Site icon Vistara News

Israel Palestine War: ಗಾಜಾ ನಗರದ ‘ಹೃದಯ’ ಪ್ರವೇಶಿಸಿದ ಇಸ್ರೇಲ್‌; ಮಸಣದಂತಾದ ಸಿಟಿ!

Israel Palestine War

Israel says troops operating 'in the heart of Gaza City'

ಗಾಜಾ: ಸಾವಿರಾರು ರಾಕೆಟ್‌ಗಳೊಂದಿಗೆ ದಾಳಿ ನಡೆಸಿದ ಹಮಾಸ್‌ ಉಗ್ರರನ್ನು (Hamas Terrorists) ನಿರ್ನಾಮ ಮಾಡದೆ ಬಿಡುವುದಿಲ್ಲ ಎಂದು ಪಣ ತೊಟ್ಟಿರುವ ಇಸ್ರೇಲ್‌ ಸೇನೆಯು ಗಾಜಾ ನಗರದ ಮೇಲೆ ನಡೆಸುತ್ತಿರುವ ದಾಳಿಯನ್ನು (Israel Palestine War) ತೀವ್ರಗೊಳಿಸಿದೆ. ಅದರಲ್ಲೂ, ಸಾವಿರಾರು ಸೈನಿಕರು, ನೂರಾರು ಯುದ್ಧ ಟ್ಯಾಂಕರ್‌ಗಳು ಸೇರಿ ಅಪಾರ ಶಸ್ತ್ರಾಸ್ತ್ರಗಳೊಂದಿಗೆ ಗಾಜಾ ನಗರಕ್ಕೆ ಲಗ್ಗೆ ಇಟ್ಟಿರುವ ಇಸ್ರೇಲ್‌ ಸೇನೆ ಈಗ ಗಾಜಾ ನಗರದ ಹೃದಯ ಭಾಗ ಪ್ರವೇಶಿಸಿದೆ ಎಂದು ತಿಳಿಸಿದೆ.

“ಗಾಜಾ ನಗರದಲ್ಲಿರುವ ಹಮಾಸ್‌ ಉಗ್ರರನ್ನು ನಿರ್ನಾಮ ಮಾಡುವ ಉತ್ಸಾಹದಲ್ಲಿ ಇಸ್ರೇಲ್‌ ಸೇನೆಯು ಮಹತ್ವದ ಮುನ್ನಡೆ ಸಾಧಿಸಿದೆ. ಇಸ್ರೇಲ್‌ ಯೋಧರೀಗ ಗಾಜಾ ನಗರದ ಹೃದಯ ಭಾಗ ತಲುಪಿದ್ದಾರೆ. ಗುರಿ ಸಾಧಿಸಿಯೇ ಇಸ್ರೇಲ್‌ ಯೋಧರು ಅಲ್ಲಿಂದ ವಾಪಸಾಗಲಿದ್ದಾರೆ” ಎಂದು ಇಸ್ರೇಲ್‌ ರಕ್ಷಣಾ ಸಚಿವ ಯೋಯಾವ್‌ ಗಲಾಂಟ್‌ ತಿಳಿಸಿದ್ದಾರೆ. ಮತ್ತೊಂದೆಡೆ, ಅಮೆರಿಕದ ಎಚ್ಚರಿಕೆ ಮಧ್ಯೆಯೂ ದಾಳಿ ಮುಂದುವರಿಸಲು ಇಸ್ರೇಲ್‌ ಪ್ರಧಾನಿ ಬೆಂಜಮಿನ್‌ ನೆತನ್ಯಾಹು ಹೇಳಿದ್ದಾರೆ. “ಹಮಾಸ್‌ ಉಗ್ರರಿಗೆ ಬೆಂಬಲ ನೀಡುತ್ತಿರುವ ಹೆಜ್ಬೊಲ್ಲಾ ಉಗ್ರರನ್ನೂ ನಾವು ಸುಮ್ಮನೆ ಬಿಡಲ್ಲ” ಎಂದಿದ್ದಾರೆ.

ಇಸ್ರೇಲ್‌ ದಾಳಿಯ ತೀವ್ರತೆ

ಹಮಾಸ್‌ ಉಗ್ರರನ್ನು ನಿರ್ನಾಮ ಮಾಡದೆ ಬಿಡುವುದಿಲ್ಲ ಎಂದು ಶಪಥ ಮಾಡಿರುವ ಇಸ್ರೇಲ್‌ ಪ್ರಧಾನಿ ಬೆಂಜಮಿನ್‌ ನೆತನ್ಯಾಹು, ಮತ್ತೆ ಕದನ ವಿರಾಮದ ಪ್ರಸ್ತಾಪವನ್ನು ತಿರಸ್ಕರಿಸಿದ್ದಾರೆ. ಗಾಜಾ ನಗರದಲ್ಲಿ ಕದನ ವಿರಾಮ ಘೋಷಿಸಬೇಕು ಎಂಬ ಅಮೆರಿಕ ಪ್ರಸ್ತಾಪವನ್ನು ನೆತನ್ಯಾಹು ತಿರಸ್ಕರಿಸಿದ್ದಾರೆ. ಕದನ ವಿರಾಮ ಘೋಷಿಸಬೇಕು ಎಂದು ಈಗಾಗಲೇ ವಿಶ್ವಸಂಸ್ಥೆ ಸಾಮಾನ್ಯ ಸಭೆಯಲ್ಲಿ ನಿರ್ಣಯ ಅಂಗೀಕಾರಗೊಂಡರೂ, ನೆತನ್ಯಾಹು ಅವರು ದಾಳಿ ನಿಲ್ಲಿಸುವ ಯಾವ ಲಕ್ಷಣವನ್ನೂ ತೋರಿಲ್ಲ. ಆದಾಗ್ಯೂ, ಇಡೀ ನಗರವನ್ನು ವಶಪಡಿಸಿಕೊಳ್ಳಲು ಮುಂದಾಗಿರುವ ನಡೆಯನ್ನು ಅಮೆರಿಕ ಖಂಡಿಸಿದೆ.

ಇದನ್ನೂ ಓದಿ: Israel- Palestine War: 1 ಲಕ್ಷ ಪ್ಯಾಲೆಸ್ತೀನ್‌ ಕಾರ್ಮಿಕರ ಬದಲಿಗೆ ಭಾರತೀಯರ ನೇಮಕ: ಇಸ್ರೇಲ್‌

11 ಸಾವಿರ ದಾಟಿದ ಸಾವಿನ ಸಂಖ್ಯೆ

ಇಸ್ರೇಲ್‌ ಹಾಗೂ ಹಮಾಸ್‌ ಉಗ್ರರ ನಡುವಿನ ಸಮರದಲ್ಲಿ ಮೃತಪಟ್ಟವರ ಸಂಖ್ಯೆ 11 ಸಾವಿರ ದಾಟಿದೆ. ಅದರಲ್ಲೂ, ಹಮಾಸ್‌ ಉಗ್ರರ ತಾಣವಾದ ಗಾಜಾ ನಗರದ ಮೇಲೆ ಇಸ್ರೇಲ್‌ ನಿರಂತರವಾಗಿ ದಾಳಿ ನಡೆಸುತ್ತಿದ್ದು, ನಗರದಲ್ಲಿ ಇದುವರೆಗೆ 10 ಸಾವಿರಕ್ಕೂ ಜನ ಮೃತಪಟ್ಟಿದ್ದಾರೆ ಎಂದು ಗಾಜಾ ಆರೋಗ್ಯ ಸಚಿವಾಲಯವೇ ಮಾಹಿತಿ ನೀಡಿದೆ. ಇನ್ನೂ 3 ಸಾವಿರಕ್ಕೂ ಅಧಿಕ ಜನ ಕಟ್ಟಡದ ಅವಶೇಷಗಳಲ್ಲಿ ಸಿಲುಕಿದ್ದು, ಅವರ ರಕ್ಷಣೆಗೆ ಕಾರ್ಯಾಚರಣೆ ನಡೆಯುತ್ತಿದೆ ಎಂಬುದಾಗಿ ಮಾಹಿತಿ ನೀಡಿದೆ. ಇನ್ನು ಹಮಾಸ್‌ ಉಗ್ರರ ದಾಳಿಗೆ ಇಸ್ರೇಲ್‌ನಲ್ಲಿ 1,400 ಜನ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version