Site icon Vistara News

Israel- Palestine War: ಇದೇ ನೋಡಿ ಹಮಾಸ್‌ ಉಗ್ರರ ಸುರಂಗ; ಗಾಜಾದ ಆಸ್ಪತ್ರೆಯಡಿಯೇ ಪತ್ತೆ!

hamas tunnel

ಟೆಲ್‌ ಅವಿವ್‌: ಇಸ್ರೇಲಿನ ಮೇಲೆ ನಡೆಸಿದ ದಾಳಿಯ (Israel- Palestine War) ಸಂದರ್ಭದಲ್ಲಿ ಹಮಾಸ್‌ ಉಗ್ರರು (Hamas terrorists, Hamas attack) ಕೊಂಡೊಯ್ದ ಒತ್ತೆಯಾಳುಗಳನ್ನು ಇಟ್ಟುಕೊಂಡ ಸುರಂಗವೊಂದು (Hamas tunnel) ಗಾಜಾದ ದೊಡ್ಡ ಆಸ್ಪತ್ರೆಯಡಿ ಪತ್ತೆಯಾಗಿದೆ. ಇದರ ಎಕ್ಸ್‌ಕ್ಲೂಸಿವ್‌ ಫೂಟೇಜ್‌ ಅನ್ನು ಇಸ್ರೇಲ್‌ ಸೈನ್ಯ (Osrael Defence Force) ಬಿಡುಗಡೆ ಮಾಡಿದ್ದು, ಆಸ್ಪತ್ರೆಗಳನ್ನು ರಕ್ಷಣಾ ಕವಚವಾಗಿ ಹಮಾಸ್‌ ಉಗ್ರರು ಬಳಸಿಕೊಳ್ಳುತ್ತಿರುವುದು ಖಚಿತವಾಗಿದೆ.

ಗಾಜಾದಲ್ಲಿನ ರಾಂಟಿಸ್ಸಿ ಮಕ್ಕಳ ಆಸ್ಪತ್ರೆಯ ನೆಲಮಾಳಿಗೆಯಲ್ಲಿ ಹಮಾಸ್ ಸಂಗ್ರಹಿಸಿಟ್ಟಿರುವ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಂಡಿರುವುದಾಗಿ ಇಸ್ರೇಲ್‌ ಸೈನ್ಯದ ವಕ್ತಾರ ಹೇಳಿಕೊಳ್ಳುವ ವೀಡಿಯೊ ಮತ್ತು ಛಾಯಾಚಿತ್ರಗಳನ್ನು ಇಸ್ರೇಲಿ ಮಿಲಿಟರಿ ಸೋಮವಾರ ಹಂಚಿಕೊಂಡಿದೆ. ಅಲ್ಲಿ ಒತ್ತೆಯಾಳುಗಳನ್ನು ಹಿಡಿದಿಟ್ಟುಕೊಂಡ ಸಾಕ್ಷಿಗಳನ್ನೂ ಅದರಲ್ಲಿ ತೋರಿಸಲಾಗಿದೆ. ಇಸ್ರೇಲ್ ಮಿಲಿಟರಿ ವಕ್ತಾರ ರೇರ್ ಅಡ್ಮಿರಲ್ ಡೇನಿಯಲ್ ಹಗರಿ ಅವರು‌ ಈ ವಿಡಿಯೋದಲ್ಲಿ ವಿವರಣೆ ನೀಡಿದ್ದಾರೆ.

ಪ್ಯಾಲೇಸ್ಟಿನಿಯನ್ ಉಗ್ರರ ಗುಂಪು ಇಸ್ರೇಲಿ ಯುವತಿ ಸೆರೆಯಲ್ಲಿರುವ ವೀಡಿಯೊವನ್ನು ಪ್ರಕಟಿಸಿದ ನಂತರ, ಹಮಾಸ್ ಒತ್ತೆಯಾಳಾಗಿ ಇಟ್ಟಕೊಂಡಿರುವ ಸೈನಿಕನ ಗುರುತನ್ನು ಇಸ್ರೇಲಿ ಮಿಲಿಟರಿ ಮಂಗಳವಾರ ದೃಢಪಡಿಸಿತು. ಈ ನಡುವೆ US ಅಧ್ಯಕ್ಷ ಜೋ ಬೈಡೆನ್, ಗಾಜಾ ಪಟ್ಟಿಯಲ್ಲಿರುವ ಆಸ್ಪತ್ರೆಗಳನ್ನು ರಕ್ಷಿಸಬೇಕು ಎಂದು ಕರೆ ನೀಡಿದ್ದಾರೆ.

ಪತ್ತೆಯಾದ ಸುರಂಗದ ಬಗ್ಗೆ ಮಾಹಿತಿ ಇಲ್ಲಿದೆ:

ಕ್ಯಾನ್ಸರ್ ರೋಗಿಗಳಿಗೆ ಚಿಕಿತ್ಸೆ ನೀಡುವ ವಿಶೇಷ ಮಕ್ಕಳ ಆಸ್ಪತ್ರೆಯಾದ ರಾಂಟಿಸ್ಸಿ ಆಸ್ಪತ್ರೆಯ ನೆಲಮಾಳಿಗೆಯಲ್ಲಿ ಹಮಾಸ್ ಉಗ್ರಗಾಮಿಗಳು ಸಂಗ್ರಹಿಸಿದ ಗ್ರೆನೇಡ್‌ಗಳು, ಆತ್ಮಾಹುತಿ ನಡುವಂಗಿಗಳು ಮತ್ತು ಇತರ ಸ್ಫೋಟಕಗಳು ಸೇರಿದಂತೆ ಶಸ್ತ್ರಾಸ್ತ್ರಗಳ ಕಮಾಂಡ್ ಸೆಂಟರ್ ಅನ್ನು ನಮ್ಮ ಪಡೆಗಳು ಕಂಡುಕೊಂಡಿವೆ ಎಂದು ಇಸ್ರೇಲ್ ಮಿಲಿಟರಿ ವಕ್ತಾರ ಡೇನಿಯಲ್ ಹಗರಿ ಹೇಳಿದ್ದಾರೆ. ಹಮಾಸ್ ಇಲ್ಲಿ ಒತ್ತೆಯಾಳುಗಳನ್ನು ಇರಿಸಿದೆ ಎಂದು ಸೂಚಿಸುವ ಚಿಹ್ನೆಗಳನ್ನು ಪತ್ತೆ ಮಾಡಿದ್ದೇವೆ ಎಂದು ಹಗರಿ ತಿಳಿಸಿದರು.

ಹಗರಿ ಅವರು ಸಣ್ಣ ಅಡುಗೆಮನೆ ಸೇರಿದಂತೆ ಸುರಂಗದ ದೃಶ್ಯಾವಳಿಗಳನ್ನು ತೋರಿಸಿದ್ದಾರೆ. ಸುರಂಗದ ಬಳಿಯಲ್ಲೇ ಹಿರಿಯ ಹಮಾಸ್ ಕಮಾಂಡರ್ ಮನೆ ಇತ್ತು. ಅಕ್ಟೋಬರ್ 7ರಂದು ಹಮಾಸ್ ಬಂದೂಕುಧಾರಿಗಳು ದಕ್ಷಿಣ ಇಸ್ರೇಲ್‌ಗೆ ನುಗ್ಗಿ ಸುಮಾರು 1,200 ಜನರನ್ನು ಕೊಂದು 240 ಬಂಧಿತರನ್ನು ವಶಪಡಿಸಿಕೊಂಡು ಗಾಜಾಕ್ಕೆ ಒತ್ತೆಯಾಳುಗಳನ್ನು ಕರೆತರಲು ಬಳಸಲಾದ ಗುಂಡಿನ ಗುರುತುಗಳಿರುವ ಮೋಟಾರ್‌ ಸೈಕಲ್ ಕೂಡ ಸುರಂಗದಲ್ಲಿ ಕಂಡುಬಂದಿದೆ.

ಹಮಾಸ್ ಬಂದೂಕುಧಾರಿಗಳು ಅಪಹರಿಸಿದ ನಂತರ ಮೊದಲ ಬಾರಿಗೆ ಒತ್ತೆಯಾಳು ಒಬ್ಬರ ಗುರುತನ್ನು ಇಸ್ರೇಲ್‌ ಸೈನ್ಯ ಅಧಿಕೃತವಾಗಿ ದೃಢಪಡಿಸಿದೆ. ʼʼಮರ್ಸಿಯಾನೊ ಕುಟುಂಬದ ಮಗಳು ನೋವಾಳನ್ನು ಹಮಾಸ್ ಭಯೋತ್ಪಾದಕ ಸಂಘಟನೆ ಕ್ರೂರವಾಗಿ ಅಪಹರಿಸಿದ್ದು, ಆ ಕುಟುಂಬಕ್ಕೆ ನಮ್ಮ ಹೃದಯಗಳು ಮಿಡಿಯುತ್ತವೆʼʼ ಎಂದು ಇಸ್ರೇಲ್ ಸೇನೆಯ ಹೇಳಿಕೆ ತಿಳಿಸಿದೆ. ಸೋಮವಾರ ರಾತ್ರಿ, ಹಮಾಸ್‌ನ ಎಝೆಡಿನ್ ಅಲ್-ಕಸ್ಸಾಮ್ ಬ್ರಿಗೇಡ್‌ ಸೈನಿಕ ಹೀಬ್ರೂ ಭಾಷೆಯಲ್ಲಿ ಸಂದೇಶವನ್ನು ಓದುತ್ತಿರುವ ವೀಡಿಯೊವನ್ನು ಪ್ರಕಟಿಸಿತು. ಅದರಲ್ಲಿ ನೋವಾ ಹೆಸರು ಮತ್ತು ಗುರುತಿನ ಚೀಟಿ ಸಂಖ್ಯೆಯಿಂದ ತನ್ನನ್ನು ಗುರುತಿಸಿಕೊಂಡಳು. ಆಕೆಯನ್ನು ನಾಲ್ಕು ದಿನಗಳ ಕಾಲ ಗಾಜಾದಲ್ಲಿ ಬಂಧಿಸಲಾಗಿದೆ.

ಇಸ್ರೇಲಿ ಸೈನ್ಯದ ಟ್ಯಾಂಕ್‌ಗಳು ಗಾಜಾ ನಗರದ ಮುಖ್ಯ ವೈದ್ಯಕೀಯ ಕೇಂದ್ರವಾದ ಅಲ್ ಶಿಫಾ ಆಸ್ಪತ್ರೆಯ ಹೊರಗೆ ಆವರಿಸಿವೆ. ರೋಗಿಗಳನ್ನು ಗುರಾಣಿಯಾಗಿ ಬಳಸುತ್ತಿರುವ ಹಮಾಸ್ ಹೋರಾಟಗಾರರ ಪ್ರಧಾನ ಕಚೇರಿ ಇರುವ ಸುರಂಗಗಳು ಈ ಆಸ್ಪತ್ರೆಯ ಕೆಳಗಿವೆ ಎಂದು ಇಸ್ರೇಲ್ ಹೇಳಿಕೊಂಡಿದೆ. ಹಮಾಸ್ ಇದನ್ನು ನಿರಾಕರಿಸಿದೆ. ಹಮಾಸ್‌ನ ಸಶಸ್ತ್ರ ವಿಭಾಗವು ಐದು ದಿನಗಳ ಕದನ ವಿರಾಮಕ್ಕೆ ಆಶಿಸಿದ್ದು, ಬದಲಾಗಿ 70 ಮಹಿಳೆಯರು ಮತ್ತು ಮಕ್ಕಳನ್ನು ಮುಕ್ತಗೊಳಿಸಲು ಸಿದ್ಧವಾಗಿದೆ ಎಂದಿದೆ.

ಗಾಜಾದಲ್ಲಿ ಇದುವರೆಗೂ 11,000ಕ್ಕೂ ಹೆಚ್ಚು ಜನರು ಕೊಲ್ಲಲ್ಪಟ್ಟಿದ್ದಾರೆ. ಗಾಜಾ ಆರೋಗ್ಯ ಸಚಿವಾಲಯದ ವಕ್ತಾರ ಅಶ್ರಫ್ ಅಲ್-ಕಿದ್ರಾ ಪ್ರಕಾರ ಅಲ್ ಶಿಫಾ ಆಸ್ಪತ್ರೆಯ ಒಳಗೆ ಮೂರು ನವಜಾತ ಶಿಶುಗಳು ಸೇರಿದಂತೆ ಹಿಂದಿನ ಮೂರು ದಿನಗಳಲ್ಲಿ 32 ರೋಗಿಗಳು ಆಸ್ಪತ್ರೆಯ ಮುತ್ತಿಗೆ ಮತ್ತು ವಿದ್ಯುತ್ ಕೊರತೆಯಿಂದಾಗಿ ಸಾವನ್ನಪ್ಪಿದ್ದಾರೆ. ಶಿಫಾ ಗಾಜಾದ ಅತಿದೊಡ್ಡ ಮತ್ತು ಉತ್ತಮ-ಸಜ್ಜಿತ ಆಸ್ಪತ್ರೆ. ಆದರೆ ಈ ಸೌಲಭ್ಯವನ್ನು ಹಮಾಸ್ ಮಿಲಿಟರಿ ಉದ್ದೇಶಗಳಿಗಾಗಿ ಬಳಸುತ್ತಿದೆ. ಹಮಾಸ್ ಆಸ್ಪತ್ರೆಯ ಕೆಳಗೆ ವಿಶಾಲವಾದ ಭೂಗತ ಕಮಾಂಡ್ ಸಂಕೀರ್ಣ ಕೇಂದ್ರವನ್ನು ನಿರ್ಮಿಸಿದೆ.

ಇದನ್ನೂ ಓದಿ: Israel- Palestine War: ಇಸ್ರೇಲ್‌ ಬಾಂಬ್‌ ದಾಳಿ: ಗಾಜಾದ ಆಸ್ಪತ್ರೆಗಳು ಕ್ಲೋಸ್‌; ಇಸ್ರೇಲ್‌ ವಿರುದ್ಧ UN ನಿರ್ಣಯ

Exit mobile version