Site icon Vistara News

ಜಪಾನ್‌ನಲ್ಲಿ ವರ್ಷಕ್ಕೊಂದು Gun ವಿತರಣೆಯಾದರೆ ದೊಡ್ಡ ವಿಷಯ! ಹೀಗಿರುವಾಗ…

gun

ಟೋಕಿಯೊ: ಸಮುರಾಯಿಯಂಥ ಜಗದ್ವಿಖ್ಯಾತ ಸಮರ ಕಲೆ ಹೊಂದಿರುವ ಜಪಾನ್‌ನಲ್ಲಿ ಹಿಂಸಾಚಾರ ಕಡಿಮೆ. ಈ ರಾಷ್ಟ್ರದಲ್ಲಿ ಅಪರಾಧಗಳೇ ವಿರಳ. ಪರಸ್ಪರ ಗೌರವ ಕೊಡುವುದೇ ಇಲ್ಲಿನ ಜನರ ಜೀವನದ ಪರಮೋದ್ದೇಶ. ಹೀಗಾಗಿ ತಮ್ಮ ನಾಗರಿಕರಿಗೆ Gun ಅಗತ್ಯವೇ ಇಲ್ಲ ಎಂದು ನಂಬಿರುವ ಅಲ್ಲಿನ ಸರ್ಕಾರ, ವರ್ಷಕ್ಕೆ ಒಂದು ಗನ್‌ ಲೈಸೆನ್ಸ್‌ ವಿತರಣೆ ಮಾಡಿದರೆ ಅದೇ ದೊಡ್ಡ ಸಂಗತಿ. ಹೀಗಾಗಿ ಅಲ್ಲಿ ಗುಂಡೇಟಿಗೆ ಸಾಯುವ ಪ್ರಕರಣಗಳು ಶೂನ್ಯ. ಇಂಥ ದೇಶದಲ್ಲಿ ಮಾಜಿ ಪ್ರಧಾನಿಯೊಬ್ಬರ ಎದೆಗೆ ಗುಂಡು ಹೊಡೆದಿರುವುದ ಅಚ್ಚರಿ ಹುಟ್ಟಿಸಿದೆ.

ಲಿಬರಲ್‌ ಡೆಮಾಕ್ರಟಿಕ್‌ ಪಾರ್ಟಿಯ ನಾಯಕರಾಗಿರುವ ಶಿಂಜೊ ಅಬೆ ಅವರ ಮೇಲೆ ಗುಂಡಿನ ದಾಳಿ ನಡೆದ ಬಳಿಕ, ಜಪಾನ್‌ನಲ್ಲೂ ಇಂಥ ಘಟನೆ ನಡೆಯಲು ಸಾಧ್ಯವೇ ಎಂಬ ಪ್ರಶ್ನೆ ಎದ್ದಿದೆ. ಯಾಕೆಂದರೆ, ತಂತ್ರಜ್ಞಾನದಲ್ಲಿ ಮುಂಚೂಣಿ ಸ್ಥಾನ ಪಡೆರುವ ಈ ದೇಶದಲ್ಲಿ ಅಪರಾಧಿಗಳನ್ನು ಹೆದರಿಸಲು ಪೊಲೀಸರು ಕನಿಷ್ಠ ಪಕ್ಷ ಕೋವಿಯನ್ನೂ ಬಳಸುವುದಿಲ್ಲ. ಜತೆಗೆ ಇಲ್ಲಿ ಗನ್‌ ಲೈಸೆನ್ಸ್‌ ನೀಡುವ ಕಾನೂನುಗಳು ಅತ್ಯಂತ ಕಠಿಣವಾಗಿದೆ.

ಗನ್‌ಗಳೇ ಇಲ್ಲ

ನಮಗೆ ಗನ್‌ಗಳು ಅಗತ್ಯವೇ ಇಲ್ಲ ಎಂಬುದು ಈ ದೇಶದ ಜನರ ಅಭಿಪ್ರಾಯ. ಆದಾಗ್ಯೂ ಅರಣ್ಯ ಪದೇಶದ ಬಳಿ ವಾಸಿಸುವ ಜನರಿಗೆ ಸ್ವಯಂ ರಕ್ಷಣೆ, ಪ್ರಾಣಿಗಳಿಂದಾಗುವ ದಾಳಿ ಮತ್ತು ಬೇಟೆಯ ಉದ್ದೇಶಗಳಿಗೆ ಗನ್‌ ಲೈಸೆನ್ಸ್‌ ನೀಡಲಾಗುತ್ತದೆ. ಅದಕ್ಕೂ ಸಾಕಷ್ಟು ಪ್ರಕ್ರಿಯೆಗಳಿವೆ. ಮೊದಲಿಗೆ ಲಿಖಿತ ಪರೀಕ್ಷೆಯನ್ನು ಬರೆದು ಪಾಸಾಗಬೇಕು. ಬಳಿಕ ಮೌಖಿಕ ಪರೀಕ್ಷೆ ಇರುತ್ತದೆ. ನಂತರದಲ್ಲಿ ತರಬೇತಿ. ಅದು ಮುಕ್ತಾಯಗೊಂಡ ನಂತರ ಮಾನಸಿಕ ಚಿಕಿತ್ಸೆ ಆಸ್ಪತ್ರೆಗಳಲ್ಲಿ ಕೌನ್ಸೆಲಿಂಗ್‌ ಮಾಡುತ್ತಾರೆ. ಗನ್‌ ಎಂಥ ಸಂದರ್ಭದಲ್ಲಿ ಬಳಸಬೇಕು ಎಂದು ಆಸ್ಪತ್ರೆಗಳಲ್ಲಿ ಮಾನಸಿಕವಾಗಿ ಸಿದ್ಧತೆ ಮಾಡಲಾಗುತ್ತದೆ. ಎಲ್ಲ ಪರೀಕ್ಷೆಯಲ್ಲಿ ಶೇ. ೯೫ರಷ್ಟ ಅಂಕಗಳನ್ನು ಪಡೆಯಬೇಕು. ಹೀಗಾಗಿ ಈ ದೇಶದಲ್ಲಿ ವರ್ಷಕ್ಕೆ ಒಂದೆರಡು ಲೈಸೆನ್ಸ್‌ಗಳೂ ವಿತರಣೆಯಾಗುವುದಿಲ್ಲ. ಒಂದು ವೇಳೆ ಲೈಸೆನ್ಸ್‌ ಕೊಟ್ಟರೂ ಐದು ಗುಂಡುಗಳಿಗಿಂತ ಹೆಚ್ಚಿರುವ ಗನ್‌ಗಳನ್ನು ನೀಡುವುದಿಲ್ಲ. ಬೇಟೆಯ ಉದ್ದೇಶಕ್ಕೂ ಕೋವಿಗಳನ್ನು ಮಾತ್ರ ಬಳಸಲಾಗುತ್ತದೆ.

ಎಲ್ಲರಿಗೂ ಇದೆ ಗೌರವ

ಜಪಾನ್‌ನಲ್ಲಿ ಎಷ್ಟೇ ದೊಡ್ಡವರಿರಲಿ, ಚಿಕ್ಕವರೇ ಆಗಿರಲಿ. ಬಗ್ಗಿ ನಮಸ್ಕರಿಸುವುದು ಅಲ್ಲಿನ ಸಂಪ್ರದಾಯ. ಎದುರಿಗೆ ಸಿಕ್ಕವರಿಗೆ ವಿಧೇಯರಾಗಿರಬೇಕು ಎಂಬುದು ಅಲ್ಲಿನ ಜನರ ತಿಳಿವಳಿಕೆ. ಇದರಿಂದ ಪರಸ್ಪರ ಗೌರವ ಕೊಡುವುದು ಸಾರ್ವಜನಿಕ ಜೀವನದ ಒಂದು ಭಾಗ. ಹೀಗಾಗಿ ಇಲ್ಲಿ ಅಪರಾಧಗಳು ನಡೆಯುವುದೇ ಕಡಿಮೆ. ಮತಿ ಭ್ರಮಣೆಯಿಂದ ನಡೆಸುವ ಚಾಕು ಇರಿತ ಪ್ರಕರಣವೇ ಇಲ್ಲಿ ದೊಡ್ಡ ಪ್ರಮಾಣದ ಕ್ರೈಂ ಸುದ್ದಿಯಾಗಿರುತ್ತದೆ. ಅದೂ ಅಲ್ಲದೆ, ಇಂಥ ಅಪರಾಧಿಗಳನ್ನು ಹಿಡಿಯಲು ಪೊಲೀಸರು ಕೂಡ ಗನ್‌ ಬಳಸುವುದಿಲ್ಲ. ತಾವು ಪಡೆದ ಸಮುರಾಯಿ ಕಲೆಯನ್ನೇ ಬಳಸಿಕೊಂಡು ಅಪರಾಧಿಯನ್ನು ಹೆಡೆಮುರಿ ಕಟ್ಟುತ್ತಾರೆ.

ಇದನ್ನೂ ಓದಿ: ಜಪಾನ್‌ ಮಾಜಿ ಪ್ರಧಾನಿ ಶಿಂಜೊ ಅಬೆ ಎದೆಗೆ ಗುಂಡೇಟು, ಚಿಂತಾಜನಕ ಸ್ಥಿತಿ

Exit mobile version