Site icon Vistara News

ಗಾಜಾ ನಗರದ ಗಡಿ ಸಮೀಪಿಸಿದ ಇಸ್ರೇಲ್‌ ಟ್ಯಾಂಕರ್‌ಗಳು, ಶೀಘ್ರವೇ ಹಮಾಸ್‌ ಉಗ್ರರ ಸರ್ವನಾಶ?

Israel Tanks Near Gaza

ಜೆರುಸಲೇಂ: ಇಸ್ರೇಲ್‌ ಹಾಗೂ ಹಮಾಸ್‌ ಉಗ್ರರ ನಡುವಿನ ಸಮರವು (Israel Palestine War) 24ನೇ ದಿನಕ್ಕೆ ಕಾಲಿಟ್ಟಿದೆ. ಅದರಲ್ಲೂ ಅಕ್ಟೋಬರ್‌ 7ರಂದು ಇಸ್ರೇಲ್‌ ಮೇಲೆ ಹಮಾಸ್‌ ಉಗ್ರರು ದಾಳಿ ನಡೆಸಿದ ಬಳಿಕ, ಹಮಾಸ್‌ ಉಗ್ರರನ್ನು ಸರ್ವನಾಶ ಮಾಡುವ ಪಣತೊಟ್ಟಿರುವ ಇಸ್ರೇಲ್‌ ಸೇನೆಯು ಗಾಜಾ ನಗರದ (Gaza City) ಗಡಿಯಲ್ಲಿ ಬೀಡುಬಿಟ್ಟಿದೆ. ಅದರಲ್ಲೂ, ಸೋಮವಾರ (ಅಕ್ಟೋಬರ್‌ 30) ಇಸ್ರೇಲ್‌ ಸೇನೆಯ ಯುದ್ಧ ಟ್ಯಾಂಕರ್‌ಗಳು, ಬಂಕರ್‌ಗಳು ಗಾಜಾ ನಗರದ ಗಡಿ ಸಮೀಪಿಸಿದ್ದು, ಶೀಘ್ರವೇ ಇಡೀ ನಗರವನ್ನು, ಹಮಾಸ್‌ ಉಗ್ರರನ್ನು ಸರ್ವನಾಶ ಮಾಡಲಾಗುತ್ತದೆ ಎಂದು ತಿಳಿದುಬಂದಿದೆ.

ಗಾಜಾ ಗಡಿಯ ಬಳಿ ಇಸ್ರೇಲ್‌ ಟ್ಯಾಂಕರ್‌ಗಳ ನಿಯೋಜನೆಯು ಜನರನ್ನು ಆತಂಕಕ್ಕೀಡು ಮಾಡಿದೆ. ಗಾಜಾದ ಜಾಯ್‌ಟುನ್‌ ಜಿಲ್ಲೆಯ ಗಡಿ ಬಳಿ ಇಸ್ರೇಲ್‌ ಟ್ಯಾಂಕರ್‌ ಇರುವುದು, ಅಲ್ಲಿ ದಾಳಿ ನಡೆಸಿರುವುದರ ಕುರಿತು ಸ್ಥಳೀಯರು ಆತಂಕ ವ್ಯಕ್ತಪಡಿಸಿದ್ದಾರೆ. ಇದರ ಬೆನನ್ಲ್ಲೇ, “ಕಳೆದ 24 ಗಂಟೆಯಲ್ಲಿ ನಾವು 600 ಗುರಿಗಳನ್ನು ಹೊಡೆದುರುಳಿಸಿದ್ದೇವೆ. ದಿನೇದಿನೆ ದಾಳಿ ಜಾಸ್ತಿಯಾಗುತ್ತಿದೆ” ಎಂದು ಇಸ್ರೇಲ್‌ ಸೇನೆ ತಿಳಿಸಿದ್ದು, ದಾಳಿಯ ತೀವ್ರತೆಯನ್ನು ಅಂದಾಜಿಸಬಹುದಾಗಿದೆ. ಗಡಿಯ ಬಳಿ ಸೋಮವಾರ ಇಸ್ರೇಲ್‌ ಸೈನಿಕರು ಹಾಗೂ ಉಗ್ರರ ಮಧ್ಯೆ ಸಂಘರ್ಷ ಉಂಟಾಗಿದೆ ಎಂದು ತಿಳಿದುಬಂದಿದೆ.

ಜನರನ್ನು ಗುರಿಯಾಗಿಸಿ ಇಸ್ರೇಲ್‌ ದಾಳಿ

ಗಾಜಾ ನಗರದಲ್ಲಿ ಕದನ ವಿರಾಮ ಘೋಷಿಸಬೇಕು ಎಂಬುದಾಗಿ ವಿಶ್ವಸಂಸ್ಥೆ ಸಾಮಾನ್ಯ ಸಭೆಯಲ್ಲಿ ನಿರ್ಣಯ ಅಂಗೀಕರಿಸಲಾಗಿದೆ. ಆದರೂ, ಕದನ ವಿರಾಮದ ಮಾತೇ ಇಲ್ಲ ಎಂದು ಟಿವಿ ಸಂದರ್ಶನದ ವೇಳೆ ಇಸ್ರೇಲ್‌ ಪ್ರಧಾನಿ ಬೆಂಜಮಿನ್‌ ನೆತನ್ಯಾಹು ಹೇಳಿದ್ದಾರೆ. “ಹಮಾಸ್‌ ಉಗ್ರರನ್ನು ನಿರ್ನಾಮ ಮಾಡದ ಹೊರತು ನಾವು ವಿಶ್ರಮಿಸುವುದಿಲ್ಲ. ಈಗಾಗಲೇ ಇಸ್ರೇಲ್‌ ಸೈನಿಕರು ಹಮಾಸ್‌ ಉಗ್ರರ ವಿರುದ್ಧ ಎರಡನೇ ಹಂತದ ಸಮರ ಶುರು ಮಾಡಿದ್ದಾರೆ. ಸೈನಿಕರು ಗಾಜಾ ನಗರದ ಮೇಲೆ ದಾಳಿ ನಡೆಸುತ್ತಿದ್ದಾರೆ. ನಮ್ಮ ದೇಶದ ಒತ್ತೆಯಾಳುಗಳನ್ನು ಬಿಡಿಸಿಕೊಂಡು ಬರುವ ಜತೆಗೆ ಹಮಾಸ್‌ ಉಗ್ರರನ್ನು ಸದೆಬಡಿಯಲಾಗುತ್ತದೆ. ಅಲ್ಲಿಯವರೆಗೆ ಕದನ ವಿರಾಮ ಇಲ್ಲ” ಎಂದು ಹೇಳಿದ್ದಾರೆ.

ಇದನ್ನೂ ಓದಿ: Israel Palestine War: ಇಟ್ಟ ಗುರಿ ತಪ್ಪದ ಇಸ್ರೇಲ್;‌ ಹಮಾಸ್‌ನ 3 ಪ್ರಮುಖ ಉಗ್ರರ ಮಟಾಷ್!

ಗಾಜಾದಲ್ಲಿಯೇ 7,700 ಜನರ ಸಾವು

ಹಮಾಸ್‌ ಉಗ್ರರು ಮೊದಲು ಇಸ್ರೇಲ್‌ ಮೇಲೆ ದಾಳಿ ಶುರು ಮಾಡಿದ ಬಳಿಕ ಇಸ್ರೇಲ್‌ ತಿರುಗೇಟು ನೀಡುತ್ತಿದೆ. ಅದರಲ್ಲೂ, ಹಮಾಸ್‌ ಉಗ್ರರ ತಾಣವಾದ ಗಾಜಾ ನಗರದ ಮೇಲೆ ಇಸ್ರೇಲ್‌ ನಿರಂತರವಾಗಿ ದಾಳಿ ನಡೆಸುತ್ತಿದ್ದು, ನಗರದಲ್ಲಿ ಇದುವರೆಗೆ 7,700 ಜನ ಮೃತಪಟ್ಟಿದ್ದಾರೆ ಎಂದು ಗಾಜಾ ಆರೋಗ್ಯ ಸಚಿವಾಲಯವೇ ಮಾಹಿತಿ ನೀಡಿದೆ. ಇನ್ನೂ 1,700 ಜನ ಕಟ್ಟಡದ ಅವಶೇಷಗಳಲ್ಲಿ ಸಿಲುಕಿದ್ದು, ಅವರ ರಕ್ಷಣೆಗೆ ಕಾರ್ಯಾಚರಣೆ ನಡೆಯುತ್ತಿದೆ ಎಂಬುದಾಗಿ ಮಾಹಿತಿ ನೀಡಿದೆ. ಇನ್ನು ಹಮಾಸ್‌ ಉಗ್ರರ ದಾಳಿಗೆ ಇಸ್ರೇಲ್‌ನಲ್ಲಿ 1,400 ಜನ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.

ಈ ಸಂಗತಿ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version