Site icon Vistara News

ಗಾಜಾ ಆಸ್ಪತ್ರೆಯಲ್ಲಿ ಸುರಂಗ, ಬಂದೂಕು ಪತ್ತೆಹಚ್ಚಿದ ಇಸ್ರೇಲ್; ವಿಶ್ವಸಂಸ್ಥೆ ನೆರವು ಇಲ್ಲ

Guns In Al Shifa Hospital

Israel says it found Hamas tunnel at Gaza hospital, recovered body of hostage

ಗಾಜಾ ನಗರ: ಹಮಾಸ್‌ ಉಗ್ರರ ಬೀಡಾಗಿರುವ ಗಾಜಾ ನಗರದ ಅಲ್‌-ಶಿಫಾ (Al Shifa Hospital) ಆಸ್ಪತ್ರೆ ಮೇಲೆ ದಾಳಿ ಮಾಡಿದ ಇಸ್ರೇಲ್‌ ಸೇನೆಯು ಉಗ್ರರ ಕರಾಳ ಮುಖವನ್ನು ಅನಾವರಣ ಮಾಡಿದೆ. ಅಲ್‌ ಶಿಫಾ ಆಸ್ಪತ್ರೆಯಲ್ಲಿಯೇ ಹಮಾಸ್‌ ಉಗ್ರರ (Hamas Terrorists) ಸುರಂಗವನ್ನು ಪತ್ತೆಹಚ್ಚಿರುವ ಇಸ್ರೇಲ್‌, ಅಪಾರ ಪ್ರಮಾಣದ ಶಸ್ತ್ರಾಸ್ತ್ರಗಳನ್ನೂ ವಶಪಡಿಸಿಕೊಂಡಿದೆ. ಈ ಕುರಿತ ವಿಡಿಯೊಗಳನ್ನು ಇಸ್ರೇಲ್‌ ಡಿಫೆನ್ಸ್‌ ಫೋರ್ಸ್‌ (Israel Defence Force) ಹಂಚಿಕೊಂಡಿದೆ.

“ಅಲ್‌ ಶಿಫಾ ಆಸ್ಪತ್ರೆಯು ಹಮಾಸ್‌ ಉಗ್ರರ ತಾಣವಾಗಿದೆ. ಆಸ್ಪತ್ರೆಯಲ್ಲಿ ಹಮಾಸ್‌ ಉಗ್ರರ ಸುರಂಗ ಪತ್ತೆಯಾಗಿದೆ. ಎಕೆ 47 ಗನ್‌ಗಳು, ಸ್ನೈಫರ್‌ ರೈಫಲ್‌ಗಳು, ಗ್ರೆನೇಡ್‌ಗಳು ಸೇರಿ ಹಲವು ಶಸ್ತ್ರಾಸ್ತ್ರಗಳು ಸಿಕ್ಕಿವೆ. ಆಸ್ಪತ್ರೆಯನ್ನು ಹಮಾಸ್‌ ಉಗ್ರರು ಮಿಲಿಟರಿ ಕಾರ್ಯಾಚರಣೆಗೆ ಬಳಸುತ್ತಿದೆ” ಎಂದು ಇಸ್ರೇಲ್‌ ಸೇನೆ ತಿಳಿಸಿದೆ. ಮತ್ತೊಂದೆಡೆ, ಗಾಜಾ ನಗರದ ಮೇಲೆ ಇಸ್ರೇಲ್‌ ಸಂಪೂರ್ಣ ಹಿಡಿತ ಸಾಧಿಸುತ್ತಿರುವ ಕಾರಣ ವಿಶ್ವಸಂಸ್ಥೆಯಿಂದ ಗಾಜಾ ನಗರದಲ್ಲಿರುವ ನಿರಾಶ್ರಿತರಿಗೆ ನೆರವು ನೀಡಲು ಆಗುತ್ತಿಲ್ಲ ಎಂದು ತಿಳಿದುಬಂದಿದೆ.

ಅಲ್‌-ಶಿಫಾ ಆಸ್ಪತ್ರೆಯ ಕೆಳಗೆ ಹಮಾಸ್‌ ಉಗ್ರರ ಸುರಂಗವಿದೆ. ಆಸ್ಪತ್ರೆ ಮೂಲಕ ಸುರಂಗದೊಳಗೆ ಹೋಗುವುದು, ಅಲ್ಲಿಂದ ಬರುವುದು, ಆಸ್ಪತ್ರೆಯಲ್ಲಿಯೇ ದಾಳಿಗೆ ಸಂಚು ರೂಪಿಸುವುದು ಸೇರಿ ಹಲವು ಕೃತ್ಯಗಳಲ್ಲಿ ಹಮಾಸ್‌ ಉಗ್ರರು ತೊಡಗಿದ್ದಾರೆ ಎಂದು ಹೇಳಲಾಗುತ್ತಿದೆ. ಹಾಗಾಗಿ ಬುಲ್ಡೋಜರ್‌ಗಳನ್ನು ಬಳಸಲಾಗುತ್ತಿದೆ ಎಂದು ತಿಳಿದುಬಂದಿದೆ. ಇದಕ್ಕೂ ಮೊದಲು, ಆಸ್ಪತ್ರೆಯಲ್ಲಿ ಉಗ್ರ ಚಟುವಟಿಕೆಗಳನ್ನು ನಿಲ್ಲಿಸಬೇಕು ಎಂದು ಹಮಾಸ್‌ ಉಗ್ರರಿಗೆ ಇಸ್ರೇಲ್‌ ಗಡುವು ನೀಡಿತ್ತು. ಆದರೆ, ಹಮಾಸ್‌ ಉಗ್ರರು ಇದಕ್ಕೆ ಸೊಪ್ಪು ಹಾಕದ ಕಾರಣ ಭೀಕರವಾಗಿ ದಾಳಿ ನಡೆಸಲಾಗುತ್ತಿದೆ. ಇನ್ನು ಆಸ್ಪತ್ರೆಯಲ್ಲಿ ಇಸ್ರೇಲ್‌ ಒತ್ತೆಯಾಳುಗಳ ಶವಗಳು ಕೂಡ ದೊರೆತಿವೆ ಎಂದು ತಿಳಿದುಬಂದಿದೆ.

ಇದನ್ನೂ ಓದಿ: Israel Palestine War: ‌ಇಸ್ರೇಲ್‌ ಸೈನಿಕರು ಅತ್ಯಾಚಾರಿಗಳು ಎಂದ ಶಿಕ್ಷಕನ ಬಂಧನ!

12 ಸಾವಿರ ದಾಟಿದ ಸಾವಿನ ಸಂಖ್ಯೆ

ಇಸ್ರೇಲ್‌ ಹಾಗೂ ಹಮಾಸ್‌ ಉಗ್ರರ ನಡುವಿನ ಸಮರದಲ್ಲಿ ಮೃತಪಟ್ಟವರ ಸಂಖ್ಯೆ 12 ಸಾವಿರ ದಾಟಿದೆ. ಅದರಲ್ಲೂ, ಹಮಾಸ್‌ ಉಗ್ರರ ತಾಣವಾದ ಗಾಜಾ ನಗರದ ಮೇಲೆ ಇಸ್ರೇಲ್‌ ನಿರಂತರವಾಗಿ ದಾಳಿ ನಡೆಸುತ್ತಿದ್ದು, ನಗರದಲ್ಲಿ ಇದುವರೆಗೆ 11 ಸಾವಿರಕ್ಕೂ ಜನ ಮೃತಪಟ್ಟಿದ್ದಾರೆ ಎಂದು ಗಾಜಾ ಆರೋಗ್ಯ ಸಚಿವಾಲಯವೇ ಮಾಹಿತಿ ನೀಡಿದೆ. ಇನ್ನೂ 3 ಸಾವಿರಕ್ಕೂ ಅಧಿಕ ಜನ ಕಟ್ಟಡದ ಅವಶೇಷಗಳಲ್ಲಿ ಸಿಲುಕಿದ್ದು, ಅವರ ರಕ್ಷಣೆಗೆ ಕಾರ್ಯಾಚರಣೆ ನಡೆಯುತ್ತಿದೆ ಎಂಬುದಾಗಿ ಮಾಹಿತಿ ನೀಡಿದೆ. ಇನ್ನು ಹಮಾಸ್‌ ಉಗ್ರರ ದಾಳಿಗೆ ಇಸ್ರೇಲ್‌ನಲ್ಲಿ 1,400 ಜನ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version