Site icon Vistara News

Israel Palestine War: ಇಸ್ರೇಲ್‌ನಲ್ಲಿ ಹಮಾಸ್‌ ಉಗ್ರರ ಅಟ್ಟಹಾಸ; 100 ಯೋಧರು, ನಾಗರಿಕರ ಅಪಹರಣ

Hamas Attack In Israel

Israel Palestine War: Israel says 100 civilians and soldiers kidnapped by Hamas group

ಜೆರುಸಲೇಂ: ಪ್ಯಾಲೆಸ್ತೀನ್‌ನ ಗಾಜಾಪಟ್ಟಿಯ ಹಮಾಸ್‌ ಉಗ್ರರು ಇಸ್ರೇಲ್‌ ಮೇಲೆ ರಣಭೀಕರ ಸಮರ (Israel Palestine War) ಸಾರಿದ್ದಾರೆ. ಸುಮಾರು 5 ಸಾವಿರ ರಾಕೆಟ್‌ಗಳ ದಾಳಿ ಜತೆಗೆ ನೂರಾರು ಉಗ್ರರು ಇಸ್ರೇನ್‌ ನಗರಗಳಲ್ಲಿ ಗುಂಡಿನ ದಾಳಿ ಮಾಡುತ್ತಿದ್ದಾರೆ. ಮಹಿಳೆಯರು, ಮಕ್ಕಳು, ಹಿರಿಯರು ಎನ್ನದೆ ಸಿಕ್ಕಸಿಕ್ಕವರ ಮೇಲೆ ಉಗ್ರರು ಗುಂಡಿನ ದಾಳಿ ನಡೆಸುತ್ತಿದ್ದಾರೆ. ಹಮಾಸ್‌ ಉಗ್ರರ (Hamas Terrorists) ದಾಳಿಗೆ ಇದುವರೆಗೆ ಇಸ್ರೇಲ್‌ನ 300ಕ್ಕೂ ಅಧಿಕ ಜನ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ. ಇದರ ಬೆನ್ನಲ್ಲೇ, “ಹಮಾಸ್‌ ಉಗ್ರರು ಇಸ್ರೇಲ್‌ನ 100ಕ್ಕೂ ಅಧಿಕ ನಾಗರಿಕರು ಹಾಗೂ ಯೋಧರನ್ನು ಅಪಹರಣ ಮಾಡಿದ್ದಾರೆ” ಎಂದು ಇಸ್ರೇಲ್‌ ತಿಳಿಸಿದೆ.

ವಿಶ್ವಸಂಸ್ಥೆಗೆ ಇಸ್ರೇಲ್‌ ರಾಯಭಾರಿ ಆಗಿರುವ ಗಿಲಾಡ್‌ ಎರ್ಡಾನ್‌ ಅವರು ಫಾಕ್ಸ್‌ ಸುದ್ದಿಸಂಸ್ಥೆ ಜತೆ ಮಾತನಾಡುವಾಗ ಹಮಾಸ್‌ ಉಗ್ರರ ಭೀಕರ ದಾಳಿಯನ್ನು ವಿವರಿಸಿದ್ದಾರೆ. “ಹಮಾಸ್‌ ಉಗ್ರರ ದಾಳಿಯು 2001ರಲ್ಲಿ ಅಮೆರಿಕದಲ್ಲಿ ನಡೆದ ಭೀಕರ ಅಲ್‌ಕೈದಾ ದಾಳಿಯನ್ನು ನೆನಪಿಸುತ್ತಿದೆ. ಪುಟ್ಟ ಮಕ್ಕಳು, ಮಹಿಳೆಯರು ಹಾಗೂ ಹಿರಿಯ ನಾಗರಿಕರನ್ನು ಮನೆಯಿಂದ ಹೊರಗೆ ಎಳೆದು, ಅವರನ್ನು ಒತ್ತೆಯಾಳುಗಳನ್ನಾಗಿ ಇರಿಸಿಕೊಳ್ಳಲಾಗುತ್ತಿದೆ. ಇದುವರೆಗೆ ಇಸ್ರೇಲ್‌ನ 100ಕ್ಕೂ ಅಧಿಕ ಜನ ಹಾಗೂ ಸೈನಿಕರನ್ನು ಅಪಹರಿಸಲಾಗಿದೆ” ಎಂದು ತಿಳಿಸಿದ್ದಾರೆ.

ಇಸ್ರೇಲ್‌ನ ಟೆಲ್‌ಅವಿವ್‌ ಸೇರಿ ಹಲವು ನಗರಗಳ ಮೇಲೆ ಸಮುದ್ರ, ಭೂಮಿ ಹಾಗೂ ವಾಯು ಮಾರ್ಗದ ಮೂಲಕ ಹಮಾಸ್‌ ಉಗ್ರರು ದಾಳಿ ನಡೆಸುತ್ತಿದ್ದಾರೆ. ಅದರಲ್ಲೂ, ಇಸ್ರೇಲ್‌ನ ಬೀದಿ ಬೀದಿಗಳಲ್ಲಿ ಉಗ್ರರು ಗುಂಡಿನ ದಾಳಿ ನಡೆಸುತ್ತಿದ್ದಾರೆ. ಉಗ್ರರ ಗುಂಡಿನ ದಾಳಿಗೆ ಇಸ್ರೇಲ್‌ನ 26 ಯೋಧರು ಮೃತಪಟ್ಟಿದ್ದಾರೆ ಎಂದು ಇತ್ತೀಚಿನ ಅಂಕಿ-ಅಂಶಗಳಿಂದ ತಿಳಿದುಬಂದಿದೆ. ಅಲ್ಲದೆ, ಭಾನುವಾರವೂ (ಅಕ್ಟೋಬರ್‌ 8) ಇಸ್ರೇಲ್‌ನಲ್ಲಿ ಹಮಾಸ್‌ ಉಗ್ರರು ದಾಳಿ ಮುಂದುವರಿಸಿರುವುದು ಜನರ ಆತಂಕ ಇಮ್ಮಡಿಗೊಳಿಸಿದೆ.

ಇದನ್ನೂ ಓದಿ: Nushrratt Bharuccha: ಇಸ್ರೇಲ್‌ನಲ್ಲಿ ಸಿಲುಕಿದ್ದ ನಟಿ ನುಶ್ರತ್‌ ಭರುಚ್ಚಾ ಸೇಫ್‌; ಅಭಿಮಾನಿಗಳು ಖುಷ್‌

ಮುಯ್ಯಿಗೆ ಮುಯ್ಯಿ ಎಂದ ಇಸ್ರೇಲ್‌

ಇಸ್ರೇಲ್‌ ಮೇಲೆ ಉಗ್ರರು ಮಾಡುತ್ತಿರುವ ದಾಳಿಗೆ ಪ್ರತಿಯಾಗಿ ಇಸ್ರೇಲ್‌ ಕೂಡ ಗಾಜಾ ಪಟ್ಟಿ ಮೇಲೆ ದಾಳಿ ನಡೆಸುತ್ತಿದೆ. ಗಾಜಾ ಪಟ್ಟಿ ಮೇಲೆ ಇಸ್ರೇಲ್‌ ನಡೆಸಿದ ವಾಯುದಾಳಿಯಿಂದಾಗಿ ಇದುವರೆಗೆ 250ಕ್ಕೂ ಅಧಿಕ ಮಂದಿ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.

ಹಮಾಸ್‌ ಉಗ್ರರ ಕಟ್ಟಡಗಳನ್ನೇ ಗುರಿಯಾಗಿಸಿ ಇಸ್ರೇಲ್‌ ವಾಯುದಾಳಿ ಮಾಡಿದ್ದು, ಗಾಜಾ ಪಟ್ಟಿಯು ಕೂಡ ಮಸಣದಂತಾಗಿದೆ. ಸಾವಿರಾರು ಜನ ಗಾಯಗೊಂಡಿದ್ದು, ಅವರ ರಕ್ಷಣೆಗೆ ಹರಸಾಹಸ ಮಾಡಲಾಗುತ್ತಿದೆ ಎಂದು ತಿಳಿದುಬಂದಿದೆ.

Exit mobile version