ವಾಷಿಂಗ್ಟನ್: ಅಮೆರಿಕದ ಸಿಯಾಟಲ್ (Seattle)ನಲ್ಲಿ ಕಳೆದ ವರ್ಷ ಭಾರತದ ಮೂಲದ 23 ವರ್ಷದ ವಿದ್ಯಾರ್ಥಿನಿ ಜಾಹ್ನವಿ ಕಂಡುಲಾ (Jaahnavi Kandula) ಅವರ ಸಾವಿಗೆ ಕಾರಣರಾದ ಪೊಲೀಸ್ ಅಧಿಕಾರಿ ಕೆವಿನ್ ಡೇವ್ (Kevin Dave) ಸಮರ್ಪಕ ಸಾಕ್ಷಿ ಇಲ್ಲದ ಕಾರಣ ಶಿಕ್ಷೆಯಿಂದ ಪಾರಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ.
ʼʼಪೊಲೀಸ್ ಅಧಿಕಾರಿಯ ವಿರುದ್ಧ ಯಾವುದೇ ಸಾಕ್ಷಿ ಲಭಿಸದ ಕಾರಣ ಅವರನ್ನು ಸುಮ್ಮನೆ ಬಿಡಲಾಗಿದೆ. ಇದೇ ವೇಳೆ ಕಿಂಗ್ ಕೌಂಟಿ ಪ್ರಾಸಿಕ್ಯೂಟರ್ ಕಚೇರಿ ಪ್ರಕರಣದ ಬಗ್ಗೆ ಕಳವಳ ವ್ಯಕ್ತಪಡಿಸಿದೆ. ಕಂಡುಲಾ ಅವರ ಸಾವು ಹೃದಯ ವಿದ್ರಾವಕವಾಗಿದೆ ಮತ್ತು ಇದು ಪ್ರಪಂಚದಾದ್ಯಂತದ ಜನರ ಮೇಲೆ ಪರಿಣಾಮ ಬೀರಿದೆ ಎಂದಿದೆʼʼ ಎಂದು ಮೂಲಗಳು ತಿಳಿಸಿವೆ. ಬಾಡಿ ಫೂಟೇಜ್ ಕ್ಯಾಮೆರಾದ ವೈರಲ್ ವಿಡಿಯೊವನ್ನು ನ್ಯಾಯಾಲಯ ಸಾಕ್ಷಿಯಾಗಿ ಪರಿಗಣಿಸದ ಕಾರಣ ಕೆವಿನ್ ಡೇವ್ ವಿರುದ್ಧ ಪ್ರಕರಣ ದಾಖಲಾಗಿಲ್ಲ ಎನ್ನಲಾಗಿದೆ.
ಏನಿದು ಪ್ರಕರಣ?
2023ರ ಜನವರಿ 26ರಂದು ಸಿಯಾಟಲ್‌ನಲ್ಲಿ ಜಾಹ್ನವಿ ಕಂಡುಲಾ ಅವರಿಗೆ ಕೆವಿನ್ ಡೇವ್ ಚಲಾಯಿಸುತ್ತಿದ್ದ ಪೊಲೀಸ್ ವಾಹನ ಡಿಕ್ಕಿಯಾಗಿತ್ತು. ಈ ವೇಳೆ ವಾಹನ ಗಂಟೆಗೆ ಸುಮಾರು 119 ಕಿಲೋಮೀಟರ್ ವೇಗದಲ್ಲಿತ್ತು. ಡಿಕ್ಕಿ ಹೊಡೆದ ರಭಸಕ್ಕೆ ಕಂಡುಲಾ ಅವರ ದೇಹವು ದೂರಕ್ಕೆ ಎಸೆಯಲ್ಪಟ್ಟಿತ್ತು. ಕೂಡಲೇ ಅವರನ್ನು ಹಾರ್ಬರ್ವ್ಯೂ ಮೆಡಿಕಲ್ ಸೆಂಟರ್‌ಗೆ ಕರೆದೊಯ್ಯಲಾಗಿದ್ದರೂ, ತೀವ್ರ ಗಾಯಗಳಿಂದ ಆಕೆ ಮೃತಪಟ್ಟಿದ್ದರು. ಆಂಧ್ರಪ್ರದೇಶದ ಕಡಪ ಮೂಲದವರಾದ ಜಾಹ್ನವಿ ಕಂಡುಲಾ ಅವರು ಸಿಯಾಟಲ್‌ನಲ್ಲಿರುವ ನಾರ್ತ್ ಈಸ್ಟ್ ವಿಶ್ವವಿದ್ಯಾಲಯದಲ್ಲಿ ಸ್ನಾತಕೋತ್ತರ ಪದವಿ ಓದುತ್ತಿದ್ದರು. 2021ರಲ್ಲಿ ನಡೆದ ವಿದ್ಯಾರ್ಥಿ ವಿನಿಮಯ ಕಾರ್ಯಕ್ರಮದಲ್ಲಿ ಬೆಂಗಳೂರಿನಿಂದ ಅಮೆರಿಕಕ್ಕೆ ಹೋಗಿದ್ದ ಅವರು ಕಳೆದ ಡಿಸೆಂಬರ್‌ನಲ್ಲಿ ಪದವಿ ಪಡೆಯಬೇಕಿತ್ತು.
ವಿಡಿಯೊ ವೈರಲ್
ರಸ್ತೆ ಅಪಘಾತದ ವೇಳೆ ಪೊಲೀಸ್ ಅಧಿಕಾರಿಗಳಿಬ್ಬರು ಅಪಹಾಸ್ಯ ಮಾಡಿದ್ದ ವಿಚಾರ ಸಂಚಲನ ಸೃಷ್ಟಿಸಿತ್ತು. ಅಪಘಾತದ ವೇಳೆ ವಾಹನದಲ್ಲಿದ್ದ ಸಿಯಾಟಲ್ ಪೊಲೀಸ್ ಆಫೀಸರ್ಸ್ ಗಿಲ್ಡ್ ಉಪಾಧ್ಯಕ್ಷ ಡ್ಯಾನಿಯಲ್ ಆಡೆರರ್ ಜೋಕ್ ಮಾಡಿದ್ದರು. “ಓಹ್ ಅವಳು ಸತ್ತೇ ಹೋದಳು. 11 ಸಾವಿರ ಡಾಲರ್ ಮೊತ್ತದ ಚೆಕ್ ಬರೆದು ಬಿಸಾಡೋಣ. ಓಹ್, ಅವಳಿಗೆ 26 ವರ್ಷ ವಯಸ್ಸಲ್ಲ. ಹಾಗಾದರೆ ಅವಳ ಜೀವಕ್ಕೆ ಹೆಚ್ಚಿನ ಬೆಲೆ ಇಲ್ಲ” ಎಂದು ನಕ್ಕಿರುವ ವಿಡಿಯೊ ಕಳೆದ ವರ್ಷ ಹೊರ ಬಂದು ವೈರಲ್ ಆಗಿತ್ತು.
ಇದನ್ನೂ ಓದಿ: Jaahnavi Kandula: ಅಮೆರಿಕದಲ್ಲಿ ಭಾರತದ ವಿದ್ಯಾರ್ಥಿನಿಗೆ ಕಾರು ಗುದ್ದಿಸಿ ನಕ್ಕ ಪೊಲೀಸ್; ಸಾವಿಗೆ ಭಾರತ ಖಂಡನೆ
ಜಾಹ್ನವಿ ಕಂಡುಲಾ ಸಾವಿನ ಕುರಿತು ಅಪಹಾಸ್ಯ ಮಾಡಿ ನಕ್ಕ ವಿಡಿಯೊ ವೈರಲ್ ಆಗುತ್ತಲೇ ಸ್ಯಾನ್‌ಫ್ರಾನ್ಸಿಸ್ಕೋದಲ್ಲಿರುವ ಭಾರತದ ಕಾನ್ಸುಲೇಟ್ ಖಂಡನೆ ವ್ಯಕ್ತಪಡಿಸಿತ್ತು. “ಇದು ಅತ್ಯಂತ ಅಪಾಯಕಾರಿ ಘಟನೆ. ಇಂತಹ ಪ್ರಕರಣಗಳನ್ನು ನಾವು ಸಹಿಸುವುದಿಲ್ಲ. ಕೂಡಲೇ ಪ್ರಕರಣದ ಕುರಿತು ಸಮಗ್ರ ತನಿಖೆಯಾಗಬೇಕು ಹಾಗೂ ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕು” ಎಂದು ಆಗ್ರಹಿಸಿತ್ತು. ಭಾರಿ ಆಕ್ರೋಶದ ಬಳಿಕ, ಸಮಗ್ರ ತನಿಖೆ ಮಾಡಲಾಗುವುದು ಎಂದು ಸಿಯಾಟಲ್ ಪೊಲೀಸರು ತಿಳಿಸಿದ್ದರು. ಅಮೆರಿಕದಲ್ಲಿ ಭಾರತೀಯರ ಜೀವಕ್ಕೆ ಬೆಲೆಯೇ ಇಲ್ವಾ ಅನ್ನೋ ವಿಚಾರ ಬಹಳಷ್ಟು ಚರ್ಚೆಯಾಗಿತ್ತು.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ