Site icon Vistara News

Israel Palestine War: ಗಾಜಾ ನಗರವನ್ನುಸುತ್ತುವರಿದ ಇಸ್ರೇಲ್ ಪಡೆ; ಆತಂಕ ಮೂಡಿಸಿದ ನಡೆ

isreal war

isreal war

ಗಾಜಾ: ಹಮಾಸ್ ನಿಯಂತ್ರಣದಲ್ಲಿರುವ ಗಾಜಾ ನಗರವನ್ನು (Gaza refugee camp) ತನ್ನ ಪಡೆಗಳು ಸಂಪೂರ್ಣವಾಗಿ ಸುತ್ತುವರೆದಿವೆ ಎಂದು ಇಸ್ರೇಲ್ ಮಿಲಿಟರಿ (Israeli military) ಹೇಳಿಕೊಂಡಿದೆ )Israel Palestine War). “ಹಮಾಸ್ ಭಯೋತ್ಪಾದಕ ಸಂಘಟನೆಯ ಕೇಂದ್ರವಾದ ಗಾಜಾ ನಗರವನ್ನು ಇಸ್ರೇಲ್ ಸೈನಿಕರು ಸುತ್ತುವರಿದಿದ್ದಾರೆ” ಎಂದು ಇಸ್ರೇಲ್ ಮಿಲಿಟರಿ ವಕ್ತಾರ ಡೇನಿಯಲ್ ಹಗರಿ ಹೇಳಿದ್ದಾರೆ. “ಕದನ ವಿರಾಮದ ಪ್ರಸ್ತಾವ ಇಲ್ಲʼʼ ಎಂದು ಸ್ಪಷ್ಟಪಡಿಸಿದ್ದಾರೆ.

ಅಮೆರಿಕ ಅಧ್ಯಕ್ಷ ಜೋ ಬೈಡನ್ ಮಾನವೀಯ ಕದನ ವಿರಾಮಕ್ಕೆ ಕರೆ ನೀಡಿದ ಹಿನ್ನೆಲೆಯಲ್ಲಿ ಈ ಬೆಳವಣಿಗೆ ಕಂಡು ಬಂದಿದೆ. ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಆಂಟನಿ ಬ್ಲಿಂಕೆನ್ ಮಧ್ಯಪ್ರಾಚ್ಯಕ್ಕೆ ಮತ್ತೊಂದು ರಾಜತಾಂತ್ರಿಕ ಪ್ರವಾಸ ಕೈಗೊಳ್ಳುತ್ತಿದ್ದಾರೆ. “ಗಾಜಾದಲ್ಲಿ ಪುರುಷರು, ಮಹಿಳೆಯರು ಮತ್ತು ಮಕ್ಕಳಿಗೆ ಹಾನಿಯನ್ನು ಕಡಿಮೆ ಮಾಡಲು ತೆಗೆದುಕೊಳ್ಳಬಹುದಾದ ಮತ್ತು ತೆಗೆದುಕೊಳ್ಳಬೇಕಾದ ದೃಢವಾದ ಕ್ರಮಗಳ ಬಗ್ಗೆ ನಾವು ಮಾತನಾಡುತ್ತೇವೆ” ಎಂದು ಬ್ಲಿಂಕೆನ್ ಹೇಳಿದ್ದಾರೆ.

ಉತ್ತರ ಗಾಜಾದಲ್ಲಿ ಸಂಘರ್ಷ ಮುಂದುವರಿದಿದ್ದು, ಗಾಯಗೊಂಡ ನೂರಾರು ವಿದೇಶಿಯರು ಯುದ್ಧ ಪೀಡಿತ ಪ್ರದೇಶದಿಂದ ರಾಫಾ ಗಡಿ ದಾಟುವ ಮೂಲಕ ಈಜಿಪ್ಟ್‌ಗೆ ಪಲಾಯನ ಮಾಡಿದ್ದಾರೆ. ಪಶ್ಚಿಮ ದಂಡೆಯಲ್ಲಿ ಇಸ್ರೇಲಿ ನೆಲದ ಕಾರ್ಯಾಚರಣೆಯ ಸಮಯದಲ್ಲಿ ಇಬ್ಬರು ಪ್ಯಾಲೆಸ್ತೀನಿಯರು ಮೃತಪಟ್ಟಿದ್ದಾರೆ.

ಅಕ್ಟೋಬರ್ 7ರ ದಾಳಿಯ ಸಮಯದಲ್ಲಿ ಹಮಾಸ್ ವಶಪಡಿಸಿಕೊಂಡ ನಾಗರಿಕರು ಮತ್ತು ಮಿಲಿಟರಿ ಸೇರಿದಂತೆ ಸುಮಾರು 240 ಒತ್ತೆಯಾಳುಗಳನ್ನು ಬಿಡುಗಡೆ ಮಾಡಲು ಇಸ್ರೇಲ್ ಸೇನೆ ಒತ್ತಾಯಿಸುತ್ತಿದೆ. ಒತ್ತೆಯಾಳುಗಳನ್ನು ಹುಡುಕುವ ಪ್ರಯತ್ನದಲ್ಲಿ ಅಮೆರಿಕವು ಗಾಜಾ ಮೇಲೆ ಡ್ರೋನ್‌ಗಳನ್ನು ಹಾರಿಸುತ್ತಿದೆ.

ಲೆಬನಾನ್‌ನ ಇರಾನ್ ಬೆಂಬಲಿತ ಹಿಜ್ಬುಲ್ಲಾ ಗುಂಪು ಗುರುವಾರ ತನ್ನ ನಾಯಕ ಹಸನ್ ನಸ್ರಲ್ಲಾ ಅವರ ಭಾಷಣಕ್ಕೂ ಮುನ್ನ ಗಡಿಯುದ್ದಕ್ಕೂ 19 ಇಸ್ರೇಲ್‌ ನೆಲೆಗಳ ಮೇಲೆ ದಾಳಿ ನಡೆಸಿದೆ ಎಂದು ಹೇಳಿಕೊಂಡಿದೆ. ಅಕ್ಟೋಬರ್ 7ರ ದಾಳಿಯ ನಂತರ 3,760 ಮಕ್ಕಳು ಸೇರಿದಂತೆ 9,061 ಜನ ಮೃತಪಟ್ಟಿದ್ದಾರೆ ಎಂದು ಹಮಾಸ್ ನಡೆಸುತ್ತಿರುವ ಗಾಜಾ ಆರೋಗ್ಯ ಸಚಿವಾಲಯ ತಿಳಿಸಿದೆ.

ಗಾಜಾದ ಅತಿದೊಡ್ಡ ಜಬಾಲಿಯಾ ನಿರಾಶ್ರಿತರ ಶಿಬಿರವನ್ನು ಗುರಿಯಾಗಿಸಿಕೊಂಡು ಇಸ್ರೇಲ್ ದಾಳಿ ನಡೆಸಿದ್ದು, ನೂರಾರು ಮಂದಿ ಮೃತಪಟ್ಟಿದ್ದಾರೆ. ಮಂಗಳವಾರ ಮತ್ತು ಬುಧವಾರ ನಡೆದ ವೈಮಾನಿಕ ದಾಳಿಯಲ್ಲಿ ಇಬ್ಬರು ಹಮಾಸ್ ಮಿಲಿಟರಿ ನಾಯಕರು ಸಾವನ್ನಪ್ಪಿದ್ದಾರೆ ಎಂದು ಇಸ್ರೇಲ್ ಹೇಳಿದೆ.

ಇದನ್ನೂ ಓದಿ: Israel Palestine War: ಇಸ್ರೇಲ್‌ ದಾಳಿಯಲ್ಲಿ ಅಲ್ ಜಜೀರಾ ಇಂಜಿನಿಯರ್‌ ಕುಟುಂಬದ 19 ಸದಸ್ಯರ ಸಾವು

ಮಾರಣಾಂತಿಕ ದಾಳಿಗಳು “ಯುದ್ಧ ಅಪರಾಧಗಳಿಗೆ ಸಮಾನ” ಎಂದು ವಿಶ್ವಸಂಸ್ಥೆ ಹೇಳಿದೆ. ಜಬಾಲಿಯಾ ನಿರಾಶ್ರಿತರ ಶಿಬಿರದ ಮೇಲೆ ಇಸ್ರೇಲ್‌ನ ವಾಯು ದಾಳಿಯ ನಂತರ ಹೆಚ್ಚಿನ ಸಂಖ್ಯೆಯ ನಾಗರಿಕ ಸಾವುನೋವುಗಳು ಮತ್ತು ವಿನಾಶದ ಪ್ರಮಾಣದ ಬಗ್ಗೆ ಯುಎನ್ ಮಾನವ ಹಕ್ಕುಗಳ ಕಚೇರಿ ಕಳವಳ ವ್ಯಕ್ತಪಡಿಸಿದೆ.

ಈ ಮಧ್ಯೆ ಇಸ್ರೇಲ್‌ ಗಾಜಾ ನಗರದ ಮೇಲೆ ಪೂರ್ಣ ಪ್ರಮಾಣದ ದಾಳಿ ಮಾಡಲು ಗಡಿಯಲ್ಲಿ ನೂರಾರು ಯುದ್ಧ ಟ್ಯಾಂಕರ್‌ಗಳನ್ನು ನಿಯೋಜಿಸಿದ್ದು, ಯಾವಾಗ ಬೇಕಾದರೂ ದಾಳಿ ನಡೆಸಬಹುದು ಎನ್ನಲಾಗಿದೆ. ಇದರ ಬೆನ್ನಲ್ಲೇ ಗಾಜಾ ನಗರದಲ್ಲಿ ಮೊಬೈಲ್‌ ನೆಟ್‌ವರ್ಕ್‌, ಇಂಟರ್‌ನೆಟ್‌ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಇದು ಆತಂಕಕ್ಕೆ ಕಾರಣವಾಗಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿ

Exit mobile version