Site icon Vistara News

ಶಿಶುಗಳು ಸೇರಿ 2,300 ಜನ ಇರುವ ಗಾಜಾ ಆಸ್ಪತ್ರೆ ಮೇಲೆ ಇಸ್ರೇಲ್‌ ಭೀಕರ ದಾಳಿ

Israel Attack On Gaza Hospital

ಗಾಜಾ ನಗರ: ಹಮಾಸ್‌ ಉಗ್ರರು ಅಕ್ಟೋಬರ್‌ 7ರಂದು ದಾಳಿ ನಡೆಸಿದ ಬಳಿಕ ಪ್ರತಿದಾಳಿ (Israel Palestine War) ಆರಂಭಿಸಿರುವ ಇಸ್ರೇಲ್‌ ಸೇನೆಯು ಗಾಜಾ ನಗರದ (Gaza City) ಮೇಲೆ ಸಂಪೂರ್ಣವಾಗಿ ಹಿಡಿತ ಸಾಧಿಸಿದೆ. ಇದರಿಂದಾಗಿ ಗಾಜಾ ನಗರವು ಮಸಣದಂತಾಗಿದ್ದು, ನಿತ್ಯ ರಾಕೆಟ್‌ ದಾಳಿಗೆ ಬಲಿಯಾಗುತ್ತಿರುವವರ ಸಂಖ್ಯೆ ಏರುತ್ತಲೇ ಇದೆ. ಇದರ ಬೆನ್ನಲ್ಲೇ, 2,300 ರೋಗಿಗಳು, ಶಿಶುಗಳು ಇರುವ ಆಸ್ಪತ್ರೆಯ ಮೇಲೆ (Gaza Hospital) ಇಸ್ರೇಲ್‌ ಸೇನೆಯು ದಾಳಿ ನಡೆಸುತ್ತಿದೆ. ಹಾಗಾಗಿ, ಸಾವಿನ ಸಂಖ್ಯೆ ಇನ್ನೂ ಜಾಸ್ತಿಯಾಗಲಿದೆ ಎಂದು ಹೇಳಲಾಗುತ್ತಿದೆ.

ಗಾಜಾ ನಗರದಲ್ಲಿರುವ, ಕೆಲ ದಿನಗಳ ಹಿಂದಷ್ಟೇ ಜನಿಸಿದ ಶಿಶುಗಳು, ಮಹಿಳೆಯರು, ಹಿರಿಯ ನಾಗರಿಕರು ಚಿಕಿತ್ಸೆ ಪಡೆಯುತ್ತಿರುವ ಅಲ್‌-ಶಿಫಾ ಆಸ್ಪತ್ರೆ ಮೇಲೆ ಇಸ್ರೇಲ್‌ ಭೀಕರವಾಗಿ ದಾಳಿ ನಡೆಸುತ್ತಿದೆ. “ಗಾಜಾ ಆಸ್ಪತ್ರೆಯಲ್ಲಿ ಉಗ್ರ ಚಟುವಟಿಕೆ ನಿಲ್ಲಿಸಬೇಕು ಎಂಬುದಾಗಿ ಹಮಾಸ್‌ ಉಗ್ರರಿಗೆ ನೀಡಿದ 12 ಗಂಟೆಯ ಗಡುವು ಮುಗಿದಿದೆ. ಇಷ್ಟಾದರೂ ಹಮಾಸ್‌ ಉಗ್ರರು ಆಸ್ಪತ್ರೆಯಲ್ಲಿ ಉಗ್ರ ಚಟುವಟಿಕೆ ನಿಲ್ಲಿಸಿಲ್ಲ” ಎಂದು ಇಸ್ರೇಲ್‌ ಸೇನೆ ತಿಳಿಸಿದೆ. ಗಡುವು ಮೀರಿದ ಹಿನ್ನೆಲೆಯಲ್ಲಿಯೇ ದಾಳಿ ನಡೆಸಿದೆ ಎನ್ನಲಾಗಿದೆ.

ಅಲ್‌-ಶಿಫಾ ಆಸ್ಪತ್ರೆಯ ಕೆಳಗೆ ಹಮಾಸ್‌ ಉಗ್ರರ ಸುರಂಗವಿದೆ. ಆಸ್ಪತ್ರೆ ಮೂಲಕ ಸುರಂಗದೊಳಗೆ ಹೋಗುವುದು, ಅಲ್ಲಿಂದ ಬರುವುದು, ಆಸ್ಪತ್ರೆಯಲ್ಲಿಯೇ ದಾಳಿಗೆ ಸಂಚು ರೂಪಿಸುವುದು ಸೇರಿ ಹಲವು ಕೃತ್ಯಗಳಲ್ಲಿ ಹಮಾಸ್‌ ಉಗ್ರರು ತೊಡಗಿದ್ದಾರೆ ಎಂದು ಇಸ್ರೇಲ್‌ ಆರೋಪಿಸಿದೆ. ಹಾಗೆಯೇ, ಆಸ್ಪತ್ರೆಯಲ್ಲಿ ಉಗ್ರ ಚಟುವಟಿಕೆಗಳನ್ನು ನಿಲ್ಲಿಸಬೇಕು ಎಂದು ಹಮಾಸ್‌ ಉಗ್ರರಿಗೆ ಇಸ್ರೇಲ್‌ ಗಡುವು ನೀಡಿತ್ತು. ಇದಕ್ಕೂ ಮೊದಲು ಕೂಡ ಅಲ್‌-ಶಿಫಾ ಆಸ್ಪತ್ರೆ ಮೇಲೆ ಇಸ್ರೇಲ್‌ ಸೈನಿಕರು ರಾಕೆಟ್‌ ದಾಳಿ ನಡೆಸಿದ್ದರು.

12 ಸಾವಿರ ದಾಟಿದ ಸಾವಿನ ಸಂಖ್ಯೆ

ಇಸ್ರೇಲ್‌ ಹಾಗೂ ಹಮಾಸ್‌ ಉಗ್ರರ ನಡುವಿನ ಸಮರದಲ್ಲಿ ಮೃತಪಟ್ಟವರ ಸಂಖ್ಯೆ 12 ಸಾವಿರ ದಾಟಿದೆ. ಅದರಲ್ಲೂ, ಹಮಾಸ್‌ ಉಗ್ರರ ತಾಣವಾದ ಗಾಜಾ ನಗರದ ಮೇಲೆ ಇಸ್ರೇಲ್‌ ನಿರಂತರವಾಗಿ ದಾಳಿ ನಡೆಸುತ್ತಿದ್ದು, ನಗರದಲ್ಲಿ ಇದುವರೆಗೆ 11 ಸಾವಿರಕ್ಕೂ ಜನ ಮೃತಪಟ್ಟಿದ್ದಾರೆ ಎಂದು ಗಾಜಾ ಆರೋಗ್ಯ ಸಚಿವಾಲಯವೇ ಮಾಹಿತಿ ನೀಡಿದೆ. ಇನ್ನೂ 3 ಸಾವಿರಕ್ಕೂ ಅಧಿಕ ಜನ ಕಟ್ಟಡದ ಅವಶೇಷಗಳಲ್ಲಿ ಸಿಲುಕಿದ್ದು, ಅವರ ರಕ್ಷಣೆಗೆ ಕಾರ್ಯಾಚರಣೆ ನಡೆಯುತ್ತಿದೆ ಎಂಬುದಾಗಿ ಮಾಹಿತಿ ನೀಡಿದೆ. ಇನ್ನು ಹಮಾಸ್‌ ಉಗ್ರರ ದಾಳಿಗೆ ಇಸ್ರೇಲ್‌ನಲ್ಲಿ 1,400 ಜನ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.

ಇದನ್ನೂ ಓದಿ: ಪ್ಯಾಲೆಸ್ತೀನ್‌ ಜಿಹಾದಿಗೆ ಅಮೆರಿಕ ಭಾರಿ ಪೆಟ್ಟು; ‘ಜಾಗತಿಕ ಉಗ್ರ’ ಎಂದು ಘೋಷಣೆ

ಏತನ್ಮಧ್ಯೆಯೇ, ಪ್ಯಾಲೆಸ್ತೀನ್‌ ಇಸ್ಲಾಮಿಕ್‌ ಜಿಹಾದ್‌ ಉಗ್ರ ಸಂಘಟನೆಯ ಅಕ್ರಮ್‌ ಅಲ್‌ ಅಜೌರಿಯನ್ನು ಅಮೆರಿಕ ಜಾಗತಿಕ ಉಗ್ರ ಎಂದು ಘೋಷಿಸಿದೆ. “ಅಕ್ರಮ್‌ ಅಲ್‌ ಅಜೌರಿಯನ್ನು ಅಮೆರಿಕದ ಖಜಾನೆ ಇಲಾಖೆಯು ವಿಶೇಷವಾಗಿ ಗುರುತಿಸಲಾದ ಜಾಗತಿಕ ಉಗ್ರ ಎಂಬುದಾಗಿ ಘೋಷಿಸಿದೆ. ಈತನು ಉಗ್ರ ಸಂಘಟನೆಯ ಡೆಪ್ಯುಟಿ ಸೆಕ್ರೆಟರಿ ಜನರಲ್‌ ಆಗಿದ್ದು, ಹಲವು ಉಗ್ರ ಚಟುವಟಿಕೆಗಳಲ್ಲಿ ತೊಡಗಿದ್ದಾನೆ. ಹಮಾಸ್‌ ಉಗ್ರರಿಗೂ ಈತ ಬೆಂಬಲ ನೀಡಿದ್ದಾನೆ” ಎಂದು ಅಮೆರಿಕ ತಿಳಿಸಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version