ಹಮಾಸ್ ನಾಯಕ ಇಸ್ಮಾಯಿಲ್ ಹನಿಯೆಹ್ (Ismail Haniyeh) ಹತ್ಯೆ ಸುದ್ದಿ ಪ್ರಪಂಚದಾದ್ಯಂತ ಸಂಚಲನ ಉಂಟು ಮಾಡಿರುವ ಬೆನ್ನಲ್ಲೇ ಇಸ್ರೇಲ್ (Israel v/s Hamas) ಮುಂದಿನ ಟಾರ್ಗೆಟ್ (israel next target) ಯಾರನ್ನು ಮಾಡಿರಬಹುದು ಎನ್ನುವ ಕುರಿತು ಚರ್ಚೆ ಶುರುವಾಗಿದೆ. ಇರಾನಿನ ಹೊಸ ಅಧ್ಯಕ್ಷ (Iran new president) ಮಸೌದ್ ಪೆಜೆಶ್ಕಿಯಾನ್ ಅವರ ಪ್ರಮಾಣವಚನ ಸಮಾರಂಭದಲ್ಲಿ ಭಾಗವಹಿಸಿದ ಅನಂತರ ಇರಾನ್ ರಾಜಧಾನಿಯಲ್ಲಿ ನಡೆದ ವೈಮಾನಿಕ ದಾಳಿಯಲ್ಲಿ ಹನಿಯೆಹ್ ಮತ್ತು ಅವರ ಅಂಗರಕ್ಷಕನನ್ನು ಕೊಲ್ಲಲಾಗಿದೆ.
ಇಸ್ರೇಲ್ ನಿಯಂತ್ರಿತ ಗೋಲನ್ ಹೈಟ್ಸ್‌ನಲ್ಲಿ 12 ಯುವಕರು ಕೊಲೆಯಾಗಿ ವಾರ ಕಳೆಯುವಷ್ಟರಲ್ಲಿ ನಡೆದ ರಾಕೆಟ್ ದಾಳಿ ನಡೆಸಿ ಹೆಜ್ಬೊಲ್ಲಾ ಕಮಾಂಡರ್ ಫೌದ್ ಶುಕುರ್‌ನನ್ನು ಕೊಂದಿರುವುದಾಗಿ ಇಸ್ರೇಲ್ ಹೇಳುತ್ತಿದ್ದಂತೆಯೇ, ಹನಿಯೆಹ್ ಮೇಲೂ ದಾಳಿ ನಡೆದಿದೆ. ಇಸ್ರೇಲ್ ಈಗ ಹಮಾಸ್ ಉಗ್ರರ ಹೆಡೆಮುರಿ ಕಟ್ಟಲು ಸಂಪೂರ್ಣ ಸಜ್ಜಾದಂತೆ ಕಾಣುತ್ತಿದೆ. ಹಾಗಾದರೆ ಮುಂದೆ ಇಸ್ರೇಲ್ ಯಾರನ್ನು ಟಾರ್ಗೆಟ್ ಮಾಡಿರಬಹುದು ಎನ್ನುವ ಮಾಹಿತಿ ಇಲ್ಲಿದೆ.
ಯಾಹ್ಯಾ ಸಿನ್ವಾರ್
ಗಾಜಾದಲ್ಲಿ ಹಮಾಸ್ ಪ್ರಮುಖ ನಾಯಕನಾಗಿ ಗುರುತಿಸಿಕೊಂಡಿರುವ 62 ವರ್ಷದ ಸಿನ್ವಾರ್ ಇಸ್ರೇಲ್ ಮೇಲೆ ಅಕ್ಟೋಬರ್ 7ರಂದು ನಡೆದ ದಾಳಿಯ ಪ್ರಮುಖ ರೂವಾರಿ. ಸಿನ್ವಾರ್ 1962ರ ಅಕ್ಟೋಬರ್ 29ರಂದು ಖಾನ್ ಯೂನಿಸ್ ನಿರಾಶ್ರಿತರ ಶಿಬಿರದಲ್ಲಿ ಜನಿಸಿದ್ದ. 1980ರ ದಶಕದಲ್ಲಿ ಸಿನ್ವಾರ್ ಗಾಜಾದ ಇಸ್ಲಾಮಿಕ್ ವಿಶ್ವವಿದ್ಯಾಲಯದಲ್ಲಿ ಅಧ್ಯಯನ ಮಾಡಿದ್ದ. ಬಳಿಕ ಈತ ಹಮಾಸ್‌ನ ಭದ್ರತಾ ಸೇವೆಯಾದ ಮಜ್ದ್ ಅನ್ನು ಸ್ಥಾಪಿಸಿದ.
1988ರಲ್ಲಿ ಪ್ಯಾಲೆಸ್ಟೀನಿಯಾದವರ ಹತ್ಯೆಯ ಅಪರಾಧಿ ಎಂದು ಪರಿಗಣಿಸಿ ಸಿನ್ವಾರ್‌ಗೆ ನಾಲ್ಕು ಜೀವಾವಧಿ ಶಿಕ್ಷೆಯನ್ನು ವಿಧಿಸಲಾಯಿತು. 2011ರಲ್ಲಿ ಜೈಲಿನಿಂದ ಬಿಡುಗಡೆಯಾದ ಬಳಿಕ ಹಮಾಸ್‌ನ ಭದ್ರತಾ ಪಡೆಯ ಉನ್ನತ ಶ್ರೇಣಿಯನ್ನು ಸೇರಿಕೊಂಡ. 2015ರಲ್ಲಿ ಅಮೆರಿಕ ಈತನನ್ನು ‘ಅಂತಾರಾಷ್ಟ್ರೀಯ ಭಯೋತ್ಪಾದಕ’ ಎಂದು ಘೋಷಿಸಿತು.
ಮೊಹಮ್ಮದ್ ಡೀಫ್
ಹಮಾಸ್‌ನ ಮಿಲಿಟರಿ ವಿಭಾಗ ಇಜ್ ಅಲ್-ದಿನ್ ಅಲ್-ಕಸ್ಸಾಮ್ ಬ್ರಿಗೇಡ್‌ಗಳ ಮುಖ್ಯಸ್ಥನಾಗಿರುವ ಡೀಫ್ ಮೇಲೆ ಇಸ್ರೇಲ್ ನಲ್ಲಿ ಅನೇಕ ಬಾರಿ ದಾಳಿ ನಡೆಸಲಾಗಿದ್ದರೂ ಬದುಕಿ ಉಳಿದಿದ್ದಾನೆ. ಪ್ಯಾಲೆಸ್ಟೀನಿಯರ ವಿರುದ್ಧದ ಅಪರಾಧಗಳನ್ನು ನಿಲ್ಲಿಸಲು, ನಿಂದನೆ ಮತ್ತು ಚಿತ್ರಹಿಂಸೆಗೊಳಗಾದ ಕೈದಿಗಳನ್ನು ಬಿಡುಗಡೆ ಮಾಡಲು, ಪ್ಯಾಲೇಸ್ಟಿನಿಯನ್ ಭೂಮಿಯನ್ನು ವಶಪಡಿಸಿಕೊಳ್ಳುವುದನ್ನು ನಿಲ್ಲಿಸಲು ಹಮಾಸ್ ಇಸ್ರೇಲ್‌ಗೆ ಪದೇಪದೇ ಎಚ್ಚರಿಸುತ್ತಿದೆ ಎಂದು ಡೀಫ್ ಇತ್ತೀಚೆಗೆ ತನ್ನ ಧ್ವನಿ ಮುದ್ರಣವನ್ನು ಬಿಡುಗಡೆ ಮಾಡಿದ್ದ.
ಹಲವು ದಾಳಿಯಲ್ಲಿ ಡೀಫ್ ಮತ್ತು ಸಿನ್ವಾರ್ ಜಂಟಿ ಕಾರ್ಯಾಚರಣೆ ನಡೆಸಿದ್ದಾರೆ. ಯಾಹ್ಯಾ ಸಿನ್ವಾರ್‌ನಂತೆ ಡೀಫ್ ಖಾನ್ ಯೂನಿಸ್ ನಿರಾಶ್ರಿತರ ಶಿಬಿರದಲ್ಲಿ ಜನಿಸಿದ್ದ. ಈತನ ಮೊದಲ ಹೆಸರು ಮೊಹಮ್ಮದ್ ಮಸ್ರಿ. ಹಮಾಸ್‌ಗೆ ಸೇರಿದ ಅನಂತರ ಮೊಹಮ್ಮದ್ ಡೀಫ್ ಎಂಬ ಹೆಸರನ್ನು ಪಡೆದ. ಡೀಫ್‌ನನ್ನು 1989ರಲ್ಲಿ ಇಸ್ರೇಲ್ ಬಂಧಿಸಿತ್ತು. ಸುಮಾರು 16 ತಿಂಗಳ ಕಾಲ ಜೈಲಿನಲ್ಲಿದ್ದು ಹೊರ ಬಂದ ಬಳಿಕ ಸುರಂಗಗಳ ಜಾಲವನ್ನು ಮತ್ತು ಅದರ ಬಾಂಬ್ ತಯಾರಿಕೆಯ ಪರಿಣತಿ ಪಡೆದ. ದಶಕಗಳಿಂದ ಇಸ್ರೇಲ್‌ನ ಮೋಸ್ಟ್ ವಾಂಟೆಡ್ ಪಟ್ಟಿಯಲ್ಲಿದ್ದಾನೆ. 2000ರಲ್ಲಿ ಇಸ್ರೇಲ್‌ನಲ್ಲಿ ಬಂಧನಕ್ಕೆ ಒಳಗಾದರೂ ಬಳಿಕ ತಪ್ಪಿಸಿಕೊಂಡಿದ್ದ.
ಇಸ್ರೇಲ್ ನಡೆಸಿದ ಒಂದು ದಾಳಿಯಲ್ಲಿ ಆತ ಕಣ್ಣು ಕಳೆದುಕೊಂಡಿದ್ದು, ಒಂದು ಕಾಲಿಗೂ ಗಂಭೀರ ಗಾಯವಾಗಿತ್ತು ಎಂದು ಹಮಾಸ್ ಮೂಲಗಳು ತಿಳಿಸಿದ್ದವು. 2014ರ ಇಸ್ರೇಲ್ ವೈಮಾನಿಕ ದಾಳಿಯಲ್ಲಿ ಆತನ ಪತ್ನಿ, 7 ತಿಂಗಳ ಮಗ ಮತ್ತು 3 ವರ್ಷದ ಮಗಳು ಸಾವನ್ನಪ್ಪಿದ್ದರು.
ಖಲೀದ್ ಮಶಾಲ್
ಹಮಾಸ್‌ನ ಸಂಸ್ಥಾಪಕರಲ್ಲಿ ಒಬ್ಬನಾಗಿರುವ ಮಶಾಲ್, 1956ರಲ್ಲಿ ವೆಸ್ಟ್ ಬ್ಯಾಂಕ್‌ನ ಸಿಲ್ವಾಡ್‌ನಲ್ಲಿ ಜನಿಸಿದ. ಬಳಿಕ ಆತನ ಕುಟುಂಬ ಕುವೈತ್‌ಗೆ ಸ್ಥಳಾಂತರಗೊಂಡಿತು. ಮಶಾಲ್ ಪದವಿ ಪಡೆದ ಬಳಿಕ ಕುವೈತ್‌ನಲ್ಲಿಯೇ ಇದ್ದ. ಅಲ್ಲಿ ಆತ ಗಾಜಾ ಮತ್ತು ವೆಸ್ಟ್ ಬ್ಯಾಂಕ್‌ನಲ್ಲಿ ಸಾಮಾಜಿಕ ಸೇವೆಗಳನ್ನು ಆಯೋಜಿಸಲು ಹಣವನ್ನು ಸಂಗ್ರಹಿಸಿದ.
1996ರಲ್ಲಿ ಹಮಾಸ್ ರಾಜಕೀಯ ಬ್ಯೂರೋ ಮುಖ್ಯಸ್ಥನಾಗಿ ಆಯ್ಕೆಯಾದ ಮಶಾಲ್, ಹಮಾಸ್‌ನ ಆತ್ಮಹತ್ಯಾ ಬಾಂಬ್ ದಾಳಿಗೆ ಪ್ರತೀಕಾರವಾಗಿ ಪ್ರಧಾನಿ ಬೆಂಜಮಿನ್ ನೆತನ್ಯಾಹು 1997ರಲ್ಲಿ ಮಶಾಲ್‌ನ ಹತ್ಯೆ ಮಾಡಲು ಅನುಮೋದನೆ ನೀಡಿದರು. ಮಶಾಲ್ 2017ರವರೆಗೂ ಹಮಾಸ್‌ನ ಮುಖ್ಯಸ್ಥನಾಗಿದ್ದ. ಹಮಾಸ್‌ನ ಪ್ರಮುಖ ಒತ್ತೆಯಾಳು ಸಂಧಾನಕಾರರಲ್ಲಿ ಒಬ್ಬನಾಗಿರುವ ಮಶಾಲ್ ಪ್ರಸ್ತುತ ಕತಾರ್‌ನಲ್ಲಿ ವಾಸಿಸುತ್ತಿದ್ದಾನೆ.
ಮಹಮೂದ್ ಜಹರ್
ಹಮಾಸ್‌ನ ಅತ್ಯಂತ ಹಿರಿಯ ನಾಯಕರಲ್ಲಿ ಒಬ್ಬನಾಗಿದ್ದಾನೆ. 1945ರಲ್ಲಿ ಗಾಜಾ ನಗರದ ಬಳಿ ಜನಿಸಿದ ಜಹರ್ ತಂದೆ ಪ್ಯಾಲೇಸ್ಟಿನಿಯನ್ ಮತ್ತು ತಾಯಿ ಈಜಿಪ್ಟಿನವನು. ಗಾಜಾದಲ್ಲಿ ವೈದ್ಯನಾಗಿದ್ದ ಆತನ ರಾಜಕೀಯ ದೃಷ್ಟಿಕೋನದಿಂದ ಕೆಲಸದಿಂದ ವಜಾಗೊಳಿಸಲಾಗಿತ್ತು. 1988ರಲ್ಲಿ ಹಮಾಸ್ ಸ್ಥಾಪನೆಯ ಅನಂತರ ಜಹರ್‌ನನ್ನು ಇಸ್ರೇಲ್ ಜೈಲಿನಲ್ಲಿರಿಸಿತ್ತು. 1992ರಲ್ಲಿ ಲೆಬನಾನ್‌ಗೆ ಗಡೀಪಾರು ಮಾಡಲಾಯಿತು. ಗಾಜಾಕ್ಕೆ ಹಿಂದಿರುಗಿದ ಬಳಿಕ ಈತನ ಮೇಲೆ ಹತ್ಯೆ ಯತ್ನವೂ ನಡೆದಿದ್ದು, ಒಂದು ಸಂದರ್ಭದಲ್ಲಿ ಆತನ ಹಿರಿಯ ಮಗ ಮೃತಪಟ್ಟಿದ್ದಾನೆ.
ಇದನ್ನೂ ಓದಿ: Ismail Haniyeh: ಒಸಾಮಾ ರೀತಿಯೇ ಹಮಾಸ್‌ನ ಇಸ್ಮಾಯಿಲ್ ಹನಿಯೇಹ್‌ನನ್ನು ಕೊಂದ ಇಸ್ರೇಲ್; ಆಪರೇಷನ್‌ನ ಡಿಟೇಲ್ಸ್ ಇಲ್ಲಿದೆ
2008ರಲ್ಲಿ ಇಸ್ರೇಲ್‌ನ ವೈಮಾನಿಕ ದಾಳಿಯಲ್ಲಿ ಹಮಾಸ್‌ನ ಮಿಲಿಟರಿ ವಿಭಾಗದ ಸದಸ್ಯರಾದ ಈತನ ಇನ್ನೊಬ್ಬ ಮಗನೂ ಸಾವನ್ನಪ್ಪಿದ್ದಾನೆ. 2006 ರಲ್ಲಿ ಜಹರ್ ಪ್ಯಾಲೇಸ್ಟಿನಿಯನ್ ಲೆಜಿಸ್ಲೇಟಿವ್ ಕೌನ್ಸಿಲ್ (PLC) ಗೆ ಆಯ್ಕೆಯಾಗಿದ್ದು, ಬಳಿಕ ಆತನನ್ನು ವಿದೇಶಾಂಗ ಸಚಿವನನ್ನಾಗಿ ನೇಮಿಸಲಾಯಿತು.
ಹಮಾಸ್‌ನ ಇವಿಷ್ಟು ಉಗ್ರ ನಾಯಕರು ಇಸ್ರೇಲ್‌ನ ಹಿಟ್ ಲಿಸ್ಟ್‌ನಲ್ಲಿದ್ದಾರೆ. ಇವರ ಮೇಲೆ ಯಾವಾಗ ಬೇಕಾದರೂ ದಾಳಿ ನಡೆಯಬಹುದು.