Site icon Vistara News

Israel Palestine War: ಉಗ್ರರ ನಿರ್ನಾಮಕ್ಕೆ ಇಸ್ರೇಲ್‌ ಸಜ್ಜು; 10 ಲಕ್ಷ ಜನ ಗಾಜಾ ತೊರೆಯಲು ಆದೇಶ!

Israel Palestine War

Israel Warns 10.1 Lakh Gaza Residents To Relocate; Ground Offensive Today?

ಜೆರುಸಲೇಂ: ಇಸ್ರೇಲ್‌ ಹಾಗೂ ಹಮಾಸ್‌ ಉಗ್ರರ ನಡುವಿನ ಸಂಘರ್ಷವು ಮತ್ತೊಂದು ಹಂತದ ಭೀಕರ ಸಮರಕ್ಕೆ ಸಾಕ್ಷಿಯಾಗುವ (Israel Palestine War) ಲಕ್ಷಣಗಳು ಗೋಚರಿಸಿವೆ. ಇಸ್ರೇಲ್‌ ಮೇಲೆ ಹಮಾಸ್‌ ಉಗ್ರರು (Hamas Terrorists) ದಾಳಿ ಮುಂದುವರಿಸಿದ್ದರೆ, ಗಾಜಾಪಟ್ಟಿಯ ನಿರ್ನಾಮಕ್ಕೆ ಇಸ್ರೇಲ್‌ ಸಜ್ಜಾಗುತ್ತಿದೆ. ಅದರಲ್ಲೂ, ಗಾಜಾದಲ್ಲಿರುವ ಸುಮಾರು 10.1 ಲಕ್ಷ ಜನ ಬೇರೆಡೆಗೆ ಸ್ಥಳಾಂತರಗೊಳ್ಳಬೇಕು ಎಂಬುದಾಗಿ ಇಸ್ರೇಲ್‌ ಸೂಚನೆ ನೀಡಿದ್ದು, ಶುಕ್ರವಾರವೇ (ಅಕ್ಟೋಬರ್‌ 13) ಗಾಜಾಪಟ್ಟಿ ಮೇಲೆ ಇಸ್ರೇಲ್‌ ದಾಳಿ ನಡೆಸಲಿದೆ ಎಂದು ತಿಳಿದುಬಂದಿದೆ.

“ಗಾಜಾದಲ್ಲಿರುವ ಸುಮಾರು 10.1 ಲಕ್ಷ ಜನರನ್ನು 24 ಗಂಟೆಯಲ್ಲಿ ಸ್ಥಳಾಂತರಗೊಳಿಸಬೇಕು ಎಂಬುದಾಗಿ ಇಸ್ರೇಲ್‌ ಸೇನೆಯು ಸೂಚಿಸಿದೆ. ಆದರೆ, ಇಷ್ಟು ಸಣ್ಣ ಅವಧಿಯಲ್ಲಿ 10 ಲಕ್ಷ ಜನರನ್ನು ಬೇರೆಡೆ ಸ್ಥಳಾಂತರಗೊಳಿಸುವುದು ಎಂದರೆ ಜನರಿಗೆ ಭಾರಿ ಪ್ರಮಾಣದಲ್ಲಿ ತೊಂದರೆಯಾಗುತ್ತದೆ. ಈಗಾಗಲೇ ಗಾಜಾದಲ್ಲಿ ಜನ ಸಂಕಷ್ಟಕ್ಕೆ ಸಿಲುಕಿದ್ದಾರೆ. ಇದರ ಮಧ್ಯೆಯೇ ಇಂತಹದ್ದೊಂದು ಸ್ಥಳಾಂತರ ಕಷ್ಟಸಾಧ್ಯವಾಗುತ್ತದೆ. ಈ ಕುರಿತು ಇಸ್ರೇಲ್‌ ಸೇನೆಯು ಮತ್ತೊಮ್ಮೆ ಯೋಚಿಸುವುದು ಒಳಿತು” ಎಂದು ವಿಶ್ವಸಂಸ್ಥೆ ವಕ್ತಾರ ಸ್ಫೀಫೇನ್‌ ಡುಜಾರಿಕ್‌ (Stephane Dujarric) ಹೇಳಿದ್ದಾರೆ.

ಶುಕ್ರವಾರವೇ ಸಮರ?

ಹಮಾಸ್‌ ಉಗ್ರರ ದಾಳಿಗೆ ಇಸ್ರೇಲ್‌ ನಾಗರಿಕರು ತತ್ತರಿಸಿರುವ ಕಾರಣ ಗಾಜಾಪಟ್ಟಿಯ ಮೇಲೆ ಶುಕ್ರವಾರ ಇಸ್ರೇಲ್‌ ಸೇನೆಯು ದಾಳಿ ನಡೆಸಲಿದೆ ಎಂದು ಹೇಳಲಾಗುತ್ತಿದೆ. ಅದರಲ್ಲೂ, 24 ಗಂಟೆಯಲ್ಲಿಯೇ ಲಕ್ಷಾಂತರ ನಾಗರಿಕರು ಸ್ಥಳಾಂತರಗೊಳ್ಳಿ ಎಂಬುದಾಗಿ ಇಸ್ರೇಲ್‌ ಸೂಚನೆ ನೀಡಿರುವುದು ದಾಳಿಯ ತೀವ್ರತೆಯನ್ನು ಅಂದಾಜಿಸಬಹುದಾಗಿದೆ. ಆದರೆ, ಇದುವರೆಗೆ ಗಾಜಾದಿಂದ ಯಾವುದೇ ನಾಗರಿಕರನ್ನು ಸ್ಥಳಾಂತರ ಮಾಡಿಲ್ಲ ಎಂದು ಮೂಲಗಳು ತಿಳಿಸಿವೆ.

ಇದನ್ನೂ ಓದಿ: Israel Palestine War: ಸಿರಿಯಾದ ಎರಡು ಏರ್‌ಪೋರ್ಟ್‌ಗಳನ್ನು ಧ್ವಂಸ ಮಾಡಿದ ಇಸ್ರೇಲ್

ಗಾಜಾ ನಿರ್ನಾಮ ಖಚಿತ ಎಂದಿರುವ ನೆತನ್ಯಾಹು

ಹಮಾಸ್‌ ಉಗ್ರರನ್ನು ನಾವು ಸರ್ವನಾಶ ಮಾಡುವುದು ನಿಶ್ಚಿತ ಎಂದು ಈಗಾಗಲೇ ಇಸ್ರೇಲ್‌ ಪ್ರಧಾನಿ ಬೆಂಜಮಿನ್‌ ನೆತನ್ಯಾಹು ಹೇಳಿರುವುದು ಕೂಡ ಇಸ್ರೇಲ್‌ ದಾಳಿಯ ಸಾಧ್ಯತೆಯನ್ನು ತೆರೆದಿಟ್ಟಿದೆ. “ಹಮಾಸ್‌ ಉಗ್ರರನ್ನು ನಾವು ನಿರ್ನಾಮ ಮಾಡುತ್ತೇವೆ. ಹಮಾಸ್‌ನ ಒಬ್ಬ ಉಗ್ರನೂ ಬದುಕುಳಿಯುವುದಿಲ್ಲ. ಎಲ್ಲರನ್ನೂ ಹತ್ಯೆಗೈಯುತ್ತೇವೆ” ಎಂದು ಬೆಂಜಮಿನ್‌ ನೆತನ್ಯಾಹು ಶಪಥ ಮಾಡಿದ್ದಾರೆ. ಹಾಗಾಗಿ, ಯಾವ ಕ್ಷಣದಲ್ಲಿ ಬೇಕಾದರೂ ಇಸ್ರೇಲ್‌ ವಾಯುಪಡೆಯು ಗಾಜಾ ಮೇಲೆ ದಾಳಿ ನಡೆಸಬಹುದು ಎನ್ನಲಾಗಿದೆ.

ವಾರ್ ರೂಮ್‌ಗಳು, ಮಿಲಿಟರಿ ನೆಲೆಗಳು, ಶಸ್ತ್ರಾಸ್ತ್ರಗಳನ್ನು ತಯಾರಿಸುವ ಕಟ್ಟಡಗಳು ಮತ್ತು ಭಯೋತ್ಪಾದಕ ಗುಂಪಿನೊಂದಿಗೆ ಸಂಪರ್ಕ ಹೊಂದಿದ ಸ್ಥಳಗಳು ಸೇರಿದಂತೆ ಗಾಜಾ ಪಟ್ಟಿಯಾದ್ಯಂತ ಹಮಾಸ್‌ನ ಎಲ್ಲ ಸಂಪನ್ಮೂಲಗಳ ಮೇಲೆ ದಾಳಿ ನಡೆಸುತ್ತಿದೆ ಎಂದು ಮಿಲಿಟರಿ ಹೇಳಿಕೊಂಡಿದೆ. ಹಮಾಸ್ ದಾಳಿಯ ನಂತರ ಇಸ್ರೇಲ್‌ನಲ್ಲಿ ಸಾವಿನ ಸಂಖ್ಯೆ 1,200 ಕ್ಕೆ ಏರಿದೆ ಮತ್ತು ಸುಮಾರು 3,300 ಮಂದಿ ಗಾಯಗೊಂಡಿದ್ದಾರೆ. ಏತನ್ಮಧ್ಯೆ, ಇಸ್ರೇಲ್ ದಾಳಿಗೆ ಗಾಜಾ ಪಟ್ಟಿಯಲ್ಲಿ 1,350 ಕ್ಕೂ ಹೆಚ್ಚು ಪ್ಯಾಲೆಸ್ತೀನಿಯರು ಮೃತಪಟ್ಟಿದ್ದಾರೆ.

Exit mobile version