Site icon Vistara News

Israel Palestine War: ಅವಳಿ ಮಕ್ಕಳ ಪ್ರಾಣ ಉಳಿಸಲು ತಮ್ಮ ಜೀವವನ್ನೇ ಬಲಿ ಕೊಟ್ಟ ಇಸ್ರೇಲ್‌ ದಂಪತಿ!

Itay and Hadar

Israeli Couple Heroically Die Trying to Save 10-Month-Old Twins During Hamas Terrorists Attack

ಜೆರುಸಲೇಂ: ಇಸ್ರೇಲ್‌ ಮೇಲೆ ಹಮಾಸ್‌ ಉಗ್ರರು ರಾಕೆಟ್‌, ಗುಂಡಿನ ದಾಳಿ ಮಾಡುತ್ತಿದ್ದಾರೆ. ಇಸ್ರೇಲ್‌ ಕೂಡ ಗಾಜಾಪಟ್ಟಿ ಮೇಲೆ ರಾಕೆಟ್‌ಗಳ (Israel Palestine War) ಸುರಿಮಳೆಗೈಯುತ್ತಿದೆ. ಇಸ್ರೇಲ್‌ಗೆ ಹಲವು ರಾಷ್ಟ್ರಗಳು ಬೆಂಬಲ ಘೋಷಿಸಿವೆ. ಒಂದಷ್ಟು ರಾಷ್ಟ್ರಗಳು ಪ್ಯಾಲೆಸ್ತೀನ್‌ಗೂ ಪರೋಕ್ಷವಾಗಿ ಬೆಂಬಲ ಸೂಚಿಸಿವೆ. ಒಟ್ಟಿನಲ್ಲಿ ಯುದ್ಧದ ಭೀಕರತೆ ದಿನೇದಿನೆ ಜಾಸ್ತಿಯಾಗುತ್ತಿದೆ. ಆದರೆ, ಅದು ಇಸ್ರೇಲ್‌ ಇರಲಿ, ಗಾಜಾ ಇರಲಿ. ಹೆಚ್ಚಿನ ಪ್ರಮಾಣದಲ್ಲಿ ಬಲಿಯಾಗುತ್ತಿರುವವರು ಮಾತ್ರ ಮುಗ್ಧ ಜನ. ಇದಕ್ಕೆ ನಿದರ್ಶನ ಎಂಬಂತೆ, ಇಸ್ರೇಲ್‌ನಲ್ಲಿ ಇಬ್ಬರು ದಂಪತಿಯು ತಮ್ಮ ಅವಳಿ ಮಕ್ಕಳಿಗಾಗಿ ತಮ್ಮ ಪ್ರಾಣವನ್ನೇ ಬಲಿ ಕೊಟ್ಟಿದ್ದಾರೆ.

ಹೌದು, ಇಟೇ ಹಾಗೂ ಹದಾರ್‌ ಬೆರ್ಡಿಚೆವ್‌ಸ್ಕಿ ದಂಪತಿಗೆ 10 ತಿಂಗಳ ಹಿಂದಷ್ಟೇ ಅವಳಿ ಮಕ್ಕಳು ಜನಿಸಿದ್ದವು. ನಿತ್ಯವೂ ಮನೆ ತುಂಬ ಎರಡು ಮಕ್ಕಳದ್ದೇ ಕಲರವ. ನಗು, ಅಳು, ತುಂಟಾಟವೇ ದಂಪತಿಯ ಮನೆ ಹಾಗೂ ಮನ ತುಂಬಿತ್ತು. ಆದರೆ, ಏಕಾಏಕಿ ಹಮಾಸ್‌ ಉಗ್ರರು ಮನೆಗೆ ನುಗ್ಗಿದರು. ಆಗ ದಂಪತಿಯು ಎರಡೂ ಮಕ್ಕಳನ್ನು ಬಚ್ಚಿಟ್ಟರು. ಮಕ್ಕಳು ಅತ್ತರೂ ಕೇಳಬಾರದು ಎನ್ನುವ ರೀತಿ ಬಚ್ಚಿಟ್ಟರು. ಉಗ್ರರು ದಾಳಿ ಮಾಡಿದಾಗ ತಾವು ಇಬ್ಬರೇ ಮನೆಯಲ್ಲಿ ಇರುವುದು ಎಂಬಂತೆ ಬಿಂಬಿಸಿದರು.

ಹೇಗಾಯಿತು ಉಗ್ರರ ದಾಳಿ?

ಹಮಾಸ್‌ ಉಗ್ರರು ಮನೆಗೆ ದಾಳಿ ಮಾಡಿದವರೇ ದಂಪತಿಯನ್ನು ಕೊಂದುಹಾಕಿದರು. ಮನೆಯಲ್ಲಿ ಹುಡುಕಿದರೂ ಯಾರೂ ಸಿಗಲಿಲ್ಲ. ಆದರೆ, ದಂಪತಿಯು ಮೃತಪಟ್ಟ 14 ತಾಸುಗಳ ಬಳಿಕ ಎರಡೂ ಕಂದಮ್ಮಗಳನ್ನು ಇಸ್ರೇಲ್‌ ಸೇನೆಯು ರಕ್ಷಿಸಿತು. ಹೀಗೆ, ತಮ್ಮ ಇಬ್ಬರು ಮಕ್ಕಳಿಗಾಗಿ ಪ್ರಾಣಕೊಟ್ಟು ಹೋರಾಡಿರುವುದು ಜಾಗತಿಕವಾಗಿ ಸುದ್ದಿಯಾಗಿದೆ. ಇಸ್ರೇಲ್‌ ಸೇನೆಯೂ ದಂಪತಿಯ ಧೈರ್ಯ, ಹೋರಾಟವನ್ನು ಮೆಚ್ಚಿದೆ. ದಂಪತಿ ಹಾಗೂ ಮಕ್ಕಳ ಫೋಟೊಗಳು ವೈರಲ್‌ ಆಗಿವೆ. ಆದರೆ, ಈಗ ಎರಡೂ ಮಕ್ಕಳು ಅನಾಥರಾಗಿದ್ದು, ಅವರ ಹಾರೈಕೆ ಕುರಿತು ಜನ ಆತಂಕ ವ್ಯಕ್ತಪಡಿಸುತ್ತಿದ್ದಾರೆ.

ಇದನ್ನೂ ಓದಿ: Israel Palestine War: ಗಾಜಾದತ್ತ ಹೊರಟ ಇಸ್ರೇಲ್‌ ಬಂಕರ್‌ಗಳು; ಹಮಾಸ್‌ ಉಗ್ರರ ಉಡೀಸ್‌ ಫಿಕ್ಸ್!

ಇಸ್ರೇಲ್‌ ಹಾಗೂ ಹಮಾಸ್‌ ಉಗ್ರರ ಸಂಘರ್ಷದಿಂದಾಗಿ ಮಕ್ಕಳು, ಮಹಿಳೆಯರು, ಹಿರಿಯರು ಮೃತಪಟ್ಟಿರುವ, ಅವರು ರಕ್ತದ ಮಡುವಿನಲ್ಲಿ ಬಿದ್ದಿರುವ, ಮಕ್ಕಳು ಮಣ್ಣಿನಡಿಯಲ್ಲಿ ಸಿಲುಕಿರುವ ಫೋಟೊ, ವಿಡಿಯೊಗಳು ವೈರಲ್‌ ಆಗುತ್ತಿವೆ. ಜನ ಈ ಯುದ್ಧದ ಸಹವಾಸವೇ ಬೇಡ ಎನ್ನುವಷ್ಟರಮಟ್ಟಿಗೆ ರಣಭೀಕರವಾಗಿ ದಾಳಿ ನಡೆಯುತ್ತಿದೆ. ಇನ್ನು ಗಾಜಾಪಟ್ಟಿಯನ್ನು, ಹಮಾಸ್‌ ಉಗ್ರರನ್ನು ನಿರ್ನಾಮ ಮಾಡಲಾಗುವುದು ಎಂದು ಇಸ್ರೇಲ್‌ ಘೋಷಿಸಿದೆ. ಅತ್ತ, ಇಸ್ರೇಲ್‌ಅನ್ನು ನಾಶಪಡಿಸುವುದಾಗಿ ಹಮಾಸ್‌ ಉಗ್ರರು ಪಣ ತೊಟ್ಟಿದ್ದಾರೆ. ಇವರ ಕಾಳಗದ ಮಧ್ಯೆ ಪ್ರಾಣ ಕಳೆದುಕೊಳ್ಳುತ್ತಿರುವುದು ಮಾತ್ರ ಮುಗ್ಧ ಜನ!

Exit mobile version