ಟೆಲ್‌ಅವಿವ್: ಇಸ್ರೇಲ್ ಹಾಗೂ ಪ್ಯಾಲೆಸ್ತೀನ್‌ನ ಹಮಾಸ್ ಉಗ್ರರ ಮಧ್ಯೆ ನಡೆಯುತ್ತಿರುವ ಸಂಘರ್ಷವು (Israel Palestine War) 13ನೇ ದಿನಕ್ಕೆ ಕಾಲಿಟ್ಟಿದೆ. ಇಸ್ರೇಲ್ ಮೇಲೆ ಹಮಾಸ್ ಉಗ್ರರು (Hamas Terrorists) ಮಾಡಿದ ದಾಳಿಗೆ 1,400ಕ್ಕೂ ಮಂದಿ ಮೃತಪಟ್ಟಿದ್ದಾರೆ. ಗಾಜಾ ನಗರದ ಮೇಲೆ ಇಸ್ರೇಲ್ ನಡೆಸಿದ ದಾಳಿಗೆ 2,750ಕ್ಕೂ ಅಧಿಕ ಜನ ಬಲಿಯಾಗಿದ್ದಾರೆ. ಇಷ್ಟಾದರೂ ಇಸ್ರೇಲ್ ಹಾಗೂ ಹಮಾಸ್ ಉಗ್ರರ ಸಂಘರ್ಷ ನಿಲ್ಲುವಂತೆ ಕಾಣುತ್ತಿಲ್ಲ. ಹಾಗಾಗಿ, ಅಮೆರಿಕ ಅಧ್ಯಕ್ಷ ಜೋ ಬೈಡೆನ್ ಅವರು ಇಸ್ರೇಲ್‌ಗೆ ಭೇಟಿ ನೀಡಿದ ಬೆನ್ನಲ್ಲೇ ಬ್ರಿಟನ್ ಪ್ರಧಾನಿ ರಿಷಿ ಸುನಕ್ (Rishi Sunak) ಕೂಡ ಗುರುವಾರ (ಅಕ್ಟೋಬರ್ 19) ಇಸ್ರೇಲ್‌ಗೆ ಭೇಟಿ ನೀಡಿದ್ದಾರೆ.
ಇಸ್ರೇಲ್‌ನ ಟೆಲ್ ಅವಿವ್‌ಗೆ ಬಂದಿಳಿಯುತ್ತಲೇ ರಿಷಿ ಸುನಕ್ ಅವರು ಎಕ್ಸ್ ಸಾಮಾಜಿಕ ಜಾಲತಾಣದಲ್ಲಿ ಫೋಟೊ ಪೋಸ್ಟ್ ಮಾಡಿದ್ದಾರೆ. ಹಾಗೆಯೇ, “ನಾನು ಇಸ್ರೇಲ್‌ನಲ್ಲಿದ್ದೇನೆ. ದುಃಖದಲ್ಲಿರುವ ಇಸ್ರೇಲ್ ನೆಲದ ಮೇಲೆ ನಿಂತಿದ್ದೇನೆ. ನಾನೂ ನಿಮ್ಮ ದುಃಖದಲ್ಲಿ ಪಾಲುದಾರನಾಗಿದ್ದೇನೆ ಹಾಗೂ ದುಷ್ಟಶಕ್ತಿಯಾದ ಭಯೋತ್ಪಾದನೆಯ ವಿರುದ್ಧ ಹೋರಾಟಕ್ಕೆ ಬೆಂಬಲ ಘೋಷಿಸುತ್ತಿದ್ದೇನೆ. ಈ ಬೆಂಬಲ ಈಗ ಮಾತ್ರವಲ್ಲ, ಎಂದಿಗೂ ಇರುತ್ತದೆ” ಎಂದು ಪೋಸ್ಟ್ ಮಾಡುವ ಮೂಲಕ ಇಸ್ರೇಲ್‌ಗೆ ಬೆಂಬಲ ಸೂಚಿಸಿದ್ದಾರೆ. ಇದರ ಬೆನ್ನಲ್ಲೇ, ಹಮಾಸ್ ಉಗ್ರರು ಇಸ್ರೇಲ್ ಮೇಲಿನ ರಾಕೆಟ್ ದಾಳಿಯನ್ನು ತೀವ್ರಗೊಳಿಸಿದೆ ಎಂದು ತಿಳಿದುಬಂದಿದೆ.
I am in Israel, a nation in grief.
— Rishi Sunak (@RishiSunak) October 19, 2023
I grieve with you and stand with you against the evil that is terrorism.
Today, and always.
סוֹלִידָרִיוּת pic.twitter.com/DTcvkkLqdT
ರಿಷಿ ಸುನಕ್ ಅವರು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರನ್ನು ಭೇಟಿಯಾಗಲಿದ್ದು, ಹಮಾಸ್ ಉಗ್ರರ ದಾಳಿ, ಇಸ್ರೇಲ್ ಪರಿಸ್ಥಿತಿ ಅವಲೋಕನ ಜತೆಗೆ ಶಾಂತಿಸ್ಥಾಪನೆಗೆ ತೆಗೆದುಕೊಳ್ಳಬೇಕಾದ ಕ್ರಮಗಳ ಕುರಿತು ಕೂಡ ಚರ್ಚಿಸಲಿದ್ದಾರೆ ಎಂದು ತಿಳಿದುಬಂದಿದೆ. ರಿಷಿ ಸುನಕ್ ಅವರು ಇಸ್ರೇಲ್‌ಗೆ ಭೇಟಿ ನೀಡುವ ಮೊದಲು ಕೂಡ ಬೆಂಜಮಿನ್ ನೆತನ್ಯಾಹು ಅವರಿಗೆ ಬೆಂಬಲ ಘೋಷಿಸಿದ್ದರು. ಅಲ್ಲದೆ, ಸಾಗರ ಪ್ರದೇಶದಲ್ಲಿ ವೈರಿಗಳ ಮೇಲೆ ನಿಗಾ ಇರಿಸಲು ಯುದ್ಧ ನೌಕೆ ಹಾಗೂ ಯುದ್ಧವಿಮಾನದ ನೆರವು ನೀಡಿದ್ದರು.
ಇದನ್ನೂ ಓದಿ: ಅಮೆರಿಕ ಮಾಡಿದ ತಪ್ಪನ್ನೇ ನೀವೂ ಮಾಡಬೇಡಿ, ಸಿಟ್ಟಿನ ಕೈಗೆ ಬುದ್ಧಿ ಕೊಡ್ಬೇಡಿ! ಇಸ್ರೇಲ್‌ಗೆ ಬೈಡೆನ್ ಕಿವಿಮಾತು
ಬುಧವಾರ (ಅಕ್ಟೋಬರ್ 18) ಇಸ್ರೇಲ್‌ಗೆ ಭೇಟಿ ನೀಡಿದ್ದ ಅಮೆರಿಕ ಅಧ್ಯಕ್ಷ ಜೋ ಬೈಡೆನ್ ಅವರು ಕೂಡ ಇಸ್ರೇಲ್‌ಗೆ ಬೆಂಬಲ ಸೂಚಿಸಿದ್ದಾರೆ. ಅಲ್ಲದೆ, 500 ಪ್ಯಾಲೆಸ್ತೀನಿಗಳ ಹತ್ಯೆಗೆ ಕಾರಣವಾದ ಆಸ್ಪತ್ರೆ ಮೇಲಿನ ಬಾಂಬ್ ದಾಳಿ ಕುರಿತು ಇಸ್ರೇಲ್ ಪ್ರಧಾನಿ ನೆತನ್ಯಾಹು ಅವರ ಹೇಳಿಕೆಯನ್ನು ಅಮೆರಿಕ ಅಧ್ಯಕ್ಷ ಜೋ ಬೈಡೆನ್ ಅವರು ಬೆಂಬಲಿಸಿದ್ದರು. ಹಾಗೆಯೇ, ಶಾಂತಿಸ್ಥಾಪನೆ, ದಾಳಿಯ ತೀವ್ರತೆಗೆ ಸಂಬಂಧಿಸಿದಂತೆ ಜೋ ಬೈಡೆನ್ ಅವರು ನೆತನ್ಯಾಹು ಅವರಿಗೆ ಹಲವು ಸಲಹೆ ನೀಡಿದ್ದರು.