ಜೆರುಸಲೆಂ: ಬೆಂಜಮಿನ್ ನೆತನ್ಯಾಹು (Benjamin Netanyahu) ಅವರು ಗುರುವಾರ (ಡಿಸೆಂಬರ್ 29) ಇಸ್ರೇಲ್ ಪ್ರಧಾನಿಯಾಗಿ ಆರನೇ ಬಾರಿಗೆ ಪ್ರಮಾಣವಚನ ಸ್ವೀಕರಿಸಿದ್ದಾರೆ. ಇಸ್ರೇಲ್ ಸಂಸತ್ತಿನ ಒಟ್ಟು 120 ಸದಸ್ಯರ ಪೈಕಿ, 64 ಸದಸ್ಯರ ಬೆಂಬಲದೊಂದಿಗೆ ಬಲಪಂಥೀಯ ಸಿದ್ಧಾಂತದ ನೆತನ್ಯಾಹು ಪದಗ್ರಹಣ ಮಾಡಿದ್ದಾರೆ.
ಅಧಿಕಾರ ಸ್ವೀಕರಿಸಿದ ಬಳಿಕ ಮಾತನಾಡಿದ ಅವರು, “ರಾಷ್ಟ್ರದ ಹಿತಾಸಕ್ತಿಯ ಗುರಿಗಳನ್ನು ಸಾಧಿಸಲು ಉತ್ತಮ ಆಡಳಿತ ನೀಡಲಾಗುತ್ತದೆ. ಇರಾನ್ ಅಣ್ವಸ್ತ್ರ ತಯಾರಿಸುವುದನ್ನು ತಡೆಯುತ್ತೇವೆ. ದೇಶಾದ್ಯಂತ ಬುಲೆಟ್ ರೈಲು ಸಂಪರ್ಕ ಕಲ್ಪಿಸಲಾಗುತ್ತದೆ. ಜನರಿಗೆ ಉತ್ತಮ ಸೇವೆ ಒದಗಿಸಲಾಗುತ್ತದೆ” ಎಂದು ಹೇಳಿದರು. ಇತ್ತೀಚೆಗೆ ನಡೆದ ಚುನಾವಣೆಯಲ್ಲಿ ನೆತನ್ಯಾಹು ಅವರ ಪಕ್ಷವು ಗೆಲುವು ಸಾಧಿಸಿತ್ತು.
ಶುಭ ಕೋರಿದ ಮೋದಿ
ಭಾರತದ ಪ್ರಮುಖ ಸಹಭಾಗಿತ್ವ ದೇಶವಾದ ಇಸ್ರೇಲ್‌ನ ಪ್ರಧಾನಿಯಾಗಿ ನೆತನ್ಯಾಹು ಅವರು ಪದಗ್ರಹಣ ಮಾಡಿದ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಶುಭಕೋರಿದ್ದಾರೆ. “ನೂತನ ಸರ್ಕಾರ ರಚಿಸಿದ ಬೆಂಜಮಿನ್ ನೆತನ್ಯಾಹು ಅವರಿಗೆ ಅಭಿನಂದನೆಗಳು. ನಮ್ಮ ವ್ಯೂಹಾತ್ಮಕ ಸಹಭಾಗಿತ್ವವನ್ನು ಮತ್ತಷ್ಟು ಗಟ್ಟಿಗೊಳಿಸುವ ದಿಸೆಯಲ್ಲಿ ಕಾರ್ಯನಿರ್ವಹಿಸುವುದನ್ನು ನಿರೀಕ್ಷಿಸುತ್ತಿದ್ದೇವೆ” ಎಂದು ಟ್ವೀಟ್ ಮಾಡಿದ್ದಾರೆ.
ಇದನ್ನೂ ಓದಿ | ವಾರದ ವ್ಯಕ್ತಿಚಿತ್ರ | ಮತ್ತೆ ಪ್ರಧಾನಿ ಹುದ್ದೆಗೆ ಮರಳಿದ ಇಸ್ರೇಲಿಗಳ ಪ್ರೀತಿಯ ‘ಬೀಬಿ’ ಬೆಂಜಮಿನ್ ನೆತನ್ಯಾಹು!