ಟೋಕಿಯೋ: ಇಂದು ಬೆಳಗ್ಗೆ ಜಪಾನ್ ಪಶ್ಚಿಮ ನಗರ ನಾರಾದಲ್ಲಿ ಚುನಾವಣಾ ಪ್ರಚಾರ ಮಾಡುತ್ತಿದ್ದಾಗ ಗುಂಡಿನ ದಾಳಿಗೆ ಒಳಗಾದ ಜಪಾನ್ ಮಾಜಿ ಪ್ರಧಾನಮಂತ್ರಿ ಶಿಂಜೊ ಅಬೆ (67) ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ. ಮಾಜಿ ಯೋಧ ತೆಟ್ಸಾಯ ಯಾಮಗಾಮಿ ಎಂಬಾತ ಹಿಂದಿನಿಂದ ಗುರಿಯಿಟ್ಟು ಗುಂಡು ಹೊಡೆದಿದ್ದ. ಒಂದು ಗುಂಡು ಶಿಂಜೊ ಎದೆಗೆ ಬಿದ್ದಿತ್ತು, ಇನ್ನೊಂದು ಗುಂಡು ಅವರ ಕುತ್ತಿಗೆಗೆ ಬಿದ್ದಿತ್ತು. ಗುಂಡಿನ ದಾಳಿಗೆ ಒಳಗಾಗುತ್ತಿದ್ದಂತೆ ಹೃದಯ ಸ್ತಂಭನಕ್ಕೆ ಒಳಗಾಗಿದ್ದರು. ಅವರಿಗೆ ಪ್ರಾಥಮಿಕವಾಗಿ ಸಿಪಿಆರ್ ಚಿಕಿತ್ಸೆ ನೀಡಿ ನಂತರ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು ಆಸ್ಪತ್ರೆಯಲ್ಲಿ ವೈದ್ಯರು ಕೂಡ ಹಲವು ಪ್ರಯತ್ನಗಳನ್ನು ಮಾಡಲಾಗಿತ್ತು. ಆದರೆ ಕೊನೆಗೂ ಅವರು ಬದುಕುಳಿಯಲಿಲ್ಲ.
ಪ್ರಧಾನಿ ಮೋದಿ ಸಂತಾಪ
ಮಾಜಿ ಪ್ರಧಾನಿ ಶಿಂಜೊ ಅಬೆ ಸಾವಿಗೆ ಪ್ರಧಾನಿ ನರೇಂದ್ರ ಮೋದಿ, ಫ್ರೆಂಚ್ ಅಧ್ಯಕ್ಷ ಇಮ್ಯಾನುಯೆಲ್ ಮ್ಯಾಕ್ರನ್ ಸೇರಿ ವಿಶ್ವದ ಹಲವು ನಾಯಕರು ಸಂತಾಪ ಸೂಚಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಟ್ವೀಟ್ ಮಾಡಿ, ʼನನ್ನ ಆತ್ಮೀಯ ಸ್ನೇಹಿತ ಶಿಂಜೊ ಅಬೆಯವರ ದುರಂತ ಸಾವಿನ ಸುದ್ದಿ ಕೇಳಿ ಆಘಾತವಾಗಿದೆ. ಜಾಗತಿಕ ಮಟ್ಟದಲ್ಲಿ ಅವರೊಬ್ಬ ಅತ್ಯುನ್ನತ ರಾಜಕಾರಣಿ ಎನ್ನಿಸಿಕೊಂಡಿದ್ದರು. ಮಹಾನ್ ನಾಯಕ ಮತ್ತು ಆಡಳಿತಾಧಿಕಾರಿ. ಜಾಗತಿಕ ಮಟ್ಟದಲ್ಲಿ ಜಪಾನ್ ಇಂದು ಇಷ್ಟು ಅಭಿವೃದ್ಧಿಯಾಗುವಲ್ಲಿ ಅಬೆ ಪಾತ್ರ ದೊಡ್ಡದಿದೆ. ತಮ್ಮಿಡೀ ಜೀವನವನ್ನು ಜಪಾನ್ ಪ್ರಗತಿಗೆ ಮೀಸಲಿಟ್ಟಿದ್ದರು ಎಂದು ಹೇಳಿದ್ದಾರೆ.
ʼನಾನು ಗುಜರಾತ್ ಮುಖ್ಯಮಂತ್ರಿಯಾಗಿದ್ದಾಗಿನಿಂದಲೂ ನನಗೆ ಶಿಂಜೊ ಅಬೆ ಪರಿಚಯ ಇದೆ. ಅದು ನಾನು ಪ್ರಧಾನಿಯಾದ ಮೇಲೆ ಮುಂದುವರಿಯಿತು ಮತ್ತು ನಮ್ಮಿಬ್ಬರ ಸ್ನೇಹ ಇನ್ನಷ್ಟು ಗಟ್ಟಿಯಾಯಿತು. ಆರ್ಥಿಕತೆ ಮತ್ತು ಜಾಗತಿಕ ವ್ಯವಹಾರಗಳ ಬಗ್ಗೆ ಅವರಿಗೆ ಇದ್ದ ತೀಕ್ಷ್ಣ ಒಳನೋಟ ನನ್ನ ಮೇಲೆ ತುಂಬ ಪ್ರಭಾವ ಬೀರಿತು. ಇತ್ತೀಚೆಗೆ ನಾನು ಜಪಾನ್‌ಗೆ ತೆರಳಿದ್ದಾಗ ಶಿಂಜೊ ಅಬೆಯವರನ್ನು ಭೇಟಿಯಾಗಿದ್ದೆ. ಅವರ ಬಳಿ ಹಲವು ವಿಷಯಗಳ ಕುರಿತು ಚರ್ಚೆ ಮಾಡಿದ್ದೆ. ಯಾವಾಗಿನ ತಮ್ಮ ಶೈಲಿಯಲ್ಲೇ ನನ್ನೊಂದಿಗೆ ಮಾತನಾಡಿದ್ದರು. ಆದರೆ ಇದೇ ನನ್ನ ಮತ್ತು ಅವರ ಕೊನೇ ಭೇಟಿಯಾಗುತ್ತದೆ ಎಂದು ನಾನಂದುಕೊಂಡಿರಲಿಲ್ಲ ಎಂದು ನರೇಂದ್ರ ಮೋದಿ ನೋವು ವ್ಯಕ್ತಪಡಿಸಿದ್ದಾರೆ.
ಭಾರತ ಮತ್ತು ಜಪಾನ್ ನಡುವಿನ ಬಾಂಧವ್ಯ ವೃದ್ಧಿಸುವಲ್ಲಿ ಅಬೆಯವರ ಕೊಡುಗೆ ಅಪಾರ. ಒಬ್ಬ ಮಹಾನ್ ನಾಯಕನನ್ನು ಕಳೆದುಕೊಂಡು ಇಡೀ ಜಪಾನ್ ಶೋಕದಲ್ಲಿ ಮುಳುಗಿದೆ. ಅವರ ನೋವಿನಲ್ಲಿ ನಾವು ಭಾರತೀಯರು ಜತೆಗಿದ್ದೇವೆ. ಶಿಂಜೊ ಅಬೆ ನಿಧನದ ಹಿನ್ನೆಲೆಯಲ್ಲಿ ಜುಲೈ 9 ರಂದು ಭಾರತದಲ್ಲೂ ಒಂದು ದಿನದ ಶೋಕಾಚರಣೆ ನಡೆಸಲಾಗುವುದು ಎಂದು ಪ್ರಧಾನಿ ಮೋದಿ ತಿಳಿಸಿದ್ದಾರೆ.
ಇದನ್ನೂ ಓದಿ: ಶಿಂಜೊ ಅಬೆಗೆ ಶೂಟ್ ಮಾಡಿದವ ಮಾಜಿ ಯೋಧ; ಹಿಂದಿನಿಂದ ಇಟ್ಟ ಗುರಿ ತಪ್ಪಲಿಲ್ಲ !