Site icon Vistara News

Israel Palestine War: ಗಾಜಾ ಮೇಲೆ ಇಸ್ರೇಲ್ ಅಣ್ವಸ್ತ್ರ ದಾಳಿ?

isr

isr

ಗಾಜಾ: ಇಸ್ರೇಲ್‌ ಮತ್ತು ಪ್ಯಾಲೆಸ್ತೀನ್‌ ನಡುವಿನ ಸಂಘರ್ಷ (Israel Palestine War) ಮುಂದುವರಿದಿದೆ. ಇತ್ತ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು (Benjamin Netanyahu) ಸರ್ಕಾರಿ ಸಭೆಗಳಿಂದ ಅನಿರ್ದಿಷ್ಟಾವಧಿಗೆ ಪಾರಂಪರಿಕ ಸಚಿವ ಅಮಿಚೈ ಎಲಿಯಾಹು (Amichai Eliyahu) ಅವರನ್ನು ಅಮಾನತುಗೊಳಿಸಿದ್ದಾರೆ. ಗಾಜಾ ಪಟ್ಟಿ ಮೇಲೆ ಪರಮಾಣು ಬಾಂಬ್ ಪ್ರಯೋಗಿಸುವ ಸಾಧ್ಯತೆಯ ಕುರಿತಾದ ಎಲಿಯಾಹು ಅವರ ಹೇಳಿಕೆಯ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಮೂಲಗಳು ತಿಳಿಸಿವೆ. ಮುಗ್ಧರಿಗೆ ಹಾನಿಯಾಗುವುದನ್ನು ತಪ್ಪಿಸಲು ಇಸ್ರೇಲ್ ಮತ್ತು ಇಸ್ರೇಲ್ ರಕ್ಷಣಾ ಪಡೆಗಳು (IDF) ಅಂತಾರಾಷ್ಟ್ರೀಯ ಕಾನೂನಿನ ಅತ್ಯುನ್ನತ ಮಾನದಂಡಗಳಿಗೆ ಅನುಗುಣವಾಗಿ ಕಾರ್ಯನಿರ್ವಹಿಸುತ್ತಿವೆ ಎಂದು ನೆತನ್ಯಾಹು ಅವರ ಕಚೇರಿ ಸ್ಪಷ್ಟಪಡಿಸಿದೆ.

ಎಲಿಯಾಹು ಹೇಳಿದ್ದೇನು?

ಇತ್ತೀಚೆಗೆ ರೇಡಿಯೋ ಸಂದರ್ಶನವೊಂದರಲ್ಲಿ ಅಮಿಚೈ ಎಲಿಯಾಹು ಬಳಿ, ಗಾಜಾ ಪಟ್ಟಿಯ ಮೇಲೆ ಎಲ್ಲರನ್ನೂ ಕೊಲ್ಲಲು ಒಂದು ರೀತಿಯ ಪರಮಾಣು ಬಾಂಬ್ ಪ್ರಯೋಗಿಸುವ ಸಾಧ್ಯತೆ ಬಗ್ಗೆ ಪ್ರಶ್ನೆ ಕೇಳಲಾಯಿತು. ಇದಕ್ಕೆ ಎಲಿಯಾಹು “ಅದು ಒಂದು ಆಯ್ಕೆ” ಎಂದು ಉತ್ತರಿಸಿದ್ದರು. ಬಳಿಕ ಅವರು ತಮ್ಮ ಹೇಳಿಕೆಯನ್ನು ʼರೂಪಕʼ ಎಂದು ಸಮರ್ಥಿಸಿಕೊಂಡಿದ್ದರು.

ʼʼಸಚಿವ ಅಮಿಹೈ ಎಲಿಯಾಹು ಅವರ ಹೇಳಿಕೆಗಳು ವಾಸ್ತವವನ್ನು ಆಧರಿಸಿಲ್ಲ. ಮುಗ್ಧರಿಗೆ ಹಾನಿಯಾಗುವುದನ್ನು ತಪ್ಪಿಸಲು ಇಸ್ರೇಲ್ ಮತ್ತು ಐಡಿಎಫ್ ಅಂತಾರಾಷ್ಟ್ರೀಯ ಕಾನೂನಿನ ಮಾನದಂಡಗಳಿಗೆ ಅನುಗುಣವಾಗಿ ಕಾರ್ಯನಿರ್ವಹಿಸುತ್ತಿವೆ. ನಮ್ಮ ವಿಜಯದವರೆಗೂ ನಾವು ಮುಂದುವರಿಸುತ್ತೇವೆ” ಎಂದು ಇಸ್ರೇಲ್ ಪ್ರಧಾನಿ ಕಚೇರಿ ಸಾಮಾಜಿಕ ಜಾಲತಾಣ ಎಕ್ಸ್‌ ಮೂಲಕ ತಿಳಿಸಿದೆ.

ಅಕ್ಟೋಬರ್ 7ರಂದು ಹಮಾಸ್‌ ನಡೆಸಿದ ದಾಳಿಯಲ್ಲಿ 1,400 ಮಂದಿ ಮೃತಪಟ್ಟಿದ್ದರು ಎಂದು ಇಸ್ರೇಲ್ ಅಧಿಕಾರಿಗಳು ತಿಳಿಸಿದ್ದಾರೆ. ಇತ್ತ ಗಾಜಾದಲ್ಲಿ ಇಸ್ರೇಲ್ ನಡೆಸಿದ ಮಿಲಿಟರಿ ಕಾರ್ಯಾಚರಣೆಯಲ್ಲಿ 9,488 ಜನರು ಸಾವನ್ನಪ್ಪಿದ್ದಾರೆ ಎಂದು ಹಮಾಸ್ ನಡೆಸುತ್ತಿರುವ ಆರೋಗ್ಯ ಸಚಿವಾಲಯ ತಿಳಿಸಿದೆ.

ವಿಪಕ್ಷ ನಾಯಕನಿಂದ ಟೀಕೆ

ಅಲ್ಲದೆ ಎಲಿಯಾಹು ಗಾಜಾ ನಿವಾಸಿಗಳನ್ನು ʼನಾಜಿಗಳುʼ ಎಂದು ಕರೆದಿದ್ದರು. ಗಾಜಾ ಪಟ್ಟಿಗೆ ದೊರೆಯುವ ಮಾನವೀಯ ಸಹಾಯದ ವಿರುದ್ಧ ಧ್ವನಿ ಎತ್ತಿದ್ದರು ಎಂದು ಕೆಲವು ಮೂಲಗಳು ವರದಿ ಮಾಡಿವೆ. ಎಲಿಯಾಹು ಅವರನ್ನು ಪದಚ್ಯುತಗೊಳಿಸುವ ಮೊದಲು ವಿಪಕ್ಷ ನಾಯಕ ಯೈರ್ ಲ್ಯಾಪಿಡ್, ಗಾಜಾ ಪಟ್ಟಿಯ ಮೇಲೆ ಪರಮಾಣು ಬಾಂಬ್ ಹಾಕುವ ಸಾಧ್ಯತೆ ಇದೆ ಎಂಬ ಎಲಿಯಾಹು ಅವರ ಅಸಂಬದ್ಧ ಹೇಳಿಕೆಯನ್ನು ಟೀಕಿಸಿದ್ದರು. ಈ ಹೇಳಿಕೆಯನ್ನು ಅವರು ಬೇಜವಾಬ್ದಾರಿಯುತ ಸಚಿವರ ಭಯಾನಕ ಮತ್ತು ಹುಚ್ಚು ಹೇಳಿಕೆ ಎಂದು ಅವರು ಬಣ್ಣಿಸಿದ್ದರು.

ಇದನ್ನೂ ಓದಿ: Israel Palestine War: ಗಾಜಾ ನಿರಾಶ್ರಿತರ ಕೇಂದ್ರದ ಮೇಲೆ ಇಸ್ರೇಲ್‌ ದಾಳಿ; 68 ಜನ ಸಾವು

“ಎಲಿಯಾಹು ಸೆರೆಯಾಳುಗಳ ಕುಟುಂಬಗಳನ್ನು ನೋಯಿಸಿದರು, ಇಸ್ರೇಲಿ ಸಮಾಜವನ್ನು ನೋಯಿಸಿದರು ಮತ್ತು ನಮ್ಮ ಅಂತಾರಾಷ್ಟ್ರೀಯ ಸ್ಥಾನಮಾನಕ್ಕೆ ಹಾನಿ ಮಾಡಿದರು” ಎಂದು ಲ್ಯಾಪಿಡ್ ತಿಳಿಸಿದ್ದರು. “ಸರ್ಕಾರದಲ್ಲಿನ ಉಗ್ರಗಾಮಿಗಳ ಉಪಸ್ಥಿತಿಯು ನಮಗೆ ಮತ್ತು ಯುದ್ಧದ ಗುರಿಗಳ ಯಶಸ್ಸಿಗೆ ಅಪಾಯವನ್ನುಂಟು ಮಾಡುತ್ತದೆ. ಹಮಾಸ್ ಅನ್ನು ಸೋಲಿಸುವುದು ಮತ್ತು ಒತ್ತೆಯಾಳುಗಳನ್ನು ಹಿಂದಿರುಗಿಸುವುದು ನಮ್ಮ ಗುರಿ. ಇಸ್ರೇಲ್ ರಕ್ಷಣಾ ಸಚಿವ ಯೋವ್ ಗ್ಯಾಲಂಟ್ ಕೂಡ ಎಲಿಯಾಹು ಅವರ ಹೇಳಿಕೆಗಳನ್ನು “ಆಧಾರರಹಿತ” ಎಂದು ಕರೆದಿದ್ದಾರೆ ಎಂದು ಅವರು ತಿಳಿಸಿದ್ದರು.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version