Site icon Vistara News

Israel Palestine War: ಇಟ್ಟ ಗುರಿ ತಪ್ಪದ ಇಸ್ರೇಲ್;‌ ಹಮಾಸ್‌ನ 3 ಪ್ರಮುಖ ಉಗ್ರರ ಮಟಾಷ್!

Israel Kills Hamas Terrorists

Israel says its fighter jets killed 3 senior Hamas operatives‌

ಜೆರುಸಲೇಂ: ಗಾಜಾ ನಗರದ ಮೇಲೆ ಪೂರ್ಣ ಪ್ರಮಾಣದ ದಾಳಿ (Israel Palestine War) ಮಾಡುವ ಉತ್ಸಾಹದಲ್ಲಿರುವ ಇಸ್ರೇಲ್‌ ಈಗ ಮೂವರು ಪ್ರಮುಖ ಹಮಾಸ್‌ ಉಗ್ರರನ್ನು (Hamas Terrorists) ಹೊಡೆದುರುಳಿಸಿದೆ. ಹಮಾಸ್‌ ಉಗ್ರ ಸಂಘಟನೆಯಲ್ಲಿ ಪ್ರಮುಖ ಪಾತ್ರ ನಿರ್ವಹಿಸುವ, ಇಸ್ರೇಲ್‌ ಮೇಲೆ ದಾಳಿ ನಡೆಸಲು ಸಂಚು ರೂಪಿಸಿದ ಮೂವರು ಹಿರಿಯ ಹಮಾಸ್‌ ಉಗ್ರರನ್ನು ಹತ್ಯೆ ಮಾಡಲಾಗಿದೆ ಎಂದು ಇಸ್ರೇಲ್‌ ರಕ್ಷಣಾ ಪಡೆಯೇ (IDF) ಹತ ಉಗ್ರರ ಫೋಟೊಗಳ ಸಮೇತ ಮಾಹಿತಿ ನೀಡಿದೆ.

“ಐಡಿಎಫ್‌ ಹಾಗೂ ಗುಪ್ತಚರ ಇಲಾಖೆಯ ನಿಖರ ಮಾಹಿತಿ ಮೇರೆಗೆ ಐಡಿಎಫ್‌ ಯುದ್ಧವಿಮಾನಗಳ ಮೂಲಕ ದಾಳಿ ನಡೆಸಿ, ಹಮಾಸ್‌ನ ದರಾಜ್‌ ತುಫಾ ಬೆಟಾಲಿಯನ್‌ನ ಮೂವರು ಪ್ರಮುಖ ಉಗ್ರರನ್ನು ಹತ್ಯೆ ಮಾಡಲಾಗಿದೆ. ಮೂವರು ಉಗ್ರರು ಅಕ್ಟೋಬರ್‌ 7ರಂದು ಸಾವಿರಾರು ರಾಕೆಟ್‌ಗಳ ಮೂಲಕ ಇಸ್ರೇಲ್‌ ಮೇಲೆ ದಾಳಿ ನಡೆಸಲು ಪ್ರಮುಖ ಪಾತ್ರ ವಹಿಸಿದ್ದಾರೆ” ಎಂದು ಐಡಿಎಫ್‌ ಪೋಸ್ಟ್‌ ಮಾಡಿದೆ.

ಹತ್ಯೆಗೀಡಾದ ಮೂವರು ಉಗ್ರರನ್ನು ಬೆಟಾಲಿಯನ್‌ ಕಮಾಂಡರ್‌ ರಿಫಾತ್‌ ಅಬ್ಬಾಸ್‌, ಬೆಟಾಲಿಯನ್‌ ಡೆಪ್ಯೂಟಿ ಕಮಾಂಡರ್‌ ಇಬ್ರಾಹಿಂ ಜಬ್ದಾ ಹಾಗೂ ಕೋಂಬಾಟ್‌ ಸಪೋರ್ಟ್‌ ಕಮಾಂಡರ್‌ ತಾರೆಕ್‌ ಮಾರೌಫ್‌ ಎಂದು ಗುರುತಿಸಲಾಗಿದೆ. ಇದರೊಂದಿಗೆ ಹಮಾಸ್‌ ಉಗ್ರರಿಗೆ ಮತ್ತೊಂದು ಹಿನ್ನಡೆಯಾದಂತಾಗಿದೆ. ಹಮಾಸ್‌ನ ಹಿರಿಯ ಉಗ್ರರನ್ನೇ ಗುರಿಯಾಗಿಸಿ ಇಸ್ರೇಲ್‌ ದಾಳಿ ನಡೆಸುತ್ತಿದ್ದು, ಇಡೀ ಸಂಘಟನೆಯನ್ನು ನಿರ್ಮೂಲನೆ ಮಾಡುವ ಪಣ ತೊಟ್ಟಿದೆ.

7 ಸಾವಿರ ದಾಟಿದ ಸಾವಿನ ಸಂಖ್ಯೆ

ಇಸ್ರೇಲ್‌ ಮೇಲೆ ಹಮಾಸ್‌ ಉಗ್ರರು ಹಾಗೂ ಗಾಜಾ ನಗರದ ಮೇಲೆ ಇಸ್ರೇಲ್‌ ಸೇನೆ ಮಾಡುತ್ತಿರುವ ಸತತ ದಾಳಿಯಿಂದಾಗಿ ಇದುವರೆಗೆ 7,100 ಜನ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ. ಇಸ್ರೇಲ್‌ ಮೇಲೆ ಹಮಾಸ್‌ ಮಾಡಿದ ದಾಳಿಯಿಂದ ಇದುವರೆಗೆ 1,400 ಮಂದಿ ಮೃತಪಟ್ಟಿದ್ದಾರೆ. ಮತ್ತೊಂದೆಡೆ, ಗಾಜಾ ನಗರದಲ್ಲಿ ಇಸ್ರೇಲ್‌ ಸತತ ದಾಳಿಗೆ 5,700ಕ್ಕೂ ಅಧಿಕ ಮಂದಿ ಬಲಿಯಾಗಿದ್ದಾರೆ ಎಂದು ತಿಳಿದುಬಂದಿದೆ. ಗಾಜಾ ನಗರದಲ್ಲಂತೂ ಸಾವಿರಾರು ಜನ ಗಾಯಗೊಂಡಿದ್ದು, ಲಕ್ಷಾಂತರ ನಾಗರಿಕರು ನಿರಾಶ್ರಿತರಾಗಿದ್ದಾರೆ.

ಇದನ್ನೂ ಓದಿ: Israel Palestine War: ಉಗ್ರರ ವಿರುದ್ಧ ಇಸ್ರೇಲ್‌ ಸಮರ; ಗಾಜಾ ಚರ್ಚ್‌ ಉಡೀಸ್‌, 21 ಸಾವು

ಇಸ್ರೇಲ್‌ ಹಾಗೂ ಹಮಾಸ್‌ ಉಗ್ರರ ದಾಳಿಗೆ 7 ಸಾವಿರಕ್ಕೂ ಅಧಿಕ ಜನ ಮೃತಪಡುವ ಜತೆಗೆ ಲಕ್ಷಾಂತರ ಜನ ನಿರಾಶ್ರಿತರಾಗಿದ್ದಾರೆ. ಇದರ ಬೆನ್ನಲ್ಲೇ ಗಾಜಾ ನಗರಕ್ಕೆ ಇಸ್ರೇಲ್‌ ಯುದ್ಧ ಟ್ಯಾಂಕರ್‌ಗಳನ್ನು ನುಗ್ಗಿಸಿದೆ. ಗಾಜಾ ನಗರದ ಉತ್ತರ ಭಾಗದಲ್ಲಿ ಯುದ್ಧ ಟ್ಯಾಂಕರ್‌ಗಳನ್ನು ನಿಯೋಜಿಸಿದ ಕುರಿತು ಇಸ್ರೇಲ್‌ ರಕ್ಷಣಾ ಪಡೆ ತಿಳಿಸಿದೆ. ಗಾಜಾ ಉತ್ತರ ಭಾಗದಲ್ಲಿ ಯುದ್ಧ ಟ್ಯಾಂಕರ್‌ಗಳು ನಿಗದಿತ ಗುರಿಗಳನ್ನು ಹೊಡೆದುರುಳಿಸಿದ ವಿಡಿಯೊ ಈಗ ವೈರಲ್‌ ಆಗಿದೆ. ಹಮಾಸ್‌ ಉಗ್ರರನ್ನು ನಿರ್ನಾಮ ಮಾಡದೆ ಬಿಡುವುದಿಲ್ಲ ಎಂದು ಐಡಿಎಫ್‌ ಮುಖ್ಯಸ್ಥ ಈಗಾಗಲೇ ಘೋಷಿಸಿದ್ದಾರೆ. ಹಾಗಾಗಿ, ಯಾವುದೇ ಸಮಯದಲ್ಲಿ ಕೂಡ ಇಸ್ರೇಲ್‌ ಪೂರ್ಣ ಪ್ರಮಾಣದ ದಾಳಿ ಮಾಡಬಹುದು ಎನ್ನಲಾಗಿದೆ.

Exit mobile version