Site icon Vistara News

Israel Palestine War: ಹಿಜ್ಬುಲ್ಲಾ ದಾಳಿಗೆ 12 ಮಂದಿ ಸಾವು; ಇಸ್ರೇಲ್‌ನಿಂದ ಪ್ರತೀಕಾರದ ಎಚ್ಚರಿಕೆ

Israel Palestine War

ಜೆರುಸಲೇಂ: 2023ರ ಅಕ್ಟೋಬರ್‌ನಿಂದ ಹಮಾಸ್‌ ಉಗ್ರರು ಮತ್ತು ಇಸ್ರೇಲ್‌ ನಡುವೆ ನಿರಂತರ ಯುದ್ಧ ನಡೆಯುತ್ತಿದೆ (Israel Hamas War). ಈ ಮಧ್ಯೆ ಶನಿವಾರ ಇಸ್ರೇಲ್‌ ನಿಯಂತ್ರಣದಲ್ಲಿರುವ ಗೋಲಾನ್‌ ಹೈಟ್ಸ್‌ ಪ್ರದೇಶದ ಮೇಲೆ ಹಿಜ್ಬುಲ್ಲಾ (Hezbollah) ಭಯೋತ್ಪಾದಕ ಸಂಘಟನೆ ನಡೆಸಿದ ರಾಕೆಟ್‌ ದಾಳಿಯಲ್ಲಿ ಮಕ್ಕಳು ಸೇರಿದಂತೆ 12 ಮಂದಿ ಸಾವನ್ನಪ್ಪಿದ್ದು, ಇದಕ್ಕೆ ಪ್ರತಿಕಾರ ತೀರಿಸುವುದಾಗಿ ಇಸ್ರೇಲ್‌ ಶಪಥ ಕೈಗೊಂಡಿದೆ.

ಲೆಬನಾನ್‌ನಿಂದ ಹಾರಿಸಲಾದ ರಾಕೆಟ್ ಗೋಲನ್ ಹೈಟ್ಸ್‌ನ ಉತ್ತರದ ಡ್ರೂಜ್ ಪಟ್ಟಣವಾದ ಮಜ್ಡಾಲ್ ಶಾಮ್ಸ್‌ನಲ್ಲಿರುವ ಫುಟ್‌ಬಾಲ್ ಮೈದಾನಕ್ಕೆ ಅಪ್ಪಳಿಸಿ ಅಲ್ಲಿ ಆಟವಾಡುತ್ತಿದ್ದ ಮಕ್ಕಳು ಸೇರಿದಂತೆ ಹಲವರನ್ನು ಬಲಿ ಪಡೆದುಕೊಂಡಿದೆ. ಈ ಬಗ್ಗೆ ಆಕ್ರೋಶ ವ್ಯಕ್ತಪಡಿಸಿರುವ ಇಸ್ರೇಲ್‌ ಪ್ರಧಾನಿ ಬೆಂಜಮಿನ್‌ ನೆತನ್ಯಾಹು (Benjamin Netanyahu), ಇದಕ್ಕೆ ಹೆಜ್ಬುಲ್ಲಾ ಸಂಘಟನೆ ಭಾರಿ ಬೆಲೆ ತೆರೆಬೇಕಾಗುತ್ತದೆ ಎಂದು ಖಡಕ್‌ ಎಚ್ಚರಿಕೆಯ ಸಂದೇಶ ರವಾನಿಸಿದ್ದಾರೆ. ಆದರೆ ಹಿಜ್ಬುಲ್ಲಾ ಈ ರಾಕೆಟ್ ದಾಳಿಯನ್ನು ನಿರಾಕರಿಸಿದೆ.

ದಾಳಿಯ ಹಿನ್ನೆಲೆಯಲ್ಲಿ ಅಮೆರಿಕ ಪ್ರವಾಸದಲ್ಲಿದ್ದ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರು ತಮ್ಮ ಪ್ರವಾಸವನ್ನು ಅರ್ಧದಲ್ಲೇ ಮೊಟಕುಗೊಳಿಸಿ ಇಸ್ರೇಲ್‌ಗೆ ಧಾವಿಸಿದ್ದಾರೆ. ಮುಂದಿನ ನಡೆಯ ಬಗ್ಗೆ ಚರ್ಚಿಸಲು ಅವರು ಭದ್ರತಾ ಕ್ಯಾಬಿನೆಟ್ ಕರೆದಿದ್ದಾರೆ.

ಶನಿವಾರ ಸಂಜೆ ಫುಟ್‌ಬಾಲ್‌ ಮೈದಾನದ ಮೇಲೆ ರಾಕೆಟ್‌ ದಾಳಿ ನಡೆದಿತ್ತು. ಇಸ್ರೇಲ್‌ ಮಿಲಿಟರಿ ನೆಲೆಗಳ ಮೇಲೆ ರಾಕೆಟ್‌ ಹಾರಿಸಿರುವುದಾಗಿ ಹಿಜ್ಬುಲ್ಲಾ ಈ ಹಿಂದೆ ಘೋಷಿಸಿತ್ತು. ಆದರೆ ಮಜ್ಡಾಲ್ ಶಾಮ್ಸ್‌ನಲ್ಲಿರುವ ಫುಟ್‌ಬಾಲ್ ಮೈದಾನದ ಮೇಲಿನ ದಾಳಿಯಲ್ಲಿ ನಿರಾಕರಿಸಿದೆ. “ಈ ಘಟನೆಯೊಂದಿಗೆ ತನಗೆ ಯಾವುದೇ ಸಂಬಂಧವಿಲ್ಲʼʼ ಎಂದು ಹೇಳಿದೆ.

ರಾಕೆಟ್ ಇರಾನ್ ನಿರ್ಮಿತ ಫಲಾಕ್ -1 ಎನ್ನುವುದು ಖಚಿತವಾಗಿದೆ ಎಂದು ಎಂದು ಇಸ್ರೇಲ್ ಮಿಲಿಟರಿ ವಕ್ತಾರರು ತಿಳಿಸಿದ್ದಾರೆ. ಇಸ್ರೇಲ್‌ ಸೇನಾ ಪ್ರಧಾನ ಕಚೇರಿಯನ್ನು ಗುರಿಯಾಗಿಸಿಕೊಂಡು ಫಲಾಕ್ -1 ಕ್ಷಿಪಣಿಯನ್ನು ಹಾರಿಸುವುದಾಗಿ ಹಿಜ್ಬುಲ್ಲಾ ಶನಿವಾರ ಘೋಷಿಸಿತ್ತು. ಇಸ್ರೇಲ್‌ ರಕ್ಷಣಾ ಸಚಿವ ಯೋವ್ ಶೌರ್ಯ್ ಮಜ್ದಾಲ್ ಶಮ್ಸ್‌ಗೆ ಭೇಟಿ ನೀಡಿ, “ನಾವು ಶತ್ರುಗಳಿಗೆ ತಕ್ಕ ಪಾಠ ಕಲಿಸುತ್ತೇವೆʼʼ ಎಂದು ಹೇಳಿದ್ದಾರೆ. ದಕ್ಷಿಣ ಲೆಬನಾನ್‌ನ ಚೆಬಾ ಗ್ರಾಮದ ಉತ್ತರಕ್ಕಿರುವ ಪ್ರದೇಶದಿಂದ ರಾಕೆಟ್ ಉಡಾವಣೆ ನಡೆಸಲಾಗಿದೆ ಎಂದು ಅವರು ತಿಳಿಸಿದ್ದಾರೆ.

ಅಮೆರಿಕ ಹೇಳಿದ್ದೇನು?

ಸಂಘರ್ಷವನ್ನು ಕಡಿಮೆ ಮಾಡುವ ಉದ್ದೇಶದಿಂದ ರಾಜತಾಂತ್ರಿಕ ಪ್ರಯತ್ನಗಳನ್ನು ಮುನ್ನಡೆಸುತ್ತಿರುವ ಅಮೆರಿಕ ಇದನ್ನು ಭಯಾನಕ ದಾಳಿ ಎಂದು ಖಂಡಿಸಿದೆ ಆದರೆ ಹೆಜ್ಬುಲ್ಲಾವನ್ನು ನೇರವಾಗಿ ಹೆಸರಿಸಿಲ್ಲ. ಇಸ್ರೇಲ್ ನಡೆಸಿದ ದಾಳಿಯಲ್ಲಿ ಇದುವರೆಗೆ ಲೆಬನಾನ್‌ನಲ್ಲಿ ಸುಮಾರು 350 ಹಿಜ್ಬುಲ್ಲಾ ಭಯೋತ್ಪದಕರು ಸೇರಿದಂತೆ 100ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದಾರೆ. ಇತ್ತ ಲೆಬನಾನ್‌ ವಿರುದ್ಧ ಯಾವುದೇ ಕಾರ್ಯಾಚರಣೆ ನಡೆಸದಂತೆ ಇರಾನ್ ಭಾನುವಾರ ಇಸ್ರೇಲ್‌ಗೆ ಎಚ್ಚರಿಕೆ ನೀಡಿದೆ ಎಂದು ಮೂಲಗಳು ತಿಳಿಸಿವೆ.

ಇತ್ತೀಚೆಗೆ ಗಾಜಾ ಪಟ್ಟಿಯ ಖಾನ್‌ ಯೌನಿಸ್‌ (Khan Younis) ಪ್ರದೇಶದ ಮೇಲೆ ಇಸ್ರೇಲ್‌ ಭೀಕರ ದಾಳಿ ನಡೆಸಿದ್ದು, ಹಮಾಸ್‌ ಮಿಲಿಟರಿ ವಿಭಾಗದ ಮುಖ್ಯಸ್ಥ ಮೊಹಮ್ಮದ್‌ ಡೈಫ್ (Mohammed Deif)‌ ಎಂಬಾತನನ್ನು ಹತ್ಯೆ ಮಾಡಿತ್ತು.

ಇದನ್ನೂ ಓದಿ: Israel-Hamas Conflict: ಇಸ್ರೇಲ್‌ ಏರ್‌ಸ್ಟ್ರೈಕ್- ಹಮಾಸ್‌ ಕಮಾಂಡರ್‌ ಹತ್ಯೆ

Exit mobile version