Site icon Vistara News

Israel Palestine War: ಯಾರಿಗೂ ಜಗ್ಗದ ಇಸ್ರೇಲ್;‌ ದೇಶದತ್ತ ಬಂದ ‘ಇರಾನ್‌’ ಕ್ಷಿಪಣಿ ಧ್ವಂಸ!

Israel Shoots Missile

Israel releases footage of shooting missiles by Iran backed Houthis

ಜೆರುಸಲೇಂ: ದೇಶದ ಸುತ್ತಲೂ ಶತ್ರುಗಳು ಇದ್ದರೂ, ಅವರೆಲ್ಲರ ದಾಳಿಯನ್ನು ಮೆಟ್ಟಿನಿಂತಿರುವ ಇಸ್ರೇಲ್‌ (Israel Palestine War) ಈಗ ಗಾಜಾ ನಗರದಲ್ಲಿರುವ ಹಮಾಸ್‌ ಉಗ್ರರನ್ನು ನಿರ್ನಾಮ ಮಾಡಲು ದಾಳಿ ನಡೆಸುತ್ತಿದೆ. ಅಕ್ಟೋಬರ್‌ 7ರಂದು ಹಮಾಸ್‌ ಉಗ್ರರ ದಾಳಿಗೆ ಪ್ರತಿದಾಳಿ ನಡೆಸುತ್ತಿರುವ ಇಸ್ರೇಲ್‌, ಜಾಗತಿಕ ಒತ್ತಡದ ಮಧ್ಯೆಯೂ ಗಾಜಾ ನಗರದ ಮೇಲೆ ಯುದ್ಧ ಸಾರಿದೆ. ಇದರ ಬೆನ್ನಲ್ಲೇ, ಯೆಮೆನ್‌ (Yemen) ಬಂಡುಕೋರರು ಉಡಾಯಿಸಿದ ಕ್ರೂಸ್‌ ಕ್ಷಿಪಣಿಯೊಂದನ್ನು (Cruise Missile) ಇಸ್ರೇಲ್‌ ಸೇನೆಯು (Israel Defence Force) ಯಶಸ್ವಿಯಾಗಿ ಹೊಡೆದುರುಳಿಸಿದೆ. ಆ ಮೂಲಕ ದೇಶದ ರಕ್ಷಣೆ ವಿಚಾರದಲ್ಲಿ ನಾವು ಯಾರಿಗೂ ಜಗ್ಗುವುದಿಲ್ಲ ಎಂಬ ಸಂದೇಶ ರವಾನಿಸಿದೆ.

ದೇಶದ ಇತಿಹಾಸದಲ್ಲಿಯೇ ಇದೇ ಮೊದಲ ಬಾರಿಗೆ ಇಸ್ರೇಲ್‌ ಆ್ಯರೋ 3 ಯುದ್ಧವಿಮಾನ ಬಳಸಿ ಬೇರೆ ರಾಷ್ಟ್ರದ ಕ್ಷಿಪಣಿಯೊಂದನ್ನು ಹೊಡೆದುರುಳಿಸಿದೆ ಎಂದು ತಿಳಿದುಬಂದಿದೆ. ಹೊಡೆದುರುಳಿಸಿದ ವಿಡಿಯೊವನ್ನು ಕೂಡ ಇಸ್ರೇಲ್‌ ಹಂಚಿಕೊಂಡಿದೆ. ಯೆಮೆನ್‌ನಲ್ಲಿರುವ ಹೌಥಿ ಬಂಡುಕೋರಿಗೆ ಇರಾನ್‌ ಬೆಂಬಲವಿದೆ. ಈ ಬಂಡುಕೋರರು ಇತ್ತೀಚೆಗೆ ಇಸ್ರೇಲ್‌ನತ್ತ ಕ್ರೂಸ್‌ ಕ್ಷಿಪಣಿಯೊಂದನ್ನು ಉಡಾವಣೆ ಮಾಡಿದೆ. ಇದನ್ನು ಗಮನಿಸಿದ ಇಸ್ರೇಲ್‌ ಸೇನೆಯು, ಅದನ್ನು ಎಫ್‌ 35 I ಯುದ್ಧವಿಮಾನದ ಮೂಲಕ ಹೊಡೆದುರುಳಿಸಿದೆ.

“ಕೆಲ ದಿನಗಳ ಹಿಂದಷ್ಟೇ ಇಸ್ರೇಲ್‌ ವಾಯು ಪ್ರದೇಶದತ್ತ ಕ್ಷಿಪಣಿಯೊಂದು ಹಾರಿ ಬರುತ್ತಿತ್ತು. ಇಸ್ರೇಲ್‌ ವಾಯುಪಡೆಯು ಈ ಕ್ಷಿಪಣಿಯನ್ನು ಗಮನಿಸಿದ್ದು, ನಮ್ಮ ದೇಶದ ಯುದ್ಧವಿಮಾನದ ಮೂಲಕ ಕ್ಷಿಪಣಿಯನ್ನು ಕೂಡಲೇ ಹೊಡೆದುರುಳಿಸಲಾಗಿದೆ” ಎಂದು ಇಸ್ರೇಲ್‌ ರಕ್ಷಣಾ ಪಡೆಯು ವಿಡಿಯೊ ಸಮೇತ ಪೋಸ್ಟ್‌ ಹಂಚಿಕೊಂಡಿದೆ. ಯೆಮೆನ್‌ನಲ್ಲಿರುವ ಹೌಥಿ ಬಂಡುಕೋರರಿಗೆ ಇರಾನ್‌ ಬೆಂಬಲ ಇದೆ. ಹಮಾಸ್‌ ಉಗ್ರರು ಇಸ್ರೇಲ್‌ ಮೇಲೆ ದಾಳಿ ನಡೆಸಿರುವುದರ ಹಿಂದೆಯೂ ಇರಾನ್‌ ಕೈವಾಡವಿದೆ ಎಂದು ಹೇಳಲಾಗುತ್ತಿದೆ.

ಇದನ್ನೂ ಓದಿ: Israel Palestine War: ಇಸ್ರೇಲ್‌ ದಾಳಿಯಲ್ಲಿ ಅಲ್ ಜಜೀರಾ ಇಂಜಿನಿಯರ್‌ ಕುಟುಂಬದ 19 ಸದಸ್ಯರ ಸಾವು

10 ಸಾವಿರ ದಾಟಿದ ಸಾವಿನ ಸಂಖ್ಯೆ

ಇಸ್ರೇಲ್‌ ಹಾಗೂ ಹಮಾಸ್‌ ಉಗ್ರರ ನಡುವಿನ ಸಮರದಲ್ಲಿ ಮೃತಪಟ್ಟವರ ಸಂಖ್ಯೆ 10 ಸಾವಿರ ದಾಟಿದೆ. ಅದರಲ್ಲೂ, ಹಮಾಸ್‌ ಉಗ್ರರ ತಾಣವಾದ ಗಾಜಾ ನಗರದ ಮೇಲೆ ಇಸ್ರೇಲ್‌ ನಿರಂತರವಾಗಿ ದಾಳಿ ನಡೆಸುತ್ತಿದ್ದು, ನಗರದಲ್ಲಿ ಇದುವರೆಗೆ 9,227 ಜನ ಮೃತಪಟ್ಟಿದ್ದಾರೆ ಎಂದು ಗಾಜಾ ಆರೋಗ್ಯ ಸಚಿವಾಲಯವೇ ಮಾಹಿತಿ ನೀಡಿದೆ. ಇನ್ನೂ 2 ಸಾವಿರಕ್ಕೂ ಅಧಿಕ ಜನ ಕಟ್ಟಡದ ಅವಶೇಷಗಳಲ್ಲಿ ಸಿಲುಕಿದ್ದು, ಅವರ ರಕ್ಷಣೆಗೆ ಕಾರ್ಯಾಚರಣೆ ನಡೆಯುತ್ತಿದೆ ಎಂಬುದಾಗಿ ಮಾಹಿತಿ ನೀಡಿದೆ. ಇನ್ನು ಹಮಾಸ್‌ ಉಗ್ರರ ದಾಳಿಗೆ ಇಸ್ರೇಲ್‌ನಲ್ಲಿ 1,400 ಜನ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.

Exit mobile version