ಜೆರುಸಲೇಂ: ಇಸ್ರೇಲ್ ಇರುವುದೇ ಹಾಗೆ. ತನ್ನ ತಂಟೆಗೆ ಬರುವವರನ್ನು ಜಗತ್ತಿನ ಯಾವುದೇ ಮೂಲೆಯಲ್ಲಿದ್ದರೂ, ಆ ದೇಶ ಎಷ್ಟು ಬಲಿಷ್ಠವೇ ಆಗಿದ್ದರೂ ತಿರುಗೇಟು ನೀಡದೆ, ಸೇರಿಗೆ ಸವ್ವಾಸೇರು ಎನ್ನದೆ ಬಿಡುವುದಿಲ್ಲ. ಇದಕ್ಕೆ ನಿದರ್ಶನ ಎಂಬಂತೆ, ಟೆಲ್ ಅವಿವ್ ಮೇಲೆ ದಾಳಿ ಮಾಡಿದ ಪ್ಯಾಲೆಸ್ತೀನ್‌ನ ಗಾಜಾಪಟ್ಟಿ ಮೇಲೆ ಇಸ್ರೇಲ್ ವಾಯುದಾಳಿ (Israel Palestine War) ಆರಂಭಿಸಿದೆ. ಅಷ್ಟೇ ಅಲ್ಲ, “ನಾವು ಪ್ಯಾಲೆಸ್ತೀನ್ ಮೇಲೆ ಯುದ್ಧ ಸಾರಿದ್ದೇವೆ ಹಾಗೂ ಗೆದ್ದೇ ತೀರುತ್ತೇವೆ” ಎಂದು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರು ಸ್ಪಷ್ಟ ಸಂದೇಶ ಸಾರಿದ್ದಾರೆ.
ಗಾಜಾಪಟ್ಟಿಯಲ್ಲಿರುವ ಹಮಾಸ್ ಉಗ್ರರ ಕಟ್ಟಡಗಳ ಮೇಲೆ ಇಸ್ರೇಲ್‌ನ ರಾಕೆಟ್‌ಗಳು ದಾಳಿ ನಡೆಸಿವೆ. ಸುಮಾರು 12ಕ್ಕೂ ಅಧಿಕ ರಾಕೆಟ್‌ಗಳ ಮೂಲಕ ಹಮಾಸ್ ಉಗ್ರರಿಗೆ ಇಸ್ರೇಲ್ ತಕ್ಕ ಪಾಠ ಕಲಿಸಿದೆ. ಹಮಾಸ್ ಉಗ್ರರ ಕಟ್ಟಡಗಳ ಮೇಲೆ ರಾಕೆಟ್‌ಗಳು ದಾಳಿ ನಡೆಸುವ, ಅವುಗಳನ್ನು ಉಡಾಯಿಸುವ ವಿಡಿಯೊಗಳು ಲಭ್ಯವಾಗಿವೆ. ಅಷ್ಟೇ ಅಲ್ಲ, ಇಸ್ರೇಲ್ ಹೇಗೆ ಭೀಕರವಾಗಿ ತಿರುಗೇಟು ನೀಡುತ್ತಿದೆ ಎಂಬುದಕ್ಕೆ ಈ ದೃಶ್ಯಗಳು ಸಾಕ್ಷಿಯಾಗಿವೆ. ಹಮಾಸ್ ಉಗ್ರರ ಮೇಲೆ ಇಸ್ರೇಲ್ ಸಾರಿರುವ ಸಮರಕ್ಕೆ ಆಪರೇಷನ್ ಐರನ್ ಸ್ವೊರ್ಡ್ಸ್ (Operation Iron Swords) ಎಂದು ಹೆಸರಿಟ್ಟಿದೆ.
ಇಸ್ರೇಲ್ ಪ್ರತಿದಾಳಿಯ ವಿಡಿಯೊ
BREAKING: Israeli Air Force is striking terror targets in Gaza.
— Hananya Naftali (@HananyaNaftali) October 7, 2023
Israel has every right to defend itself against terrorism. pic.twitter.com/GRwuTXiV0I
5 ಸಾವಿರ ರಾಕೆಟ್ ದಾಳಿ
ಇದಕ್ಕೂ ಮೊದಲು ಗಾಜಾ ಪಟ್ಟಿಯಲ್ಲಿರುವ ಪ್ಯಾಲೆಸ್ತೀನ್ ಉಗ್ರಗಾಮಿಗಳು ದಕ್ಷಿಣ ಇಸ್ರೇಲ್‌ಗೆ ಭಾರಿ ಒಳನುಸುಳುವಿಕೆ ನಡೆಸಿದ್ದಾರೆ. ಇದನ್ನು ಇಸ್ರೇಲಿ ಮಿಲಿಟರಿ ಖಚಿತಪಡಿಸಿದೆ. ಗಾಜಾಗೆ ಸಮೀಪದ ಇಸ್ರೇಲಿ ಪ್ರಜೆಗಳನ್ನು ಮನೆಯೊಳಗೇ ಇರುವಂತೆ ಆದೇಶಿಸಿದೆ. ಇದರ ಹಿಂದೆಯೇ ಉಗ್ರಗಾಮಿಗಳು ಗಾಜಾದಿಂದ ಇಸ್ರೇಲ್‌ನತ್ತ ಸುಮಾರು 5 ಸಾವಿರ ರಾಕೆಟ್‌ಗಳನ್ನು ಹಾರಿಸಿದ್ದಾರೆ. ಇಸ್ರೇಲ್ ದೇಶಾದ್ಯಂತ ವೈಮಾನಿಕ ದಾಳಿಯ ಸೈರನ್‌ಗಳನ್ನು ಕೂಗಿಸಲಾಗಿದೆ. ಹಮಾಸ್ ಉಗ್ರರ ದಾಳಿಗೆ ಇಸ್ರೇಲ್‌ನ 22 ಜನ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.
ಇದನ್ನೂ ಓದಿ: Israel-Palestine: ರಾಕೆಟ್ ಸುರಿಮಳೆ, ಉಗ್ರರ ಅಟ್ಟಹಾಸ; ಇಸ್ರೇಲ್- ಪ್ಯಾಲೆಸ್ತೀನ್ ನಡುವೆ ಮತ್ತೆ ಯುದ್ಧ ಶುರು?
ಭಾರತೀಯರಿಗೆ ಅಡ್ವೈಸರಿ
ಇಸ್ರೇಲ್ ಹಾಗೂ ಪ್ಯಾಲೆಸ್ತೀನ್ ಮಧ್ಯೆ ಯುದ್ಧ ಶುರುವಾದ ಹಿನ್ನೆಲೆಯಲ್ಲಿ ಇಸ್ರೇಲ್‌ನಲ್ಲಿರುವ ಭಾರತೀಯರಿಗೆ ಕೇಂದ್ರ ಸರ್ಕಾರವು ಅಡ್ವೈಸರಿ ಹೊರಡಿಸಿದೆ. “ಇಸ್ರೇಲ್‌ನಲ್ಲಿ ಉಂಟಾಗಿರುವ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಭಾರತೀಯರು ಹೆಚ್ಚಿನ ಮುಂಜಾಗ್ರತಾ ಕ್ರಮಗಳನ್ನು ಅನುಸರಿಸಬೇಕು. ಸ್ಥಳೀಯ ಅಧಿಕಾರಿಗಳು ಸೂಚಿಸುವ ನಿಯಮಗಳನ್ನು ಪಾಲಿಸಬೇಕು. ಹಾಗೆಯೇ, ಅನವಶ್ಯಕವಾಗಿ ಯಾರೂ ಮನೆಯಿಂದ ಹೊರಗೆ ಬರಬಾರದು” ಎಂದು ಭಾರತ ಸರ್ಕಾರವು ಇಸ್ರೇಲ್‌ನಲ್ಲಿರುವ ಭಾರತದ ನಾಗರಿಕರಿಗೆ ಸೂಚನೆ ನೀಡಿದೆ.