Site icon Vistara News

Italy To Ban English: ಇಟಲಿಯಲ್ಲಿ ಇಟಾಲಿಯನ್‌ ಭಾಷೆಯೇ ಸಾರ್ವಭೌಮ, ಇಂಗ್ಲಿಷ್‌ ನಿಷೇಧಕ್ಕೆ ದಿಟ್ಟ ಹೆಜ್ಜೆ

Italian govt drafts bill that seeks to ban English language

Italian govt drafts bill that seeks to ban English language

ರೋಮ್‌: ಕರ್ನಾಟಕ ಸೇರಿ ದಕ್ಷಿಣ ಭಾರತದ ರಾಜ್ಯಗಳಲ್ಲಿ ಹಿಂದಿ ಹೇರಿಕೆ ವಿರುದ್ಧ ಆಕ್ರೋಶ ವ್ಯಕ್ತವಾಗುತ್ತಲೇ ಇರುತ್ತದೆ. ಇತ್ತೀಚೆಗೆ ಮೊಸರಿನ ಪ್ಯಾಕೆಟ್‌ ಮೇಲೆ ‘ದಹಿ’ ಎಂಬುದಾಗಿ ಬರೆಯಲು ಆಕ್ರೋಶ ವ್ಯಕ್ತವಾಗಿ, ಕೊನೆಗೆ ಆದೇಶವನ್ನೇ ರದ್ದುಗೊಳಿಸಲಾಗಿದೆ. ಹಿಂದಿ ಹೇರಿಕೆ, ಇಂಗ್ಲಿಷ್‌ ವ್ಯಾಮೋಹ, ಮಾತೃಭಾಷೆಯಲ್ಲಿಯೇ ಮಕ್ಕಳಿಗೆ ಶಿಕ್ಷಣ ನೀಡಬೇಕು ಎಂಬ ವಾದಗಳು ವರ್ಷಪೂರ್ತಿ ನಡೆಯುತ್ತಲೇ ಇರುತ್ತವೆ. ಕರ್ನಾಟಕದಲ್ಲಿ ಕನ್ನಡವೇ ಸಾರ್ವಭೌಮ ಎಂಬ ಮಾತುಗಳು ಕೂಡ ಕೇಳಿಬರುತ್ತವೆ. ಆದರೆ, ಇವೆಲ್ಲ ಚರ್ಚೆಯ ವಿಷಯವೇ ಹೊರತು, ಜಾರಿಗೆ ಬಂದಿಲ್ಲ. ಆದರೆ, ಇಟಲಿ ಸರ್ಕಾರವು ಇಟಲಿಯಲ್ಲಿ ಇಟಾಲಿಯನ್‌ ಭಾಷೆಯೇ ಸಾರ್ವಭೌಮ ಎಂಬುದನ್ನು ಚರ್ಚೆಗೆ ಸೀಮಿತಗೊಳಿಸದೆ, ಜಾರಿಗೆ ತರಲು ಮುಂದಾಗಿದೆ. ಹೌದು, ಇಟಲಿ ಸರ್ಕಾರವು ಇಂಗ್ಲಿಷ್‌ ಬಳಕೆಯ (Italy To Ban English) ನಿಷೇಧಕ್ಕೆ ಮುಂದಾಗಿದೆ.

ಇಟಲಿ ಪ್ರಧಾನಿ ಜಾರ್ಜಿಯಾ ಮೆಲೋನಿ ಅವರು ದೇಶದಲ್ಲಿ ವಿದೇಶಿ ಭಾಷೆ ಬಳಕೆ, ಅದರಲ್ಲೂ ಇಂಗ್ಲಿಷ್‌ ಭಾಷೆಯ ಬಳಕೆಯನ್ನು ನಿಯಂತ್ರಿಸುವ ದಿಸೆಯಲ್ಲಿ ಮಹತ್ವದ ಕರಡು ವಿಧೇಯಕವೊಂದನ್ನು ಮಂಡಿಸಲು ಸಜ್ಜಾಗಿದ್ದಾರೆ. ಹಾಗೊಂದು ವೇಳೆ, ಸರ್ಕಾರಿ ಅಥವಾ ಖಾಸಗಿ ಕಚೇರಿಗಳಲ್ಲಿ, ಸಂಸ್ಥೆಗಳಲ್ಲಿ ಇಂಗ್ಲಿಷ್‌ ಪದಗಳನ್ನು ಬಳಸಿದರೆ, ಅಂತಹವರಿಗೆ 1.08 ಲಕ್ಷ ಡಾಲರ್‌ (ಸುಮಾರು 89 ಲಕ್ಷ ರೂಪಾಯಿ) ದಂಡ ವಿಧಿಸುವ ಕ್ರಮವೂ ವಿಧೇಯಕದಲ್ಲಿದೆ. ಆ ಮೂಲಕ ದೇಶದಲ್ಲಿ ಇಟಲಿಯಲ್ಲಿಯೇ ಜನ ವ್ಯವಹರಿಸುವಂತೆ ಮಾಡುವುದು ಮೆಲೋನಿ ಅವರ ಉದ್ದೇಶವಾಗಿದೆ ಎಂದು ತಿಳಿದುಬಂದಿದೆ.

ಕಾನೂನು ಯಾವಾಗ ಜಾರಿ?

ದೇಶದಲ್ಲಿ ಇಂಗ್ಲಿಷ್‌ ಬಳಕೆಯ ನಿಷೇಧದ ಕುರಿತು ವಿಧೇಯಕದ ಕರಡು ಪ್ರತಿ ಈಗ ಸಿದ್ಧವಾಗಿದೆ. ವಿಧೇಯಕದ ಅಂತಿಮ ಪ್ರತಿ ಸಿದ್ಧವಾಗಿ, ಅದನ್ನು ಸಂಸತ್ತಿನ ಎರಡೂ ಸದನಗಳಲ್ಲಿ ಮಂಡಿಸಿ, ಅಂಗೀಕಾರ ಪಡೆದ ನಂತರ ಕಾನೂನು ಜಾರಿಗೆ ಬರುತ್ತದೆ. ಆದಾಗ್ಯೂ, ಯಾವಾಗ ವಿಧೇಯಕವನ್ನು ಸಂಸತ್ತಿನಲ್ಲಿ ಮಂಡಿಸಲಾಗುತ್ತದೆ ಎಂಬ ಕುರಿತು ಪ್ರಧಾನಿ ಜಾರ್ಜಿಯಾ ಮೆಲೋನಿ ಘೋಷಿಸಿಲ್ಲ. ಆದಾಗ್ಯೂ, ದೇಶದಲ್ಲಿ ಇಂಗ್ಲಿಷ್‌ ಭಾಷೆಯ ಬಳಕೆಯನ್ನು ನಿಷೇಧಿಸುವ ಪರವಾಗಿ ಜನಾಭಿಪ್ರಾಯ ಇದೆ ಎಂದು ತಿಳಿದುಬಂದಿದೆ.

ಇಟಲಿ ಸಂಸತ್ತು.

ಇಂಗ್ಲಿಷ್‌ ನಿಷೇಧ ಏಕೆ?

“ಇಂಗ್ಲಿಷ್‌ ಭಾಷೆಯು ಇಟಲಿಯ ನಾಗರಿಕರ ಆತ್ಮಬಲವನ್ನು, ಸ್ವಾಭಿಮಾನವನ್ನು ಕುಗ್ಗಿಸುತ್ತದೆ. ಹಾಗಾಗಿ, ಸರ್ಕಾರಿ ಹಾಗೂ ಖಾಸಗಿ ಸಂಸ್ಥೆಗಳಲ್ಲಿ ಇಂಗ್ಲಿಷ್‌ ಭಾಷೆ, ಪದಗಳ ಬಳಕೆಯನ್ನು ನಿಲ್ಲಿಸಬೇಕು. ಎಲ್ಲರೂ ಇಟಾಲಿಯನ್‌ ಭಾಷೆಯಲ್ಲಿಯೇ ಮಾತನಾಡುವ ಮೂಲಕ ಸ್ವಾಭಿಮಾನ ಮೆರೆಯಬೇಕು. ಇದು ದೇಶದ ಭಾಷೆಯ ಅಭಿಮಾನದ ಸಂಕೇತವೂ ಆಗಿದೆ. ಹಾಗಾಗಿ, ಖಾಸಗಿ ಹಾಗೂ ಸರ್ಕಾರಿ ಸಂಸ್ಥೆಗಳಲ್ಲಿ ಇಂಗ್ಲಿಷ್‌ ಬಳಸಿದವರಿಗೆ ದಂಡ ವಿಧಿಸುವ ಕಾನೂನು ಜಾರಿಗೆ ಚಿಂತನೆ ನಡೆದಿದೆ” ಎಂಬುದಾಗಿ ವಿಧೇಯಕದಲ್ಲಿ ಉಲ್ಲೇಖಿಸಲಾಗಿದೆ.

ಇದನ್ನೂ ಓದಿ: Viral Video: ಇಟಲಿ ಪ್ರಧಾನಿ ಮೆಲಾನಿ ಹೊಗಳಿಕೆಗೆ ಪ್ರಧಾನಿ ಮೋದಿಯವರ ಮುಖಭಾವ ಹೀಗಿತ್ತು!; ವೈರಲ್​ ಆಯ್ತು ವಿಡಿಯೊ

ಬೇರೆ ಯಾವ ದೇಶಗಳಲ್ಲಿ ಇಂಗ್ಲಿಷ್‌ ನಿಯಂತ್ರಣ?

“ಯುರೋಪ್‌ ರಾಷ್ಟ್ರಗಳಲ್ಲಿ ಇಂಗ್ಲಿಷ್‌ನ ಬಳಕೆ ಹೆಚ್ಚಾಗುತ್ತಿರುವುದು ಅಪಾಯದ ಸಂಕೇತವಾಗಿದೆ” ಎಂದು ವಿಧೇಯಕ ತಿಳಿಸಿದೆ. ಇಟಲಿಯಲ್ಲಿ ಇಂಗ್ಲಿಷ್‌ ಬಳಕೆ ಕುರಿತು ಮೊದಲಿನಿಂದಲೂ ಜನ ವಿರೋಧಿಸುತ್ತಿದ್ದಾರೆ ಎನ್ನಲಾಗುತ್ತಿದೆ. ಹಾಗಂತ, ಇಟಲಿ ಒಂದೇ ಅಲ್ಲ, ಜಗತ್ತಿನ ಹಲವು ಭಾಷೆಗಳಲ್ಲಿ ಇಂಗ್ಲಿಷ್‌ ನಿಯಂತ್ರಣಕ್ಕೆ ಕ್ರಮ ತೆಗೆದುಕೊಳ್ಳಲಾಗಿದೆ. ಚೀನಾ ಹಾಗೂ ಇರಾನ್‌ನ ಶಿಕ್ಷಣ ಸಂಸ್ಥೆಗಳಲ್ಲಿ ಇಂಗ್ಲಿಷ್‌ ಬೋಧನೆಯನ್ನು ನಿಷೇಧಿಸಲಾಗಿದೆ. ಫ್ರಾನ್ಸ್‌ನಲ್ಲಿ ಆಡಳಿತ ಭಾಷೆ ಫ್ರೆಂಚ್‌ ಆಗಿದೆ.

Exit mobile version