ಗಾಜಾ: ಯುದ್ಧ ಪೀಡಿತ ಗಾಜಾದಲ್ಲಿ ಮತ್ತೊಮ್ಮೆ ರಕ್ತದೋಕುಳಿ ಹರಡಿದೆ. ಇಸ್ರೇಲಿ ಪಡೆಗಳು ಗುರುವಾರ (ಫೆಬ್ರವರಿ 29) ಪರಿಹಾರ ವಿತರಣಾ ಕೇಂದ್ರದಲ್ಲಿ ಫ್ಯಾಲಸ್ತೀನಿಯರ ಗುಂಪಿನ ಮೇಲೆ ಗುಂಡು ನಡೆಸಿದ್ದು, ಕನಿಷ್ಠ 104 ಮಂದಿ ಸಾವನ್ನಪ್ಪಿದ್ದಾರೆ ಮತ್ತು 280ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ (Israel Palestine War).
ʼʼಪ್ಯಾಲಸ್ತೀನಿಯರು ಬೆದರಿಕೆಯನ್ನು ಒಡ್ಡಿದ್ದಾರೆ ಎಂದು ಭಾವಿಸಿ ನಮ್ಮ ಸೈನಿಕರು ಗುಂಡು ಹಾರಿಸಿದ್ದಾರೆʼʼ ಎಂದು ಇಸ್ರೇಲ್ ಮೂಲಗಳು ಹೇಳಿವೆ. ಗಾಜಾದಲ್ಲಿರುವ ಪ್ಯಾಲಸ್ತೀನ್ ಆರೋಗ್ಯ ಸಚಿವಾಲಯವು ಇದನ್ನು ʼಹತ್ಯಾಕಾಂಡʼ ಎಂದು ಕರೆದಿದೆ.
ನಗರದ ಪಶ್ಚಿಮ ನಬುಲ್ಸಿ ವೃತ್ತದಲ್ಲಿ ಆಹಾರಕ್ಕಾಗಿ ಕಾಯುತ್ತಿದ್ದ ಸಾವಿರಾರು ಹತಾಶ ಜನರು ಟ್ರಕ್‌ನತ್ತ ಧಾವಿಸಿದಾಗ ಹಿಂಸಾಚಾರ ಭುಗಿಲೆದ್ದಿದೆ ಎಂದು ಪ್ರತ್ಯಕ್ಷದರ್ಶಿಯೊಬ್ಬರು ತಿಳಿಸಿದ್ದಾರೆ. “ಆಹಾರವನ್ನು ಹೊತ್ತುಕೊಂಡು ಬಂದ ಟ್ರಕ್ ಆ ಪ್ರದೇಶದಲ್ಲಿದ್ದ ಕೆಲವು ಸೇನಾ ಟ್ಯಾಂಕ್‌ಗಳಿಗೆ ಸಮೀಪ ಬಂತು. ನೂರಾರು ಜನರು ಆಹಾರಕ್ಕಾಗಿ ಟ್ರಕ್‌ನತ್ತ ನುಗ್ಗಿದರು. ಈ ವೇಳೆ ಗುಂಡಿನ ದಾಳಿ ನಡೆಯಿತುʼʼ ಎಂದು ಅವರು ಹೇಳಿದ್ದಾರೆ. “ಜನಸಮೂಹವು ಸೈನಿಕರ ಮೇಲೆ ದಾಳಿ ನಡೆಸಬಹುದು ಎನ್ನುವ ಬೆದರಿಕೆಯಿಂದ ಗುಂಡಿನ ಮಳೆಗೆರೆಯಲಾಯಿತುʼʼ ಎಂದು ಅವರು ತಿಳಿಸಿದ್ದಾರೆ.
ಅನೇಕ ಶವಗಳು ಇನ್ನೂ ಬೀದಿಯಲ್ಲಿರುವುದರಿಂದ ಸಾವಿನ ಸಂಖ್ಯೆ ಮತ್ತು ಗಾಯಗೊಂಡವರ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ. ಎಲ್ಲೆಂದರಲ್ಲಿ ಕಟ್ಟಡಗಳ ಅವಶೇಷಗಳು ಬಿದ್ದಿರುವುದರಿಂದ ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸುವುದು ಕೂಡ ಆಂಬ್ಯಲೆನ್ಸ್‌ಗಳಿಗೆ ಕಷ್ಟವಾಗುತ್ತಿದೆ ಎಂದು ಮೂಲಗಳು ಹೇಳಿದ್ದು, ಅಲ್ಲಿನ ಭೀಕರ ಪರಿಸ್ಥಿತಿಗೆ ಕನ್ನಡಿ ಹಿಡಿಯುವಂತಿದೆ. ಈ ಘಟನೆಯು ಕದನ ವಿರಾಮ ಮತ್ತು ಒತ್ತೆಯಾಳುಗಳ ಬಿಡುಗಡೆಯ ಮಾತುಕತೆ ಮುರಿದು ಬೀಳಲು ಕಾರಣವಾಗಬಹುದು ಎಂದು ಹಮಾಸ್ ಹೇಳಿಕೆಯಲ್ಲಿ ಎಚ್ಚರಿಸಿದೆ. ಇದಕ್ಕೆ ಇಸ್ರೇಲ್ ಜವಾಬ್ದಾರವಾಗಿರುತ್ತದೆ ಎಂದು ಹೇಳಿದೆ.
30 ಸಾವಿರಕ್ಕೂ ಅಧಿಕ ಮಂದಿ ಸಾವು
ಇಸ್ರೇಲ್-ಹಮಾಸ್ ಸಂಘರ್ಷದಲ್ಲಿ ಇದುವರೆಗೆ ಒಟ್ಟು 30 ಸಾವಿರಕ್ಕೂ ಅಧಿಕ ಮಂದಿ ಪ್ರಾಣ ಕಳೆದುಕೊಂಡಿದ್ದಾರೆ ಎಂದು ಗಾಜಾದ ಆರೋಗ್ಯ ಇಲಾಖೆ ತಿಳಿಸಿದೆ. ಮೃತರಲ್ಲಿ ಮೂರನೇ ಎರಡರಷ್ಟು ಮಹಿಳೆಯರು ಮತ್ತು ಮಕ್ಕಳು ಎಂದು ಅದು ಹೇಳಿದೆ. 70 ಸಾವಿರಕ್ಕೂ ಅಧಿಕ ಜನರು ಗಾಯಗೊಂಡಿದ್ದು, ಸುಮಾರು 6 ಲಕ್ಷಕ್ಕೂ ಆದಿಕ ಮಂದಿ ಹಸಿವಿನಿಂದ ಬಳಲುತ್ತಿದ್ದಾರೆ ಎಂದು ವಿಶ್ವಸಂಸ್ಥೆ ತಿಳಿಸಿದೆ. ಗಾಜಾ ಪಟ್ಟಿಯಾದ್ಯಂತ ಜನಸಂಖ್ಯೆಯ ಕಾಲು ಭಾಗದಷ್ಟು ಜನರು- ವಿನಾಶಕಾರಿ ಮಟ್ಟದ ಆಹಾರ ಅಭದ್ರತೆಯನ್ನು ಎದುರಿಸುತ್ತಿದ್ದಾರೆ ಮತ್ತು ಕ್ಷಾಮದ ಅಪಾಯದಲ್ಲಿದ್ದಾರೆ. ಎರಡು ವರ್ಷಕ್ಕಿಂತ ಕಡಿಮೆ ವಯಸ್ಸಿನ ಆರು ಮಕ್ಕಳಲ್ಲಿ ಒಬ್ಬರು ತೀವ್ರ ಅಪೌಷ್ಟಿಕತೆಯಿಂದ ಬಳಲುತ್ತಿದ್ದಾರೆ ಎಂದು ಎಂದು ವಿಶ್ವಸಂಸ್ಥೆಯ ಹಿರಿಯ ನೆರವು ಅಧಿಕಾರಿಯೊಬ್ಬರು ಎಚ್ಚರಿಸಿದ್ದಾರೆ.
ಇದನ್ನೂ ಓದಿ: ಉಗ್ರರೆಂದು ಭಾವಿಸಿ ಇಸ್ರೇಲ್ ಸೈನ್ಯದಿಂದ 3 ಒತ್ತೆಯಾಳುಗಳ ಹತ್ಯೆ, ಪ್ರಮಾದ ಎಂದ ನೆತನ್ಯಾಹು
2023ರ ಅಕ್ಟೋಬರ್ 7ರಂದು ಹಮಾಸ್ ಉಗ್ರರು ಇಸ್ರೇಲ್‌ಗೆ ನುಗ್ಗಿದಾಗ ಗಾಜಾದಲ್ಲಿ ಯುದ್ಧ ಪ್ರಾರಂಭವಾಗಿತ್ತು. ಹಮಾಸ್ ಉಗ್ರರು 1,200 ಜನರನ್ನು ಕೊಂದು 253 ಒತ್ತೆಯಾಳುಗಳನ್ನು ವಶಪಡಿಸಿಕೊಂಡಿತು ಎಂದು ಇಸ್ರೇಲ್‌ನ ಅಂಕಿ-ಅಂಶಗಳು ತಿಳಿಸಿವೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ