ಟೆಲ್ ಅವಿವ್: ತಮ್ಮ ಮೇಲೆ ಹಠಾತ್ ಆಕ್ರಮಣಗೈಯಲು ಮುಂದಾಗಿರುವ ಹೆಜ್ಬುಲ್ಲಾ ಉಗ್ರ ಸಂಘಟನೆಗೆ ಇಸ್ರೇಲ್(Israel vs Hezbollah War)ವೈಮಾನಿಕ ರಾಕೆಟ್ ದಾಳಿಯ ಬಿಸಿ ಮುಟ್ಟಿಸಲು ಆರಂಭಿಸಿದೆ. ಭಾನುವಾರ ಬೆಳಗ್ಗಿನ ಜಾವ ಲೆಬನಾನ್ ಮೇಲೆ ದಾಳಿ ಆರಂಭಿಸಿದೆ. ಅತ್ತ ಹೆಜ್ಬುಲ್ಲಾ ಉಗ್ರ ಸಂಘಟನೆ ಕೂಡ ಪ್ರತಿ ದಾಳಿ ನಡೆಸುತ್ತಿರುವ ಕಾರಣ ಇಸ್ರೇಲ್‌ನಲ್ಲಿ ಮುಂದಿನ 48 ಗಂಟೆಗಳ ಕಾಲ ದೇಶದಲ್ಲಿ ತುರ್ತು ಪರಿಸ್ಥಿತಿಯನ್ನು ಘೋಷಣೆ ಮಾಡಲಾಗಿದೆ. ದಾಳಿಯ ಭೀಕರ ವಿಡಿಯೊಗಳು ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ದೀಪಾವಳಿಯಲ್ಲಿ ಪಟಾಕಿ ಸಿಡಿಸಿದಂತೆ ರಾಕೆಟ್ಗಳು ಸಿಡಿಯುತ್ತಿವೆ.
ಇಸ್ರೇಲ್ ವಾಯುಪಡೆಯ ಸಮರ ಹೆಲಿಕಾಪ್ಟರ್‌ಗಳು ಲೆಬನಾನ್ ಅನ್ನು ಟಾರ್ಗೆಟ್ ಮಾಡಿದ್ದಲ್ಲದೇ, ಗಡಿ ದಾಟಿ ಬಂದ ಬಂದೂಕುಧಾರಿಗಳನ್ನೂ ಹತ್ಯೆಗೈದಿದೆ. ಜತೆಗೆ ರಾಕೆಟ್ ದಾಳಿ ಕೂಡ ನಡೆಸಿ ಹಲವು ಕಟ್ಟಡಗಳನ್ನು ನಾಶಪಡಿಸಿದೆ. ವರದಿಗಳ ಪ್ರಕಾರ 300 ರಾಕೆಟ್ಗಳ ದಾಳಿಯನ್ನು ನಡೆಸಲು ಇಸ್ರೇಲ್ ಮಿಲಿಟರಿ ಪಡೆ ಸಿದ್ಧತೆ ನಡೆಸಿದೆ ಎನ್ನಲಾಗಿದೆ. ಸದ್ಯ ಯಾವುದೇ ಸಾವು ನೋವುಗಳ ಬಗ್ಗೆ ತಿಳಿದುಬಂದಿಲ್ಲ. ಹಲವು ಕಟ್ಟಡಗಳು ಈಗಾಗಲೇ ದ್ವಂಸಗೊಂಡಿದೆ. ಲೆಬನಾನ್ ಗಡಿ ಭಾಗದಲ್ಲಿರುವ ನಾಗರಿಕರಿಗೆ ಇಸ್ರೇಲ್ ಈಗಾಗಲೇ ಸುರಕ್ಷಿತ ಪ್ರದೇಶಗಳಿಗೆ ತೆರಳುವಂತೆ ಸೂಚನೆಯನ್ನು ಕೂಡ ನೀಡಿದೆ.
ಹೆಜ್ಬುಲ್ಲಾ ಲೆಬನಾನ್‌ನಿಂದ ಇಸ್ರೇಲಿ ಪ್ರದೇಶದ ಕಡೆಗೆ 150 ಕ್ಕೂ ಹೆಚ್ಚು ಸ್ಪೋಟಕಗಳನ್ನು ಉಡಾವಣೆ ಮಾಡಿದೆ. ನಾವು ಭಯೋತ್ಪಾದಕರ ಮೂಲಸೌಕರ್ಯವನ್ನು ಗುರಿಯಾಗಿಸಿಕೊಂಡಿದ್ದೇವೆ, ಅವರು ನಾಗರಿಕರನ್ನು ಗುರಿಯಾಗಿಸುತ್ತಾರೆ ಎಂದು ಇಸ್ರೇಲಿ ರಕ್ಷಣಾ ಪಡೆಗಳು ಎಕ್ಸ್ನಲ್ಲಿ ಪೋಸ್ಟ್ ಮಾಡಿದೆ. ಮೂರು ದಿನಗಳ ಹಿಂದಷ್ಟೇ ಹೆಜ್ಬುಲ್ಲಾ ಉಗ್ರ ಸಂಘಟನೆ ಇಸ್ರೇಲ್ ತನ್ನ ವಶಕ್ಕೆ ಪಡೆದುಕೊಂಡಿರುವ ಗೋಲನ್ ಹೈಟ್ಸ್ ಮೇಲೆ 50ಕ್ಕೂ ಅಧಿಕ ರಾಕೆಟ್‌ಗಳನ್ನು ಉಡಾಯಿಸಿತ್ತು. ಕಳೆದ ಒಂದು ವಾರದ ಹಿಂದೆ ಇಸ್ರೇಲ್, ಹಮಾಸ್ ಮುಖ್ಯಸ್ಥ ಇಸ್ಮಾಯಿಲ್ ಹನಿಯೆಹ್ (Ismail Haniyeh)ಅವರನ್ನು ಹತ್ಯೆಗೈದಿತ್ತು. ಇದರಿಂದ ಇರಾನ್, ಪ್ರತೀಕಾರ ತೀರಿಸಿಕೊಳ್ಳುವ ಮಾತನ್ನಾಡಿತ್ತು.
ಇದನ್ನೂ ಓದಿ Israel strike: ರಾಕೆಟ್ ದಾಳಿ; ಇಸ್ರೇಲ್‌ನಲ್ಲಿ ತುರ್ತು ಪರಿಸ್ಥಿತಿ ಘೋಷಣೆ
ಯುದ್ಧದಲ್ಲೇ ಮುಳುಗಿರುವ ಇಸ್ರೇಲ್ಗೆ ಮತ್ತಷ್ಟು ಭಿಕ್ಕಟ್ಟಿನ ಸ್ಥಿತಿ ಇದೀಗ ನಿರ್ಮಾಣ ಆಗಿದೆ. ಒಂದೆಡೆ ಗಾಜಾ, ಇನ್ನೊಂದು ಕಡೆ ರಫಾದಲ್ಲಿ ಹಮಾಸ್ ವಿರುದ್ಧ ಮಿಲಿಟರಿ ಕಾರ್ಯಾಚರಣೆ ನಡೆಸುತ್ತಿದೆ. ಜುಲೈ 28 ರಂದು Hezbollah, ಇಸ್ರೇಲ್ ಆಕ್ರಮಿತ ಗೋಲನ್ ಹೈಟ್ಸ್ ಮೇಲೆ ರಾಕೆಟ್ ದಾಳಿ ನಡೆಸಿತ್ತು. ದಾಳಿ ವೇಳೆ 12 ಮಕ್ಕಳು ಸಾವನ್ನಪ್ಪಿದ್ದರು. ಇದರಿಂದ ರೊಚ್ಚಿಗೆದ್ದಿದ್ದ ಇಸ್ರೇಲ್, ಹಮಾಸ್ಗೆ ಪಾಠ ಕಲಿಸಿದಂತೆ ಹೆಜ್ಬೊಲ್ಲಾಗೂ ಬುದ್ಧಿ ಕಲಿಸುತ್ತೇವೆ ಎಂದು ಎಚ್ಚರಿಕೆ ನೀಡಿತ್ತು. ಹೆಜ್ಬೊಲ್ಲಾ ರಾಕೆಟ್ ದಾಳಿಯ ಎರಡು ದಿನಗಳ ನಂತರ ಜುಲೈ 30 ರಂದು ಇಸ್ರೇಲ್, ಹೆಜ್ಬೊಲ್ಲಾದ ಉನ್ನತ ಕಮಾಂಡರ್ ಫೌದ್ ಶುಕರ್ ಅವರನ್ನು ಹತ್ಯೆಗೈದಿತ್ತು. ಇಸ್ರೇಲ್ನ 12 ಮಕ್ಕಳ ಸಾವಿಗೆ ಶುಕರ್ ಕಾರಣ ಎಂದು ಇಸ್ರೇಲ್ ಆರೋಪಿಸಿತ್ತು.