Site icon Vistara News

Israel Palestine War: ಗಾಜಾಗೆ 2.5 ಕೋಟಿ ರೂ. ದೇಣಿಗೆ ನೀಡಿದ ಮಲಾಲಾ; ದಾಳಿಗೆ ಖಂಡನೆ

malala yousafzai

Israel Palestine War: Malala Yousafzai Donates Rs 2.5 Crore For Palestinians

ಇಸ್ಲಾಮಾಬಾದ್:‌ ಇಸ್ರೇಲ್‌ ಹಾಗೂ ಹಮಾಸ್‌ ಉಗ್ರರ ನಡುವಿನ ಸಮರವು 13ನೇ ದಿನಕ್ಕೆ ಕಾಲಿಟ್ಟಿದ್ದು, 4 ಸಾವಿರಕ್ಕೂ ಅಧಿಕ ಮಂದಿಯನ್ನು ಬಲಿ ಪಡೆದಿದೆ. ಅದರಲ್ಲೂ, ಗಾಜಾ ನಗರದಲ್ಲಿರುವ ಸರ್ಕಾರಿ ಆಸ್ಪತ್ರೆ ಮೇಲೆ ನಡೆದ ಬಾಂಬ್‌ ದಾಳಿ (Israel Palestine War) ಬಳಿಕ ಶಾಂತಿಸ್ಥಾಪನೆ ದಿಸೆಯಲ್ಲಿ ಜಗತ್ತಿನಾದ್ಯಂತ ಆಗ್ರಹ ಕೇಳಿಬರುತ್ತಿದೆ. ಇದರ ಬೆನ್ನಲ್ಲೇ, ನೊಬೆಲ್‌ ಶಾಂತಿ ಪುರಸ್ಕೃತ ಹೋರಾಟಗಾರ್ತಿ ಮಲಾಲಾ ಯೂಸುಫ್‌ಜಾಯ್‌ (Malala Yousafzai) ಅವರು ಗಾಜಾ ನಗರದ ಜನರಿಗಾಗಿ 2.5 ಕೋಟಿ ರೂ. ದೇಣಿಗೆ ಘೋಷಿಸಿದ್ದಾರೆ.

ಗಾಜಾ ನಗರದ ಆಸ್ಪತ್ರೆ ಮೇಲೆ ದಾಳಿ ನಡೆಸಿದ ಕುರಿತು ವಿಡಿಯೊ ಒಂದನ್ನು ಪೋಸ್ಟ್‌ ಮಾಡಿರುವ ಮಲಾಲಾ ಯೂಸುಫ್‌ಜಾಯ್‌, “ಗಾಜಾ ನಗರದ ಅಲ್‌-ಅಲ್ಹಿ ಆಸ್ಪತ್ರೆ ಮೇಲೆ ನಡೆದ ಬಾಂಬ್‌ ದಾಳಿಯಿಂದ ನಾನು ದಿಗಿಲುಗೊಂಡಿದ್ದೇನೆ ಹಾಗೂ ದಾಳಿಯನ್ನು ಖಂಡಿಸುತ್ತೇನೆ. ಇಸ್ರೇಲ್‌ ಸರ್ಕಾರವು ಕೂಡಲೇ ಗಾಜಾ ನಗರದಲ್ಲಿ ಜನರಿಗೆ ಮಾನವೀಯ ನೆಲೆಯಲ್ಲಿ ಪರಿಹಾರ ನೀಡಲು, ಅವರಿಗೆ ಸಹಾಯ ಮಾಡಲು ಅನುವು ಮಾಡಿಕೊಡಬೇಕು ಎಂದು ಆಗ್ರಹಿಸುತ್ತೇನೆ. ಹಾಗೆಯೇ, ಪ್ಯಾಲೆಸ್ತೀನ್‌ ಜನರಿಗೆ ಸಹಾಯ ಮಾಡುತ್ತಿರುವ ಮೂರು ಸಂಸ್ಥೆಗಳಿಗೆ 2.5 ಕೋಟಿ ರೂ. ದೇಣಿಗೆ ಘೋಷಿಸುತ್ತಿದ್ದೇನೆ” ಎಂದು ಹೇಳಿದ್ದಾರೆ.

ದೇಣಿಗೆ ಘೋಷಿಸಿದ ಮಲಾಲಾ ಯೂಸುಫ್‌ಜಾಯ್

“ಇಸ್ರೇಲ್‌ ಹಾಗೂ ಗಾಜಾ ಸಂಘರ್ಷದಿಂದಾಗಿ ಸಾವಿರಾರು ಜನ ಬಲಿಯಾಗುತ್ತಿದ್ದಾರೆ. ಯಾವುದೇ ಸಮಸ್ಯೆಗೆ ದಾಳಿ, ಸಂಘರ್ಷವೊಂದೇ ಪರಿಹಾರವಲ್ಲ. ಹಾಗಾಗಿ, ಗಾಜಾ ಹಾಗೂ ಇಸ್ರೇಲ್‌ ಕೂಡಲೇ ಶಾಂತಿಸ್ಥಾಪನೆ ಒಪ್ಪಂದಕ್ಕೆ ಬರಬೇಕು” ಎಂದು ಕೂಡ ಯೂಸುಫ್‌ಜಾಯ್‌ ವಿಡಿಯೊ ಮೂಲಕ ಆಗ್ರಹಿಸಿದ್ದಾರೆ. ಗಾಜಾ ನಗರದ ಮೇಲೆ ನಡೆದ ಬಾಂಬ್‌ ದಾಳಿಯಲ್ಲಿ 500ಕ್ಕೂ ಅಧಿಕ ಮಂದಿ ಮೃತಪಟ್ಟಿದ್ದಾರೆ. ನೂರಾರು ಜನ ಗಾಯಗೊಂಡಿದ್ದು, ದಾಳಿಯ ಹೊಣೆಯನ್ನು ಯಾರೂ ಹೊತ್ತುಕೊಂಡಿಲ್ಲ.

ಇದನ್ನೂ ಓದಿ: Israel Palestine War: ಇಸ್ರೇಲ್‌ಗೆ ರಿಷಿ ಸುನಕ್ ಭೇಟಿ;‌ ಉಗ್ರರ ನಿರ್ನಾಮಕ್ಕೆ ಬೆಂಬಲ ಘೋಷಣೆ

ಗಾಜಾ ಸರ್ಕಾರಿ ಆಸ್ಪತ್ರೆ ಮೇಲೆ ದಾಳಿ ಮಾಡಿದ್ದು ಯಾರು ಎಂಬ ಪ್ರಶ್ನೆ ಈಗ ಎಲ್ಲರನ್ನೂ ಕಾಡುತ್ತಿದೆ. ಗಾಜಾ ನಗರದಲ್ಲಿರುವ ನಾಗರಿಕರನ್ನು ಗುರಿಯಾಗಿಸಿ ಇಸ್ರೇಲ್‌ ದಾಳಿ ಮಾಡುತ್ತಿದೆ. ನಾಗರಿಕರನ್ನೂ ನಿರ್ನಾಮ ಮಾಡುವುದು ಇಸ್ರೇಲ್‌ ಗುರಿಯಾಗಿದೆ ಎಂದು ಗಾಜಾ ಸಿವಿಲ್‌ ಡಿಫೆನ್ಸ್‌ ಚೀಫ್‌ ಆರೋಪ ಮಾಡಿದ್ದಾರೆ. ಆದರೆ, ಇಸ್ರೇಲ್‌ ಈ ಆರೋಪವನ್ನು ತಳ್ಳಿಹಾಕಿದೆ. “ಹಮಾಸ್‌ ಉಗ್ರರು ರಾಕೆಟ್‌ ದಾಳಿ ಮಾಡುವಾಗ ಎಸಗಿದ ತಪ್ಪಿನಿಂದಾಗಿ ಪ್ಯಾಲೆಸ್ತೀನ್‌ನಲ್ಲಿಯೇ ಅದು ಆಸ್ಪತ್ರೆ ಮೇಲೆ ಬಿದ್ದಿದೆ” ಎಂದು ಹೇಳಿದೆ.‌

ಮತ್ತೊಂದೆಡೆ ಬ್ರಿಟನ್‌ ಪ್ರಧಾನಿ ರಿಷಿ ಸುನಕ್‌ ಅವರು ಇಸ್ರೇಲ್‌ಗೆ ಭೇಟಿ ನೀಡಿದ್ದು, ಉಗ್ರವಾದದ ವಿರುದ್ಧದ ಹೋರಾಟಕ್ಕೆ ಬೆಂಬಲವಿದೆ ಎಂದಿದ್ದಾರೆ. ಇಸ್ರೇಲ್‌ನ ಟೆಲ್‌ ಅವಿವ್‌ಗೆ ಬಂದಿಳಿಯುತ್ತಲೇ ರಿಷಿ ಸುನಕ್‌ ಅವರು ಎಕ್ಸ್‌ ಸಾಮಾಜಿಕ ಜಾಲತಾಣದಲ್ಲಿ ಫೋಟೊ ಪೋಸ್ಟ್‌ ಮಾಡಿದ್ದಾರೆ. ಹಾಗೆಯೇ, “ನಾನು ಇಸ್ರೇಲ್‌ನಲ್ಲಿದ್ದೇನೆ. ದುಃಖದಲ್ಲಿರುವ ಇಸ್ರೇಲ್‌ ನೆಲದ ಮೇಲೆ ನಿಂತಿದ್ದೇನೆ. ನಾನೂ ನಿಮ್ಮ ದುಃಖದಲ್ಲಿ ಪಾಲುದಾರನಾಗಿದ್ದೇನೆ ಹಾಗೂ ದುಷ್ಟಶಕ್ತಿಯಾದ ಭಯೋತ್ಪಾದನೆಯ ವಿರುದ್ಧ ಹೋರಾಟಕ್ಕೆ ಬೆಂಬಲ ಘೋಷಿಸುತ್ತಿದ್ದೇನೆ. ಈ ಬೆಂಬಲ ಈಗ ಮಾತ್ರವಲ್ಲ, ಎಂದಿಗೂ ಇರುತ್ತದೆ” ಎಂದು ಪೋಸ್ಟ್‌ ಮಾಡುವ ಮೂಲಕ ಇಸ್ರೇಲ್‌ಗೆ ಬೆಂಬಲ ಸೂಚಿಸಿದ್ದಾರೆ. ಇದರ ಬೆನ್ನಲ್ಲೇ, ಹಮಾಸ್‌ ಉಗ್ರರು ಇಸ್ರೇಲ್‌ ಮೇಲಿನ ರಾಕೆಟ್‌ ದಾಳಿಯನ್ನು ತೀವ್ರಗೊಳಿಸಿದೆ ಎಂದು ತಿಳಿದುಬಂದಿದೆ.

Exit mobile version