Site icon Vistara News

Japan Earthquake: ಜಪಾನ್‌ನಲ್ಲಿ ಒಂದೇ ದಿನ 155 ಕಂಪನ, ಸಾವಿನ ಸಂಖ್ಯೆ 24ಕ್ಕೆ

Japan Earthquake

ಟೋಕಿಯೊ: ಹೊಸ ವರ್ಷದ ದಿನ ಜಪಾನ್‌ನಲ್ಲಿ ಸಂಭವಿಸಿದ ಪ್ರಬಲ ಭೂಕಂಪದಲ್ಲಿ (Japan Earthquake) 24 ಮಂದಿ ಸತ್ತಿದ್ದಾರೆ. ಸಾವುನೋವಿನ ಸಂಖ್ಯೆ ಇನ್ನಷ್ಟು ಹೆಚ್ಚುವ ನಿರೀಕ್ಷೆ ಇದೆ.

ಹೊನ್ಶುವಿನ ಮುಖ್ಯ ದ್ವೀಪದಲ್ಲಿರುವ ಇಶಿಕಾವಾ ಪ್ರಾಂತ್ಯದಲ್ಲಿ 7.5 ತೀವ್ರತೆಯ ಭೂಕಂಪ ಸಂಭವಿಸಿತು. ಇದು ಒಂದು ಮೀಟರ್‌ಗಿಂತಲೂ ಹೆಚ್ಚು ಎತ್ತರದ ಸುನಾಮಿ ಅಲೆಗಳನ್ನು ಪ್ರಚೋದಿಸಿತು. ಹಲವು ಕಟ್ಟಡಗಳು ಉರುಳಿದವು. ಪ್ರಮುಖ ಬಂದರಿನಲ್ಲಿ ಬೆಂಕಿ ಆಕಸ್ಮಿಕ ಸಂಭವಿಸಿತು. ಹಲವಾರು ರಸ್ತೆಗಳು ಧ್ವಂಸಗೊಂಡವು.

ಭೂಕಂಪಕ್ಕೆ ತುತ್ತಾಗಿ ಬದುಕುಳಿದವರನ್ನು ಹುಡುಕಲು ಜಪಾನಿನ ತುರ್ತುರಕ್ಷಣಾ ಪಡೆಗಳು ಮಂಗಳವಾರ ಹೋರಾಟ ಮುಂದುವರಿಸಿವೆ. ನೋಟೊ ಪೆನಿನ್ಸುಲಾದಲ್ಲಿಯೂ ವಿನಾಶದ ಪ್ರಮಾಣ ಹೆಚ್ಚಿದ್ದು, ಹಲವು ಕಟ್ಟಡಗಳು ಕುಸಿದು ಹೊಗೆಯಾಡುತ್ತಿದೆ. ಹಲವು ಮನೆಗಳು ಕುಸಿದು ಚಪ್ಪಟೆಯಾಗಿವೆ. ಮೀನುಗಾರಿಕೆ ದೋಣಿಗಳು ಮುಳುಗಿವೆ ಅಥವಾ ದಡದತ್ತ ಕೊಚ್ಚಿಹೋಗಿವೆ.

ಜಪಾನ್‌ ನಿವಾಸಿಗಳಿಗೆ ಹೊಸ ವರ್ಷದ ಆರಂಭದ ದಿನವೇ ಭಯಾನಕವಾಗಿತ್ತು. ವಾಜಿಮಾ ಬಂದರಿನಲ್ಲಿ ಏಳು ಮಂದಿ ಸೇರಿದಂತೆ 24 ಜನರು ಸಾವನ್ನಪ್ಪಿದ್ದಾರೆ ಎಂದು ಕ್ಯೋಡೋ ಸುದ್ದಿ ಸಂಸ್ಥೆ ವರದಿ ಮಾಡಿದೆ. ಸಾವಿನ ಸಂಖ್ಯೆ ಏರುವುದು ಖಚಿತವಾಗಿದೆ. “ಹಲವಾರು ಸಾವುನೋವುಗಳು ಸಂಭವಿಸಿವೆ. ಕಟ್ಟಡ ಕುಸಿತಗಳು ಮತ್ತು ಬೆಂಕಿ ಆಕಸ್ಮಿಕ ಸೇರಿದಂತೆ ಬಹಳ ವ್ಯಾಪಕವಾದ ಹಾನಿಐಾಗಿದೆ” ಎಂದು ವಿಪತ್ತು ಪ್ರತಿಕ್ರಿಯೆ ಸಭೆಯ ನಂತರ ಪ್ರಧಾನ ಮಂತ್ರಿ ಫ್ಯೂಮಿಯೊ ಕಿಶಿಡಾ ಹೇಳಿದರು.

ವಾಜಿಮಾದಲ್ಲಿ ಏಳು ಅಂತಸ್ತಿನ ಕಟ್ಟಡ ಕುಸಿದುಬಿದ್ದಿದ್ದು, ದೊಡ್ಡ ಬೆಂಕಿ ಹೊತ್ತಿಕೊಂಡಿದೆ. ಈ ಪ್ರದೇಶದಲ್ಲಿ ಸುಮಾರು 45,000 ಕುಟುಂಬಗಳು ವಿದ್ಯುತ್ ಇಲ್ಲದೆ ದಿನ ಕಳೆದಿವೆ. ರಾತ್ರಿಯ ತಾಪಮಾನ ಶೂನ್ಯದ ಸಮೀಪ ಇದ್ದುದರಿಂದ ಇವರು ಭಯಂಕರ ಕಷ್ಟ ಅನುಭವಿಸಿದರು. ವಾಟರ್‌ ಲೈನ್‌ಗಳು ಕತ್ತರಿಸಿಹೋಗಿದ್ದರಿಂದ ಅನೇಕ ನಗರಗಳಿಗೆ ನೀರು ಪೂರೈಕೆ ನಿಂತುಹೋಗಿದೆ.

ಭೂಕಂಪದ ತೀವ್ರತೆ 7.5ರಷ್ಟಿತ್ತು ಎಂದು ಯುಎಸ್ ಜಿಯೋಲಾಜಿಕಲ್ ಸರ್ವೆ (ಯುಎಸ್‌ಜಿಎಸ್) ತಿಳಿಸಿದೆ. ಜಪಾನ್‌ನ ಹವಾಮಾನ ಸಂಸ್ಥೆ 7.6 ಎಂದಿದೆ. ಮಂಗಳವಾರ ಬೆಳಗಿನವರೆಗೂ 150ಕ್ಕೂ ಹೆಚ್ಚು ಕಂಪನಗಳು ಈ ಪ್ರದೇಶವನ್ನು ಅಲುಗಾಡಿಸಿದವು. ಮಂಗಳವಾರ ಬೆಳಗ್ಗೆ ಕೂಡ ಒಂದು ಬಲವಾದ ಆಘಾತ ವದಿಯಾಯಿತು. ಇದರಲ್ಲಿ ಒಂದು ಕಂಪನ 5.6 ರಿಕ್ಟರ್‌ ಇತ್ತು.

ಸುನಾಮಿ ಎಚ್ಚರಿಕೆ ವಾಪಸ್‌

ಸೋಮವಾರದಂದು ಕನಿಷ್ಠ 1.2 ಮೀಟರ್ (ನಾಲ್ಕು ಅಡಿ) ಎತ್ತರದ ಅಲೆಗಳು ವಾಜಿಮಾ ತೀರವನ್ನು ಅಪ್ಪಳಿಸಿದವು. ಬೇರೆ ಕಡೆಗಳಲ್ಲಿ ಸಣ್ಣ ಸುನಾಮಿಗಳ ಸರಣಿಯು ವರದಿಯಾಗಿದೆ. ಹೆಚ್ಚು ದೊಡ್ಡ ಅಲೆಗಳು ಬರಲಿಲ್ಲ. ಮಂಗಳವಾರ ಜಪಾನ್ ಎಲ್ಲಾ ಸುನಾಮಿ ಎಚ್ಚರಿಕೆಗಳನ್ನು ಹಿಂದೆಗೆದುಕೊಂಡಿತು.

ಸಾಮಾಜಿಕ ಮಾಧ್ಯಮದಲ್ಲಿನ ಕೆಲವು ವಿಡಿಯೊಗಳು ಇಶಿಕಾವಾದಲ್ಲಿನ ಕಾರುಗಳು ಮತ್ತು ಮನೆಗಳು ಜೋರಾಗಿ ಅಲುಗಾಡುತ್ತಿರುವುದನ್ನು ತೋರಿಸಿದವು. ಅಂಗಡಿಗಳು ಮತ್ತು ರೈಲು ನಿಲ್ದಾಣಗಳಲ್ಲಿ ಜನ ಭಯಭೀತರಾಗಿ ಕಂಡುಬಂದರು. ಮನೆಗಳು ಕುಸಿದಿದ್ದು, ರಸ್ತೆಗಳಲ್ಲಿ ದೊಡ್ಡ ಬಿರುಕುಗಳು ಕಾಣಿಸಿಕೊಂಡಿವೆ. ವಾಜಿಮಾದಲ್ಲಿ ಬೆಂಕಿಯು ಮನೆಗಳ ಸಾಲುಗಳನ್ನು ಆವರಿಸಿದೆ. ಜನರನ್ನು ರಾತ್ರಿ ಕತ್ತಲೆಯಲ್ಲಿ ಸ್ಥಳಾಂತರಿಸಲಾಗಿದೆ. ನಗರದಲ್ಲಿ 25 ಮನೆಗಳು ಕುಸಿದಿವೆ ಎಂದು ಎನ್‌ಎಚ್‌ಕೆ ವರದಿ ಮಾಡಿದೆ.

ಸುಜು ಬಂದರಿನಲ್ಲಿ ಬಹಳಷ್ಟು ಹಡಗುಗಳು ಮುಳುಗಿವೆ. ಅಗ್ನಿಶಾಮಕ ಮತ್ತು ವಿಪತ್ತು ನಿರ್ವಹಣಾ ಸಂಸ್ಥೆ ಪ್ರಕಾರ ಒಟ್ಟು 62,000 ಜನರನ್ನು ಸ್ಥಳಾಂತರಿಸಲು ಆದೇಶಿಸಲಾಗಿದೆ. ಸೇನಾ ನೆಲೆಯಲ್ಲಿ ಸುಮಾರು 1,000 ಜನರು ತಂಗಿದ್ದಾರೆ ಎಂದು ರಕ್ಷಣಾ ಸಚಿವಾಲಯ ತಿಳಿಸಿದೆ.

ಬುಲೆಟ್ ರೈಲುಗಳು ಸ್ಥಗಿತ

1,000 ಸೇನಾ ಸಿಬ್ಬಂದಿ ಪ್ರದೇಶಕ್ಕೆ ತೆರಳಿದ್ದು, 8,500 ಮಂದಿ ಸನ್ನದ್ಧ ಸ್ಥಿತಿಯಲ್ಲಿದ್ದಾರೆ. ಹಾನಿಯ ಸಮೀಕ್ಷೆಗಾಗಿ ಸುಮಾರು 20 ಮಿಲಿಟರಿ ವಿಮಾನಗಳನ್ನು ಕಳುಹಿಸಲಾಗಿದೆ. ಭೂಕಂಪದ ಕೇಂದ್ರಬಿಂದುವಿನ ಸುತ್ತಲಿನ ಹಲವಾರು ಪ್ರಮುಖ ಹೆದ್ದಾರಿಗಳನ್ನು ಮುಚ್ಚಲಾಗಿದೆ. ಟೋಕಿಯೊದಿಂದ ಬುಲೆಟ್ ರೈಲು ಸೇವೆಗಳನ್ನು ಸಹ ಸ್ಥಗಿತಗೊಳಿಸಲಾಗಿದೆ.

ಸೋಮವಾರದ ಭೂಕಂಪವು ರಾಜಧಾನಿ ಟೋಕಿಯೊದಿಂದ ಸುಮಾರು 300 ಕಿಲೋಮೀಟರ್ ದೂರದಲ್ಲಿರುವ ಅಪಾರ್ಟ್‌ಮೆಂಟ್‌ಗಳನ್ನು ನಡುಗಿಸಿತು. ಅಲ್ಲಿ ಚಕ್ರವರ್ತಿ ನರುಹಿಟೊ ಮತ್ತು ಅವರ ಕುಟುಂಬ ಸದಸ್ಯರು ಭಾಗವಹಿಸಬೇಕಿದ್ದ ಸಾರ್ವಜನಿಕ ಹೊಸ ವರ್ಷದ ಶುಭಾಶಯ ಕಾರ್ಯಕ್ರಮವನ್ನು ರದ್ದುಗೊಳಿಸಲಾಯಿತು.

ಜಪಾನ್ ಪ್ರತಿ ವರ್ಷ ನೂರಾರು ಭೂಕಂಪಗಳನ್ನು ಅನುಭವಿಸುತ್ತದೆ. ಬಹುಪಾಲು ಯಾವುದೇ ಹಾನಿಯನ್ನುಂಟುಮಾಡುವುದಿಲ್ಲ. ನೊಟೊ ಪೆನಿನ್ಸುಲಾ ಪ್ರದೇಶದಲ್ಲಿ ಭೂಕಂಪಗಳ ಸಂಖ್ಯೆಯು 2018ರಿಂದ ಸ್ಥಿರವಾಗಿ ಹೆಚ್ಚುತ್ತಿದೆ. 2011ರಲ್ಲಿ ಈಶಾನ್ಯ ಜಪಾನ್‌ನಲ್ಲಿ 9.0 ತೀವ್ರ ಸಮುದ್ರ ಭೂಕಂಪ ಆಗಿತ್ತು. ಇದು ಸುನಾಮಿಯನ್ನು ತಂದಿತ್ತು. ಸುಮಾರು 18,500 ಜನ ಸತ್ತಿದ್ದರು. ಇದು ಫುಕುಶಿಮಾ ಪರಮಾಣು ಸ್ಥಾವರಕ್ಕೆ ಹಾನಿಯುಂಟು ಮಾಡಿತ್ತು. ಇದು ವಿಶ್ವದ ಅತ್ಯಂತ ಕೆಟ್ಟ ಪರಮಾಣು ದುರಂತಗಳಲ್ಲಿ ಒಂದಾಗಿದೆ.

ಸೋಮವಾರದ ಭೂಕಂಪದ ನಂತರ ಇಶಿಕಾವಾದಲ್ಲಿನ ಶಿಕಾ ಪರಮಾಣು ವಿದ್ಯುತ್ ಸ್ಥಾವರ ಅಥವಾ ಇತರ ಸ್ಥಾವರಗಳಲ್ಲಿ ಯಾವುದೇ ಅಸಹಜತೆಗಳು ವರದಿಯಾಗಿಲ್ಲ. ಅಮೆರಿಕ ಅಧ್ಯಕ್ಷ ಜೋ ಬೈಡೆನ್‌, ಫ್ರೆಂಚ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್, ಇಟಾಲಿಯನ್ ಪ್ರಧಾನಿ ಜಾರ್ಜಿಯಾ ಮೆಲೋನಿ ಜಪಾನ್‌ಗೆ ಸಂತಾಪ ಮತ್ತು ಸಹಾಯಹಸ್ತ ಚಾಚಿದ್ದಾರೆ.

Exit mobile version