Site icon Vistara News

Israel Palestine War: ಹಮಾಸ್‌ ಉಗ್ರರ ಅಟ್ಟಹಾಸ; ಇಸ್ರೇಲ್‌ನಲ್ಲಿ 1,200 ಜನರ ದುರ್ಮರಣ!

Israel Palestine War

Israel Palestine War: Over 1,200 Israelis killed in Hamas terror attacks, says army

ಜೆರುಸಲೇಂ: ಗಾಜಾಪಟ್ಟಿ ಮೇಲೆ ಇಸ್ರೇಲ್‌ ಸೇನೆಯು ನಿರಂತರವಾಗಿ ದಾಳಿ ನಡೆಸುತ್ತಿದ್ದರೂ, ಇಡೀ ಗಾಜಾಪಟ್ಟಿಯೇ ಮಸಣದಂತಾದರೂ ಹಮಾಸ್‌ ಉಗ್ರರು ಇಸ್ರೇಲ್‌ ಮೇಲೆ ನಡೆಸುತ್ತಿರುವ ದಾಳಿಯನ್ನು (Israel Palestine War) ಮಾತ್ರ ಕಡಿಮೆ ಮಾಡಿಲ್ಲ. ಗಾಜಾಪಟ್ಟಿಯ ಹಮಾಸ್‌ ಉಗ್ರರು ನಡೆಸುತ್ತಿರುವ ನಿರಂತರ ದಾಳಿಯಿಂದಾಗಿ ಇದುವರೆಗೆ ಇಸ್ರೇಲ್‌ನಲ್ಲಿ 1,200ಕ್ಕೂ ಅಧಿಕ ಮಂದಿ ಮೃತಪಟ್ಟಿದ್ದಾರೆ. ಸಾವಿರಾರು ಜನ ಗಾಯಗೊಂಡಿದ್ದಾರೆ ಎಂಬುದಾಗಿ ಇಸ್ರೇಲ್‌ ಸೇನೆ (Israel Army) ಮಾಹಿತಿ ನೀಡಿದೆ.

ಇಸ್ರೇಲ್‌ ನಡೆಸುತ್ತಿರುವ ದಾಳಿಯ ಬಳಿಕ ಗಾಜಾಪಟ್ಟಿಯಲ್ಲಿ ಎಷ್ಟು ಜನ ಮೃತಪಟ್ಟಿದ್ದಾರೆ ಎಂಬುದನ್ನೂ ಗಾಜಾ ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ. ಇಸ್ರೇಲ್‌ ದಾಳಿಯಿಂದ ಗಾಜಾದಲ್ಲಿ 900 ಮಂದಿ ಮೃತಪಟ್ಟರೆ, 4,600 ನಾಗರಿಕರು ಗಾಯಗೊಂಡಿದ್ದಾರೆ ಎಂದು ತಿಳಿಸಿದೆ. ಆದರೆ, ಮೂಲಗಳ ಪ್ರಕಾರ, ಎರಡೂ ದೇಶದಲ್ಲಿ ಇದಕ್ಕಿಂತ ಹೆಚ್ಚಿನ ಜನ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ. ಅದರಲ್ಲೂ, ಮಂಗಳವಾರ (ಅಕ್ಟೋಬರ್‌ 11) ತಡರಾತ್ರಿ ಇಸ್ರೇಲ್‌ ಮಾಡಿದ ವಾಯುದಾಳಿಗೆ ಗಾಜಾ ತತ್ತರಿಸಿ ಹೋಗಿದೆ ಎಂದು ಮೂಲಗಳು ತಿಳಿಸಿವೆ. ಹಾಗಾಗಿ, ಸಾವಿನ ಸಂಖ್ಯೆ ಇನ್ನೂ ಹೆಚ್ಚಿರಬಹುದು ಎನ್ನಲಾಗುತ್ತಿದೆ.

3 ಸಾವಿರ ದಾಟಿದ ಸಾವಿನ ಸಂಖ್ಯೆ

ಎರಡೂ ದೇಶಗಳಲ್ಲಿ ನಡೆಯುತ್ತಿರುವ ದಾಳಿಯಿಂದಾಗಿ ಮೃತಪಟ್ಟವರ ಸಂಖ್ಯೆ 3 ಸಾವಿರ ದಾಟಿದೆ ಎಂದು ತಿಳಿದುಬಂದಿದೆ. ಗಾಜಾಪಟ್ಟಿ ಮೇಲೆ ಇಸ್ರೇಲ್‌ ನಿರಂತರವಾಗಿ ದಾಳಿ ನಡೆಸುತ್ತಿರುವ ಕಾರಣ ಸಾವಿನ ಸಂಖ್ಯೆ ದಿಢೀರ್‌ ಏರಿಕೆಯಾಗಿದೆ ಎನ್ನಲಾಗಿದೆ. ಇಸ್ರೇಲ್‌ನಲ್ಲೂ ಸಾವಿರಕ್ಕೂ ಅಧಿಕ ನಾಗರಿಕರು ಮೃತಪಟ್ಟಿದ್ದಾರೆ ಎಂದು ಮೂಲಗಳು ತಿಳಿಸಿವೆ. “ನಾವು ಯುದ್ಧ ಆರಂಭಿಸಿಲ್ಲ. ಆದರೆ ಮುಗಿಸುತ್ತೇವೆ” ಎಂದು ಇಸ್ರೇಲ್‌ ಪ್ರಧಾನಿ ಬೆಂಜಮಿನ್‌ ನೆತನ್ಯಾಹು ಈಗಾಗಲೇ ಘೋಷಿಸಿದ್ದಾರೆ.

ಇದನ್ನೂ ಓದಿ: Israel Palestine War: ಭಾರತದ ಬೆನ್ನಲ್ಲೇ ಬ್ರಿಟನ್‌ ಬೆಂಬಲ; ಸಂಸತ್‌ ಮೇಲೆ ಇಸ್ರೇಲ್‌ ಧ್ವಜ!

ಇಸ್ರೇಲ್‌ಗೆ ಹಲವು ದೇಶಗಳ ಬೆಂಬಲ

ಬ್ರಿಟನ್‌ ಸಂಸತ್ತು, ಅಮೆರಿಕದ ವಾಷಿಂಗ್ಟನ್‌ನಲ್ಲಿರುವ ಶ್ವೇತ ಭವನ, ನ್ಯೂಯಾರ್ಕ್‌ ನಗರದಲ್ಲಿರುವ ಎಂಪೈರ್‌ ಸ್ಟೇಡ್‌ ಕಟ್ಟಡ, ಫ್ರಾನ್ಸ್‌ನ ಪ್ಯಾರಿಸ್‌ನಲ್ಲಿರುವ ಐಫೆಲ್‌ ಟವರ್‌ ಸೇರ ಹಲವು ಕಟ್ಟಡಗಳು ಇಸ್ರೇಲ್‌ ಧ್ವಜದ ನೀಲಿ ಹಾಗೂ ಬಿಳಿ ಬಣ್ಣಗಳಿಂದ ಕಂಗೊಳಿಸುವ ಮೂಲಕ ಬೆಂಬಲ ಸೂಚಿಸಲಾಗಿದೆ. ಹಾಗೆಯೇ, ಐಫೆಲ್‌ ಟವರ್‌ ಮೇಲೆ ನೀಲಿ ಹಾಗೂ ಬಿಳಿ ಬಣ್ಣಗಳ ಲೈಟ್‌ ಉರಿಸುವ ಜತೆಗೆ ಇಸ್ರೇಲ್‌ ರಾಷ್ಟ್ರಗೀತೆಯನ್ನೂ ಮೊಳಗಿಸಲಾಗಿದೆ ಎಂದು ತಿಳಿದುಬಂದಿದೆ. ಈಗಾಗಲೇ ಇಸ್ರೇಲ್‌ಗೆ ಭಾರತ, ಅಮೆರಿಕ, ಇಟಲಿ, ಜರ್ಮನಿ, ಬ್ರಿಟನ್‌ ಸೇರಿ ಹಲವು ರಾಷ್ಟ್ರಗಳು ಬೆಂಬಲ ಸೂಚಿಸಿವೆ.

Exit mobile version