಾರ್ಮ್ಸ್ ಹಾಗೂ ಕ್ಫಾರ್ ಚೌಬಾ ಪ್ರದೇಶಗಳ ಮೇಲೆ ಹೆಜ್ಬುಲ್ಲಾ ದಾಳಿಗೆ ಪ್ರತಿಯಾಗಿ ಇಸ್ರೇಲ್ ಸೈನಿಕರೂ ಗುಂಡಿನ ದಾಳಿ ಮೂಲಕ ಪ್ರತಿರೋಧ ಒಡ್ಡಿದ್ದಾರೆ. ಇಸ್ರೇಲ್‌ಗೆ ಹಮಾಸ್ ಉಗ್ರರಂತೆ, ಇರಾನ್ ಬೆಂಬಲಿತ ಹೆಜ್ಬುಲ್ಲಾ ಉಗ್ರರು ಕೂಡ ಶತ್ರುಗಳಾಗಿದ್ದಾರೆ. ಈ ಹಿಂದೆಯೂ ಹೆಜ್ಬುಲ್ಲಾ ಉಗ್ರರು ಇಸ್ರೇಲ್ ಮೇಲೆ ದಾಳಿ ನಡೆಸುವ ಮೂಲಕ ಉಪಟಳ ಮಾಡಿದ್ದರು. ಇದಕ್ಕೆಲ್ಲ ಇಸ್ರೇಲ್ ತಕ್ಕ ಪಾಠ ಕಲಿಸಿದೆ. ಈಗ ಹಮಾಸ್ ಉಗ್ರರ ದಾಳಿ ಬೆನ್ನಲ್ಲೇ ಮತ್ತೆ ಇಸ್ರೇಲ್ ಮೇಲೆ ಹೆಜ್ಬುಲ್ಲಾ ಬಂಡುಕೋರರು ದಾಳಿ ನಡೆಸಿದ್ದಾರೆ.
ಇದನ್ನೂ ಓದಿ: Israel Palestine War: ಇಸ್ರೇಲ್‌ನಲ್ಲಿ ಹಮಾಸ್ ಉಗ್ರರ ಅಟ್ಟಹಾಸ; 100 ಯೋಧರು, ನಾಗರಿಕರ ಅಪಹರಣ
ಹಮಾಸ್ ಉಗ್ರರ ಅಡಗುತಾಣವಾದ ಗಾಜಾಪಟ್ಟಿ ಮೇಲೆ ಭಾನುವಾರವೂ ಇಸ್ರೇಲ್ ದಾಳಿ ಮುಂದುವರಿಸಿದೆ. ಶನಿವಾರ ರಾತ್ರಿ ಪೂರ್ತಿ ಗಾಜಾಪಟ್ಟಿಯ ಜನ ದಾಳಿ ಕರಿನೆರಳಿನಲ್ಲೇ ಕಾಲ ಕಳೆದಿದ್ದಾರೆ ಎಂದು ಹಲವು ಜಾಗತಿಕ ಮಾಧ್ಯಮಗಳು ವರದಿ ಮಾಡಿವೆ. ಗಾಜಾಪಟ್ಟಿಯ ಬಹುಮಹಡಿ ಕಟ್ಟಡಗಳು, ಉಗ್ರರ ಅಡಗುತಾಣಗಳು ಹಾಗೂ ಅಪಾರ್ಟ್‌ಮೆಂಟ್‌ಗಳನ್ನು ಗುರಿಯಾಗಿಸಿ ಇಸ್ರೇಲ್ ದಾಳಿ ನಡೆಸಿದೆ. ಇತ್ತ, ಟೆಲ್‌ಅವಿವ್ ಸೇರಿ ಇಸ್ರೇಲ್‌ನ ಹಲವೆಡೆ ಹಮಾಸ್ ಉಗ್ರರು ದಾಳಿ ಮುಂದುವರಿಸಿದ್ದಾರೆ. ಹಮಾಸ್ ಉಗ್ರರ ದಾಳಿಗೆ ಇಸ್ರೇಲ್‌ನಲ್ಲಿ 300ಕ್ಕೂ ಅಧಿಕ ಜನ ಮೃತಪಟ್ಟಿದ್ದಾರೆ.