Site icon Vistara News

Israel Palestine War: ಪ್ರತಿ ಉಗ್ರನ ಹೆಣ ಬೀಳುವುದು ನಿಶ್ಚಿತ ಎಂದ ಇಸ್ರೇಲ್;‌ 3,700 ಸಾವು

Israel Palestine War

Israel Palestine War: Nearly 3,700 Killed, Netanyahu Vows to Crush Hamas

ಜೆರುಸಲೇಂ: ಇಸ್ರೇಲ್‌ ಮೇಲೆ ಹಮಾಸ್‌ ಉಗ್ರರು ರಾಕೆಟ್‌ ದಾಳಿ ಆರಂಭಿಸಿದ ಬಳಿಕ ಉಂಟಾದ ಸಂಘರ್ಷವು ಆರನೇ ದಿನಕ್ಕೆ ಕಾಲಿಟ್ಟಿದೆ. ಇಸ್ರೇಲ್‌ ಮೇಲೆ ಹಮಾಸ್‌ ಉಗ್ರರು, ಗಾಜಾಪಟ್ಟಿ ಮೇಲೆ ಇಸ್ರೇಲ್‌ ಸೈನಿಕರು ದಾಳಿ (Israel Palestine War) ಮುಂದುವರಿಸಿದ್ದಾರೆ. ಹೀಗೆ ದಾಳಿ-ಪ್ರತಿದಾಳಿಗೆ ಇದುವರೆಗೆ 3,700 ಜನ ಮೃತಪಟ್ಟಿದ್ದಾರೆ. ಸಾವಿರಾರು ಜನ ಗಾಯಗೊಂಡಿದ್ದಾರೆ. ಗಾಜಾಪಟ್ಟಿಯಲ್ಲಿ ಸುಮಾರು 3.38 ಲಕ್ಷ ಜನ ನಿರಾಶ್ರಿತರಾಗಿದ್ದಾರೆ ಎಂಬುದಾಗಿ ವಿಶ್ವಸಂಸ್ಥೆಯೇ ತಿಳಿಸಿದೆ. ಇದರ ಬೆನ್ನಲ್ಲೇ, ಗಾಜಾಪಟ್ಟಿ ಮೇಲೆ ಇಸ್ರೇಲ್‌ ದಾಳಿ ತೀವ್ರಗೊಳಿಸಿದ್ದು, “ಹಮಾಸ್‌ನ ಪ್ರತಿಯೊಬ್ಬ ಉಗ್ರನ ಹೆಣ ಬೀಳುವುದು ನಿಶ್ಚಿತ” ಎಂದು ಇಸ್ರೇಲ್‌ ಪ್ರಧಾನಿ ಬೆಂಜಮಿನ್‌ ನೆತನ್ಯಾಹು (Benjamin Netanyahu) ತಿಳಿಸಿದ್ದಾರೆ.

“ಹಮಾಸ್‌ ಉಗ್ರರನ್ನು ನಾವು ನಿರ್ನಾಮ ಮಾಡುತ್ತೇವೆ. ಹಮಾಸ್‌ನ ಒಬ್ಬ ಉಗ್ರನೂ ಬದುಕುಳಿಯುವುದಿಲ್ಲ. ಎಲ್ಲರನ್ನೂ ಹತ್ಯೆಗೈಯುತ್ತೇವೆ” ಎಂದು ಬೆಂಜಮಿನ್‌ ನೆತನ್ಯಾಹು ಶಪಥ ಮಾಡಿದ್ದಾರೆ. ಇದರ ಬೆನ್ನಲ್ಲೇ, ಬುಧವಾರ (ಅಕ್ಟೋಬರ್‌ 12) ರಾತ್ರೋರಾತ್ರಿ ಗಾಜಾ ಪಟ್ಟಿ ಮೇಲೆ ಇಸ್ರೇಲ್‌ ದಾಳಿ ನಡೆಸಿದೆ. ಒಂದೇ ರಾತ್ರಿಯಲ್ಲಿ 51 ಜನ ಮೃತಪಟ್ಟರೆ, 281 ಮಂದಿ ಗಾಯಗೊಂಡಿದ್ದಾರೆ” ಎಂದು ‘ದಿ ಟೈಮ್ಸ್‌ ಆಫ್‌ ಇಸ್ರೇಲ್‌’ ವರದಿ ಮಾಡಿದೆ. ಈಗಲೂ ಇಸ್ರೇಲ್‌ ತೀವ್ರವಾಗಿ ದಾಳಿ ಮುಂದುವರಿಸಿದೆ ಎಂದು ತಿಳಿದುಬಂದಿದೆ.

ಇರಾನ್‌ಗೆ ಅಮೆರಿಕ ಎಚ್ಚರಿಕೆ

ಹಮಾಸ್‌ ಉಗ್ರರ ದಾಳಿಯಲ್ಲಿ ಅಮೆರಿಕದ 22 ನಾಗರಿಕರು ಮೃತಪಟ್ಟ ಹಿನ್ನೆಲೆಯಲ್ಲಿ ಅಮೆರಿಕ ಅಧ್ಯಕ್ಷ ಜೋ ಬೈಡೆನ್‌ ಅವರು ಇರಾನ್‌ಗೆ ಎಚ್ಚರಿಕೆ ನೀಡಿದ್ದಾರೆ. ಹಮಾಸ್‌ ಉಗ್ರರ ದಾಳಿ ಹಿಂದೆ ಇರಾನ್‌ ಕೈವಾಡ ಇದೆ ಎಂಬ ಆರೋಪಗಳು ಕೇಳಿಬಂದ ಹಿನ್ನೆಲೆಯಲ್ಲಿ, ಹಮಾಸ್‌ ಉಗ್ರರಿಗೆ ಬೆಂಬಲ ನೀಡುವುದನ್ನು ಇರಾನ್‌ ನಿಲ್ಲಿಸಬೇಕು ಎಂದು ಜೋ ಬೈಡೆನ್‌ ಆಗ್ರಹಿಸಿದ್ದಾರೆ. ಇನ್ನು ಇಸ್ರೇಲ್‌ಗೆ ಅಮೆರಿಕ ಸಕಲ ರೀತಿಯಲ್ಲಿ ಬೆಂಬಲ ನೀಡುತ್ತಿದೆ. ಶಸ್ತ್ರಾಸ್ತ್ರಗಳನ್ನು ಹೊತ್ತ ಅಮೆರಿಕ ವಿಮಾನವು ಇಸ್ರೇಲ್‌ನಲ್ಲಿ ಲ್ಯಾಂಡ್‌ ಆಗಿದ್ದು, ಇನ್ನು ಹಮಾಸ್‌ ಉಗ್ರರಿಗೆ ಉಳಿಗಾಲವಿಲ್ಲ ಎಂದು ಹೇಳಲಾಗುತ್ತಿದೆ.

ಇದನ್ನೂ ಓದಿ: Israel Palestine War: ಇಸ್ರೇಲ್ ತಲುಪಿದ ಅಮೆರಿಕದ ಆಧುನಿಕ ಶಸ್ತ್ರಾಸ್ತ್ರಗಳು!

ಭಾರತದಿಂದ ಆಪರೇಷನ್‌ ಅಜಯ್ ಆರಂಭ

ಕರ್ನಾಟಕವೂ ಸೇರಿದಂತೆ ದೇಶದ ವಿವಿಧ ರಾಜ್ಯಗಳ ಸಾವಿರಾರು ಜನರು ಇಸ್ರೇಲ್‌ನಲ್ಲಿದ್ದು, ಅವರೆನ್ನಲ್ಲ ಸುರಕ್ಷಿತವಾಗಿ ವಾಪಸ್ ಭಾರತಕ್ಕೆ ಕರೆತರಲು ಕೇಂದ್ರ ಸರ್ಕಾರವು ಆಪರೇಷನ್ ಅಜಯ್ (Operation Ajay) ಆರಂಭಿಸಿದೆ. ಈ ಮಾಹಿತಿಯನ್ನು ಕೇಂದ್ರ ವಿದೇಶಾಂಗ ಸಚಿವ ಎಸ್ ಜಯಶಂಕರ್ ಅವರು ಎಕ್ಸ್‌ ವೇದಿಕೆಯಲ್ಲಿ ಹಂಚಿಕೊಂಡಿದ್ದಾರೆ.

ಇಸ್ರೇಲ್‌ನಿಂದ ಹಿಂದಿರುಗಲು ಬಯಸುವ ನಮ್ಮ ನಾಗರಿಕರಿಗೆ ಮರಳಲು ಅನುಕೂಲವಾಗುವಂತೆ ಆಪರೇಷನ್ ಅಜಯ ಪ್ರಾರಂಭಿಸಲಾಗುತ್ತಿದೆ. ವಿಶೇಷ ಚಾರ್ಟರ್ ವಿಮಾನಗಳು ಮತ್ತು ಇತರ ವ್ಯವಸ್ಥೆಗಳನ್ನು ಮಾಡಲಾಗುತ್ತಿದೆ. ವಿದೇಶದಲ್ಲಿರುವ ನಮ್ಮ ಪ್ರಜೆಗಳ ಸುರಕ್ಷತೆ ಮತ್ತು ಯೋಗಕ್ಷೇಮಕ್ಕೆ ಸಂಪೂರ್ಣವಾಗಿ ನಮ್ಮ ಸರ್ಕಾರ ಬದ್ಧವಾಗಿದೆ ಎಂದು ಭಾರತದ ವಿದೇಶಾಂಗ ಸಚಿವ ಎಸ್ ಜೈಶಂಕರ್ ಅವರು ಎಕ್ಸ್ ವೇದಿಕೆಯಲ್ಲಿ ಟ್ವೀಟ್ ಮಾಡಿದ್ದಾರೆ.

Exit mobile version